ಇಲ್ಲಿ ಬರೆದಿರುವ ಆರ್ಟಿಕಲ್ ಗಳಲ್ಲಿ ಕೆಲವು ಸತ್ಯ ಘಟನೆಗಳು ಮತ್ತೆ ಕೆಲವು ಕಲ್ಪನೆಗಳು....ಇದರಿಂದ ನಿಮ್ಮ ಮುಖದಲ್ಲಿ ಮುಗುಳ್ನಗೆ ತರಿಸಿದಲ್ಲಿ ಅದೇ ನಮಗೆ ಹಾಲು ಸಕ್ಕರೆ....
Wednesday, September 29, 2010
ನಳ ಪಾಕ್ ....
ಕೆಲಸ ಮುಗಿಸಿ ಮನೆಗೆ ಬಂದು ಕೈ ಕಾಲು ತೊಳೆಯಲು ಟವಲ್ ತೆಗೆದುಕೊಂಡೆ. ಅಮ್ಮsss. ನೋಡು ಅಲ್ಲಿ, ಅಪ್ಪ ನಿನ್ನ ಟವಲ್ ತೆಗೆದುಕೊಂಡಿದ್ದಾರೆ ಎಂದ ನನ್ನ ಸುಪುತ್ರ. ಅಷ್ಟಕ್ಕೇ ನನ್ನ ಮಡದಿ ರೀ ನಿಮಗೆ ನನ್ನದೇ ಟವಲ್ ಬೇಕಾ?, ಬೇರೆ ಬೇಕಾದಷ್ಟು ಮನೆಯಲ್ಲಿ ಇವೆ ತೆಗೆದುಕೊಳ್ಳಬಾರದ? ಎಂದು ಉದ್ಗಾರವೆತ್ತಿದಳು. ಲೇ ನಾನು ಸಾಫ್ಟ್‌ವೇರ್ ಇಂಜಿನಿಯರ್ ಕಣೇ, ಒಳ್ಳೇ ಬಿ.ಬಿ.ಎಂ.ಪಿ ಚರಂಡಿ ಸ್ವಚ್ಛ ಮಾಡುವ ನೌಕರನ ಹಾಗೆ ವರ್ತಿಸುತ್ತೀಯಲ್ಲೇ ಎಂದೆ. ಗಂಡನನ್ನ ಎಷ್ಟು ಗೋಳು ಹೊಯ್ದುಕೊಳ್ಳುತ್ತೀಯ ಎಂದೆ. ಗಂಡ ಎಂದರೆ ಏನು ಎಂದು ತಿಳಿದಿದ್ದೀಯ. ಪತಿಯೇ ಪರರ ದೈವ ಗೊತ್ತಾ? ಎಂದೆ. ಅವಳಿಗೆ ಅರ್ಥ ಆಗಲಿಲ್ಲ :). ಬಡ ಜೀವ ಬದುಕಿತು ಮತ್ತೆ.
ನನ್ನ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಬರೆದಿದ್ದೀರ ಎಂದಳು. ಯಾರು ಹೇಳಿದರು ಎಂದು ಕೇಳಿದೆ. ಮಂಜಣ್ಣ ಮನೆಗೆ ಬಂದಿದ್ದರು ಎಂದಳು. ಲೇ ಮಂಜ ಎಂದು ಮನಸಿನಲ್ಲೇ ಬೈದು ಹಲ್ಲು ಕಡಿದೆ. ಬರೀ ತೆಗಳಿದ್ದು ಅಷ್ಟೇ ಅಲ್ಲ ಕಣೇ, ನಿನ್ನನ್ನು ಹೋಗಳಿದ್ದು ಇದೆ ಎಂದು ಪೆಕರನಂತೆ ಹೇಳಿ ಬಿಟ್ಟೆ. ಏನು ನನ್ನ ತೆಗಳಿ ಲೇಖನ ಬರೀತೀರಾ? ಎಂದಳು. ಪಾಪ ಅವಳಿಗೆ ಈ ವಿಷಯ ಗೊತ್ತೇ ಇರಲಿಲ್ಲ. ಇಲ್ಲ ಕಣೇ ನನ್ನ ರಾಣಿ ಹಾಗೆ ಎಲ್ಲ ಮಾಡುತ್ತೆನಾ ಎಂದೆ. ನಿಮ್ಮದು ಗೊತ್ತಿಲ್ಲವ "ಇಲಿ ಬಂತು ಎಂದರೆ ಹುಲಿ ಬಂತು" ಎನ್ನುವ ಹಾಗೆ ನನ್ನ ಬಗ್ಗೆ ಬರೆದಿರುತ್ತೀರ ಎಂದು, ತುಂಬಾ ಕೋಪ ಮಾಡಿಕೊಂಡುಬಿಟ್ಟಳು.
ಪಕ್ಕದ ಮನೆ ಪೂಜ ಏನಾದರೂ ತಿಂಡಿ ಮಾಡಿದ್ದಾಳ ನೋಡು ಎಂದು ಹಾಗೆ ತಮಾಷೆಗೆ ಹೇಳಿದೆ. ಏನು ಉತ್ತರ ಬರಲಿಲ್ಲ. ಏನು ತಿಂಡಿ ಎಂದೆ. ಏನೋ ಪಕ್ಕದ ಮನೆ ಪೂಜ ಮೇಲೆ ಪ್ರೀತಿ ಉಕ್ಕಿ ಹರೀತಾ ಇತ್ತು ಎಂದಳು. ನದಿ ನೀರು ಎಷ್ಟೇ ರಭಸವಾಗಿ ಹರಿದರು ಕೊನೆಗೆ ಸೇರುವದು ಸಾಗರ ತಾನೇ?. ನೀನು ಒಂದು ತರಹ ಸಾಗರ ಇದ್ದ ಹಾಗೆ ಗೊತ್ತಾ ಎಂದು ಮಸ್ಕ ಹೊಡೆದೆ. ಅಂದ್ರೆ ನಾನು ಉಪ್ಪು ನೀರು, ನೀವು ಸಿಹಿ ನೀರಾ.....? ಎಂದು ಮತ್ತಷ್ಟು ಕೋಪಿಸಿಕೊಂಡಳು.
ಕಡೆಗೆ ನಾನೇ ಏನಾದರೂ ತಿಂಡಿ ಮಾಡುತ್ತೇನೆ ಎಂದು ಅಡಿಗೆ ಮನೆ ಎಂಬ ಗುಹೆಯೊಳಗೆ ಎಡಗಾಲಿಟ್ಟೆ. ಲೇ ಅವಲಕ್ಕಿ ಎಲ್ಲೇ? ಎಂದು ಕೂಗಿ ಕೇಳಿದೆ, ಏನು ಉತ್ತರ ಬರಲಿಲ್ಲ. ಕಡೆಗೆ ನಾನೇ ಹುಡುಕಲು ಶುರು ಮಾಡಿದೆ. ಅದೇನೋ ನಮ್ಮ ಗಂಗಾವತಿ ಬೀಚಿ ಎಂದೆ ಪ್ರಸಿದ್ದಿಯಾದ ಶ್ರೀ ಪ್ರಾಣೇಶ್ ಹೇಳುತ್ತಾರಲ್ಲ "ಡಬ್ಬಿ ಮ್ಯಾಲೆ ಡಬ್ಬಿ... ಡಬ್ಬಿ ಮ್ಯಾಲೆ ಡಬ್ಬಿ" ಎಂದು, ಹಾಗೆ "ಡಬ್ಬಿ ಒಳಗೆ ಡಬ್ಬಿ...ಡಬ್ಬಿ ಒಳಗೆ ಡಬ್ಬಿ" ಹಾಗೆ ಇತ್ತು. ಇದನ್ನು ನೋಡಿದರೆ ನಮ್ಮ ಪ್ರಾಣೇಶ್ ಅವರು ಕೂಡ ಬ್ಯಾಲೆನ್ಸ್ ತಪ್ಪಿ ಬೀಳಬೇಕು ಅಷ್ಟು ಡಬ್ಬಿ ತೆಗೆದ ಮೇಲೆ ಚಿಕ್ಕ ಅವಲಕ್ಕಿ ಪ್ಯಾಕೆಟ್ ಸಿಕ್ಕಿತು. ಅದನ್ನು ನೋಡಿದರೆ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇತ್ತು.
ಚಿಕ್ಕವಾನಿದ್ದಾಗ ಕೂಡ ಹೀಗೆ ನಳ ಪಾಕ್ ಮಾಡುತ್ತಿದ್ದೆ. ಆಗ ಅಮ್ಮ ಎಷ್ಟು ಎಣ್ಣೆ ಹಾಕುತ್ತಿ ಎಂದು ಬೈಯುತ್ತಿದ್ದಳು.
ನಾನು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಎಂದು ಹಾಡುತ್ತಾ, ಎಲ್ಲ ಸಾಮಾನುಗಳನ್ನು ಹುಡುಕುತ್ತಾ ಇದ್ದೆ. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ. ನಾನು ಹುಡುಕಿದಷ್ಟು ಯಾರಾದರೂ ಹುಡುಕಿದ್ದರೆ, ಕೊಲಂಬಸ್ ಹುಡುಕಿದ ಹಾಗೆ ಬೇರೆ ಒಂದು ದೇಶವನ್ನು ಹುಡುಕಬಹುದಿತ್ತು. ನಿಜ ಕಣ್ರೀ ಅದೇನೋ ಹೇಳುತ್ತಾರಲ್ಲ ಗಂಡಸರ ಜುಟ್ಟು ಜನಿವಾರ ಎಲ್ಲ ಹೆಂಗಸರ ಕೈಯಲ್ಲಿ ಎಂದು, ಅದು ನಿಜ ಅನ್ನಿಸಿತು. ಕಡೆಗೂ ಏನು ಸಿಗದೆ ಅವಲಕ್ಕಿಗೆ ಮೊಸರು ಹಾಕಿಕೊಂಡು ತಿಂದೆ. ಏನು ಸಾಹೇಬ್ರ ಪಾಕ ಹೇಗಿದೆ ನೋಡುವಾ? ಎಂದು ಬಂದು ನನ್ನನ್ನು ಹೀಯಾಳಿಸಿದಳು. ನೀನು ಮಾಡಿದ ಅವಲಕ್ಕಿ ತುಂಬಾ ಚೆನ್ನಾಗಿದೆ. ಸಕತ್.. ಮಸ್ತ..ಎಂದು ಇದೆ ಚಾನ್ಸ್ ಎಂದು ಅವಳನ್ನು ಮತ್ತಷ್ಟು ಮಸ್ಕ ಹೊಡೆದೆ. ಅದಕ್ಕೆ ಅವಳು ಅವಲಕ್ಕಿ ಅಂಗಡಿ ಇಂದ ತಂದಿದ್ದು ಅದಕ್ಕೆ ವಗ್ಗರಣೆ ಮತ್ತು ಏನು ಹಾಕಿರಲಿಲ್ಲ. ಅದು ನಾನು ಮಾಡಿದ ತಿಂಡಿನಾ? ಎಂದು ನಗುತ್ತಾ ಹುಬ್ಬು ಹಾರಿಸಿದಳು. ನಾನು ಒಂದು ಮುಗುಳ್ನಗೆ ಬೀರಿದೆ. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಹೋಲಿಸಲಾರಿಲ್ಲ..,ನಿನ್ನೀ ಅಂದಕೆ ನೀನೇ ಸಾಟಿ ಬೇರೇ ಯಾರಿಲ್ಲ..ನಿನ್ನ ಹೋಲುವರಾರಿಲ್ಲ.. ಎಂದು ಹಾಡುತ್ತಾ ಅಡುಗೆ ಮನೆಯಿಂದ ಹೊರಗಡೆ ಬಂದೆ.
ಸಧ್ಯ ನನ್ನ ಪ್ರತಾಪ ಇಷ್ಟಕ್ಕೆ ಮುಗೀತು. ಇಲ್ಲ ಅಂದ್ರೆ ಒಂದು ದಿನ ನಳ - ಭೀಮ ಪಾಕ್ ದ ಹಾಗೆ ಗೋಪಾಲ್ ಪಾಕ್ ಕೂಡ ಇರುತಿತ್ತು (ಧಾರವಾಡದಲ್ಲಿ ಸಿಗುವ ಮೈಸೂರ್ ರಾಕ್ ಕ್ಷಮಿಸಿ ಮೈಸೂರ್ ಪಾಕ್ ಹಾಗೆ). ಅಡುಗೆ ಮನೆ ವ್ಯವಹಾರ ಎಲ್ಲ ಹೆಂಡತಿಗೆ ಸೈ ಎಂದು ಅನ್ನಿಸಿತು. ಭೀಮ ಮತ್ತು ನಳರನ್ನು ಬಿಟ್ಟು. ಭೀಮನಿಗೆ ಆವಾಗ, ಈವಾಗ ನನ್ನ ಹಾಗೆ ಬಾಯೀ ಆಡಿಸಲು ಏನಾದರೂ ಬೇಕು ಎಂದು ಅಡುಗೆ ಮನೆ ವ್ಯವಹಾರದಲ್ಲಿ ಕೈ ಹಾಕಿರಬಹುದು. ನಾನು ಕೂಡ ಆವಾಗ, ಈವಾಗ ಬಾಯೀ ಆಡಿಸುತ್ತಾನೆ ಇರುತ್ತೇನೆ. ಆದರೆ, ಎಲ್ಲವೂ ನನ್ನ ಮಡದಿಯ ಮಹಿಮೆ ಇಂದ ಮಾತ್ರ....:).
Friday, September 24, 2010
ಹಲ್ಲುಕಿರಿ (ಹಲಕಾ ರೀ...)....ಎಂಬ ಕಿರಿ ಕಿರಿ
ಹೇಗಿದ್ದರು ಪಕ್ಕದ ಮನೆ ಪೂಜ ಏಳುವದು ಲೇಟ್ ಎಂದು ನನಗೆ ಗೊತ್ತು. ಕಾಫೀ ಆದ ಮೇಲೆ ಪಕ್ಕದ ಮನೆ ಪೂಜ ತರಿಸುವ ಪೇಪರ್ ಬೇಗನೆ ಎದ್ದ ನಾನು ಹಾಗೆ ನೋಡಿ ಮತ್ತೆ ಅದೇ ಜಾಗದಲ್ಲಿ ಇಟ್ಟು ಬಂದು ಬಿಡುತ್ತಿದ್ದೆ. ಆದರೆ ಇವತ್ತು ಏನೋ ಗ್ರಹಚಾರ ಕೆಟ್ಟಿತ್ತು. ಪೇಪರ್ ತೆಗುದು ಕೊಂಡೆ, ಅಷ್ಟರಲ್ಲೇ ಪೂಜ ಬಾಗಿಲು ತೆಗೆದು ಬಿಟ್ಟಳು. ನಾನು ಪೇಪರ್ ಅವಳಿಗೆ ಕೊಟ್ಟು ಹಾಗೆ ಹಲ್ಲು ಕಿರಿದೆ. ಹಲ್ಲು ಕಿರಿದಿದ್ದು ನಾನೇ ಆದರೂ ಹಾವಿನಂತೆ ಬುಸುಗುಟ್ಟಿದ್ದು ಅವಳು.
