Tuesday, July 12, 2011

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ!!!!

ಎಲ್ಲಾರೂ ಮಾಡುವುದು ಹೊಟ್ಟೆಗಾಗಿ ಮತ್ತು ಗೇಣು ಬಟ್ಟೆಗಾಗಿ ನಿಜ. ಅದೇ ಹೊಟ್ಟೆ ಸ್ವಲ್ಪ ನೋಯುತ್ತ ಇತ್ತು. ನಾನು ಎಷ್ಟೇ ಜೋಕ್ ಮಾಡಿದರು ನಗಲಾರದ ಮಡದಿ, ಮಗ ಇಬ್ಬರೂ, ನಾನೇನು ನೈಟ್ರಸ ಆಕ್ಸೈಡ್ (ಲಾಫಿಂಗ್ ಗ್ಯಾಸ್) ಬಿಟ್ಟ ಹಾಗೆ ಜೋರಾಗಿ ನಗುತ್ತಿದ್ದರು. ಯಾವತ್ತೂ ಗುಡ್.. ಗುಡ್ ..ಎನ್ನುವ ಹೊಟ್ಟೆ ಬ್ಯಾಡ್ ಆಗಿ ಸೌಂಡ್ ಮಾಡಿತ್ತು. ಈ ಗ್ಯಾಸ್ ಎನ್ನುವುದು ಸಾಮಾನ್ಯವಾಗಿ ತುಂಬಾ ಜನರಲ್ಲಿ ಇರುವ ಒಂದು ಕೆಟ್ಟ ರೋಗ. ಇದು ಏತಕ್ಕೆ ಬರುತ್ತೆ ಎಂಬುದು ಮಾತ್ರ ಯಕ್ಷ(ಲಕ್ಷ) ಪ್ರಶ್ನೆ. ಅದಕ್ಕೆ ಎಂದು ಅಂತರ್ಜಾಲ ತಡಕಾಡಿದ್ದು ಆಯಿತು. ಆನುವಂಶಿಕ ಎಂದು ಅನ್ನಿಸಿದ್ದೂ ಉಂಟು. ಅದಕ್ಕೆ ಉದಾಹರಣೆ ಎಂದರೆ, ನಾನು ಚಿಕ್ಕವನಿದ್ದಾಗ, ನಮ್ಮ ಚಿಕ್ಕಪ್ಪ ಬಜಾಜ್ ಸ್ಕೂಟರ್ ಹಾಗೆ ಸ್ವಲ್ಪ ಬಾಗಿದರು ಕೂಡ.. ನಾವು ಎದ್ದೋ, ಬಿದ್ದೋ ಎಂದು ಓಡಿ ಹೋಗಿ ನಗುತ್ತಿದ್ದೆವು. ಈಗ ಅದು ನನಗೆ ಬಳುವಳಿಯಾಗಿ ಬಂದಿದೆ. ಅದಕ್ಕೆ ನಮ್ಮ ಅಕ್ಕ ನನಗೆ ಗೋಪಾಲ್ ಗ್ಯಾಸ್ ದುರಂತ ಎಂದು.. ಭೋಪಾಲ್ ಗ್ಯಾಸ್ ದುರಂತಕ್ಕೆ ಹೋಲಿಸಿ ಆಡುವುದು ಉಂಟು.

ನಾವು ಚಿಕ್ಕವರಿದ್ದಾಗ ಕೂಡ ಕೆಲ ಹುಡುಗರು ಗ್ಯಾಸ್ ಬಿಡುತ್ತಿದ್ದರು. ಅದು ಶಬ್ಧ ಮಾಡಿ ಹೊರಬಂದರೆ ಎಲ್ಲರಿಗೂ ತಿಳಿಯುತ್ತಿತ್ತು, ಆದರೆ ಕೆಲವೊಮ್ಮೆ ನಿಶ್ಯಬ್ಧವಾಗಿ ಬಂದಾಗ, ಯಾರು ಜೋರಾಗಿ ನಗುತ್ತಾರೆ ಅವರೇ...ಅದರ ಕಾರಣ ಕರ್ತರೆಂದು ನಿರ್ಧಾರಕ್ಕೆ ಬಂದು ಬಿಡುತ್ತಿದ್ದೆವು. ಕೆಲವರಿಗೆ ಕೈಯಿಂದ ಸಿಳ್ಳೆ ಹೊಡೆಯಲು ಬಾರದಿದ್ದರೂ ಕೂಡ ಶಬ್ದ ಮಾಡಿ ಬರುತಿತ್ತು.

ಲೇ ಹೊಟ್ಟೆ ನೋವು ಕಣೇ ಎಂದು ಮಡದಿಗೆ ಹೇಳಿದೆ. ಲಗುಬಗೆಯಿಂದ ತನ್ನ ಕೈಯಲ್ಲಿ ಇದ್ದ ಮೊಬೈಲ್ ಟೇಬಲ್ ಮೇಲೆ ಇಟ್ಟು, ನನ್ನ ಮೊಬೈಲ್ ತೆಗೆದುಕೊಂಡು, ತನ್ನ ಡಾಕ್ಟರ ಗೆಳತಿಗೆ ಕರೆ ಮಾಡಿದಳು. ನನ್ನ ಎಲ್ಲ ಗೆಳೆಯರು ಇಂಜಿನಿಯರಿಂಗ್ ಓದಿದ್ದರಿಂದ ಮಿತ್ರ ದ್ರೋಹಿಗಳು ಎಂದು ಕೋಪ ಕೂಡ ಬಂತು. ಮಿತ್ರರು ಎಂದರೆ ಇವರು, ಒಬ್ಬರಿಗೆ.. ಒಬ್ಬರು.. ಸಹಾಯ ಮಾಡುವವರು ಎಂದು ಅನ್ನಿಸಿತು. ಅವರಿಬ್ಬರ ಸುಧೀರ್ಘ ಕ್ಷೇಮ ಸಮಾಚಾರವಾದ ಮೇಲೆ, ನನ್ನ ಬಡಪಾಯಿಯ ಹೊಟ್ಟೆಯ ಮುಖ್ಯಾ೦ಶಗಳು ಶುರು ಆದವು. ಹೊಟ್ಟೆ ನೋವು ನಮ್ಮ ಯಜಮಾನರಿಗೆ ಎಂದು ಹೇಳಿ, ಅವಳೇ ಎಲ್ಲವನ್ನು ಸವಿಸ್ತಾರವಾಗಿ ವಿವರಣೆ ಕೊಟ್ಟು, ಫೋನ್ ಕಟ್ ಮಾಡಿ, ಗಾಬರಿಯಿಂದ ನಡೆಯಿರಿ ಡಾಕ್ಟರ ಬಳಿ ಎಂದು, ಬೇಗನೆ ಡಾಕ್ಟರ ಬಳಿ ಕರೆದುಕೊಂಡು ಹೋದಳು.

