Wednesday, August 24, 2011

ತರ್ಲೆ ಮಂಜನ ಫ್ರೆಂಡ್ಶಿಪ್ ಪುರಾಣ....

ಮಂಜನ ಮನೆಗೆ ಹೋಗಿದ್ದೆ. ನಾನು ಫ್ರೆಂಡ್ಶಿಪ್ ಡೇ ವಿಶ್ ಮಾಡಲು, ನಾನು ವಿಶ್ ಮಾಡಬೇಕು ಎಂದು ಅನ್ನುಕೊಳ್ಳುವಷ್ಟರಲ್ಲಿ, ಸುಬ್ಬ ಬಂದವನೇ "ಹ್ಯಾಪಿ ಫ್ರೆಂಡ್ಶಿಪ್ ಡೇ" ಎಂದು ನನಗೆ ಮತ್ತು ಮಂಜನಿಗೆ ಕೈ ಕುಲುಕಿದ. ಮಂಜ ಸಿಟ್ಟಿನಿಂದ ಏನೋ? ಇದು ಫ್ರೆಂಡ್ಶಿಪ್ ಡೇ ಅಂತೆ. ಗೆಳೆತನಕ್ಕೆ ಕೂಡ ಒಂದು ದಿನ ಬೇಕಾ?, ಹಾಗಾದ್ರೆ ಗೆಳೆತನ ಅನ್ನುವುದು ಒಂದೇ ದಿನಕ್ಕೆ ಸೀಮಿತನಾ?. ಮೊದಲು, ನಾವೆಲ್ಲ ಗೆಳೆಯರು ದಿನವು ಸೇರುತ್ತಿದ್ದೆವು. ಗೆಳೆಯರ ಒಂದು ದೊಡ್ಡ ಅಡ್ಡ ಇರುತಿತ್ತು. ಆದರೆ ಈಗ ಅವರ ಅಡ್ರೆಸ್ ನೆನಪು ಆಗುವುದು ವರ್ಷದಲ್ಲಿ ಒಂದು ದಿನ ಮಾತ್ರ. ಫ್ರೆಂಡ್ಶಿಪ್ ಎನ್ನುವ ಶಿಪ್ ಮುಣುಗೋದು ಗ್ಯಾರಂಟೀ. ನೋಡುತ್ತಾ ಇರು ಮುಂದೊಂದು ದಿನ ಆಫೀಸ್ ನಿಂದ ಹಸಿದು ಬಂದ ಗಂಡನಿಗೆ ತಿಂಡಿ ಕೊಡದೆ ಇದ್ದರೂ, ಹಸ್ಬಂಡ್ ಡೇ ಎಂದು ಕೂಡ ಬರುತ್ತೆ. ಗಂಡನ ದುಡ್ಡಿನಿಂದ ಗುಂಡಿನ ಪಾರ್ಟಿ ಬೇರೆ ಇರುತ್ತೆ ಎಂದ. ಅಷ್ಟರಲ್ಲಿ ಮಂಜನ ಮಡದಿ ಒಳಗಿನಿಂದ ಬಂದು ಮೂವರಿಗೂ ತಿಂಡಿ ಕೊಟ್ಟು, ಮಂಜನಿಗೆ ಮಾತ್ರ ಟೇಬಲ್ ಮೇಲೆ ಕುಕ್ಕಿ ಹೋದಳು. ಸಧ್ಯ ನಾನು ವಿಶ್ ಮಾಡದೇ ಬಚಾವ್ ಎಂದು ಕೊಂಡೆ.