ನನಗೆ ಕೋಪ ಬಂದಿತ್ತು. ಅವಳು ಬುಸುಗುಟ್ಟಿದ್ದಕ್ಕೆ ಅಲ್ಲವೇ ಅಲ್ಲ. ಅವಳು ಬುಸುಗುಟ್ಟಿದನ್ನು ನನ್ನ ಮಡದಿ ನೋಡಿದ್ದಕ್ಕೆ. ಈಗ ನಗುವ ಸರದಿ ನನ್ನ ಮಡದಿಯದು, ನಾನು ಎಷ್ಟು ಬಾರಿ ಹೇಳಿಲ್ಲ ಅವಳ ಪೇಪರ್ ನೋಡ ಬೇಡಿ ಎಂದು. ಮನೆಗೆ ಪೇಪರ್ ಹಾಕಿಸ ಬರದೇ ಎಂದು ಅಂದಳು. ಅದಕ್ಕೆ ವೇದಾಂತಿಯ ಹಾಗೆ ಅದಕ್ಕೆ ಹೇಳೋದು "ಪ್ರಥಮ ಚುಂಬನಮ್ ದಂತ ಭಗ್ನಮ್" ಎಂದು ಅಂದಳು. ಎಷ್ಟು ಚೆನ್ನಾಗಿ ನನ್ನ ಅರ್ಥ ಮಾಡಿಕೊಂಡಿದ್ದೀಯೆ ನನ್ನ ರಾಣಿ ಎಂದು ಗಹ ಗಹಿಸಿ ನಗಹತ್ತಿದೆ. ಅವಳಿಗೆ ಅರ್ಥ ಆಗಲಿಲ್ಲ. ಏನು ನಗುತ್ತೀರಾ?. ನಿಮ್ಮ ಹಳದಿ ಹಲ್ಲು ಕಾಣಿಸುತ್ತಾ ಇವೆ ನೋಡಿ ಎಂದಳು. ನಗಬೇಕಮ್ಮ ನಗಬೇಕು ಎಲ್ಲರ ನಗಿಸುತ ನಗಬೇಕು ....ಇದೆ ತಾನೇ ಜೀವನ. ನಗೋಕೆ ಬೇಕಾಗಿಲ್ಲ ನಗ-ನಾಣ್ಯ. ನಗದ ಮನುಷ್ಯನಿಗೆ ಏನೋ ದೊಡ್ಡ ಕಾಯಿಲೆ ಇದ್ದ ಹಾಗೆ ಗೊತ್ತಾ ಎಂದು ಹೇಳಿದೆ. ಡಾ ರಾಜಕುಮಾರ್ ಅವರ ಹಾಡು ಕೇಳಿಲ್ಲವಾ "ನಗು ನಗುತಾ ನಲಿ ನಲಿ" ಎಂದು.ಮತ್ತೆ ಡಿ.ವಿ.ಜಿ ಅವರು ಹೇಳಿಲ್ಲವೇ
ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ।।
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ।।
ನಾನು ಹಲ್ಲು ಕಿರಿದರು ಕೆಲ ಜನ ಅಪಾರ್ಥ ಮಾಡಿ ಕೊಳ್ಳುತ್ತಾರೆ. ನಾನು ಧಾರವಾಡದಲ್ಲಿ ಇರುವಾಗ ಹಾಗೆ ನಗುತ್ತಾ ದಾರಿಯಲ್ಲಿ ಬರುತ್ತಿದ್ದೆ. ಆಗ ಪಕ್ಕದ ಬೀದಿಯ ಸುನೀತ ನನ್ನನ್ನೇ ನೋಡಿ ನಗುತ್ತಿದ್ದಾನೆ ಎಂದು ಭಾವಿಸಿ, ಅವರ ಅಪ್ಪನನ್ನು ಕರೆದು "ನೋಡು ಅಪ್ಪ ಆ ಹುಡುಗ ನನ್ನ ನೋಡಿ ಹಲ್ಲು ಕಿರಿಯುತ್ತಿದ್ದಾನೆ" ಎಂದು ಹೇಳಿದ್ದಳು. "ಏನೋsss ಹಲಕಾ ನನ್ನ ಮಗಳ ನೋಡಿ ಹಲ್ಲು ಕಿರಿತಿ" ಎಂದು ಬೈದು ಬಿಟ್ಟಿದ್ದ. ಹಲ್ಲು ಕಿರಿದು ಹಲಕಾ ಎಂದು ಬೈಸಿ ಕೊಂಡುವನು ನಾನೇ ಮೊದಲನೆಯವನು. ಏನು ನಿಮ್ಮ ಮಗಳು ಏನು ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಮಂಗವೊ ಎಂದು ಕೇಳಬೇಕೆಂದು ಕೊಂಡರು ಕೇಳಲಿಲ್ಲ. ಮುಂದೆ ಕೆಲ ದಿನಗಳ ನಂತರ ಬ್ಯಾಡರ ಒಣಿ ಉಡಾಳ್ ರಾಜಾ ಜೊತೆ ಅಲ್ಲೇ, ಇಲ್ಲೇ ಹಲ್ಲು ಕಿರೀತಾ ತಿರುಗುತ್ತಾ ಇದ್ದಳು ಸುನೀತ.
ಪಾರ್ಕ್ ನಲ್ಲಿ ಕೆಲವರು ಮುಂಜಾನೆ ಎದ್ದ ಕೂಡಲೇ ಹ್ಹ ಹ್ಹ ಹ್ಹ ಎಂದು ನಗುವ ವ್ಯಾಯಾಮ ಮಾಡುತ್ತಾರೆ.ಆದರೆ ಉಳಿದ ಸಮಯದಲ್ಲಿ ಮಾತ್ರ ಮುಖ ಸಿಂಡರಿಸಿಕೊಂಡೆ "ಆನೆ ದಂತ ತೋರಿಸೋಕೆ ಬೇರೆ , ತಿನ್ನೋಕೆ ಬೇರೆ" ತರಹ ಇರುತ್ತಾರೆ. ಅದನ್ನು ನೋಡಿ ನಮ್ಮ ಬೀದಿ ನಾಯಿ ಓsss....ಎಂದು ತಾನು ನಗುತ್ತದೆ ಕ್ಷಮಿಸಿ ಅಳುತ್ತದೆ.
ನಿಮಗೆ ಕೆಲಸದಲ್ಲಿ ಸೀರೀಯಸ್ ನೆಸ್ ಸ್ವಲ್ಪಾನೂ ಇಲ್ಲ ಎಂದು ನಾನು ಹಳೆಯ ಕಂಪನೀಯ ಬಾಸ್ ಬಳಿ ಬೈಸಿಕೊಂಡಿದ್ದು ಎಷ್ಟು ಬಾರಿ ನನಗೆ ಲೆಕ್ಕವಿಲ್ಲ. ಸೀರೀಯಸ್ ಆಗಿ ಕೆಲಸ ಮಾಡಿದರೆ ಪರಿಣಾಮ ಚೆನ್ನಾಗಿ ಇರುತ್ತೆ ಎನ್ನುವ ನಂಬಿಕೆ ನನಗೆ ಇಲ್ಲ. ಅದು ನಮ್ಮ ಬಾಸ್ ಹೇಗೆ ತಿಳೀಬೇಕು. ಗೂಬೆ ಮುಂಡೇದು ಯಾವತ್ತೂ ಮುಖ ಸಿಂಡರಿಸಿಕೊಂಡೆ ಇರುತಿತ್ತು ಎಂದೆ. ನನ್ನ ಹಳೆಯ ಪೂರಾಣವನ್ನು ಕೇಳಿ ಒಂದು ಮುಗುಳ್ನಗೆ ಬೀರಿ ಅಡುಗೆ ಮನೆಗೆ ಹೊರಟು ಹೋದಳು ನನ್ನ ಮಡದಿ.
ಲೇ ಇವತ್ತು ಡ್ರಮ್ ಸ್ಟಿಕ್ ಹಾಕಿ ಸಾಂಬಾರ್ ಮಾಡೇ ಎಂದೆ. ಡ್ರಮ್ ಹಾಕಿ ಚಿಕ್ಕ ಪಾತ್ರೆಲಿ ಸಾಂಬಾರ್ ಮಾಡೋಕೆ ಬರಲ್ಲ. ಬೇಕಾದರೆ ನೀರು ಕಾಯಿಸಲು ಇಟ್ಟ ಸ್ಟಿಕ್ ಹಾಕಿ ಮಾಡುತ್ತೇನೆ ಎಂದು ತರಲೆ ಮಾತು ಆಡಿದಳು.ಅದು ಬೇರೆ ನಿಮಗೆ ಸಾಂಬಾರ್ ನಾಳೆ ಬಿಸಿ ಬೇಳೆ ಬಾತ್ ಮಾಡೋಕ್ಕೆ ಬೇಕಾಗುತ್ತೆ ಎಂದಳು.
ಲೇ ಸ್ವಲ್ಪ ಬಿಸಿಲು ಕಾಯಿಸೋಕೆ ಹೋಗುತ್ತೇನೆ ಎಂದೆ. ಬಿಸಿಲು ನೀವೇನೂ ಕಾಯಿಸೋದು ಮೊದಲು ನೀರು ಕಾಯಿಸಿ ಎಂದಳು. ಅವಳು ಹೇಳಿದ ಮಾತು ಕೇಳಿ ನನ್ನ ಗೆಳೆಯ ಹೇಳುವ " ಆಜ್ ಧೂಪ್ ಖಾನಾ ಹೈ" ಎಂಬ ಮಾತು ನೆನಪು ಆಯಿತು. ಅವನು ಬಿಸಿಲು ಹೇಗೆ ತಿನ್ನುತ್ತಾನೆ ಎಂದು.
Tuesday, September 21, 2010
ಸ್ಪೆಶಲ್ ತಿಂಡಿ....
ಕಡೆಗೆ ಏನಾದರೂ ಸ್ಪೆಶಲ್ ತಿಂಡಿ ಮಾಡೇsss ಎಂದು ನನ್ನ ಮಡದಿಗೆ ಹೇಳಿದೆ. ನೀವು ಆಗಲೇ ಮಾಡಿ ಮುಗಿಸಿದ್ದೀರ ಎಂದು ಕೀಟಲೆ ಮಾತು ಆಡಿದಳು. ನೀವು ಈಗ ಹೇಳಿದರೆ ಹೇಗೆ?. ಮೊದಲೇ ಹೇಳಬೇಕು ಏನಾದರೂ ಮಾಡುತ್ತಿದ್ದೆ ಎಂದಳು. ಉಪ್ಪಿಟ್ಟು ರೆಡಿ ಮಾಡಿ ಆಗಿದೆ ತಿನ್ನಿ ಎಂದಳು. ಈ ಭಾನುವಾರ ಕೂಡ ಉಪ್ಪಿಟ್ಟು ಎಂದು ಮುಖ ಕಿಚಾಯಿಸಿದೆ. ಏನಾದರೂ ಹೊಟೆಲ್ ನಿಂದ ತರುತ್ತೇನೆ ಎಂದು ಹೇಳಿದೆ. ನನ್ನ ಮಡದಿಗೆ ಹೊಟೆಲ್ ಎಂಬ ಶಬ್ದ ಕೇಳಿ ತುಂಬಾ ಕೋಪ ಬಂದಿತ್ತು. ನೋಡಿ ಪಕ್ಕದ ಮನೆ ಪೂಜ ದಿನಾಲೂ ತಾನೇ ಮಾಡಿಕೊಂಡು ತಿನ್ನುತ್ತಾಳೆ ಹೊಟೇಲಿಗೆ ಹೋಗಿರೋದೇ ನೋಡಿಲ್ಲ ಎಂದಳು. ನನಗೆ ಕೂಡ ಹೊಟೆಲ್ ಹೋಗುವ ಇಷ್ಟ ಇಲ್ಲ, ಆದರೆ ಪೂಜ ತಾನು ಮಾಡಿದ ತಿಂಡಿ ನನಗೆ ಕೊಡಬೇಕಲ್ಲ ಎಂದೆ. ಇದು ಒಂದು ಬಾಕಿ ಇತ್ತು ಎಂದು, ನನ್ನ ಮಡದಿ ಕೋಪದಿಂದ ಅಡುಗೆ ಮನೆಗೆ ಹೊರಟು ಹೋದಳು.
ಅವಳನ್ನು ರಮಿಸಲು ಅಡುಗೆ ಮನೆಗೆ ಹೋದೆ. ಹೆಂಡತಿ ತನ್ನ ಓಘ ಬದಲಿಸಿ ಕೋಪದಿಂದ ಅಂದಳು .
ಮದುವೆ ಆಗಿ ಆಯಿತು ಐದು ವರ್ಷ
ಇನ್ನೂ ಕಾಣಲಿಲ್ಲ ಹೊಸ ಮನೆ ಹರ್ಷ
ನಾನು ಕೇಳುದ್ದು ಬರಿ ತಿಂಡಿ ಮಾತ್ರ ಎಂದು ಅವಳನ್ನು ಒಲಿಸುವ ಸಲುವಾಗಿ ಅಂದೆ...
ನನ್ನ ಹೃದಯ ಅರಮನೆ ಬೇಡವಾಗೀತೆ ಚಿನ್ನ
ಅದರಲ್ಲಿ ಇಟ್ಟು ಆರಾಧಿಸುವೆ ಅನುದಿನವೂ ನಿನ್ನ
ಚಿನ್ನ.. ರನ್ನ.. ಎಂದು ಮಸ್ಕಾ ಹೊಡೆದಿದ್ದು ಸಾಕು. ನಾನು ಹೋಗಿ ಏನಾದರೂ ತಿಂಡಿ ಮಾಡಿ ತರುತ್ತೇನೆ ಎಂದು ಅಡುಗೆ ಮನೆಗೆ ಹೊರಟು ಹೋದಳು. ನಾನು ಠೀವಿ ಇಂದ ಹೊರಬಂದು ಟಿ.ವಿ. ರಿಮೋಟ್ ತಿವಿದೆ. ಕೆಲ ಸಮಯದ ನಂತರ ನನಗೆ ಎಂದು ನನ್ನ ಮಡದಿ ಬಿಸಿ ಬೇಳೆ ಬಾತ್ ಮಾಡಿ ತಂದಳು. ತುಂಬಾ ಚೆನ್ನಾಗಿ ಇತ್ತು. ನನ್ನ ಹೆಂಡತಿಗೆ ಕೇಳಿದೆ ಇಷ್ಟು ಬೇಗ ತುಂಬಾ ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಹೋಗಳಿದೆ. ನನ್ನ ಮಡದಿ ಹಿರಿ ಹಿರಿ ಹಿಗ್ಗಿದ್ದಳು. ಅವಳನ್ನು ಇಂಪ್ರೆಸ್ ಮಾಡುವ ಸಲುವಾಗಿ ನಾನೇ ನೆಲವನ್ನು ಕ್ಲೀನ್ ಮಾಡಿದೆ. ಅಷ್ಟರಲ್ಲಿ ನನ್ನ ಮಡದಿ ನೀವು ಹೀಗೆ ಕ್ಲೀನ್ ಮಾಡಿದರೆ ನಾನು ಆ ತುದಿಗೆ ಹೋಗಬೇಕೆಂದರೆ ಒಂದು ದೋಣಿ ಬೇಕಾಗುತ್ತೆ ಎಂದು ತಮಾಷೆ ಮಾಡಿದಳು. ಏಕೆಂದರೆ ನಾನು ಅಷ್ಟು ನೀರು ಹಾಕಿ ಒರೆಸಿದ್ದೆ.
ಆಗ ನನ್ನ ಮಡದಿ ರೀssss... ಎಂದು ರಾಗ ಎಳೆಯ ತೊಡಗಿದಳು. ಏನು? ಎಂದಾಗ. ಶೆಟ್ಟರ ಅಂಗಡೀಲಿ ಒಂದು ಹೊಸ ಸೀರೆ ಬಂದಿದೆ. ನನಗೆ ಕೊಡಿಸಿ ಎಂದು ಹಟ ಹಿಡಿದಳು. ಆಯಿತು ನೀನು ಇಷ್ಟು ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಸಂಜೆಗೆ ಅವಳಿಗೆ ಸೀರೆ ಕೊಡಿಸಿಕೊಂಡು ಬರುವ ದಾರಿಯಲ್ಲಿ ಗೋಪಾಲನ್ ಮಾಲ್ ನೋಡಿದಳು. ರೀ ಗೋಪಾಲನ್ ಮಾಲ್ ಗೆ ಹೋಗೋಣ ಎಂದಳು. ಅದನ್ನು ಕೇಳಿ ನನ್ನ ಮಗ ಜೋರಾಗಿ ನಗಹತ್ತಿದ. ಅವನ ನಗು ನೋಡಿ ನಾವು ಕೂಡ ನಕ್ಕೆವು. ಕಡೆಗೆ ಗೋಪಾಲನ್ ಮಾಲ್ ಗೆ ಕರೆದು ಕೊಂಡು ಹೋಗಿ ಈ ಗೋಪಾಲನ ಕಿಸಿಯಲ್ಲಿರುವ ೧೦೦೦ ಮಾಲ್(ರೂ.) ಖಾಲಿ ಮಾಡಿ ಮನೆಗೆ ಬಂದೆವು.