ಡಾಕ್ಟರ ಬಳಿ ಹೋದ ಕೂಡಲೇ "ಡಾಕ್ಟರ ಬೇಗ ಪರೀಕ್ಷಿಸಿ" ಎಂದು ಹೇಳಿದಳು. ಅವಳ ಗಾಬರಿಯನ್ನು ನೋಡಿ, ಡಾಕ್ಟರ ಅವರ ಹೆಂಡತಿಗೆ ಪರೀಕ್ಷಿಸಲು ಹೇಳಿದರು. ನಾನು ಲೇಡಿ ಡಾಕ್ಟರ ಎಂದು ಖುಷಿಯಿಂದ ಮುಖ ಅರಳಿಸಿ ನಿಂತಿದ್ದೆ. ಬಂದವರೇ ನನ್ನ ಹೆಂಡತಿಯನ್ನು ಪರೀಕ್ಷಿಸಲು ಶುರು ಮಾಡಿದರು. ಹೆಂಡತಿ ನನಗೆ ಅಲ್ಲ, ನನ್ನ ಮನೆಯವರಿಗೆ ಎಂದಳು. ಓ ಅವರಾ ಪೇಶಂಟ್ ಎಂದು, ಲೇಡಿ ಡಾಕ್ಟರ ತಮ್ಮ ಗಂಡನಿಗೆ ಪರೀಕ್ಷೆ ಮಾಡಲು ಹೇಳಿ ಹೋಗಿ ಕುಳಿತರು. "ಮುಖ ನೋಡಿ ಮಣೆ ಹಾಕುವವರು" ಎಂದರೆ ಇದೆ ಎಂದು, ನನಗೆ ಆಗ ಅರ್ಥ ಆಗಿತ್ತು. ಡಾಕ್ಟರ ಪರೀಕ್ಷಿಸಲು ಶುರು ಮಾಡಿದರು. ಎಲ್ಲಿ ನೋವು ಎಂದರು, ನಾನು ಹೇಳುವ ಮೊದಲೇ, ನನ್ನ ಮಡದಿ ಬಲಗಡೆ ಎಂದಳು. ನಾನು ಇಲ್ಲಾ ಸರ್ ಎಡಗಡೆ ಎಂದೆ. ನಿಮಗೆ ಏನು ಆಗಿಲ್ಲ ಗ್ಯಾಸ್ ಆಗಿದೆ ಅಷ್ಟೇ ಎಂದು ಹೇಳಿ ಎರಡು-ಮೂರೂ ಮಾತ್ರೆ ಬರೆದುಕೊಟ್ಟು ಕಳುಹಿಸಿದರು.

ಹೊರ ಬಂದ ಮೇಲೆ, ಹೆಂಡತಿ ಜೋರಾಗಿ ನಗಲು ಶುರು ಮಾಡಿದಳು. ಏಕೆಂದು ಕೇಳಿದೆ. ಆಗ ನಿಮಗೆ ಎಡಗಡೆ ನೋಯುತ್ತಿದ್ದರು, ನನ್ನ ಬಲಗಡೆ ಎಂದು ತಿಳಿದು ನನ್ನ ಗೆಳತಿಗೆ ಹೇಳಿದ್ದೆ ಎಂದಳು. ಅದಕ್ಕೇನೀಗ ಎಂದೆ. ಅದಕ್ಕೆ ಅವಳ ಗೆಳತಿ ಎಡಗಡೆ ನೋಯುತ್ತಿದ್ದರೆ ಗ್ಯಾಸ್, ಬಲಗಡೆ ನೋಯುತ್ತಿದ್ದರೆ ಅಪೇ೦ಡಿಸ್ ತುಂಬಾ ಸಿರಿಯಸ್ ಎಂದು ಹೆದರಿಸಿ ತನ್ನ ಬುದ್ಧಿ ಮತ್ತೆ ಪ್ರದರ್ಶಿಸಿದ್ದಳು. ಅದಕ್ಕೆ ನಾನು ಗಾಬರಿಯಿಂದ ನಿಮ್ಮನ್ನು ಡಾಕ್ಟರ ಬಳಿ ಕರೆದುಕೊಂಡು ಬಂದೆ ಎಂದಳು. ಹೊಟ್ಟೆ ನೋವು ಎಂದು ಹೆರೆಗೆ ಆಸ್ಪತ್ರೆಗೆ ಹಾಕಲಿಲ್ಲವಲ್ಲ ಅದು ನನ್ನ ಪುಣ್ಯ ಎಂದು ನಗುತ್ತ ಮನೆಗೆ ಬಂದೆವು.

ಮರುದಿನ ಆಫೀಸ್ ಹೋಗುವ ಸಮಯದಲ್ಲಿ ಶೂ ಲೇಸ್ ನ್ನು ಲೇಸ್.. ಲೇಸ್.. ಎನ್ನುತ್ತಾ ಮನೆ ತುಂಬಾ ಹುಡುಕುತ್ತಿದ್ದೆ, ಅಷ್ಟರಲ್ಲಿ ಮಡದಿ ಅಡುಗೆಮನೆಯಿಂದ ಬಂದು ರೀ ನಿನ್ನೇನೆ ಗ್ಯಾಸ್ ಎಂದು ಒದ್ದಾಡುತ್ತಾ ಇದ್ದೀರಿ, ಆಗಲೇ ಲೆಯ್ಸ್ ಚಿಪ್ಸ್ ಬೇಕಾ? ಎಂದಳು. ನಾನು ಲೆಯ್ಸ್ ಚಿಪ್ಸ್ ಅಲ್ಲ ಲೇಸ್ ಎಂದು ಹೇಳಿದೆ. ಅವಳೇ ಹುಡುಕಿ ಕೊಟ್ಟಳು.

Sunday, June 12, 2011

ಚಹಾ ಗರಮ್ !!!!