ಮತ್ತೆ ತಿಂಡಿ ತಿನ್ನುತ್ತ, ಮೊದಲು ನಿನ್ನಂತಹ ಉಡಾಳ ವಿದ್ಯಾರ್ಥಿಗಳು ಶಿಕ್ಷಕರ ದಿನಾಚರಣೆಯನ್ನು, ಸಿಕ್ಕ ಸಿಕ್ಕವರ ದಿನಾಚರಣೆ ಎಂದು ಎಲ್ಲರಿಗು ಹೊಡೆಯುತ್ತ ಹೋಗುತ್ತಿದ್ದೀರಿ ಎಂದ. ನನಗೆ ನಗು ತಡಿಯಲು ಆಗಲೇ ಇಲ್ಲ, ಏಕೆಂದರೆ, ಹಾಗೆ ಮೊದಲು ಮಾಡಿದ್ದು ಮಂಜನೆ. ನಮ್ಮ ಸಂಸ್ಕೃತಿಯಲ್ಲಿ ಪ್ರತಿಯೊಂದು ದಿನಕ್ಕೂ ಒಂದು ಹಿನ್ನಲೆ ಇರುತ್ತೆ. ಆದರೆ ಇವುಗಳಿಗೆ ಯಾವ ಹಿನ್ನಲೆ ಎಂದು ತಿಳಿಯದೆ ಇದ್ದರೂ, ಅದನ್ನು ಆಚರಿಸುವ ಮಹಾ ಪಂಡಿತರು ಜ್ಯಾಸ್ತಿ ಎಂದ. ಮತ್ತೆ ಅಷ್ಟರಲ್ಲಿ ಮಂಜನ ಮಡದಿ ಬಂದು ನೀರು ಟೇಬಲ್ ಮೇಲೆ ಕುಕ್ಕಿ ಹೋದಳು. ಅವಳ ಚಲನ-ವಲನ ನೋಡಿ, ಮೊದಲೇ ಮಂಜನಿಗೆ ಏನೋ ಪಾಠ ಆಗಿದೆ ಎಂದು ಅನ್ನಿಸಿತು. ಏನು? ತಂಗ್ಯಮ್ಮನಿಗೆ ತುಂಬಾ ಕೋಪ ಬಂದಿರೋ ಹಾಗಿದೆ ಎಂದು ಮಂಜನಿಗೆ ಕೇಳಿದೆ. ಏನು? ಇಲ್ಲ ನಿನ್ನೆ ರಾತ್ರಿ ಇಂದ ಹೀಗೆ ಸಿಟ್ಟು ಮಾಡಿಕೊಂಡಿದ್ದಾಳೆ ಎಂದ. ನೀನೆ ಏನೋ? ಕಿಟಲೆ ಮಾಡಿರಬೇಕು ಎಂದೆ. ನಾನೇನು ಮಾಡಿದ್ದೇನೆ ಅವಳಿಗೆ ಬೇಕಾಗಿದ್ದು ಎಲ್ಲವನ್ನು ಕೊಡಿಸಿದ್ದೇನೆ ಎಂದ. ಅವಳು ಪಿಜ್ಜಾ ತಿನ್ನುತ್ತೇನೆ ಎಂದಳು. ಅದನ್ನು ಸಹಿತ ಕೊಡಿಸಿದ್ದೇನೆ. ನೋಡು ನಾವು ಹವಾಗುಣಕ್ಕೆ ಅನುಗುಣವಾಗಿ ನಮ್ಮ ಆಹಾರ ಪದ್ದತಿಯನ್ನು ಅನುಸರಿಸುತ್ತೇವೆ. ಹವಾಗುಣ ಬದಲಾದಂತೆ ಅಲ್ಲಿಯ ಆಹಾರ ಪದ್ದತಿಯನ್ನು ನಾವು ಅನುಸರಿಸ ಬೇಕಾಗುತ್ತೆ. ಹೇಗೆಂದರೆ, ಉತ್ತರ ಕರ್ನಾಟಕದ ಜನ ಅಲ್ಲಿಯ ಹವಾಗುಣಕ್ಕೆ ಅನುಗುಣವಾಗಿ ಜೋಳದ ರೊಟ್ಟಿ, ಇಲ್ಲಿಯ ಜನ ರಾಗಿ ಮುದ್ದೆ ಹೀಗೆ...ಇಲ್ಲದೆ ಇದ್ದರೆ ನಮ್ಮ ಹಾವ-ಭಾವ ಬದಲಾಗುವುದು. ಅದರೂ ಕೂಡ ನಾನು ಏನೂ ಮಾತನಾಡದೆ ಪಿಜ್ಜಾ ಕೊಡಿಸಿದ್ದೇನೆ ಮತ್ತೇಕೆ ಸಿಟ್ಟು ನನಗೆ ಗೊತ್ತಿಲ್ಲ ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು ನಾನು ಎಷ್ಟು ದೇವರನ್ನು ಬೇಡಿಕೊಳ್ಳ ಬೇಕೋ ತಿಳಿಯದಾಗಿದೆ ನೋಡಿ, ಎಂದು ನನಗೆ ಹೇಳಿದಳು. ಅದಕ್ಕೆ ಮಂಜ ನಾನು ಹೇಳುತ್ತೇನೆ. ಒಬ್ಬ ದೇವರಿಗೆ ಹರಕೆ ಹೊತ್ತರೆ ಖಂಡಿತ ನೆರವೆರುತ್ತೆ ಎಂದ. ಯಾರು ಆ ದೇವರು ಎಂದು ಬಾಯಿ ಬಿಟ್ಟು ಕೇಳಿದೆ. ಮತ್ತ್ಯಾರು ಪತಿ ದೇವ್ರು ಎಂದು ಹೇಳು ನಿಮ್ಮ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ಈ ನಗುವುದೊಂದು ಗೊತ್ತು ನಿಮಗೆ. ನಿನ್ನೆ ಒಂದು ಹುಡುಗಿ ನೋಡಿ ನಗುತ್ತಿದ್ದರು ಎಂದಳು. ಅಷ್ಟಕ್ಕೇ ಮಂಜ ಲೇ... ನಾನೇನು ಹುಡುಗರನ್ನು ನಗಬೇಕಿತ್ತಾ?, ಹಾಗೆ ಮಾಡಿದರೆ ಜನ ತಪ್ಪು ತಿಲಿಯಲ್ಲವೇ ಎಂದು ಹೇಳಿದ. ಆಯಿತು ಅವಳು ನಕ್ಕಳು, ನಾನು ನಕ್ಕೆ ಅಷ್ಟೇ ತಾನೇ. ಮತ್ತೇಕೆ ಈಗ ಅದೆಲ್ಲ ತಪ್ಪಾಯಿತು ಎಂದ. ಅಷ್ಟಕ್ಕೇ ಅವರ ಸಂಸಾರ ಸಮರ ಮುಗಿಯಿತು.