ಅನಂತರ ಮನೆಗೆ ಬಂದ ಮೇಲೆ ನಿಮಗೆ ಒಂದು ವಿಷಯ ಗೊತ್ತಾ?. ನಾನು ಬೆಳಿಗ್ಗೆ, ನಿನ್ನೆ ಉಳಿದಿರೋ ಸಾರು,ಪಲ್ಯ ಮತ್ತು ಅನ್ನ ಹಾಕಿ ಬಿಸಿ ಬೇಳೆ ಬಾತ್ ಮಾಡಿದ್ದು ಎಂದಳು. ಹೇಗಿದೆ ನನ್ನ ಸ್ಪೆಶಲ್ ತಿಂಡಿ ಎಂದು ಹುಬ್ಬು ಹಾರಿಸಿದಳು.
ನಾನು ಫ್ರಿಡ್ಜ್ ಕಂಡು ಹಿಡಿದ ಮಹಾಶಯನಿಗೆ ಹಿಡಿ ಶಾಪ ಹಾಕಿದೆ. ಆದರೂ ಮಡದಿ ಮಾಡಿದ ಹೊಸ ರುಚಿ ಬಿಸಿ ಬೇಳೆ ಬಾತ್ ಚೆನ್ನಾಗೆ ಇತ್ತು. ಆದರೆ ಎರಡೆರಡು ಸ್ಪೆಶಲ್ ತಿಂಡಿ ತಿಂದ ನನಗೆ ಅವಳು ಮಾಡಿದ ಬಿಸಿ ಬೇಳೆ ಬಾತ್ ತಿನ್ನುವಾಗ ಮಾತ್ರ ಕಪಾಳ ಮತ್ತು ಗದ್ದ ಉರಿಯುತಿತ್ತು.
Thursday, September 2, 2010
ನನಗೆ ಮದಿರೆ ಬೇಡ ಸ್ವಾಮಿ....
ಶ್ಯಾಮ್ ಮನೆಗೆ ಬಂದೆವು. ಶ್ಯಾಮ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದ. ಕೆಲ ಹನಿ ಹೊಟ್ಟೆಗೆ ಇಳಿದ ಮೇಲೆ, ನಮ್ಮ ಮಂಜಿನ ಹನಿಗಳು (ಮಂಜನ ಮಾತುಗಳು) ಶುರು ಆದವು. ಮಂಜ ಎಡಬಿಡದೆ ಮಾತನಾಡುತ್ತಿದ್ದ.ಮಂಜನ ಸರದಿ ಮುಗಿದ ಮೇಲೆ,ಶ್ಯಾಮ್ ತನ್ನ ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಹೇಳಹತ್ತಿದ.
ಮೊದಲು ನಾನು ನೋಡ ಹೋಗಿದ್ದು ರಾಜೇಶ್ವರಿ ಎನ್ನುವ ದಾವಣಗೆರೆ ಹುಡಿಗಿನ. ಅವಳು ತುಂಬಾ ಸುಂದರವಾಗಿದ್ದಳು ಎಂದ. ನಿಜವಾಗಿಯೂ ಕನಸಿನ ರಾಣಿ ಎಂದ. ಯಾರ ಕನಸಿನ ನಿನ್ನದಾ ಅಥವಾ? ಬೇರೆಯವರ ಕನಸಿನ ರಾಣಿನ? ಎಂದ ಮಂಜ. ಮತ್ತೆ ಏಕೆ? ಮದುವೆ ಆಗಲಿಲ್ಲ ಎಂದು ಕೇಳಿದ. ನನ್ನ ಅಪ್ಪ ಅವಳಿಗೆ ಹಾಡು ಹೇಳಲು ಹೇಳಿದರು ಅವಳು ತುಂಬಾ ಚೆನ್ನಾಗಿ ಹಾಡಿದಳು. ಅವಳ ಸರದಿ ಆದ ಮೇಲೆ ನಾನು ಒಂದು ಹಾಡು ಹೇಳುತ್ತೇನೆ ಎಂದು ಹಾಡು ಹೇಳಿದೆ ಅಷ್ಟೇ. ಅವಳು ನನ್ನನ್ನು ವರಿಸಲಿಲ್ಲ ಎಂದ.
ಮಂದೆ ಶಾಂಭವಿ ಎನ್ನುವ ಬೆಳಗಾವಿ ಹುಡುಗಿ ನೋಡಿದೆ. ಅವಳು ತುಂಬಾ ಚೆನ್ನಾಗಿ ಇದ್ದಳು ಎಂದ. ಅವಳು ಎಲ್ಲರಿಗೂ ನಮಸ್ಕಾರ ಮಾಡುತ್ತಾ, ನನಗು ಬಂದು ನಮಸ್ಕಾರ ಮಾಡುತ್ತಿದ್ದಾಗ, ನಾನು ನನಗೆ ಏಕೆ? ಎಂದು ಜಿಗಿದು ಸೋಫಾ ಮೇಲೆ ಕುಳಿತೆ ಅಷ್ಟೇ. ಅವಳು ನನ್ನನ್ನು ಒಪ್ಪಲಿಲ್ಲ ಎಂದ.
ಮುಂದೆ ಭಾರತಿ ನಮ್ಮ ಊರಿನ ಹುಡುಗಿನ ನೋಡಿದೆ. ಅವಳು ಸ್ವಲ್ಪ ಕಪ್ಪು ಆದರೆ ಮುಖದಲ್ಲಿ ಕಳೆ ಇತ್ತು. ಅವಳ ಜೊತೆ ಮಾತನಾಡುವಾಗ ನಾನು ಡೈರೆಕ್ಟ್ ಆಗಿ ಐ ಲೈಕ್ ಯೂ. ನಿನ್ನ ಇಚ್ಛೆ ಏನು ಎಂದು ಕೇಳಿದ್ದಕ್ಕಾಗಿ ಒಪ್ಪಲಿಲ್ಲ ಎಂದ. ಹೀಗೆ ತುಂಬಾ ಹೆಣ್ಣುಗಳನ್ನು ನೋಡಿದ್ದೆ. ಅನಂತರ ಮದುವೆ ಯೋಚನೇಲಿ ಕೂದಲೆಲ್ಲ ಉದಿರಿದವು. ಈಗೀಗ ಬರೋ ಹುಡಿಗಿರು ನನ್ನನ್ನು ಯಾರು ಒಪ್ಪಿರಲಿಲ್ಲ. ಆಮೇಲೆ ಮದುವೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆದರೆ ನೀವು ನನಗೆ ತುಂಬಾ ಒಳ್ಳೆಯ ಹೆಂಡತಿ ಕರುಣಿಸಿದ್ದೀರ ಎಂದು ಮಂಜನ ಕಾಲಿಗೆ ಬಿದ್ದ. ಮಂಜ ಏಳಿ.. ಏಳಿ.. ಶ್ಯಾಮ್ ಎಂದ. ಆದರೆ ಶ್ಯಾಮ್ ಅಲ್ಲಿಯೇ ಮಲಗಿ ಬಿಟ್ಟಿದ್ದ. ಶ್ಯಾಮ್ ನ ಎತ್ತಿ ಸೋಫಾ ಮೇಲೆ ಮಲಗಿಸಿದೆವು. ಅಷ್ಟರಲ್ಲಿ ಟ್ರಿನ್.. ಟ್ರಿನ್.. ಎಂದು ಬಾಗಿಲ ಬೆಲ್ ಶಬ್ದ. ಹೋಗಿ ಮಂಜ ಬಾಗಿಲು ತೆಗೆದ. ಅಣ್ಣssss ನೀನು ಎಂದು ಬಂದಳು ಶ್ಯಾಮ್ ಹೆಂಡತಿ. ನಾನು ಮತ್ತು ಮಂಜ ಏನು ತೋಚದಾಗಿದ್ದೆವು. ಎದಿರು ಎಲ್ಲ ಬಾಟಲಿಗಳು ಇದ್ದವು. ನಾನು ಮನೇಲಿ ಇಲ್ಲ ಎಂದು ಇದೆಲ್ಲಾ ನಡೆಸಿದ್ದೀರ ಎಂದಳು. ನಾನು ವೈನಿಗೆ ಹೇಳುತ್ತೇನೆ ಎಂದಳು. ಆಗ ಮಂಜ ನನಗೆ ವೈನ್ ಇಷ್ಟ ಇಲ್ಲ. ಅದು ಬೇರೆ ನನಗೆ ಕಾಕ್-ಟೇಲ್ ಆಗಿ ಬರಲ್ಲ ಎಂದ. ನಾನು ಹೇಳಿದ್ದು ಸಾವಿತ್ರಿ ವೈನಿ ಬಗ್ಗೆ ಎಂದಳು. ಓsss... ಆ ಹೆಸರಲ್ಲೂ ವೈನ್ ಇದೆಯಾ? ಎಂದ ಮಂಜ. ಲೇ ಅವರು ಹೇಳುತ್ತಿರುವದು ನಿನ್ನ ಹೆಂಡತಿ ಬಗ್ಗೆ ಹೆಂಡದ ಬಗ್ಗೆ ಅಲ್ಲ ಎಂದೆ. ಶ್ಯಾಮ್ ಮಡದಿ ಇದನ್ನು ಹೇಳಿದ್ದೆ ತಡ. ಮಂಜ ಹಾಗೆ ಮಾತ್ರ ಮಾಡಬೇಡಮ್ಮ ಎಂದು ಪರಿ ಪರಿಯಾಗಿ ಅವಳಿಗೆ ಬೇಡಿಕೊಂಡ. ಇವತ್ತು ಒಂದು ರಾತ್ರಿ ಇಲ್ಲಿ ಇರಲು ಬಿಡು ಎಂದ.ಅಷ್ಟರಲ್ಲಿ ಮಂಜನ ಫೋನ್ ರಿಂಗ್ ಆಯಿತು. ಮೀಟಿಂಗ್ ನಲ್ಲಿ ಇದ್ದೇನೆ ನಾಳೆ ಮುಂಜಾನೆ ಫೋನ್ ಮಾಡುತ್ತೇನೆ ಎಂದ. ಮಂಜ ತನ್ನ ಹೆಂಡತಿಗೆ ನೈಟ್ ಶಿಫ್ಟ್ ಎಂದು ಸುಳ್ಳು ಹೇಳಿ ಬಂದಿದ್ದ.
ಶ್ಯಾಮ್ ಮಡದಿ ಶ್ಯಾಮ್ ನನ್ನು ಮಗುವಿನ ಹಾಗೆ ಎತ್ತಿಕೊಂಡು ಹೋಗಿ ಬೆಡ್ ರೂಮ್ ನಲ್ಲಿ ಮಲಗಿಸಿದಳು. ನಾನು ಮತ್ತು ಮಂಜ ಎಲ್ಲೇ ಹಾಲ್ ನಲ್ಲಿ ಮಲಗಿದೆವು. ಮರು ದಿವಸ ಶ್ಯಾಮ್ ಮಡದಿ ಚಹಾ ಮಾಡಿದ್ದಳು. ಚಹಾ ಕೂಡ ವಿಸ್ಕೀ ವಾಸನೆ ಬರುತಿತ್ತು. ನಮ್ಮ ನಶೆ ಇಳಿದಿಲ್ಲ ಎಂದು ತಿಳಿದು ಸುಮ್ಮನೇ ಕುಡಿಯುತ್ತಿದ್ದೆವು. ಆದರೆ ಶ್ಯಾಮ್ ಮಡದಿ ಒಯಿಕ.. ಒಯಿಕ ...ಎಂದು ವಾಂತಿ ಮಾಡಿದ್ದಳು. ಏಕೆಂದರೆ ಬಾಟಲ್ ತೆಗೆಯುವಾಗ ಸ್ವಲ್ಪು ಒಡೆದಿತ್ತು. ಅದನ್ನು ಚಹಾ ಸೋಸುವದರಿಂದ ಸೋಸಿ ಶ್ಯಾಮ್ ಅದನ್ನು ತೊಳೆಯದೇ ಹಾಗೆ ಇಟ್ಟಿದ್ದ.
ಇದಾದ ಮೇಲೆ ಮೊದಲ ಬಾರಿ ಶ್ಯಾಮ್ ಮನೇಲಿ ದೊಡ್ಡ ಜಗಳವೇ ಆಗಿತ್ತು. ಮೊದಲು ಶ್ಯಾಮ್ "ನನಗೆ ಮದುವೆ ಬೇಡ ಸ್ವಾಮಿ" ಎಂದು ಹಾಡುತ್ತಿದ್ದ. ಆದರೆ ಈಗ "ನನಗೆ ಮದಿರೆ ಬೇಡ ಸ್ವಾಮಿ" ಎಂದು ಹೇಳುತ್ತಾನೆ.
Friday, August 27, 2010
ಮನೇಲಿ ಇಲಿ.... ಬೀದಿಲಿ ಬೀದಿ-ಇಲಿ(ಹೆಗ್ಗಣ) ....
ಏನೋ ಬರೀತಾ ಕುಳಿತಿದ್ದೆ. ನನ್ನವಳು ರೀ ಬೀChiಗೆ ಅಂದಳು. ನನಗೆ ಅಂತಹ ದೊಡ್ಡ ಹಾಸ್ಯ ಸಾಹಿತಿಗೆ ಹೋಲಿಸುತ್ತಿದ್ದಾಳೆ ಎಂದು ತುಂಬಾ ಖುಷಿಯಿಂದ ನನ್ನಷ್ಟಕ್ಕೆ ನಾನೇ ಭೇಷ್.. ಭೇಷ್... ಎಂದು ಹೇಳಿಕೊಳ್ಳುತ್ತ. ನಾನು ಅಷ್ಟು ದೊಡ್ಡ ಎಂದು ಬಾಯಿ ತೆಗೆಯುವ ಮೊದಲೇ ಅಡುಗೆ ಮನೆಯಿಂದ ಬಂದ ನನ್ನ ಮಡದಿ ರೀ ಈ ಬಾರಿ ಉಡುಪಿಗೆ ಹೋದಾಗ ಬೀಚ್ ಗೆ ಹೋಗೋಣ ಎಂದಳು. ನಾನು ಮುಂದೆ ಹೇಳುವದನ್ನು ನಿಲ್ಲಿಸದಿದ್ದರೆ ನಾನೇ ಅಪಹಾಸ್ಯ ಆಗಿಬಿಡುತ್ತಿದ್ದೆ. ಆಯಿತು ಎಂದು ಹೇಳಿ ಮತ್ತೆ ಬರೆಯುತ್ತಾ ಕುಳಿತೆ. ಏನೋ ಬರೀತಾ ಇದ್ದ ಹಾಗಿದೆ ರಾಯರು ಎಂದಳು. ನಾನು ಬರೆಯುತ್ತಿರುವ ಲೇಖನದ ಬಗ್ಗೆ ಸ್ವಲ್ಪ ವಿವರವಾಗಿ ಹೇಳಲು ಅನುವಾದೆ. ಅಷ್ಟರಲ್ಲಿ ಅವಳ ಮೊಬೈಲ್ ರಿಂಗ್ ಆಯಿತು. ನಾನು ಕಾಯುತ್ತಾ ಕುಳಿತೆ ಬರೋಬ್ಬರಿ ಅರ್ಧ ಘಂಟೆ ಮಾತನಾಡಿದ್ದಳು. ಮತ್ತೆ ಅಡುಗೆ ಮನೆಗೆ ಹೊರಟು ಹೋದಳು.