ಹೆ೦ಡತಿಯ ಉಪದ್ರವ ತಾಳಲಾರದೆ ಹೊರಗೆ ಹೋಗಿದ್ದೆ. ಉಪದ್ರವ ಶುರು ಆಗಿದ್ದು ಚಹಾ ಎ೦ಬ ದ್ರವವನ್ನು ಕೇಳಿ, ಅದೇ ಧಾಟಿಯಲ್ಲಿ, ಹಚಾ ಎ೦ದು, ಸ೦ಜೆ ಸಮಯದಲ್ಲಿ ಚಹಾ ಕುಡಿದರೆ ನಿದ್ದೆ ಬರಲ್ಲ ಎ೦ದು ಬೈಯಿಸಿಕೊ೦ಡು ಹೊರಟಿದ್ದೆ. ದಿನವು ಯಾವುದೆ ತಗಾದೆ ಇಲ್ಲದೆ ಬಿಸಿ ಚಹಾ ಕೋಡುತ್ತಿದ್ದ ಮಡದಿ, ಈವತ್ತು ಸ್ವಲ್ಪ ಗರಮ್ ಅಗಿದ್ದಳು. ಕೆಲವರು ಹೆ೦ಡತಿಯ ಉಪದ್ರವ ತಾಳಲಾರದೆ ಕೆಲ ಗ೦ಡಸರು ಹೆ೦ಡ ಎ೦ಬ ದ್ರವದ ಉಪಾಸಕರಾಗಿರುತ್ತಾರೆ. ಸ೦ಜೆ ಸಮಯದಲ್ಲಿ ಚಹಾ ಸಿಗುವುದು ಸ್ವಲ್ಪ ಕಷ್ಟನೇ. ಆದರೂ ಹುಡುಕಿಕೊ೦ಡು ಹೊರಟೆ, ಅದೆ ಧಾರವಾಡದಲ್ಲಿ ಇದ್ದಿದ್ದರೆ ಯಾವುದಾದರು ಗೆಳೆಯರ ಮನೆಗೆ ಹೊಕ್ಕರೆ ಸಾಕು ಚಹಾ ಅನಾಯಾಸವಾಗಿ ಸಿಗುತ್ತಿತ್ತು. ಧಾರವಾಡದಲ್ಲಿ ಊರಿ ಬಿಸಿಲಲ್ಲೂ ಕೂಡ ಚಹಾ ಸರಾಗವಾಗಿ ಎಲ್ಲರೂ ಹೀರುತ್ತಾರೆ. ಟೂಥಪೆಸ್ಟ್ ತೆಗೆದುಕೊ೦ಡು ಬರುತ್ತೇನೆ ಎ೦ದು ನೆಪ ಹೇಳಿದೆ. ಮು೦ಜಾನೆ ಕೇಳಿದರೆ ಟೂಥಪೆಸ್ಟ್ ಕಲಿಯುಗದ ಅಕ್ಷಯ ಪಾತ್ರೆ ಅಲ್ಲಿ-ಇಲ್ಲಿ ಸ೦ದಿ ಗೊ೦ದಿಯಲ್ಲಿ ಸ್ವಲ್ಪ ಇದ್ದೆ ಇರುತ್ತೆ, ಇಷ್ಟರಲ್ಲೆ ಮುಗಿಸು ತಿ೦ಗಳ ಕೊನೆ ಎ೦ದಿರಿ ಅ೦ದಳು. ಮ೦ಜನ ಹತ್ತಿರ ದುಡ್ಡು ಕೇಳಿ ಇಸಿದುಕೊ೦ಡಿದ್ದೇನೆ ಎ೦ದು ಹೇಳಿ ಹೊರಬಿದ್ದೆ. ಅಷ್ಟರಲ್ಲಿ ಮ೦ಜ ಸಿಕ್ಕ. ಮ೦ಜನಿಗೆ ನಾನು ಏನು ಹೇಳದಿದ್ದರು, ಏನಪ್ಪ, ಚಹಾ ಅ೦ಗಡಿ ಹುಡುಕುತ್ತಾ ಇದ್ದೀಯಾ? ಎ೦ದ. ನನಗೆ ಆಶ್ಚರ್ಯ ಇವನಿಗೆ ಹೇಗೆ ತಿಳಿಯಿತು ಎ೦ದು.

ಅವನೇ ಒ೦ದು ಚಹಾ ಅ೦ಗಡಿಗೆ ಕರೆದುಕೊ೦ಡು ಹೋದ, ಚಹಾ ಹೀರುತ್ತಾ ಇದು ಮಹಿಳಾ ಮಣಿಗಳ ಸ೦ಘಟನೆ ಎ೦ದಾಗ ತಿಳಿಯಿತು. ಅದಕ್ಕೆ ನಾನು ನೀನು ಚಹಾ ಕೇಳಿ ಬೈಯಿಸಿಕೊ೦ಡೆ ಎ೦ದು ನಗ ಹತ್ತಿದೆ. ಅದಕ್ಕೆ ಮ೦ಜ ನಾನು ಚಹಾ ಮತ್ತು ಕಾಫಿ ಎರಡು ಕೇಳಿದ್ದೆ ಕಣೊ, ಆದರೆ ನಿಮ್ಮ ಅತ್ತಿಗೆ ಗೊತ್ತು ತಾನೆ, ಮತ್ತಷ್ಟು ಬೈದಳು ಎ೦ದ. ಎರಡು ಏನಕ್ಕೆ ಕೇಳಿದೆ ಎ೦ದೆ. ಅವಳು ಚಹಾ ಕೇಳಿದರೆ ನಿದ್ರೆ ಬರಲ್ಲ ಎ೦ದಳು. ಅದಕ್ಕೆ ಚಹಾ ಮತ್ತು ಕಾಫಿ ಎರಡೂ ಮಾಡು, ಎರಡು ಸೇರಿದರೆ ಚಾಪಿ ಅಗುತ್ತೆ, ಅಮೆಲೆ ತಾನೇ ನಿದ್ರೆ ಬರುತ್ತೆ ಎ೦ದೆ ಅ೦ದ. ಮತ್ತಷ್ಟೂ ನಗು ಬ೦ತು. ಆದರೆ ಈವನ ಬುದ್ಧಿಮತ್ತೆಗೆ ಭೇಷ್ ಎ೦ದೆ. ಮದುವೆ ಆದರೂ ನಮಗೆ ಈ ಹೋಟೆಲ್ ಚಹಾ ತಪ್ಪಲಿಲ್ಲ ಎ೦ದ ಮ೦ಜ. ಹೆ೦ಡತಿಗೆ ಅರ್ಧಾ೦ಗಿ ತು೦ಬಾ ಅನ್ವರ್ಥಕ ಅಗುತ್ತೆ ನೋಡು ಎ೦ದ. ಅ೦ದರೆ... ಎ೦ದೆ. ಅರ್ಧಾ೦ಗಿ ಎ೦ದರೆ ಅರ್ಧ ಅ೦ಗಿನೇ. ಯಾರಾದರು ಅರ್ಧ ಅ೦ಗಿ ಹಾಕಿ ಹೊರಗಡೆ ಬರುತ್ತಾರಾ ಎ೦ದ. ಅದಕ್ಕೆ ನೋಡು ಸೆಲೆಬ್ರಿಟೀಗಳು ಎರಡೆರಡು ಮದುವೆ ಅಗುತ್ತಾರೆ, ಆಗ ಅರ್ಧ ಮತ್ತೊ೦ದು ಅರ್ಧ ಸೇರಿ ಪೂರ್ತಿ ಅ೦ಗಿ ಅಗುತ್ತೆ ಅಲ್ಲವಾ ಎ೦ದು ಹೇಳಿದ. ನಮ್ಮ ನಗುವಿನ ಜೊತೆಗೆ ಒ೦ದು ಮತ್ತು ಇನ್ನು ಅರ್ಧ ಹೆಚ್ಚಿಗೆ ಅ೦ಗಿ ತೊಟ್ಟ ಹೊಟೇಲ್ ಮಾಲೀಕ ಕೂಡ ನಕ್ಕ.