ಮಂಜನ್ ಮಡದಿ ಕಾಫಿ ತಂದು ಕೊಟ್ಟಳು. ಅಷ್ಟರಲ್ಲಿ ಮಂಜನ ಮೊಬೈಲ್ ನಲ್ಲಿ ಒಂದು sms ಬಂತು. ಅದನ್ನು ಮಂಜನ ಮಡದಿ ತೆಗೆದು ನೋಡಿದಳು. ಯಾರು? ರೀ.. ಅದು ರಾಜಿ ಎಂದು ಮತ್ತೆ ಕೋಪಮಾಡಿಕೊಂಡು ಬಿಟ್ಟಳು. ಅದು... ಅದು... ಎಂದು ತಡವರಿಸುತ್ತಾ...ರಾಜೇಂದ್ರ ಎಂದು ನನ್ನ ಗೆಳೆಯ ಎಂದ. ಯಾವತ್ತು ಅವನ ಬಗ್ಗೆ ಹೇಳೇ ಇಲ್ಲ. ಮತ್ತೆ ರಾಜಿ ಎಂದು ಏಕೆ? ಬರೆದಿದ್ದೀರಾ ಎಂದಳು. ಅದು ಸ್ಪೆಲ್ಲಿಂಗ್ ಮಿಸ್ಟೇಕ್ ಆಯಿತು ಎಂದ. ನಾನು ಮನಸಿನಲ್ಲಿಯೇ ಮಿಸ್ ಟೆಕ್ ಎಂದು ಅಂದೆ. ಏಕೆಂದರೆ ರಾಜಿ ಎಂಬುದು ಹುಡುಗಿ ಎಂದು ನನಗೆ ಹೇಳಿದ್ದ. ಕಡೆಗೆ ಅವಳಿಂದ ಫೋನ್ ತೆಗೆದುಕೊಂಡು ಮೆಸೇಜ್ ನೋಡಿದ. ಅದರಲ್ಲಿ ಹ್ಯಾಪಿ ಫ್ರೆಂಡ್ಶಿಪ್ ಡೇ ಎಂದು ಇತ್ತು. ಅದಕ್ಕೆ ಸುಮ್ಮನೆ ಸೇಮ ಟು ಯು ಎಂದು ಯಾವುದೇ ಶೇಮ್ ಇಲ್ಲದೆ ಬರೆದು ಕಳುಹಿಸಬೇಕು ಅನ್ನುವಷ್ಟರಲ್ಲಿ, ಮೊಬೈಲ್ ನಲ್ಲಿನ ಕರೆನ್ಸಿ ಖಾಲಿ ಆಗಿದೆ ಎಂದು ತಿಳಿಯಿತು. ಮಂಜ ಏನೇ ಇದು ನನ್ನ ಮೊಬೈಲ್ ಕರೆನ್ಸಿ ಎಲ್ಲ ಖಾಲಿ ಆಗಿದೆ ಎಂದ. ಮಂಜನ ಮಡದಿ ನಾನೇ ಎಲ್ಲರಿಗು ಫ್ರೆಂಡ್ ಶಿಪ್ ಡೇ ವಿಶ್ ಮಾಡಲು ಫೋನ್ ಮಾಡಿದ್ದೆ ಎಂದಳು. ಕಡೆಗೆ ನನ್ನ ಮೊಬೈಲ್ ತೆಗೆದುಕೊಂಡು ಕೆಳಗಡೆ ತನ್ನ ಹೆಸರು ಬರೆದು ಮೆಸೇಜ್ ಕಳುಹಿಸಿದ.

ಮಂಜನಿಗೆ ಮತ್ತೆ ನಮಗೆ ಫ್ರೆಂಡ್ ಶಿಪ್ ಬ್ಯಾಂಡ್ ಕಟ್ಟಲು ಬಂದಳು. ಮಂಜ ಕೋಪದಿಂದ ಏನಿದು? ರಾಖಿಯ ಹಾಗೆ ಇದನ್ನು ಗಂಡನಿಗೆ ಕಟ್ಟುವುದಾ? ಎಂದು ಮತ್ತೆ ತನ್ನ ಪುರಾಣ ಶುರು ಮಾಡಿದ. ನನಗೆ ಕಟ್ಟಿ ಎಂದು ಹೇಳಿ ಕಟ್ಟಿಸಿಕೊಂಡು, ನನಗೆ ಸ್ವಲ್ಪ ಕೆಲಸ ಇದೆ ಎಂದು ಹೇಳಿ ಅಲ್ಲಿಂದ ಸಾವಕಾಶವಾಗಿ ಕಾಲು ಕಿತ್ತೆ.

No comments:

Post a Comment