ಸ್ವಲ್ಪ ಸಮಯದ ನಂತರ ಬಂದು ಏನೋ ಹೇಳುತ್ತ ಇದ್ದ ಹಾಗೆ ಇತ್ತು ಎಂದಳು. ನಾನು ಲೇಖನದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದೆ. ಈ ಬಾರಿ ನನ್ನ ಎಲ್ಲ ಬ್ಲಾಗ್ ಲೇಖನಗಳನ್ನು ಸೇರಿಸಿ ಪುಸ್ತಕ ಲೋಕಾರ್ಪಣೆ ಮಾಡಬೇಕು ಎಂದು ಮಾಡಿದ್ದೇನೆ ಎಂದೆ. ರೀ ಅಂದ ಹಾಗೆ ನೆನಪು ಆಯಿತು. ನನಗೆ ೧೨೦ ರೂಪಾಯಿ ರೊಕ್ಕಾರ್ಪಣೆ ಮಾಡಿ ಎಂದಳು. ಏಕೆ? ದುಡ್ಡು ಎಂದೆ. ಮಗನ ಪುಸ್ತಕಕ್ಕೆ ಎಂದು ೧೨೦ ರೂಪಾಯಿ ತೆಗೆದುಕೊಂಡಳು. ಅದೆಲ್ಲ ಏನು ಬೇಡ ನನ್ನನ್ನು ಅಪಹಾಸ್ಯ ಮಾಡಿ ಬರೆದ ಲೇಖನಗಳನ್ನು ಪುಸ್ತಕ ರೂಪದಲ್ಲಿ ತರುತ್ತೀರಾ? ಎಂದಳು. ನಿನ್ನನ್ನ ಹೋಗಳಿದ್ದು ಇದೆ ಅಲ್ಲ ಎಂದೆ. ನಾನು ಎಲ್ಲಿ ನಿಮ್ಮನ್ನ ಬೈದು ಬಿಡುತ್ತೇನೆ ಎಂದು ಕೆಲ ಲೇಖನಗಳಲ್ಲಿ ಹೋಗಳಿದ್ದೀರಾ ಅಷ್ಟೇ ಎಂದು ಅಡುಗೆ ಮನೆಗೆ ಹೊರಟೆ ಹೋದಳು.ನನ್ನ ಹೆಂಡತಿಗೆ ನಾನು ಅರ್ಥನೇ ಆಗಿಲ್ಲ ಎಂದು ಕೊರುಗುತ್ತಾ ಕುಳಿತೆ. ಬರೆಯುವದನ್ನು ಪಕ್ಕಕ್ಕೆ ಇಟ್ಟು ಇದು ನನ್ನ ಒಬ್ಬನ ಸಮಸ್ಯೆಯಾ ಅಥವಾ ಎಲ್ಲರದು ಇದೇನಾ ಎಂದು ಪರೀಕ್ಷಿಸ ಬೇಕು ಎಂದು ಮಂಜನ ಮನೆಗೆ ಹೋದೆ.
ಮಂಜ ಕಾಫೀ ಕುಡಿಯುತ್ತಾ ಕುಳಿತಿದ್ದ. ನನಗು ಕೂಡ ಒಂದು ಕಾಫೀ ಕೊಟ್ಟಳು ಮಂಜನ ಮಡದಿ. ನಾನು ಕಾಫೀ ಕುಡಿಯುತ್ತಾ ಹೆಂಡತಿಯರಿಗೆ ನಾವು ಅರ್ಥವೇ ಆಗೋದಿಲ್ಲವ? ಎಂದು ಕೇಳಿದೆ. ಯಾರ ಹೆಂಡತಿಗೆ ನೀನು ಅರ್ಥ ಆಗ್ಬೇಕೋ ಎಂದ ಮಂಜ. ಕೋಪದಿಂದ, ಲೇssss ನಾನು ನನ್ನ ಹೆಂಡತಿ ಬಗ್ಗೆ ಎಂದೆ. ನಾವು ಹೊರಗೆ ಹುಲಿ ಹಾಗೆ ಇರುತ್ತೇವೆ. ಮನೆಗೆ ನಮ್ಮನ್ನು ನಮ್ಮ ಹೆಂಡತಿಯರು ನಮ್ಮನ್ನು ಇಲಿಯ ಹಾಗೆ ನೋಡುತ್ತಾರಲ್ಲ ಕಣೋ ಎಂದೆ. ಅದು ನಿನ್ನ ಕೇಸ್ ಇರಬಹುದು ಆದರೆ ನಾನು ಮನೆಯಲ್ಲೂ ಹುಲಿನೆ ಎಂದ. ಅಷ್ಟರಲ್ಲಿ ಅವನ ಹೆಂಡತಿ ಕಾಫೀ ಕಪ್ ತೆಗೆದುಕೊಂಡು ಹೋಗಲು ಬಂದಳು. ಆದರೆ ತ್ರಿಶುಲಧಾರಿ (ಲಟ್ಟಣಿಗೆ) ದುರ್ಗಾ ದೇವಿ ಅದರ ಪಕ್ಕದಲ್ಲಿ ಇರುತ್ತಾಳೆ ಎಂದ. ಗಹ ಗಹಿಸಿ ನಗ ಹತ್ತಿದೆ. ಮೊದಲು ಏನು ಹೇಳಿದ ಎಂದು ಗೊತ್ತು ಇಲ್ಲದರಿಂದ ನಾವಿಬ್ಬರು ಬಚಾವ್ ಅದೇವು. ಇಲ್ಲಿದಿದ್ದರೆ ನಮ್ಮ ವಟ ..ವಟ... ಸಾವಿತ್ರಿ ನಮ್ಮನ್ನು ಬಿಡುತಿರಲಿಲ್ಲ. ನಾವು ನಗುವುದನ್ನು ನೋಡಿ ಏನು ವಿಷಯ ಎಂದು ಸಾವಿತ್ರಿ ಕೇಳಿದಳು. ನಾವು ಏನು ಇಲ್ಲ ಎಂದೆವು. ಆದರೂ ಅವಳು ಬಿಡದೆ ನನ್ನನ್ನು ನೋಡಿ ನೀವು ನಗುತ್ತಿರುವದು ಹೇಳಿ ಎಂದು ಪಿಡಿಸಹತ್ತಿದಳು. ನಾವು ಏನು ತೋಚದಾದೇವು ಅಷ್ಟರಲ್ಲಿ ಸುಬ್ಬನ ಫೋನ್ ಬಂತು. ಮಾತನಾಡುತ್ತಾ ಸುಬ್ಬ ಕರೆದಿದ್ದಾನೆ ಎಂದು ಅಲ್ಲಿಂದ ಜಾಗ ಖಾಲಿಮಾಡಿದೆವು. ಮಂಜ ಕೆಲವೊಮ್ಮೆ ನಮ್ಮ ಮೇಲೆ ಸವಾರಿಯೂ ಮಾಡುತ್ತಾರೆ ಎಂದ.
ಸುಬ್ಬನ ಮನೆಗೆ ಹೋದೆವು ಅಲ್ಲಿ ಅವನ ಹೆಂಡತಿ ಅವನು ಕಟ್ಟಿಸಿ ಕೊಂಡಿದ್ದ ರಾಖಿ ಧಾರವನ್ನು ಗಟ್ಟಿಯಾಗಿ ಕಟ್ಟುತಿದ್ದಳು. ಇದನ್ನು ನೋಡಿ ಮಂಜ ಇದೆ ನೋಡು ಸುಬ್ಬನ ಸೀಕ್ರೆಟ್ ಎಂದು ಹೇಳಿದ. ಮಂಜ ಮತ್ತೆ ನಾನು ನೋಡಿ ಗಹ ಗಹಿಸಿ ನಗುತ್ತಿದ್ದನ್ನು ನೋಡಿ ಸುಬ್ಬನಿಗೆ ತುಂಬಾ ಕೋಪ ಬಂದಿತ್ತು. ಏನು ಎಂದು ಕೇಳಿದ ಸುಬ್ಬ. ಏನೋ ಹೆಂಡತಿ ಹತ್ತಿರ ರಾಖಿ ಕಟ್ಟಿಸಿಕೊಳ್ಳುತ್ತಿದ್ದೀಯ ಎಂದ ಮಂಜ. ಲೇ ಅದು ಧಾರ ಸಡಿಲಾಗಿತ್ತು ಅಷ್ಟೇ ಎಂದ ಸುಬ್ಬ. ಅಷ್ಟರಲ್ಲಿ ನಮ್ಮನ್ನು ಹುಡುಕಿಕೊಂಡು ನನ್ನ ಮತ್ತು ಮಂಜನ ಮಡದಿ ಬಂದರು. ಏನು ವಿಶೇಷ ಎಂದು ಕೇಳಿದಳು ನನ್ನ ಮಡದಿ. ಏನು ಇಲ್ಲ ಎಂದ ಸುಬ್ಬ. ಅಷ್ಟೇ ಇಬ್ಬರನ್ನು ದುರುಗುಟ್ಟಿ ನೋಡಿದರು. ನಾವು ಸಾವಕಾಶವಾಗಿ ಆ ಮೂವರು ಮಾತನಾಡುವಾಗ ಜಾಗ ಖಾಲಿ ಮಾಡಿದೆವು. ಇಲ್ಲದಿದ್ದರೆ ನಿಮಗೆ ಗೊತ್ತಲ್ಲ.:).
ಮಂಜ ನನಗೆ ಮತ್ತು ಸುಬ್ಬನಿಗೆ ಹೇಳಿದ ಮನೇಲಿ ಇಲಿ ಆದರೆ ಬಿದೀಲಿ ಹುಲಿ ಎಂದು ತಿಳಿದು ಕೊಂಡಿದ್ದೇವೆ ಅಷ್ಟೇ ಆದರೆ ನಿಜವಾದ ಸಂಗತಿ ನಾವು ಕೂಡ ಬೀದಿಲಿ ಬೀದಿ ಇಲಿ(ಹೆಗ್ಗಣ) ... ಕಣೋ ಎಂದ. ಸುಬ್ಬ ನಾನು ರಸ್ತೆ ಎಂದು ಯೋಚಿಸದೇ ಹೊಟ್ಟೆ ಹುಣ್ಣು ಆಗುವಷ್ಟು ನಕ್ಕಿದ್ದೆವು.
Friday, August 13, 2010
ಎಂಗೇಜ್ಮೆಂಟ್ (ಯಂಗ್ ಏಜ್ ಮೆಂಟ್)
ಪ್ರಕಾಶ್ ಮಾಮಾ ನನಗಿಂತ ೨೫ ವರ್ಷ ದೊಡ್ಡವರು. ನೋಡಿಕೊಳ್ಳಲು ಯಾರು ಇರಲಿಲ್ಲ. ತಂದೆ - ತಾಯಿ ತೀರಿ ೪ ವರ್ಷ ಆಗಿತ್ತು. ತುಂಬಾ ಕಷ್ಟ ಜೀವಿ. ತನ್ನ ಎಲ್ಲಾ ಆಸೆ ಆಕಾಂಕ್ಷೆ ತೊರೆದು ಮನೆಗಾಗಿ ದುಡಿದವರು. ಅಪ್ಪ - ಅಮ್ಮ ಏನು ಆಸ್ತಿ ಮಾಡಿರಲಿಲ್ಲ. ಅವರು ಮಾಡಿರುವ ಏಕೈಕ ಆಸ್ತಿ ಎಂದರೆ ೨ ಅಕ್ಕಂದಿರು, ೪ ತಂಗಿಯರು. ಈಗೀಗ ಸ್ವಲ್ಪ ಕಣ್ಣು ಮತ್ತೆ ಕಿವಿ ಮಂದಾಗಿತ್ತು. ಈಗ ಎಂಗೇಜ್ಮೆಂಟ್ ಮಾಡುವದಾದರೂ ನಾವೇ ಮಾಡಬೇಕು.ನಾನು ಎಂಗೇಜ್ಮೆಂಟ್ ಹೋಗುವದರ ಸಲುವಾಗಿ ಟಿಕೆಟ್ ಬುಕ್ ಮಾಡಿದೆ. ಎಲ್ಲ ಕೆಲಸಗಳನ್ನು ನಾನು ಮತ್ತು ನನ್ನ ಮಡದಿ ಮಾಡಲು ಆಗುವದಿಲ್ಲ ಎಂದು, ನನ್ನ ಗೆಳೆಯರಾದ ಸುಬ್ಬ, ಮಂಜ ಮತ್ತು ಮನೋಜನನ್ನು ಕರೆದುಕೊಂಡು ಹೋದೆ.
ಎಂಗೇಜ್ಮೆಂಟ್ ದಿವಸ ಬಂದೆ ಬಿಟ್ಟಿತು. ಹಣ್ಣುಗಳನ್ನು ತಂದಿರಲಿಲ್ಲ ಹೀಗಾಗಿ ಹಣ್ಣುಗಳನ್ನು ತರಲು ಮಂಜನಿಗೆ ಹೇಳಿದೆ. ಮತ್ತೆ ನಾವು ಕುಳಿತುಕೊಂಡೆವು. ಆಗ ರಾಮಾಚಾರ್ಯರು ನೀವು ನಡುವೆ ಕುಳಿತುಕೊಳ್ಳಿ ಎಂದರು. ರೀ .. ಸುಮ್ಮನಿರಿ ಇದು ನಮ್ಮ ಮಾಮಾನ ಎಂಗೇಜ್ಮೆಂಟ್ ಎಂದು ತೋರಿಸಿದಾಗ ಸುಮ್ಮನಾದರು. ಮತ್ತೆ ಮಂತ್ರ ಎಲ್ಲವನ್ನು ಮುಗಿಸಿದರು. ಹಣ್ಣು ಕೊಡುವ ಶಾಸ್ತ್ರ ಮುಗಿಸಿ ಎಂದರು ಶಾಸ್ತ್ರಿಗಳು. ಹಣ್ಣುಗಳನ್ನು ನಾವು ಕೊಡಬೇಕಾಗಿತ್ತು. ಅಷ್ಟರಲ್ಲಿ ಮಂಜ ಬಂದ. ಹಣ್ಣು ತಂದಿದ್ದ ಆದರೆ ಅವನು ತಂದಿದ್ದು 2 ಖಾರಬೂಜ ,2 ಹಲಸಿನ ಹಣ್ಣು, ಮತ್ತೆ 2 ಕಲ್ಲಂಗಡಿ ಹಣ್ಣು. ಅದನ್ನು ನೋಡಿ ನನಗೆ ತುಂಬಾ ಕೋಪ ಬಂದಿತ್ತು. ಇದೇನೋ ಹಣ್ಣು ತೆಗೆದುಕೊಂಡು ಬಾ ಎಂದರೆ ಎಂದು ಗದರಿಸಿದ್ದೆ. ಕಡೆಗೆ ಅದನ್ನೇ ತೆಗೆದುಕೊಂಡು ಒಂದು ದೊಡ್ಡ ಪಾತ್ರೆಯಲ್ಲಿ ಇಟ್ಟು ನನ್ನ ಕೈಗೆ ಕೊಟ್ಟರು. ಆ ಭಾರದಿಂದ ಧಪ್ ಎಂದು ನೆಲಕ್ಕೆ ಉರುಳಿದೆ. ಮತ್ತೆ ಸುಬ್ಬ ಮತ್ತೆ ಮಂಜ ಸೇರಿ ನನ್ನನ್ನು ಎತ್ತಿದರು. ಒಂದು ಕಲ್ಲಂಗಡಿ ಹಣ್ಣು ಎರಡು ಹೋಳು ಆಗಿತ್ತು. ಅದನ್ನೇ ಎಲ್ಲರಿಗೂ ಜೂಸ್ ಮಾಡಲು ಕಳುಹಿಸಿದೆವು. ಹಾಗೂ ಹೀಗೂ ಮತ್ತೆ ನಾವೆಲ್ಲರೂ ಕೂಡಿ ಅದನ್ನು ನಮ್ಮ ಬೀಗರ ಕೈಗೆ ಕೊಟ್ಟೆವು. ಪಾಪ ಒಬ್ಬರೇ ಹೇಗೆ ಅದನ್ನು ಹಿಡಿಯಲು ಆಗುತ್ತೆ. ನನ್ನ ಅರ್ಧ ಕೂಡ ಇರಲಿಲ್ಲ ನಮ್ಮ ಬೀಗರು. ಅವರು ನನ್ನ ತಲೆಗೆ ಡಿಕ್ಕಿ ಹೊಡೆದು ಬಿಟ್ಟರು. ನನ್ನ ತಲೆಗೆ ಒಂದು ಗುಮ್ಮಟಿ ಆಗಿತ್ತು.