ಕಡೆಗೆ ಚಹಾ ಕುಡಿದು, ಟೂಥಪೆಸ್ಟ್ ತೆಗೆದುಕೊ೦ಡು ಮನೆಗೆ ಬ೦ದೆ. ಮರುದಿನ ಬೇಗನೆ ಎಬ್ಬಿಸಿದ ಮಡದಿ ಚಹಾ ತೆಗೆದುಕೊಳ್ಳಿ ಎ೦ದು ಕೂಗುತ್ತ ಇದ್ದಾಗ, ಕನಸಿನಲ್ಲಿ ನಾನು ಫಾರಿನ್ಹನಲ್ಲಿ ಮಸಾಲೆ ದೋಸೆ ತಿನ್ನುತ್ತ ಇದ್ದೆ. ಇನ್ನು ಅರ್ಧ ತುತ್ತು ಬಾಯಿಗೆ ಬ೦ದಿರಲಿಲ್ಲ. ಎದ್ದು ಹಲ್ಲು ಉಜ್ಜಿ ಚಹಾ ಹೀರಿದೆ. ಎಕೋ ಸ್ವಲ್ಪ ಬೆನ್ನು ನೋವು ಶುರು ಆಯಿತು. ಬೆನ್ನು ನೋವು ಕಣೇ ಎ೦ದೆ. ನಿಮ್ಮ ಮಗನ ಕಡೆ ಮುರು ಬಾರಿ ಸ್ವಲ್ಪ ಒದಯಿಸಿಕೊಳ್ಳಿ ಹೊಗುತ್ತೆ ಎ೦ದಳು. ಹಾ.. ಏನ೦ದೆ ಎ೦ದು ಬಾಯಿ ಬಿಟ್ಟು ಕೇಳಿದೆ. ಕಾಲು ಮು೦ದು ಮಾಡಿ ಹುಟ್ಟಿದ ಮಕ್ಕಳಿ೦ದ ಒದಯಿಸಿಕೊ೦ಡರೆ ಹೊಗುತ್ತೆ. ಬೇಕಾದರೆ ನಾನು ಕೂಡ ಕಾಲು ಮು೦ದೆ ಮಾಡಿ ಹುಟ್ಟಿದ್ದು ಎ೦ದಳು. ಅರ್ಥ ಆಯಿತು ಬಿಡು ನೀವಿಬ್ಬರೂ ಹುಟ್ಟಿದ್ದೆ ನನ್ನ ಒದೆಯೊದಕ್ಕೆ ತಾನೇ ಎ೦ದೆ. ನೋಡಿ ಬೇಕಾದರೆ ಮಾಡಿಸಿಕೋಳ್ಳಿ ಇಲ್ಲಾ ಬಿಡಿ ಎ೦ದಳು.

ಆಫೀಸ್ ಲೇಟ್ ಆಗುತ್ತೆ ಎಂದು ಕಡೆಗೆ ಒದಯಿಸಿಕೊಂಡು ಹೊರಟೆ. ಸ್ವಲ್ಪ ಆರಾಮ ಅನ್ನಿಸಿದರೂ ಆಫೀಸ್ ಹೋದ ಮೇಲೆ ಮತ್ತಷ್ಟು ನೋವು ಶುರು ಆಯಿತು. ಕಡೆಗೆ ಆಫೀಸ್ ರಜೆ ಹಾಕಿ ಮನೆಗೆ ಬಂದೆ. ಕಡೆ ಪ್ರಯೋಗವಾಗಿ ಮಡದಿಯಿಂದ ಕೂಡ ಒದೆ ಪ್ರಯೋಗ ಆಯಿತು ಆದರೂ ಕಡಿಮೆ ಆಗಲಿಲ್ಲ. ಸಂಜೆ ಸ್ವಲ್ಪ ನೋವು ಜ್ಯಾಸ್ತಿ ಅನ್ನಿಸಿ ಮಡದಿ ಜೊತೆ ಆಸ್ಪತ್ರೆಗೆ ಹೋದೆ. ಡಾಕ್ಟರ್ ಎಲ್ಲ ಪರೀಕ್ಷಿಸಿ ನಿಮಗೆ ಏನೋ ಆಗಿಲ್ಲ ಅಸಿಡಿಟೀ ಅಷ್ಟೇ ಎಂದರು. ತುಂಬಾ ಚಹಾ-ಕಾಫೀ ಕೂಡಿ ಬೇಡಿ ಎಂದು ಹೇಳಿದರು.

ಕಡೆಗೆ ಮನೆಗೆ ಬಂದ ಮೇಲೆ ಪಕ್ಕದ ಮನೆಯಲ್ಲಿ ಆಡುತ್ತಾ ಇದ್ದ ಮಗ, ಅಪ್ಪನಿಗೆ ಡಾಕ್ಟರ್ ಏನು? ಮಾಡಿದರು ಎಂದು ಕೇಳಿದ. ಅದಕ್ಕೆ ಮಡದಿ ಸ್ವಲ್ಪ ಒದ್ದರು ಎಂದು ಅಪಹಾಸ್ಯ ಮಾಡಿದಳು. ಅದಕ್ಕೆ ಮಗ ನಾನು ಒದೆಯುತ್ತೇನೆ ಎಂದು ಬಂದ. ನಾಳೆಯಿಂದ ನನ್ನ ಪ್ರಿಯವಾದ ಚಹಾಕ್ಕೆ ಬೈ ಬೈ....

Friday, May 20, 2011

ಸಮರ ಆರ೦ಭ ....

ಮನೆಯಲ್ಲಿ ಸಮರ ಮುಗಿಸಿ, ಒಂದು ಸಮಾರ೦ಭಕ್ಕೆ ಹೋಗಿದ್ದೆ. ಸಮರದ ಆರಂಭ ಆಗಿದ್ದು ಭಾನುವಾರದ ದಿನ. ಬೇಗ ಎದ್ದು ಏನಾದರೂ ತಿಂಡಿ ಮಾಡು ಎಂದು ಅವಳಿಗೆ ಪೀಡಿಸಿದ್ದಕ್ಕೆ. ಭಾನುವಾರ ಕೂಡ ನಮಗೆ ಕೆಲಸ..ಛೇ ಎಂದು ಗೊಣಗಿ, ನಿನ್ನೆಯ ಇಡ್ಲಿ ಇದೆ ತಿಂದು ಹೋಗಿ. ನನಗೆ ಬೇಗ ಏಳೋಕೆ ಆಗಲ್ಲ ಎಂದು ಬೈದಿದ್ದಳು . ಸಮಾರಂಭದಲ್ಲಿ ಏನಾದರೂ ಸಿಗುತ್ತೆ, ನಾನು ಅಲ್ಲೇ ತಿನ್ನುತ್ತೇನೆ ಎಂದು ಹೇಳಿ ಸಮರದ ಅಂತ್ಯ ಹಾಡಿ ಬಂದಿದ್ದೆ.

ಸಮಾರಂಭದಲ್ಲಿ ಇದ್ದ ಉಪಿಟ್ಟು ನೋಡಿ, ಬೇಡ ಎಂದು ಕಾಫೀ ಕುಡಿದು ಬಂದು ಕುಳಿತೆ. ಆರಂಭಿಕ ಭಾಷಣ ಮಾಡುವವರು, ನನ್ನ ನೋಡಿ ಭಾಷಣ ಮಾತನಾಡುತ್ತಾ ಇದ್ದಾರೆ ಎಂದು ಅನ್ನಿಸಿತು. ಮೊದಲು ನಾನೊಬ್ಬನೇ ಇದ್ದೇನೆ ಎಂದು ಅಕ್ಕ ಪಕ್ಕ ನೋಡಿದೆ ತುಂಬಾ ಜನರಿದ್ದರು. ಪಕ್ಕದಲ್ಲಿ ಒಬ್ಬ ನಿದ್ದೆ ಹೊಡೆಯುತ್ತಿದ್ದ. ನಾನು ಅವನನ್ನೇ ನೋಡಿ ಭಾಷಣ ಮಾಡುತ್ತಿರಬೇಕು ಎಂದು ಎಬ್ಬಿಸಿದೆ. ಆಸಾಮಿ ನನ್ನನ್ನು ವಿಚಿತ್ರ ಪ್ರಾಣಿಯಂತೆ ನೋಡಿ ಎದ್ದು ಹೋದ. ಮತ್ತೆ.. ಮತ್ತೆ ನನ್ನ ನೋಡಿ ಭಾಷಣ ಮಾಡುತ್ತ ಇದ್ದಿದ್ದರಿಂದ, ನನಗೆ ಇನ್ನಷ್ಟು ಸಂಶಯ ಬಂದು ಮೊದಲು ನನ್ನನ್ನು ನಾನು ಪೂರ್ತಿ ನೋಡಿಕೊಂಡೆ. ಕಡೆಗೆ ನಾನು ಹಾಕಿರುವ ಡ್ರೆಸ್ ಎಲ್ಲವು ಸರಿಯಾಗಿದೆ ಎಂದು ಖಾತರಿ ಮಾಡಿಕೊಂಡೆ. ಆದರು ಭಾಷಣಕಾರ ನನ್ನ ಕಡೆನೇ ನೋಡಿ ಮಾತನಾಡುತ್ತಿದ್ದರು. ಹುರುಪಿನಿಂದ ಭಾಷಣ ಮುಗಿದ ಮೇಲೆ ಜೋರಾಗಿ ಚಪ್ಪಾಳೆ ತಟ್ಟಿದೆ. ಈಗ ಭಾಷಣಕಾರನಲ್ಲದೆ ಎಲ್ಲರು ನನ್ನನ್ನೇ ನೋಡಿದರು. ಸಧ್ಯ ಶಿಳ್ಳೆ ಹೋಡಿಲಿಲ್ಲ ಬಚಾವ ಅನ್ನಿಸಿತು.

ಆಮೇಲೆ ಸುಗಮ ಸಂಗೀತ ಶುರು ಆಯಿತು. ಆಗ ಕೂಡ ಸುಗಮ ಸಂಗೀತ ಹಾಡುವ ಮನುಷ್ಯ ಕೂಡ ನನ್ನ ಕಡೆನೆ ದೃಷ್ಟಿ ಹರಿಸಿ ತನ್ನ ಗಾನ ಸುಧೆಯನ್ನು ಹರಿಸಿದ. ಮತ್ತೆ ಕೆಲ ಸಮಯದ ನಂತರ "ಜಾಲಿ ಬಾರಿನಲ್ಲಿ ಕೂತು ಪೋಲಿ ಗೆಳೆಯರು ಗೋಪಿಯನ್ನು ಪಾಪ ಗೇಲಿ ಮಾಡುತಿದ್ದರು.." ಎಂದು ಹಾಡಬೇಕೆ?. ಅವನಿಗೆ ನನ್ನ ಹೆಸರು ಹೇಗೆ ತಿಳಿಯಿತು ಎಂದು ಆಶ್ಚರ್ಯವಾಯಿತು. ಮತ್ತೆ ಹೀಗೆಲ್ಲ ಆಗುವುದನ್ನು ನೋಡಿ ನನಗೆ ಮಂಜ ನೆನಪಿಗೆ ಬಂದ. ಅವನೇನಾದರೂ ಕಿತಾಪತಿ ಎಂದು ಛೆ... ಛೆ... ಅವನಿಗೆ ಹೇಗೆ ಗೊತ್ತು ನಾನು ಇಲ್ಲಿ ಬಂದಿರೋದು. ಅವನು ಇಲ್ಲಿ ಇಲ್ಲ ಬೇರೆ ಎಂದು ಯೋಚಿಸಿದೆ.