ಕಡೆಗೆ ಎಲ್ಲ ಶಾಸ್ತ್ರ ಮುಗಿದ ಮೇಲೆ ಉಟಕ್ಕೆ ಕುಳಿತಿದ್ದೆವು. ನಮ್ಮ ಮಾಮಾ ಕಣ್ಣು ಕಾಣಲಾರದೇ ಉಂಡಿ ತನ್ನ ಮಡದಿಗೆ ತಿನ್ನಿಸುವ ಬದಲು ನನಗೆ ತಿನ್ನಿಸಲು ಶುರು ಮಾಡಿದ್ದ. ನಾನು ಮತ್ತೆ ಅದನ್ನು ಅವನ ಹೆಂಡತಿಗೆ ತಿನ್ನಿಸಲು ಹೇಳಿದೆ. ಮತ್ತೆ ತಿನ್ನಿಸಿದ. ಆದರೆ ಅವನ ಮಡದಿ ನನ್ನ ಹೆಂಡತಿಯ ಎಲೆ ಮೇಲೆ ಇರುವ ಉಂಡಿ ತೆಗೆದು ಮಾಮಾನಿಗೆ ತಿನ್ನಿಸುತ್ತಿದ್ದಳು. ಎಲ್ಲರೂ ಇವರನ್ನು ನೋಡಿ ನಗುತ್ತಿದ್ದರು.
ಎಲ್ಲವೂ ಸುಸೂತ್ರವಾಗಿ ನೆರವೇರಿತ್ತು. ನಾನು ನನ್ನ ಮಡದಿಗೆ ಹೇಳಿದೆ ಸುಮ್ಮನೇ ಇದೆಲ್ಲವೂ ಬೇಕಿತ್ತಾ. ರಿಜಿಸ್ಟರ್ ಆಫೀಸ್ ನಲ್ಲಿ ಮದುವೆನೇ ಮಾಡಬಹುದಿತ್ತು ಎಂದೆ. ಆಗ ಏನೋ ಮಾವ ಆಸೆ ಪಟ್ಟರು. ಅವರಿಗೆ ಎಲ್ಲವೂ ಶಾಸ್ತ್ರೋಕ್ತವಾಗಿ ಆಗಬೇಕು. ಅದಕ್ಕೆ ಏನು ಈಗ ಎಂದಳು. ಅಲ್ಲ ಕಣೆ ..ಇದು ಒಂದು ತರಹ ಓಲ್ಡ್ ಏಜ್ ಮೆಂಟ್ ಅನ್ನಬಹುದು..ಎಂದಾಗ ನನ್ನ ಮಡದಿಗೂ ನಗು ತಡಿಯಲು ಆಗಲಿಲ್ಲ.
Wednesday, July 28, 2010
ಸುಬ್ಬನ ಹನಿ...(ಹಣಿ...) ಮೂನ್
ಈ ಜನಗಳಿಗೆ ಬುದ್ದೀನೇ ಇಲ್ಲ? ಎಂದು ಬೈದು ಕೊಳ್ಳುತ್ತ ನಿಂತಿದ್ದ ನಮ್ಮ ಸುಬ್ಬ. ಏನು? ಯಾರು ಏನು ಕೇಳಿದರು ಎಂದು ಕೇಳಿದೆ.ಈ ಜನಗಳಿಗೆ ಮದುವೆ ಅಂದ್ರೆ ತಮಾಷೆಯಾಗಿಬಿಟ್ಟಿದೆ. ಯಾರೇ ಇರಲಿ ಭೇಟಿಯಾದ ಮೇಲೆ ಕೇಳುವ ಮೊದಲನೆ ಪ್ರಶ್ನೆ ಮದುವೆ ಆಯಿತಾ?. ಅದು ಆದ ಮೇಲೆ ಎರಡನೆ ಪ್ರಶ್ನೆ ಮಕ್ಕಳು ಎಷ್ಟು? ಎಂದು. ಏನು ಮಕ್ಕಳ ಎಂದರೆ... ಮಕ್ಕಳ ಆಟವ? ಎಂದು ಕೇಳಿದ ಸುಬ್ಬ. ಆ ಹೌದು ಮಕ್ಕಳು ಏಕೆ? ಆಗಿಲ್ಲ ನಿನಗೆ,ಮಕ್ಕಳಾಗಿಲ್ಲ ಎಂದು ಹೋಗಿ ನಮ್ಮ ಜ್ಯೋತಿಷ್ಯ ಪ್ರವೀಣ ಮನೋಜನ್ನಾದರೂ ಕೇಳೋ ಎಂದು ಹೇಳಿದ ನಮ್ಮ ಮಂಜ. ಲೇ ಎಂದು ಕೆಕ್ಕರಿಸಿ ಮಂಜನನ್ನು ನೋಡಿದ. ಏಕೆ? ಎಂದಿರೋ, ಮದುವೆ ಆಗಿ ಒಂದು ವಾರ ಆಗಿಲ್ಲ ಕೂಡ. ಅಗಲೆ ಮಕ್ಕಳು ಎಲ್ಲಿಂದ ಬರಬೇಕು ನಮ್ಮ ಸುಬ್ಬನಿಗೆ. ಇನ್ನೂ ಅಕ್ಕ-ಪಕ್ಕದ ಮನೆ ಮಕ್ಕಳನ್ನು ತನ್ನ ಮಕ್ಕಳು ಎಂದು ಹೇಳಬೇಕಷ್ಟೆ.
ಸುಬ್ಬ ಮೊದಲೇ ತಲೆ ತುಂಬಾ ಬಿಸಿ ಮಾಡಿಕೊಂಡಿದ್ದ. ಅವನ ಮಾವ ಅವನಿಗೆ ವರೋಪಚಾರದಲ್ಲಿ ಸ್ವಲ್ಪ ಕಡಿಮೆ ಮಾಡಿದ ಎಂದು. ಮತ್ತೆ ನೀನೆ ಹೋಗಿ ಕೇಳು ಎಂದು ಹೇಳಿದ ಮಂಜ. ಕೇಳಿದ್ದೆ. ಆದರೆ ಬಂಗಾರದಂತ ಹೆಂಡತಿ ನಿನಗೆ ಕರುಣಿಸಿದ್ದೇನೆ. ಮತ್ತೆ ಏನು ಬೇಕು ನಿನಗೆ ಎಂದು ದಬಾಯಿಸಿ ಕಳುಹಿಸಿದ ಎಂದ ಸುಬ್ಬ. ಮತ್ತೆ ಒಂದು ದಿನ ಹೋಟೆಲ್‍ಗೆ ಉಟಕ್ಕೆ ಕರೆದುಕೊಂಡು ಹೋಗಿದ್ದರು. ಬೇಗ ಬೇಗ ಊಟ ಮುಗಿಸಿ ೧೦ ನಿಮಿಷ ಅಲ್ಲೇ ನಿದ್ದೆ ಮಾಡುತ್ತಿದ್ದರು ನಿದ್ದೆ ಬಡಕ ನನ್ನ ಮಾವ. ಬಿಲ್ ಬಂತು, ನಾನೇ ಕೊಡುತ್ತೇನೆ ಎಂದು ತಿಳಿದುಕೊಂಡು ಸುಮ್ಮನೇ ನಿದ್ದೆಯಲ್ಲಿದ್ದರು. ನಾನು ಮಾವ.. ಮಾವ.. ಎಂದು ಕೂಗಿ ಬಿಲ್ ಎಂದೆ. ಬಿಲ್ ಕೂಲ್ ಏಳಲಿಲ್ಲ. ಮತ್ತೆ ಬಡಿದು ನನ್ನ ಮಡದಿ ಎಬ್ಬಿಸಿದಳು. ಮನಸ್ಸಿಲ್ಲದೇ ಮನಸ್ಸಿನಿಂದ ತಮ್ಮ ಕ್ರೆಡಿಟ್ ಕಾರ್ಡ್ ಕೊಟ್ಟರು. ಅವರ ಕ್ರೆಡಿಟ್ ಕಾರ್ಡ್ ಬಿಲ್ ನಲ್ಲಿ ನಮ್ಮ ಮಾವನಿಗೆ ಹೇಳದೇ ೫೦ ರೂಪಾಯಿ ಎಕ್ಸ್‌ಟ್ರಾ ಟಿಪ್ಸ್ ಎಂದು ಕಟ್ ಮಾಡಿದ್ದರು. ನಿದ್ದೆಗಣ್ಣಲ್ಲಿ ನೋಡದೇ ಹಾಗೆ ಬಂದು ಬಿಟ್ಟಿದ್ದರು. ಮತ್ತೆ ಎರಡು ದಿವಸ ಆದ ಮೇಲೆ, ನಮ್ಮ ಮಾವ ನನ್ನನ್ನು ಕರೆದುಕೊಂಡು ಹೋಗಿ ಜಗಳ ಮಾಡಿ ಹೊಟೆಲ್ ನವರಿಂದ ದುಡ್ಡು ವಸುಲ್ ಮಾಡಿದ್ದರು ಎಂದ ಸುಬ್ಬ. ನನಗೆ ತುಂಬಾ ಅವಮಾನ ಆಗಿತ್ತು ಎಂದ ಸುಬ್ಬ. ನಾನು ತುಂಬಾ ಕೇಳಿದ್ದಕ್ಕೆ ಹನಿಮೂನ್ ಟಿಕೆಟ್ ಮಾಡಿ ಕೊಡುತ್ತೇನೆ ಮಾತ್ರ ಎಂದು ಹೇಳುತ್ತಿದ್ದಾರೆ. ನಾನು ಅದು ಬೇಡ ಎಂದು ಹೇಳಿ ಬಂದೆ ಎಂದ ಸುಬ್ಬ. ಆಗ ಮಂಜ ಬೇಡ ಏಕೆ ಅಂದೆ. ಈಗ ಫೋನ್ ಮಾಡಿ ಟಿಕೆಟ್ ಮಾಡಿಸಿ ಎಂದು ಹೇಳು ಅಂದ. ಸುಬ್ಬ ಫೋನ್ ಮಾಡಿದ ಆದರೆ ಟಿಕೆಟ್ ಈಗ ಸಿಗೋಲ್ಲ ವೇಟಿಂಗ್ ಲಿಸ್ಟ್ ೭೦ ಇದೆ ಎಂದರು ನಮ್ಮ ಸುಬ್ಬನ ಮಾವ.
ಆಗ ನಮ್ಮ ಮಂಜ ಕೆಲ ಹೊತ್ತು ಯೋಚಿಸಿ, ನಾನು ನಿನಗೆ ಒಂದು ಐಡಿಯಾ ಕೊಡುತ್ತೇನೆ ಎಂದು ಹೇಳಿದ. ನಿಮ್ಮ ಮಾವನಿಗೆ ತತ್ಕಾಲ್ ಬುಕ್ ಮಾಡಿಸು ಎಂದು ಹೇಳು ಎಂದ ಮಂಜ. ನೀನು ನಿಮ್ಮ ಮಾವ ಎಷ್ಟಾದರೂ ನಿದ್ದೆ ಬಡಕ ಎಂದು ಹೇಳಿರುವೆ. ಅವರ ಜೊತೆ ನೀನು ಹೋಗು ಎಂದ. ಅವರು ಮಲಗಿಕೊಂಡಾಗ ಒಂದಿಷ್ಟು ದುಡ್ಡು ಜೇಬಿನಿಂದ ಎತ್ತು ಎಂದ. ಎಷ್ಟಾದರೂ ನಿನ್ನ ಮಾವ ನಿನ್ನ ಬಗ್ಗೆ ಸಂಶಯ ಪಡುವದಿಲ್ಲ ಎಂದ. ಸುಬ್ಬ ಆಯಿತು ಎಂದ.
ಸುಬ್ಬ ಮತ್ತೆ ಮಾವ ಎರಡು ದಿನ ಮೊದಲು ಹೋಗಿ ರಿಸರ್ವೇಶನ್ ಕ್ಯೂ ನಲ್ಲಿ ೪ ಘಂಟೆಗೆ ನಿಂತರು. ಸುಬ್ಬ ಮಾವ ಮಲಗಿಕೊಳ್ಳುವದೆ ಕಾಯುತ್ತಾ ಇದ್ದ. ಆಗ ಇನ್ನೂ ಕತ್ತಿಲು, ಮಾವ ಮಲಗಿಕೊಂಡ ಮೇಲೆ ನಿಧಾನವಾಗಿ ಅವರ ಜೇಬಿನಿಂದ ಅವರ ಪ್ಯಾಕೆಟ್ ತೆಗೆದುಕೊಂಡು ತನ್ನ ಜೇಬಿನಲ್ಲಿ ಇಟ್ಟು ಕೊಂಡ.
ನಾನು ಮತ್ತೆ ಮಂಜ ಮುಂಜಾನೆ ವಾಕಿಂಗ್ ಗೆ ಬಂದಿದ್ದೆವು. ಸುಬ್ಬನನ್ನು ವಿಚಾರಿಸಲು ಬಿ ಡಿ ಎ ಕಾಂಪ್ಲೆಕ್ಸ್ ಗೆ ಬಂದೆವು. ಮಂಜ ತನ್ನ ನಾಯಿಯನ್ನು ತನ್ನ ಜೊತೆಗೆ ಕರೆದುಕೊಂಡು ಬಂದಿದ್ದ. ಸುಬ್ಬ ತುಂಬಾ ಖುಷಿಯಲ್ಲಿ ಇದ್ದ. ಕೆಲಸ ಆಗಿದೆಯಾ ಎಂದು ಕೇಳಿದ ಮಂಜ. ಸಕ್ಸಸ್ ಎಂದ ಸುಬ್ಬ. ಎಷ್ಟು ದುಡ್ಡು ಇಟ್ಟಿದ್ದಾರೆ ನೋಡು ನಿಮ್ಮ ಮಾವ ಎಂದ. ಸುಬ್ಬ ಸಾವಕಾಶವಾಗಿ ತನ್ನ ಜೇಬಿನಿಂದ ತೆಗೆದ. ಆದರೆ ಅದು ಮಾವನ ಪರ್ಸ್ ಆಗಿರದೇ ಸಿಗರೇಟ್ ಪ್ಯಾಕೆಟ್ ಆಗಿತ್ತು.ಕತ್ತಲಲ್ಲಿ ಸುಬ್ಬನಿಗೆ ಗೊತ್ತೇ ಆಗಿರಲಿಲ್ಲ. ಲೇ....ಎಂದು ಮಂಜ ಸುಬ್ಬನನ್ನು ಕೆಕ್ಕರಿಸಿ ನೋಡಿದ್ದ. ಸುಬ್ಬನ ಮಾವ ಬಾಯಿ ತೆಗೆದು ಇನ್ನೂ ಮಲಗಿಯೇ ಇದ್ದರು.
ಸುಬ್ಬ ಸಾವಕಾಶವಾಗಿ ಸಿಗರೇಟ್ ಪ್ಯಾಕೆಟ್ ವಾಪಸ್ ಇಡಲು ಅನುವಾದ. ಅಷ್ಟರಲ್ಲಿ ಒಂದು ದೊಡ್ಡ ಅನಾಹುತ ಆಗಿ ಬಿಟ್ಟಿತ್ತು. ಮಂಜನ ನಾಯಿ ಸುಬ್ಬನ ಮಾವನ ಮೇಲೆ ಸೂಸು ಮಾಡಿಬಿಟ್ಟಿತ್ತು. ಆಗ ಸುಬ್ಬನ ಮಾವ ಎದ್ದು, ಅಳಿಯಂದಿರೆ ನಿಮಗೆ ಸಿಗರೇಟ್ ಬೇಕು ಎಂದಿದ್ದರೆ ನಾನೇ ಕೊಡುತ್ತಿದ್ದೇನಲ್ಲ ಎಂದರು. ಅದು... ಅದು... ಎಂದು ಸುಬ್ಬ ತಡವರಿಸುತ್ತಾ, ನಮ್ಮ ಮಂಜನಿಗೆ ಬೇಕು ಅದಕ್ಕೆ ಎಂದ. ಆನಂತರ ಸುಬ್ಬನ ಮಾವ ಮಲಗಿಕೊಳ್ಳಲಿಲ್ಲ.ಮಂಜ ಸುಖವಾಗಿ ಒಂದು ಸಿಗರೇಟ್ ಸೇದಿದ.