ಸಭಾಂಗಣಕ್ಕೆ ಹೋಗಿ ಕೇಳಿಯೇ ಬಿಡೋಣ ಎಂದು ಹೊರಟು ನಿಂತ ಸಮಯದಲ್ಲಿ, ಒಬ್ಬ ಈ ಸಮರ ಆರ೦ಭ ಆಯಿತು ಅಂದರೆ ಮುಗಿತು ನೋಡಿ ಎಂದರು. ನನಗೆ ಆಶ್ಚರ್ಯ ನಾನು ಸಮರ ಆರಂಭ ಮಾಡುವುದು ಸಹ ಇವರಿಗೆ ಹೇಗೆ ತಿಳಿಯಿತು ಎಂದು. ಬನ್ನಿ ಫ್ಯಾನ್ ಕೆಳಗಡೆ ಕುಳಿತುಕೊಳ್ಳೋಣ ಎಂದು ಮುಂದೆ ಹೊರಟಾಗ ತಿಳಿಯಿತು, ಅವರು ಅಂದಿದ್ದು ಇಂಗ್ಲಿಷ್ Summer ಎಂದು.

ಮುಂದೆ ಹೋಗುವ ಸಮಯದಲ್ಲಿ ಹಿಂದೆ ಒಮ್ಮೆ ಕಣ್ಣಾಡಿಸಿದೆ. ಹಿಂದೆ ಯಾರು ಇದ್ದಾರೆ ಎಂದು ನೋಡಿದ ಮೇಲೆ ನನಗೆ ಅರಿವಿಗೆ ಬಂದಿದ್ದು. ಒಬ್ಬ ಸುಂದರ ಚಿತ್ರ ನಟಿ, ಅವರು ಅವಳನ್ನು ನೋಡಿ ತಮ್ಮ ಭಾಷಣ ಮಾಡುತ್ತ ಇದ್ದರು ಎ೦ದು. ಅದು ನನ್ನ ಕುರ್ಚಿ ಹಿಂದೆ. ಹಿಂದೆ ನೋಡುತ್ತೇನೆ ಮಂಜ ಬೇರೆ ಬಂದುಬಿಟ್ಟಿದ್ದಾನೆ. ಅವನಿಗೆ ಇಂತಹ ಸಮಾರಂಭದಲ್ಲಿ ಎಂದಿಗೂ ನೋಡಿರಲೇ ಇಲ್ಲ. ಎದ್ದು ಅವನ ಬಳಿ ಹೋದೆ. ಮಂಜಣ್ಣ ನೀನು ಇಲ್ಲಿ ಎಂದೆ. ಏನು ಇಲ್ಲ ಮಹರಾಯ ಈ ನಟಿ ಬರುತ್ತಾಳೆ ಅಂತ ಪೇಪರ್ ನಲ್ಲಿ ಬಂದಿತ್ತು ಅದಕ್ಕೆ ಬಂದೆ ಅಂದ. ಕಾರ್ಯಕ್ರಮ ಮುಗಿದ ಮೇಲೆ ಗೊತ್ತಾಯಿತು ತುಂಬಾ ಜನ ಪರಿಚಯದವರು ಬಂದಿದ್ದಾರೆ ಎಂದು. ಮಂಜ ನಮ್ಮಿಬ್ಬರ ಹಳೆಯ ಗೆಳೆಯ ಶ್ರೀಕಾಂತ ಬಂದಿದ್ದನ್ನು ನೋಡಿ, ಅಲ್ಲಿ ನೋಡು ಗೋಪಿ.. ಡಾಕ್ಟರ ಶ್ರೀಕಾಂತ ಬಂದಿದ್ದಾನೆ ಎಂದ. ಹೋಗಿ ಮಾತನಾಡಿಸಿ ಬಂದೆವು. ಶ್ರೀಕಾಂತನ ಕಾರ್ ತುಂಬಾ ಚೆನ್ನಾಗಿತ್ತು. ಮನೆಗೆ ಬನ್ನಿ ಎಂದು ಕೈ ಮಾಡುತ್ತ ಹೋಗುತ್ತಿದ್ದಾಗ, ನಾನು ಮಂಜಣ್ಣ ಛೆ... ನೆನಪೇ ಹಾರಿ ಹೋಯಿತು ನೋಡು. ಅವನಿಗೆ ಸ್ವಲ್ಪ ಔಷಧಿ ಕೇಳಬೇಕು ಎಂದು ಹೊರಟೆ. ಮಂಜ ತಡೆದು, ಲೇ ಅವನು ಹೋಮಿಯೋಪತಿ ಅಂದ. ನನಗೆ ಹೋಮಿಯೋಪತಿ ಔಷಧಿ ನಡೆಯುತ್ತೆ ಎಂದು ಹೊರಟೆ. ತಡೆದು ನಗುತ್ತ ಲೇ ಹಂಗೆ ಅಂದರೆ "ಮನೆ ಅಳಿಯ" ಅಂತ ಅರ್ಥ ಎಂದ. ಅವನ ಮಾವ ಕೋಟ್ಯಾಧಿ ಪತಿ. ಇವನು ಅವನ ಮಗಳ ಕೋತಿಯಂತಹ ಹೋಮಿಯೋ ಪತಿ. ಕೆಲಸ ಏನು ಇಲ್ಲ ಎಂದ. ಸಕ್ಕತ್ ನಗು ಬ೦ತು. ಸಧ್ಯ ಅವನಿಗೆ ಔಷಧಿ ಕೇಳಿ ಸಮರಕ್ಕೆ ನಾಂದಿ ಹಾಡಲಿಲ್ಲ ಎಂಬುದೊಂದೇ ಖುಷಿ.

ಮನೆಗೆ ಹೋದೊಡನೆ ತುಂಬಾ ಹಸಿವು ಆಗಿತ್ತು. ಮತ್ತೆ ಅವಳಿಗೆ ಏನಾದರು ಕೇಳಿ ಬೈಯಿಸಿ ಕೊಂಡು ಸಮರಕ್ಕೆ ನಾಂದಿ ಹಾಡುವುದಕ್ಕಿಂತ ನಿನ್ನೆಯ ಇಡ್ಲಿ ವಾಸಿ ಎಂದು ಹಸಿವನ್ನು ನೀಗಿಸಿದೆ.

Saturday, April 30, 2011

ಹೆಸರಿನ ಹುಚ್ಚು ....

ನಾನು ಮತ್ತು ಮಂಜ ಸೇರಿ ಹೋಟೆಲ್ ಹೋಗಿದ್ದೆವು. ಇನ್ನೂ ಕುಳಿತು ಕೊಂಡಿರಲಿಲ್ಲ ಅಷ್ಟರಲ್ಲೇ "ಏ ಗೋಪಾಲ್ ಆಯಿತ" ಎಂಬ ಕೂಗು. ನಂಗೆ ಆಶ್ಚರ್ಯ ಏನು ಎಂದು. ತಿರುಗಿ ನೋಡಿದೆ ಒಬ್ಬ ಹುಡುಗ ಕಾಫೀ ತೆಗೆದುಕೊಂಡು ಬಂದು ಹೋಟೆಲ್ ಓನರ್ ಗೆ ಕೊಡುತ್ತಿದ್ದ. ಮತ್ತೆ ಕೆಲ ಸಮಯದ ನಂತರ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂಬ ಕೂಗು. ಆ ಹುಡುಗ ಬಂದು ಕ್ಲೀನ್ ಮಾಡಿ ಹೋದ. ಮಂಜ ನನ್ನ ಮುಖ ನೋಡಿ ಮುಸಿ ಮುಸಿ ನಗುತ್ತಿದ್ದ. ಅದೇಕೋ ಗೊತ್ತಿಲ್ಲ ನನ್ನ ಹೆಸರಿನಲ್ಲಿರುವ ಜನರು ಬರೀ ಇಂತಹ ಕೆಲಸದಲ್ಲೇ ಇರುವುದೇಕೆ ಎಂದು ಯೋಚಿಸತೊಡಗಿದೆ. ಇನ್ನೂ ತುಂಬಾ ಸಿನೆಮಾಗಳಲ್ಲಿ ನನ್ನ ಹೆಸರಿನ ವಿಲನ್ ಇರುವುದನ್ನು. ಕಡೆಗೆ ನಾನೇ ತಪ್ಪಾಗಿ ಸಾಫ್ಟ್‌ವೇರ್ ಫೀಲ್ಡ್ ಗೆ ಬಂದೆನೇನೋ ಎಂದು ಕೂಡ ಅನ್ನಿಸಿದ್ದು ಉಂಟು. ಹೀಗೆ ಘಾಡವಾಗಿ ಯೋಚನೆಗೆ ಮುಣುಗಿದ ನನ್ನನ್ನು ಮಂಜ ಏನು ಯೋಚನೆ ಮಾಡುತ್ತಾ ಇದ್ದೀಯಾ? ಎಂದು ಕೇಳಿದ. ಅವನಿಗೆ ನನ್ನ ಹೆಸರಿಗೆ ಆಗುತ್ತಿರುವ ಶೋಷಣೆಯ ಬಗ್ಗೆ ಹೇಳಿದೆ.

ಲೇ ಹೆಸರಿಗೆ ಅನ್ವರ್ಥಕವಾಗಿ ನಿನಗೆ ಕೆಲಸ ಅಂತ ಬೇಕಾಗಿದ್ದರೆ ನೀನು ದನ ಕಾಯಲು ಹೋಗಬೇಕಿತ್ತು ಅಥವಾ ದನದ ಡಾಕ್ಟರ್ ಆಗಬೇಕಿತ್ತು ಎಂದು ಗಹ ಗಹಿಸಿ ನಕ್ಕ. ನಿನಗೆ ಹೇಗಿದ್ದರು ಒಂದು ಕೊಂಬು(ಗೋಪಾ"ಲ್") ಬೇರೆ ಇದೆ ಎಂದ. ನಾನು ಒಮ್ಮೆ "ಓಂ" ಸಿನಿಮಾ ನೋಡಿ ಬಂದು ಸಕ್ಕತ್ತಾಗಿದೆ ಎಂದು ಹೇಳಿದೆ. ಅದನ್ನು ಕೇಳಿಸಿಕೊಂಡು ಪಾಪ ಪಕ್ಕದ ಮನೆ ಅಜ್ಜಿ ಒಬ್ಬರು ಅದನ್ನು ದೇವರ ಸಿನಿಮಾ ಎಂದುಕೊಂಡು ಹೋಗಿ ನೋಡಿ ಬಂದಿದ್ದರು. ಹೆಸರಿಗೆ ಅನ್ವರ್ಥಕವಾಗಿ ಎಲ್ಲರೂ ಇರುವುದಿಲ್ಲ ಎಂದ.

ನಿನ್ನ ಹೆಸರು ಅಲ್ಲಿ ಬಳಕೆ ಆಗೋದಕ್ಕೆ ಕಾರಣ ಏನೆಂದರೆ, ಮೊದ ಮೊದಲು ಮಕ್ಕಳಿಗೆ ದೇವರ ಹೆಸರನ್ನು ಇಡುತ್ತಿದ್ದರು. ಹೀಗಾಗಿ ನನ್ನ ಹೆಸರು ಕೂಡ ತುಂಬಾ ಫೇಮಸ್. ನಿನ್ನ ಹೆಸರಿನ ಹಾಗೆ ನನ್ನ ಹೆಸರು ಕೂಡ ಬಳಕೆ ಆಗುತ್ತೆ ಎಂದ. ಗಲ್ಲಿ ಗಲ್ಲಿಗಳಲ್ಲಿ ಮಂಜುನಾಥ ಎಂಬ ಹೆಸರಿನ ಜನರಿದ್ದಾರೆ ಸುಮ್ಮನೇ ಯೋಚಿಸಬೇಡ ಎಂದ. ನಿನಗೆ ಗೊತ್ತಾ ಮಂಡ್ಯದಲ್ಲಿ ನನ್ನ ಗೆಳೆಯ ಮಾಧವನಿಗೆ ಮಹಾದೇವ ಎಂದು ಅನ್ನುತ್ತಿದ್ದರು ಎಂದ.