ರಿಸರ್ವೇಶನ್ ನಲ್ಲಿ ಸುಬ್ಬನ ಸರದಿ ಬಂದಿತ್ತು. ಆಗ ಸುಬ್ಬನ ಮಾವ ದುಡ್ಡನ್ನು ಕೊಡಬೇಕೆಂದು ತಮ್ಮ ಪಂಚೆ ಎತ್ತಿದರು. ಅಳಿಯಂದಿರೆ ದೊಡ್ಡ ಅನಾಹುತ ಎಂದರು. ನಾನು ಮುಂಜಾನೆ ಬೇಗ ಎದ್ದು ಟಾಯ್ಲೆಟ್ ಹೋದೆ ಅಲ್ವಾ, ಅಲ್ಲೇ ನನ್ನ ಅಂಡರ್ ವೇರ ಹಾಕಿಕೊಳ್ಳಲಾರದೇ ಬಂದು ಬಿಟ್ಟೆ. ಅದರ ಜೇಬ್ ನಲ್ಲಿ ದುಡ್ಡು ಇಟ್ಟಿದ್ದೆ ಎಂದರು. ಕಡೆಗೆ ನಮ್ಮ ಸುಬ್ಬನೇ ತನ್ನ ದುಡ್ಡು ಕೊಟ್ಟು ಹನಿಮೂನ್ ಟಿಕೆಟ್ ಬುಕ್ ಮಾಡಿದ. ಮನೆಗೆ ಬಂದರು ಸಹ ಸುಬ್ಬನ ದುಡ್ಡು ವಾಪಸ್ ಬರಲಿಲ್ಲ.
ಸುಬ್ಬ ಕಡೆಗೆ ತನ್ನ ದುಡ್ಡಿನಿಂದಲೇ ಹನಿಮೂನ್ ಗೆ ಹೋದ. ನಾನು ಸುಬ್ಬನಿಗೆ ಒಂದು ದಿವಸ ಫೋನ್ ಮಾಡಿದ್ದೆ ಹೇಗಿದೆ ಹನೀ ಮೂನ್ ಎಂದು. ಆಗ ಸುಬ್ಬನ ಹೆಂಡತಿ ಬಗ್ಗೆ ಕೇಳಿದಾಗ ವಾಂತಿ ಮಾಡುತ್ತಿದ್ದಾಳೆ ಎಂದ. ಲೇ ...ಹೋಗಿ ಇನ್ನೂ ಎರಡು ದಿವಸ ಆಗಿಲ್ಲ ಎಂದೆ. ಲೇ ನಾವು ಬಸ್ ನಲ್ಲಿ ಇದ್ದೇವೆ. ಅವಳಿಗೆ ಬಸ್ ಎಂದರೆ ಅಲರ್ಜೀ ಎಂದ.
ಮತ್ತೆ ಎರಡು ವಾರ ಆದ ಮೇಲೆ ಸುಬ್ಬ ಹನಿಮೂನ್ ಮುಗಿಸಿ ಬಂದಿದ್ದ. ನಾನು ಮತ್ತೆ ಮಂಜ ಕೇಳಿದೆವು ಹೇಗೆ ಇತ್ತು ನಿನ್ನ ಹನಿಮೂನ್ ಎಂದು. ಆಗ ನಮ್ಮ ಸುಬ್ಬ ಹಣಿ ... ಹಣಿ..ಗಟ್ಟಿಸಿಕೊಂಡು, ಹೋದ ಕೂಡಲೇ ನನಗೆ ಡೆನ್ಗ್ಯು ಜ್ವರ ಬಂದಿದ್ದು ಇನ್ನೂ ಇಳಿದಿಲ್ಲ ಎಂದು ತನ್ನ ಅಳಲನ್ನು ತೋಡಿಕೊಂಡ....ನಾವು ಕೂಡ ಅವನ ಪರಿಸ್ತಿತಿ ನೋಡಿ ಮಲ ಮಲ ಮರಗಿದೆವು .
Friday, July 23, 2010
ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....
ನಾನು ಬೆಂಗಳೂರಿಗೆ ಬಂದು ಸೇರಿದೆ. ನನ್ನ ರಜೆ ದುಡ್ಡು ನನಗೆ ಬಂತು. ಮನಸಿಗೂ ಸ್ವಲ್ಪ ಸಮಾಧಾನ ದಕ್ಕಿತ್ತು. ತುಂಬಾ ಖುಷಿ ಪಟ್ಟೆ. ಹಾಗೆ ಮೊನ್ನೆ ಒಮ್ಮೆ ಗಾಂಧಿ ಬಜಾರ್ ನಲ್ಲಿ ಹೊರಟಿದ್ದಾಗ ವಿಚಿತ್ರ ಎಂಬಂತೆ, ಒಂದು ಪರಿಚಯದ ಸಚಿತ್ರ ಪ್ರಾಣಿ ನನ್ನ ಕಣ್ಣ ಮುಂದೆ ಬಂದು ನಿಂತಿತು. ಯಾರು? ಎಂದು ಸ್ವಲ್ಪ ಸಮಯ ಹೊಳೆಯಲಿಲ್ಲ. ಅದೇ ಗೋಪಾಲ್ ಕೃಷ್ಣ. ನಾನು ಗುರುತು ಹಿಡಿದೆ, ಅವನು ಮಾತ್ರ ನನ್ನ ಗುರುತು ಹಿಡಿಯಲಿಲ್ಲ. ಮೊನ್ನೆ ಬಂದ ನನ್ನ ಅಕ್ಕನಿಗೆ ನಾನು ಗುರುತು ಹಿಡಿಯಲಾರದಷ್ಟು ಬದಲಾಗಿದ್ದೀಯ ಎಂದು ಹೇಳಿದ್ದಳು. ಇನ್ನು ಇವನು ಕಂಡುಹಿಡಿಯುವುದು ಅಸಾಧ್ಯದ ಮಾತು. ನಾನೇ ಅವನಿಗೆ ಮಾತನಾಡಿಸಿ, ಎಲ್ಲಾ ಕ್ಷೇಮ ಸಮಾಚಾರವಾದ ಮೇಲೆ, ಮನೆಗೆ ಕರೆದುಕೊಂಡು ಹೋದೆ. ಅವನು ನನ್ನ ತಲೆಯ ಬಗ್ಗೆ ವಿಚಾರಿಸಿದಾಗ, ಎಲ್ಲವು ಬೆಳ್ಳಗೆ ಇರುವುದು ಬೇಕು.. ಬೇಕು.. ಎಂದು ದೇವರನ್ನು ಬೇಡಿಕೊಳ್ಳುತ್ತಿದ್ದೆ. ಹೆಂಡತಿ, ವಾಚ್, ಕಾರು...ಇದು ಅದರ ಪರಿಣಾಮ ಎಂದು ಒಗಟಿನ ಹಾಗೆ ಹೇಳಿದೆ. ಅರ್ಥ ಆಗಲಿಲ್ಲ. ಏನು? ಹಾಗೆಂದರೆ ಎಂದು ಕೇಳಿದ. ಅವನಿಗೆ ಅವನ ಸಿನೀಮಿಯ ಭಾಷೆಯಲ್ಲೇ ಹೇಳಿದರೆ ಚೆನ್ನ ಎಂದು ಶುರು ಮಾಡಿದೆ.
ಒಂದು ದಿನ "ಕಟ್... ಕಟ್ ..." ಸ್ವಲ್ಪ ಸಮಯದ ನಂತರ ಮತ್ತೆ ಅದೇ "ಕಟ್ ಕಟ್". ನನ್ನ ಹೆಂಡತಿ ಗೊಣಗುತ್ತ ಎದ್ದು ಬಾಗಿಲು ತೆರೆದಳು. ಒಂದು ಹುಡುಗಿಯ ಧ್ವನಿ. ಇನ್ನೂ ನಿದ್ದೆಯಲ್ಲಿ ಇದ್ದವ. ಜಿಗಿದು ಕುಳಿತು. ಯಾರೇ ಅದು ಎಂದು ಕೇಳಿದೆ. ಅದೇ ಪಕ್ಕದ ಮನೆ ಪ್ರಿಯ. ಏನಂತೆ ಅವಳಿಗೆ. ಹಾಲಿನವನು ಬಂದರೆ, ನಾನು ಒಂದು ವಾರ ಮನೆಯಲ್ಲಿ ಇರಲ್ಲ ಊರಿಗೆ ಹೊರಟಿದ್ದೇನೆ ಎಂದು ಹೇಳಿ ಹೋದಳು. ಅಯ್ಯೋ ಪಾಪಿ ನಿದ್ದೆ.. ನಿದ್ದೆ.. ಎಂದು ಸಾಯುತ್ತಿ. ನೀನೆ ಹೋಗಿ ಬಾಗಿಲು ತೆಗೆದಿದ್ದರೆ? ಎಂದು ಮನದೊಳಗೆ ನನ್ನನ್ನು ಬೈದು ಕೊಂಡೆ. ನನ್ನ ಮಡದಿ ಮುಖ ತೊಳೆಯಲು ಬಾತ್ ರೂಮ್ ಹೋಗುತ್ತಿದ್ದಂತೆ ಮತ್ತೆ "ಕಟ್... ಕಟ್.... " ಶಬ್ದ. ನಾನು ಹೋಗಿ ಬಾಗಿಲು ತೆಗೆದೆ. ಮತ್ತೆ ಅವಳೇ ಪಕ್ಕದ ಮನೆ ಪ್ರಿಯ.ನನ್ನ ಖುಷಿಗೆ ಪಾರವೇ ಇರಲಿಲ್ಲ. "ಅಂಕಲ್ ಪೇಪರ್ ನವನು ಬಂದರೆ ಒಂದು ವಾರ ಇರಲ್ಲ ಎಂದು ಹೇಳಿ". ನಾನು ಮರೆತು ಬಿಟ್ಟೆ ಎಂದಳು. ಹೂವಿನ ಹಾಗೆ ಅರಳಿದ ನನ್ನ ಮುಖ ಅಂಕಲ್ ಶಬ್ದ ಕೇಳಿ ಬಾಡಿ ಬೆಂಡಾಗಿತ್ತು .ಆಯಿತು ಎಂದು ಹೇಳಿ ಬಾಗಿಲು ಮುಚ್ಚಿ ಕೊಂಡೆ.
ಯಾರು ಎಂದು ಕೇಳಿದಳು ನನ್ನ ಮಡದಿ. ಅದೇ ಪ್ರಿಯ ಪೇಪರ್ ನವನಿಗೆ ಹೇಳಬೇಕಂತೆ ಎಂದೆ. ಮನದಲ್ಲಿ ಮತ್ತೆ ಅದೇ ಯೋಚನೆ... ಅಂಕಲ್ ....?. ಹೋಗಿ ಕನ್ನಡಿ ಮುಂದೆ ನಿಂತೆ. ಪೂರ್ತಿಯಾಗಿ ಎಲ್ಲಡೆ ಕಣ್ಣು ಹಾಯಿಸಿ ನೋಡಿದೆ. ತಲೆ ಒಂದು ಬಿಟ್ಟು ಎಲ್ಲವೂ ಸರಿ ಇತ್ತು(ಕೂದಲು ಸರ್ ಮತ್ತೆ ನಿಮಾನ್ಸ್ ಗೆ ಹೇಳಿ ಬಿಟ್ಟೀರ? :) ). ಈ ಕೂದಲಿಗೆ ಏನು ಮಾಡುವದು ಎಂದು ಯೋಚಿಸುತ್ತಿದ್ದೆ. ಅಲ್ಲೇ ಬಿದ್ದ ಏಶಿಯನ್ ಕರಿ ಪೈಂಟ್ ನನ್ನ ನೋಡಿ "ಬಣ್ಣ ನನ್ನ ಒಲವಿನ ಬಣ್ಣ" ಎಂದು ಹಾಡುತ್ತಿದ್ದ ಹಾಗೇ ಅನ್ನಿಸಿತು. ಪೈಂಟ್ ಡಬ್ಬಿ ತೆಗೆದೆ ಸೀಮೆ ಎಣ್ಣೆ ವಾಸನೆ. ಒಯಿಕ... ಒಯಿಕ... ಎಂದು ಎರಡು ಸಾರಿ ಹೊಟ್ಟೆ ತೊಳಿಸುವ ಹಾಗೆ ಅನ್ನಿಸಿತು. ಎತ್ತಿ ಪಕ್ಕಕ್ಕೆ ಇಟ್ಟೆ. ನೀರು ಕಾಯಿಸಲು ಹೋದಾಗ ಇದ್ದಿಲು ಕಾಣಿಸಿತು. ಆ "ಯುರೇಕಾ....." ಎಂದು ಕಿರುಚೋಣ ಎಂದು ಕೊಂಡೆ. ಮಗ ಇನ್ನೂ ಎದ್ದಿರಲಿಲ್ಲ. ಕಿರುಚಿದರೆ ಅಷ್ಟೇ ನನ್ನ ಮಡದಿ ಪರಚಿ ಬಿಡುತ್ತಾಳೆ ಎಂದು ಸುಮ್ಮನಾದೆ. ಆದರೆ ಇದನ್ನು ಹಚ್ಚಿಕೊಂಡರೆ ಮಳೆ ಬಂದರೆ ಕಷ್ಟ. ಮತ್ತೆ ಆ ಐಡಿಯಾ ಕೂಡ ತಲೆ ಕೆಳಗಾಯಿತು.
ಸ್ನಾನ ಮುಗಿಸಿ ಬಂದ ಕೂಡಲೇ ... ಕಾಣಿಸಿದ್ದು ಕಾಡಿಗೆ ಡಬ್ಬಿ. ತೆಗೆದೆ ಅದು ಪೂರ್ತಿ ಖಾಲಿ ಆಗಿತ್ತು. ಮತ್ತೆ ನಿರಾಸೆಯ ಅಲೆಯಲ್ಲಿ ತೇಲುತ್ತ ತಿಂಡಿ ತಿಂದು ಆಫೀಸ್ ಹೋಗಲು ಅನುವಾದೆ. ಬೂಟ್ ಹಾಕಿಕೊಳ್ಳುವಾಗ ಕಾಣಿಸಿತು ನೋಡಿ. ನನ್ನ ಬೂಟ್ ಪಾಲಿಷ್. ಅದನ್ನೇ ಹಚ್ಚಿ ಕೊಳ್ಳೋಣ ಎಂದು ಬ್ರಶ್ ಎತ್ತಿದೆ. ನನ್ನ ಮಡದಿ ಒಳಗಿನಿಂದ ಬಂದು ರೀ ಹಾಲು ಕುಡಿದು ಹೋಗಿ ಎಂದಳು. ಮೊದಲೇ ಆ ಬಿಳಿ ಬಣ್ಣದ ಮೇಲೆ ಕೋಪವಿದ್ದಿದರಿಂದ. ಇವತ್ತು ನನಗೆ ಹಾಲುಬೇಡ ಕಣೆ ಎಂದೆ. ಏನು ಮಾಡುತ್ತಾ ಇದ್ದೀರ? ಎಂದು ಕೇಳಿದಳು ಮಡದಿ. ಏನು ಇಲ್ಲ, ಕಣೆ ಬೂಟ್ ಪಾಲಿಷ್ ಮಾಡುತ್ತಾ ಇದ್ದೇನೆ ಎಂದೆ. ಬೂಟ್ ತೆಗೆದು ಕೊಂಡೆ. ರೀ ನಾನು ಆಗಲೇ ಪಾಲಿಷ್ ಮಾಡಿ ಆಗಿದೆ ಎಂದಳು. ನೋಡು ಎಷ್ಟು ಕೊಳೆಯಾಗಿದೆ ಎಂದು ಪಾಲಿಷ್ ಮಾಡಲು ಅನುವಾದೆ. ನೋಡಿ ನನ್ನನ್ನು ಜೋರಾಗಿ ಕುಹಕವಾಡಿ ನಗಲು ಶುರು ಹಚ್ಚಿಕೊಂಡಳು. ನಾನು ಅರಿವಿಲ್ಲದೇ ಏಕೆ? ಎಂದು ದಬಾಯಿಸಿ ಕೇಳಿದಾಗ. ಮತ್ತೆ ಏನು ಬ್ರೌನ್ ಬೂಟ್ ಗೆ ಕರಿ ಪಾಲಿಷ್ ಎಂದು ಕುಹಕವಾಡಿದಳು. ನಾನು ಅದನ್ನು ನೋಡಿ ನನ್ನ ಬುದ್ದಿಗೆ ಮಲ.. ಮಲ.. ಮರಗಿ, ಅವಳು ಪಾಲಿಷ್ ಮಾಡಿದ ಕರಿ ಬೂಟ್ ಹಾಕಿಕೊಂಡು ಆಫೀಸ್ ಹೋಗಲು ಬಸ್ ಸ್ಟಾಪ್ಗೆ ಹೋದೆ. ಅಷ್ಟರಲ್ಲಿ ಒಬ್ಬ ಶಾಲೆಗೆ ಹೋಗುತ್ತಿದ್ದ ಒಂದು ಹುಡುಗಿ "ಅಂಕಲ್ ಟೈಮ್ ಎಷ್ಟು" ಎಂದು ಕೇಳಿದಳು. ಅವಳಿಗೆ ಟೈಮ್ ಹೇಳಿ ನಿಂತ ಎರಡೇ ನಿಮಿಷದಲ್ಲಿ ಬಸ್ ಬಂತು.
ಬಸ್ನಲ್ಲಿ ತುಂಬಾ ಜನ ಜಂಗುಳಿ ಇತ್ತು. ಮುಂದೆ ಹೋಗಿ ನಿಂತೆ. ಅಷ್ಟರಲ್ಲಿ ಒಬ್ಬ ಹುಡುಗ ಅಂಕಲ್ ನೀವು ಕುಳಿತು ಕೊಳ್ಳಿ ಎಂದು ತನ್ನ ಸೀಟ್ ನನಗೆ ಬಿಟ್ಟು ಕೊಟ್ಟ. ಮತ್ತೊಮ್ಮೆ ಅಂಕಲ್ ಎಂಬ ಶಬ್ದ ಕೇಳಿ, ಯಾರೋ ಕಲ್ಲಿನಿಂದ ಕಿವಿಗೆ ಬಂದು ಹೊಡೆದ ಹಾಗೆ ಆಯಿತು. ತಲೆಯಲ್ಲಿ ಅಂಕಲ್ ಎಂಬ ಶಬ್ದ ತುಂಬಾ ಗಾಯ ಮಾಡಿತ್ತು. ಕಡೆಗೆ ಶತಾಯುಗತಾಯ ಈ ಬಿಳಿ ಕೂದಲಿಗೆ ಏನಾದರೂ ಪರಿಹಾರ ಹುಡುಕಲೆ ಬೇಕು ಎಂದು ಆಫೀಸ್ ಹೋಗಿ ರಜೆ ಹಾಕಿ ಡಾಕ್ಟರ್ ಹುಡುಕಲು ಹೊರಟೆ. ಹೋದ ಕೂಡಲೇ ಸಿಗಬೇಕಲ್ಲ. ಒಂದೆರಡು ತಾಸು ತಿರುಗಿದ ಮೇಲೆ ಒಬ್ಬ ಡಾಕ್ಟರ್ ಕ್ಲಿನಿಕ್ ಸಿಕ್ಕಿತು. ಡಾಕ್ಟರ್ ಹೆಸರು ಕರಿಯಪ್ಪ. ತಕ್ಕ ಹೆಸರು ಎಂದು ಅಂದು ಕೊಂಡು ಕುಳಿತೆ. ಡಾಕ್ಟರ್ ಬಂದರು. ಆದರೆ ಡಾಕ್ಟರ್ ಕೂದಲು ಮಾತ್ರ ಪೂರ್ತಿ ಸಿಲ್ವರ್ ಕಲರ್. ಬೇಡ ಎಂದು ಎದ್ದು ಹೋಗಲು ಅನುವಾದೆ. ರೀ ಒಳಗೆ ಹೋಗಿ ಎಂದರು. ಏಕೆಂದರೆ ನಾನೇ ಮೊದಲನೆ ಪೇಶೆಂಟ್. ಮನಸ್ಸಿಲ್ಲದೆ ಒಳಗೆ ಹೋದೆ. ಏನು ಸಮಸ್ಯೆ ಎಂದರು ಡಾಕ್ಟರ್. ಸರ್ ನನ್ನ ತಲೆ .... ಎಂದೆ. ನಾನು ಸ್ಕಿನ್ ಸ್ಪೆಶಲಿಸ್ಟ್. ನಿಮ್ಮ ತಲೆ ನೋಡೋಕೆ ಬೇಕಾದರೆ ನಿಮಾನ್ಸ್ ಗೆ ಹೋಗಿ ಎಂದರು. ಸರ್ ಅದು ನನ್ನ ತಲೆಯಲ್ಲಿ ತುಂಬಾ ಬಿಳಿ ಕೂದಲು ಏನಾದರೂ ಔಷಧಿ ಕೊಟ್ಟು ಕರಿ ಮಾಡಿ ಎಂದೆ. ಸರ್ ನಿಮಗೆ ಬೇಕಾಗೋದು ಹಜಾಮತಿ ಅಂಗಡಿ. ಕಾರ್ನರ್ ಬಳಿ ಇದೆ ನೋಡಿ ಎಂದರು. ಸರ್ ನಾನು ಮೊದಲು ಅಲ್ಲೇ ಹೇರ್ ಡೈ ಮಾಡಿಸುತ್ತಾ ಇದ್ದೇ. ಆಗ ನನ್ನ ಕೂದಲು ಎರಡೋ ಮೂರೋ ಬಿಳಿ ಇದ್ದವು ಈಗ ನೋಡಿ ಎಂದೆ. ನನ್ನದು ಅದೇ ಕತೆ ಮಹಾರಾಯ ಎಂದರು ಡಾಕ್ಟರ್. ನಾನು ನಿಮಗೆ ಇನ್ನೊಬ್ಬ ಡಾಕ್ಟರ್ ಅಡ್ರೆಸ್ ಕೂಡುತ್ತೇನೆ. ಅವರು ನಾಟಿ ಔಷಧಿ ಕೊಡುತ್ತಾರೆ ಹೋಗಿ ಎಂದು ಹೇಳಿದರು.
ಆ ನಾಟಿ ಔಷಧಿ ಡಾಕ್ಟರ್ ಅಡ್ರೆಸ್ ಹುಡುಕಿ... ಹುಡುಕಿ... ಅರ್ಧ ಬೆಂಗಳೂರು ತಿರುಗಿದ್ದೆ. ಏಕೆಂದರೆ ಆ ಆಸಾಮಿ ತನ್ನ ಔಷಧಿ ಅಂಗಡಿಯನ್ನು ಒಂದು ಜಾಗದಲ್ಲಿ ಇಡುವದಿಲ್ಲ ಎಂದು ಎಲ್ಲರೂ ಹೇಳಿದರು. ಕಡೆಗೆ ಮನೆಗೆ ಹೋಗುವ ಮನಸಿಲ್ಲದೇ ಕಡೆಯ ಪ್ರಯತ್ನ ಎಂದು ಒಬ್ಬರು ಹೇಳಿದ ಅಡ್ರೆಸ್ ಬಳಿ ಹೋದೆ. ಆಸಾಮಿ ಸಿಕ್ಕೇ ಬಿಟ್ಟ. ಸರ್ ... ಎಂದು ಒಳಗೆ ಹೋದ ಕೂಡಲೇ ನಿಮ್ಮ ಸಮಸ್ಯೆ ಏನು ಎಂದು ಕೇಳದೇ. ಒಂದಿಷ್ಟ ಎಣ್ಣೆ ಕೈಗೆ ಕೊಟ್ಟ. ಸರ್ ಇದು ಏನು?. ಎಂದೆ. ನಿಮ್ಮ ತಲೆ ನೋಡಿ ಗೊತ್ತಾಗುತ್ತೆ?. ನೀವು ಏತಕ್ಕೆ ಬಂದಿದ್ದೀರಿ ಎಂದ. ಸರ್ ನೀವು ದೇವರು ಎಂದು ಹೇಳಿ. ಹೇಗಾದರೂ ಮಾಡಿ ಈ ಬಿಳಿ ಕೂದಲಿಗೆ ಅಂತ್ಯ ಕಾಣಿಸಿ ಎಂದೆ. ಡಾಕ್ಟರ್ ತಲೆ ಕೆರೆದು ಕೊಳ್ಳಲು ಶುರು ಮಾಡಿದರು. ಪಾಪ ಏನೋ ಸಮಾಧಾನ ಆಗಲಿಲ್ಲ ಅಂತ ಕಾಣುತ್ತೆ. ನೋಡ.. ನೋಡುತ್ತಲೇ.. ವೀಗ್ ತೆಗೆದು ಕೆರೆದುಕೊಂಡರು. ನಾನು ಘಾಬರಿ. ಏನು ಹೆದರ ಬೇಡಿ ಎಂದು ಹೇಳಿದರು. ಕೂದಲು ನನಗೆ ಹುಟ್ಟಾ ಇಲ್ಲ ಎಂದರು. ಅದಕ್ಕೆ ಇರಬೇಕು ಇಷ್ಟು ಜಾಣ ಡಾಕ್ಟರ್ ಎಂದು ಮನದಲ್ಲೇ ಅಂದು ಕೊಳ್ಳುತ್ತಿದ್ದಾಗ, ಒಬ್ಬ ವೀಗ್ ವ್ಯಾಪಾರ ಮಾಡುವ ಆಸಾಮಿ ಬಂದು, ಸರ್ ಎಷ್ಟು ವೀಗ್ ಕೊಡಲಿ ಎಂದು ಡಾಕ್ಟರ್ ನ್ನು ಕೇಳಿದ. ಮತ್ತೆ ಡಾಕ್ಟರ್ ನನಗೆ ಸಮಾಧಾನ ಮಾಡಿ ಅದು ನಿಮಗೆ ಅಲ್ಲ ಎಂದು ಹೇಳಿ. ನನಗೆ ಫೀಸ್ ಕೊಡಿ ಎಂದು ಹೇಳಿದರು. ಎಷ್ಟು ಎಂದು ಕೇಳಿದಾಗ. ಬರಿ ೨೦೦೦ ರೂಪಾಯಿ ಮಾತ್ರ ಎಂದರು.
ವಿಧಿ ಇಲ್ಲದೇ ಕೊಟ್ಟು ಮನೆಗೆ ಬಂದೆ. ದಿನವೂ ಔಷಧ ಲೇಪನ ಶುರು ಹಚ್ಚಿ ಕೊಂಡೆ. ನನ್ನ ಮಡದಿ ರೀ... ನಿಮ್ಮ ತಲೆ ವಾಸನೆ ಗೋಮೂತ್ರ ಹಾಗೆ ಬರುತ್ತೆ ಎಂದಳು. ಲೇ ಅದು ಫೇಮಸ್ ಡಾಕ್ಟರ್ ಕೊಟ್ಟ ಔಷಧಿ ಎಂದು ಹೇಳಿ ಸಮಾಧಾನ ಮಾಡಿದೆ. ಅಪ್ಪ ನೀನು ಹೊರಗೆ ಬಿದ್ದುಕೊ ಎಂದು ಮಗ ತಾಕಿತ ಮಾಡಿದ. ವಿಧಿ ಇಲ್ಲ ಎಂದು ಹೊರಗೆ ಮಲಗಿ ಕೊಂಡೆ. ಹತ್ತು ದಿನ ಹಾಗೆ ಲೇಪನ ಮಾಡಿದ್ದೆ ಮಾಡಿದ್ದು. ಮಡದಿ ಎಂದಳು ರೀ... ಮೇಹಂದಿ ಹಚ್ಚಿಕೊಳ್ಳಬಾರದೇ ಎಂದು ಹೇಳಿದರು ಕೇಳಲಿಲ್ಲ . ಒಂದು ತಿಂಗಳು ಆದರೂ ಒಂದು ಕೂದಲು ಕರಿ ಆಗಲಿಲ್ಲ.
ಕಡೆಗೆ ಒಂದು ದಿನ ನನ್ನ ಗೆಳೆಯ ಕೇಶವ್ ಕುಲ್ಕರ್ಣಿ ಕರೆ ಮಾಡಿದ್ದ. ನನ್ನ ಸಮಸ್ಯೆ ಹೇಳಿದೆ. ಅವನು ನೋಡು ಗೋಪಿ ದಿನಾಲೂ ರಾಗಿ ಹಿಟ್ಟು ಹಚ್ಚು ಎಂದು ಹೇಳಿದ. ಕಡೆಗೆ ದಿನವೂ ರಾಗಿ ಹಿಟ್ಟು. ಒಂದು ದಿನ ರಾಗಿ ಹಿಟ್ಟು ಹಚ್ಚಿ ಮಲಗಿ ಕೊಂಡಾಗ. ತಲೆಯಲ್ಲ ಕೆರೆತ ಮತ್ತು ಉರಿ ಎದ್ದು ನೋಡುತ್ತೇನೆ. ತಲೆ ತುಂಬಾ ಇರುವೆ. ನನ್ನ ಮಡದಿ ಸಿಹಿ ತಿಂಡಿಗೆ ಮಾಡಿದ ಸಿಹಿ ರಾಗಿ ಬಳೆದುಕೊಂಡಿದ್ದೆ.
ಮತ್ತೊಂದು ತಿಂಗಳು ಕಳೆಯಿತೇ ಹೊರತು. ಬಿಳಿ ಕೂದಲು ಕರಿ ಆಗಲಿಲ್ಲ. ಮತ್ತೆ ಅದೇ ನಾಟಿ ಡಾಕ್ಟರ್ ಹುಡುಕಿ ಹೋದೆ. ಮತ್ತೆ ಒಂದು ಸಾವಿರ ರೂಪಾಯಿ ಕೊಟ್ಟು ಮತ್ತೊಂದು ಔಷಧ ತಂದೆ. ಮತ್ತೆ ದಿನವೂ ಅದನ್ನು ಹಚ್ಚಿಕೊಂಡು ಮಲಗಿದೆ. ಒಂದೇ ತಿಂಗಳ ಪ್ರಯೋಗದ ನಂತರ ನನ್ನ ತಲೆಯಲ್ಲಿ ಎಲ್ಲ ಕೂದಲು ಕರಿ.... :-) ಆದರೆ ಇದ್ದ ಬಿಳಿ ಕೂದಲು ಎಲ್ಲವೂ ಬಿದ್ದು ಹೋಗಿದ್ದವು... :-(. ಈಗ ನನ್ನ ತಲೆ ನೋಡಿದರೆ ಬೆಂಗಳೂರಿನಿಂದ ಧಾರವಾಡದ ನಡುವೆ ಸಿಗುವ ಸ್ಟಾಪ್ ಗಳ ಹಾಗೆ ೨೦-೩೦ ಕಿಲೋ ಮೀಟರ್ ದೂರ..ದೂರ ಇವೆ.
ಈಗ ನಾನು ಯಾರಾದರೂ ಮತ್ತೆ ಕೂದಲು ಬರುವ ಹಾಗೇ ಮಾಡುವ ವೈದ್ಯರನ್ನು ಹುಡುಕುತ್ತಾ ಇದ್ದೇನೆ. ಬಿಳಿ ಕೂದಲು ಆದರೂ ಪರವಾಗಿಲ್ಲ. ಏಳು ಬಣ್ಣ ಸೇರಿ ತಾನೇ ಬಿಳಿ ಬಣ್ಣ ಆಗುವದು, ಎಂದು ಹೇಳಿ ಮುಗಿಸಿದ ಮೇಲೆ ಮನೆ ತುಂಬಾ ಹಾಸ್ಯದ ಹೊನಲು ಹರಿದಿತ್ತು.
ಕಡೆಗೆ ಊಟ ಮಾಡುತ್ತ ಇದ್ದಾಗ, ನಿನಗೆ ಯಾರಾದರು ವೈಧ್ಯರು ಗೊತ್ತ? ಎಂದು ಕೇಳಿದೆ. ಅದಕ್ಕೆ ಅವನು ನನಗೆ ಒಬ್ಬ ನಾಟಿ ವೈಧ್ಯರು ಗೊತ್ತು ಎಂದ. ಆ ನಾಟಿ ವೈಧ್ಯರು ನನ್ನ ಕೂದಲುಗಳನ್ನು ನಾಟಿ ಮಾಡುತ್ತಾರೋ? ಅಥವಾ ಇದ್ದಿರೋ ತಲೆಯನ್ನು ತೆಗೆದು ಬಿಡುತ್ತಾರೋ ಎಂದೆ. ಅವನು ನಗುತ್ತ, ಮಾಡುತ್ತಾರೆ ಕಣೋ? ಎಂದ. ಮತ್ತೆ ಇದು ನಿನ್ನ ತಪ್ಪಲ್ಲ, ನಿನ್ನ ಪೂರ್ವಿಕರು ಮಾಡಿದ ತಪ್ಪು. ನಿಮ್ಮ ಹೆಸರಿಗೂ ಮತ್ತು ನಿನ್ನ ಕೂದಲಿಗೂ ಅನ್ವರ್ಥಕವಾಗಿ ಇಟ್ಟಿದ್ದಾರೆ ಅಷ್ಟೇ ಎಂದ. ನಿನ್ನ ಹೆಸರು ಅದೇ ತಾನೇ ಎಂದೇ ಅದಕ್ಕೆ ನಾನು ಗೋಪಾಲ್ ಕೃಷ್ಣ....ಬರೀ ಗೋಪಾಲ್ ಅಲ್ಲ ಎಂದು ನಗುತ್ತ, ಕಡೆಗೆ ನಮ್ಮನ್ನು ಮನೆಗೆ ಆಹ್ವಾನಿಸಿ ತನ್ನ ಮನೆಗೆ ನಡೆದ.
Thursday, July 22, 2010
ತರ್ಲೆ ಮಂ(ಗ)ಜನ ಸಂಗೀತ ಸಾಂಗತ್ಯ....
ಮಂಜನಿಗೆ ಆಗ ಸುಮಾರು ೮ ವರ್ಷ ಇರಬೇಕು. ನಮ್ಮ ಮಂಜನ ಮನೆಗೆ ಬಾಡಿಗೆಗೆ ರಂಗಣ್ಣ ಶಾಸ್ತ್ರಿ ಬಂದಿದ್ದರು. ತುಂಬಾ ದಿನಗಳಿಂದಲೂ ಮನೆ ಖಾಲಿ ಇತ್ತು. ಮನೆಯ ಕೀಲಿ ಕೈ ಕೊಟ್ಟು ಬಾ ಎಂದು ಮಂಜನ ತಂದೆ ಮಂಜನಿಗೆ ಹೇಳಿದ್ದರು. ಮಂಜ ರಂಗಣ್ಣ ಶಾಸ್ತ್ರಿಯವರ ಮನೆಗೆ ಹೋದ. ಅಲ್ಲಿ ಅವರನ್ನು ನೋಡಿ ಘಾಬರಿಯಾಗಿ ಅವರ ಕೈಗೆ ಕೀಲಿ ಕೈ ಕೊಟ್ಟ. ಅದನ್ನು ಕೆಳಗೆ ಇಟ್ಟರು. ಮಂಜ ಘಾಬರಿಯಿಂದ ಮನೆಗೆ ಬಂದು ಒಂದು ಈರುಳ್ಳಿ ತೆಗೆಂದುಕೊಂಡು ಶಾಸ್ತ್ರಿಗಳ ಮನೆಗೆ ಓಡಿದ. ಮಂಜನ ಅಪ್ಪ ಏನು ಆಯಿತು ನೋಡು ಅವನು ಏಕೆ? ಹೀಗೆ ಓಡುತ್ತಿದ್ದಾನೆ ಎಂದು ಹೆಂಡತಿಗೆ ಕೇಳಿದರು. ಅಷ್ಟರಲ್ಲಿ ಮಂಜ ಈರುಳ್ಳಿ ತೆಗೆದು ಅವರ ಮೂಗಿಗೆ ಹಿಡಿದ. ರಂಗಣ್ಣ ಶಾಸ್ತ್ರಿಗಳು "ಅಕ್ಷಿ ಅಕ್ಷಿ .. ಎಂದು ಸೀನುತ್ತ, ಮಂಜನಿಗೆ ಎರಡು ಹೊಡೆಯುತ್ತಾ ಇದ್ದರು. ಅಷ್ಟರಲ್ಲಿ ಮಂಜನ ತಾಯಿ ಬಂದು ಏಕೆ? ಏನು ಆಯಿತು. ಎಂದು ಕೇಳಿದರು. ನಿಮ್ಮ ಮಂಜ ನಾನು ನಿದ್ರೆ ಮಾಡುತ್ತಿದ್ದಾಗ ಬಂದು ನನ್ನನ್ನು ತುಂಬಾ ಡಿಸ್ಟರ್ಬ್ ಮಾಡುತ್ತಿದ್ದಾನೆ ಎಂದರು. ಆಗ ಮಂಜನ ಅಮ್ಮ ಗದರಿಸಿ ಮಂಜನಿಗೆ ಏಕೆ? ಹೀಗೆ ಮಾಡಿದೆ ಎಂದು ಕೇಳಿದರು. ನನಗೆ ಏನು ಗೊತ್ತಮ್ಮ ಮೊನ್ನೆ ಶಾಲೆಯಿಂದ ಬರುವ ಸಮಯದಲ್ಲಿ ಒಬ್ಬ ಮನುಷ್ಯ ಇವರ ಹಾಗೆ ಮಾಡುತ್ತಿದ್ದ, ಇವರ ಹಾಗೆ ಬಾಯಿಂದ ಜೊಲ್ಲು ಬರುತಿತ್ತು ಎಂದ. ಆಗ ರಂಗಣ್ಣ ಶಾಸ್ತ್ರಿಗಳು ತಮ್ಮ ಎಲೆ ಅಡಿಕೆ ಬಾಯಿಂದ ಬರುತ್ತಿದ್ದ ಜೊಲ್ಲನ್ನು ಒರಿಸಿಕೊಂಡರು. ಅದಕ್ಕೆ ಅವನಿಗೆ ಕೀಲಿ ಕೈ ಕೈಯಲ್ಲಿ ಕೊಟ್ಟು ಮತ್ತೆ ಈರುಳ್ಳಿ ಮೂಸುತ್ತಿದ್ದರು. ಅವನಿಗೆ ಪಿಡ್ಸ್ ಅಂತೆ ಅಮ್ಮ. ಅದಕ್ಕೆ ಇವರಿಗೂ ಹಾಗೆ ಆಗಿರಬಹುದು ಎಂದು ನಾನು ಮಾಡಿದೆ ಎಂದ. ಆಗ ಅವರ ಅಮ್ಮ ಏನೋ? ತಪ್ಪು ನಡೆಯಿತು ಕ್ಷಮಿಸಿ ಎಂದು ಹೇಳಿ ಮನೆಗೆ ಕರೆದುಕೊಂಡು ಹೋದರು.
ಮಂಜನಿಗೆ ಅವರ ಅಪ್ಪ ಬೈದು ಅವರು ನಿನ್ನ ಸಂಗೀತದ ಮೇಸ್ಟ್ರು ಕಣೋ ಎಂದು ಉಗಿದು ಬುದ್ದಿ ಹೇಳಿದ್ದರು. ಮಂಜ ಆಶ್ಚರ್ಯ ಚಕಿತನಾಗಿದ್ದ. ಅವರ ಸಂಗೀತ ಕಛೇರಿಗೆ ಮಂಜನನ್ನು ಕರೆದು ಕೊಂಡು ಹೋಗುತ್ತಿದ್ದರು. ಒಂದು ದಿವಸ ಮಂಜ "ಅಪ್ಪ ಅವರು ಅಷ್ಟು ಕೆಟ್ಟು ಮುಖ ಮಾಡಿ ಏಕೆ ಹಾಡುತ್ತಾರೆ ಎಂದು ಕೇಳಿದ್ದ". ಎ ಸುಮ್ಮನಿರೋ ಹಾಗೆಲ್ಲಾ ಹೇಳ ಬಾರದು ಸಂಗೀತದಲ್ಲಿ ಅವರ ಮುಖ ಅಲ್ಲ ಅವರ ಧ್ವನಿ ಮಾತ್ರ ಆಲಿಸಬೇಕು ಎಂದು ಉಗಿದಿದ್ದರು. ನೀನು ಸಂಗೀತ ಕಲಿಬೇಕು ದೊಡ್ಡ ಸಂಗೀತ ವಿದ್ವಾಂಸ ಆಗಬೇಕು ಎಂದು ಹೇಳಿ ಅವನನ್ನು ಅವರ ಬಳಿ ಸೇರಿಸಿದ್ದರು. ಅವರಪ್ಪ ಮಂಜ ಸಂಗೀತ ಬೇಡ ಎಂದು ಎಷ್ಟು ಕೇಳಿಕೊಂಡರು ಬಿಡಲಿಲ್ಲ. ಕಡೆಗೆ ಮಂಜ ಸಂಗೀತ ಶಾಲೆಗೆ ಸೇರಬೇಕಾಯಿತು. ಅಪ್ಪ ರಂಗಣ್ಣ ಸರ್ ಬಳಿ ಬೇಡ ಎಂದ ಮಂಜ. ಬೇರೆ ಎಲ್ಲಿ ಆದರೂ ಹಾಕು ಎಂದ. ಆದರೂ ಅವನ ಮಾತು ಕೇಳದೇ ಅಲ್ಲೇ ಸಂಗೀತ ಶಾಲೆಗೆ ಸೇರಿಸಿದರು. ರಂಗಣ್ಣ ಶಾಸ್ತ್ರಿಗಳು ಚೆನ್ನಾಗಿ ಸಂಗೀತ ಹೇಳಿ ಕೊಡುತ್ತಿದ್ದರು. ಆದರೆ ಮಂಜ ಸರ್ ನನಗೆ ಯಾವುದಾದರೂ ಫಿಲ್ಮ್ ಸಾಂಗ್ ಹೇಳಿ ಕೊಡಿ ಎಂದು ದಿನವೂ ಪೀಡಿಸುತ್ತಿದ್ದ. ಹೀಗಾಗಿ ಕಡೆಗೆ ಇವನ ಕಾಟ ತಾಳಲಾರದೇ, ತುಂಬಾ ಹೊಡೆಯಲು ಪ್ರಾರಂಬಿಸಿದರು. ಮಂಜ ಹೇಗಾದರೂ ಮಾಡಿ ಅದನ್ನು ತಪ್ಪಿಸಿಕೊಳ್ಳಲು, ದಿನ ಮುಂಜಾನೆ ಬೇಗನೆ ಎದ್ದು ಸಂಗೀತ ಪ್ರಾಕ್ಟಿಸ್ ಎಂದು ಹೇಳಿ ಕತ್ತೆ ಹಾಗೆ ಕಿರುಚಿತ್ತ ಇದ್ದ. ಕಡೆಗೆ ಅಕ್ಕ- ಪಕ್ಕದ ಜನಗಳೆಲ್ಲ ಇವನ ಮೇಲೆ ಕಂಪ್ಲೇಂಟ್ ಮಾಡಿದರು. ಕಡೆಗೆ ಅವರ ತಂದೆ ಇದು ಇವನಗೆ ಸರಿ ಹೊಂದಲ್ಲಾ ಎಂದು ಸಂಗೀತ ಶಾಲೆ ಬಿಡಿಸಿ ಬಿಟ್ಟರು. ಮಂಜ ಖುಷಿಯಿಂದ ಕೇಕೆ ಹಾಕಿದ್ದ.
ಮಂಜನ ಅಪ್ಪನಿಗೆ ಮಾತ್ರ ಅವನನ್ನು ಸಂಗೀತ ಪ್ರವೀಣ ಮಾಡಬೇಕೆಂಬ ಅದಮ್ಯ ಆಸೆ ಮಾತ್ರ ಮನಸಿನಲ್ಲಿ ಹಾಗೆ ಉಳಿದಿತ್ತು. ಮತ್ತೆ ಅವನನ್ನು ಕೊಳಲು ಕ್ಲಾಸ್ ಗೆ ಹಚ್ಚಿದರು. ಮಂಜ ತುಂಬಾ ಶೃದ್ಧೆ ಇಂದ ಕ್ಲಾಸ್ ಹೋಗುತ್ತಿದ್ದ. ಇದೇನೋ ಪಿಳ್ಳನ್ಗೊವಿ ನಿನಗೆ ಸೂಟ್ ಆಗಲ್ಲಾ ಕಣೋ ಎಂದು ಸುಬ್ಬ ಹೇಳಿದ ಅಷ್ಟೇ, ಕೊಳಲು ಕ್ಲಾಸ್ ಕೂಡ ಬಿಟ್ಟು ಬಿಟ್ಟ. ಅಪ್ಪ ನನಗೆ ತಬಲಾ ಕ್ಲಾಸ್ ಹಚ್ಚು ಎಂದು ಕೇಳಿದ. ಕಡೆಗೆ ಅವನನ್ನು ತಬಲಾ ಕ್ಲಾಸ್ ಹಚ್ಚಿದರು. ತಬಲಾ ಹಲಿಗೆ ತರಹ ಬಾರಿಸುತ್ತಿದ್ದ. ಮತ್ತೆ ಅದರ ಟೆಕ ಹಿಡಿಯುವ ಸಲುವಾಗಿ ಸುತ್ತಿಗೆ ಬಳಸಿ ಅದನ್ನು ಸರಿ ಮಾಡುವ ವಿಧಾನ ನೋಡಿ ತಾನು ಸರಿ ಮಾಡಲು ಹೋಗಿ ಎರಡು ತಬಲಾಗಳನ್ನು ತಬ್ಬಲಿ ಮಾಡಿ ಬಿಟ್ಟಿದ್ದ.
ಅವರ ಅಪ್ಪ ಅವನಿಗೆ ಒಬ್ಬ ಸಂಗೀತ ಪ್ರವೀಣ ಮಾಡಬೇಕೆಂದು ಕೊಂಡಿದ್ದರು. ಒಂದು ದಿನ ಶಾಲೆ ಕಾರ್ಯಕ್ರಮದಲ್ಲಿ ರಾಜೀವ್ ಗಿಟಾರ್ ಬಾರಿಸಿದ್ದ. ಶಾಲೆಯ ಎಲ್ಲ ಹುಡುಗರು,ಹುಡುಗಿಯರು ಮತ್ತು ಉಪಾಧ್ಯಾಯರು ಅವನನ್ನು ಹೋಗಳಿದ್ದೆ.. ಹೋಗಳಿದ್ದು. ಅದರಿಂದ ಮಂಜ ಮನೆಗೆ ಹೋಗಿ ಅಪ್ಪ ನಾನು ಗಿಟಾರ್ ಕಲೆಯುತ್ತೆನೆ ಎಂದು ಹೇಳಿದ. ಅಪ್ಪ ನೀನು ಕಲೆತಿದ್ದೆ ಸಾಕು ಎಂದರು ಕೇಳಲಿಲ್ಲ. ಅಪ್ಪನನ್ನು ಪೀಡಿಸ ಹತ್ತಿದ. ಆಗ ಅವರ ಅಪ್ಪ ಅವನಿಗೆ ಚಟಾರ ಎಂದು ಎರಡು ಕೆನ್ನೆಗೆ ಬಿಟ್ಟರು ಅಷ್ಟೇ, ಅಲ್ಲೇ ಮಂಜ ತನ್ನ ಸಂಗೀತ ಶುರು ಹಚ್ಚಿ ಕೊಂಡಿದ್ದ. ಹೀಗೆ ನಮ್ಮ ಮಂಜ ತನ್ನ ತರ್ಲೆಗಳಿಂದ ಅದರ ಸಾಂಗತ್ಯ ಅಂತ್ಯ ಗೊಳಿಸಿದ್ದ.
ಈಗ ಎಲ್ಲಾದರೂ ಸಂಗೀತ ಕಾರ್ಯಕ್ರಮ ಇದ್ದರೆ ತಪ್ಪದೇ ಹಾಜರ ಆಗುತ್ತಾನೆ. ನಾನು ಅಪ್ಪನ ಮಾತು ಕೇಳಬೇಕಿತ್ತು ಎಂದು ಗೊಣಗುತ್ತಾನೆ.