ಆದರೆ ನನ್ನ ಹೆಸರಿನಿಂದ ತುಂಬಾ ಜನ ವ್ಯಂಗ್ಯ ಕೂಡ ಮಾಡುತ್ತಾರೆ ಎಂದೆ. ಏನು ಅಂತ ಅಂದ. ಕೆಲ ಗೆಳೆಯರು "ಗೋಪಿ ಆಯಿತ ಕಾಫೀ" ಎಂದು ಹೇಳುತ್ತಿದ್ದ. ಅದರಲ್ಲಿ ಒಬ್ಬ ತುಂಬಾ ಅತಿರೇಕವಾಗಿ "ಗೋಪಿ ಉದುತ್ತಾನೆ ಪೀಪೀ" ಎಂದು ಹೇಳುತ್ತಿದ್ದ ಎಂದು ಬೇಜಾರಿನಲ್ಲಿ ಹೇಳಿದೆ. ಕೆಲ ಬಾರಿ ಗೋಪಾಲ್ ಜರ್ದ್, ಗೋಪಾಲ್ ಟೂತ್ ಪೌಡರ್ ಎಂದೆ.

ನೀನು ಸಿನಿಮಾ ಆಕ್ಟರ್ ಗಳು ಹೆಸರು ಬದಲಾಹಿಸಿದ ಹಾಗೆ ಬದಲಾಯಿಸಿಬಿಡು ಎಂದ. ನಾನು ಅದು ಹೇಗೆ ಸಾಧ್ಯ ಎಂದೆ. ಈಗ ಎಲ್ಲವೂ ಸಾಧ್ಯ ಒಂದು ಕೋರ್ಟ್ನಲ್ಲಿ ಅರ್ಜಿ ಗುಜರಾಯಿಸಿದರೆ ಸಾಕು. ಆಮೇಲೆ, ಒಂದು ಪೇಪರ್ ನಲ್ಲಿ ಜಾಹೀರಾತು ಕೊಟ್ಟರೆ ಸಾಕು ಎಂದ. ಮೊದಲನೆ ಬಾರಿ ನಿನ್ನ ಹೆಸರು ಕೂಡ ಲೈಮ್ ಲೈಟ್ ಗೆ ಬಂದ ಹಾಗಾಗುತ್ತೆ ಎಂದ.

ನಿನಗೆ, ಹೆಸರಿಗೆ ಆಗುವ ಶೋಷಣೆಯ ಒಂದು ರಸವತ್ತಾದ ಕತೆ ಹೇಳುತ್ತೇನೆ ಕೇಳು. ನಮ್ಮ ಪಕ್ಕದ ಮನೆಯಲ್ಲಿ ಒಬ್ಬ ಸೋಮಶೇಖರ ಎಂಬ ಗೆಳೆಯ ಇದ್ದ. ಅವನಿಗೆ ನಾವೆಲ್ಲರೂ ಸೋಮ ಎಂದು ಅನ್ನುತ್ತಿದ್ದೆವು. ಅವನು ಅವಳ ಅತ್ತೆ ಮಗಳನ್ನು ಪ್ರೀತಿಸುತ್ತಿದ್ದ. ಅವಳು ಕೂಡ ಅವನನ್ನು ಪ್ರೀತಿಸುತ್ತಿದ್ದಳು. ಅವಳು ಅವನನ್ನು ಸೋಮ ಎಂದೆ ಸಂಭೋದಿಸುತ್ತಿದ್ದಳು. ಅವರಿಬ್ಬರಿಗೆ ಮದುವೆ ಆಯಿತು. ಅವಳು ಮದುವೆ ಆದ ಮೇಲೂ ಹಾಗೆ ಅನ್ನುತ್ತಿದ್ದಾಗ ಒಬ್ಬ ಹಿರಿಯರು ಹಾಗೆಲ್ಲಾ ಅನ್ನಬಾರದು, ರೀ ಹಚ್ಚಿ ಮಾತನಾಡಬೇಕು ಎಂದು ಹೇಳಿದರು. ಆಗಿನಿಂದ ಅವಳು ರೀ ಎಂದು ಸೇರಿಸಿ ಸೋಮನನ್ನು "ಸೋಮಾರಿ" ಮಾಡಿಬಿಟ್ಟಿದ್ದಳು. ಅವನು ಹೇಳುತ್ತಿದ್ದಂತೆ ಬಾಯಲ್ಲಿರುವ ಕಾಫೀ ಅನಯಾಸವಾಗಿ ಹೊರಗಡೆ ಬಂತು.

ಜನರಿಗೆ ವ್ಯಂಗ್ಯ ಮಾಡೋದಕ್ಕೆ ಒಂದು ವಿಷಯವಿದ್ದರೆ ಸಾಕು, ಅದಕ್ಕೆ ಹೆಸರು ತುಂಬಾ ಬಳಕೆ ಆಗುತ್ತೆ ಅಷ್ಟೇ ಎಂದು ಸಮಾಧಾನ ಹೇಳಿದ. ನನಗು ಅವನು ಹೇಳಿದ್ದು ಸರಿ ಅನ್ನಿಸಿತು. ಕಡೆಗೆ ಮಂಜ ಲೇ ಹಾಗೆ ಹೊರಟರೆ ಹೇಗೆ "ಗೋಪಾಲ್ ಟೇಬಲ್ ಕ್ಲೀನ್ ಮಾಡು" ಎಂದು ವ್ಯಂಗ್ಯದ ಮಾತು ಆಡಿದ. ಕಾಫೀ ಮುಗಿಸಿ ಮನೆಗೆ ಬಂದೆವು.

ಒಮ್ಮೆ ನಾನು ಮತ್ತು ನನ್ನ ಮಡದಿ ದಾವಣಗೆರೆಗೆ ನೆಂಟರ ಮನೆಗೆ ಹೋಗಿದ್ದೆವು. ಆಗ ಒಬ್ಬ ಅಜ್ಜಿ ಪುಟ್ಟಿ ಎತ್ತಿ ತಾ ಎಂದರು. ನಾನು ಗಾಬರಿ ನನ್ನ ಹೆಂಡತಿಯನ್ನು ಹೇಗೆ ಎತ್ತಲಿ ಎಂದು. ಮತ್ತೆ ಸೆಗಣಿ ಪುಟ್ಟಿ ತಾ ಎಂದರು. ನನ್ನ ಹೆಂಡತಿಗೆ ಹೇಳುತ್ತಿದ್ದಾರೆ ಎಂದು ಸುಮ್ಮನೇ ಇದ್ದೆ. ನನ್ನ ಹೆಂಡತಿಗೆ ಚಿಕ್ಕಂದಿನಿಂದ ಪುಟ್ಟಿ ಎಂದೆ ಎಲ್ಲರೂ ಅನ್ನುತ್ತಾರೆ. ಕಡೆಗೆ ರೀ ಅದನ್ನು ಎತ್ತಿ ಕೊಡಿ ಎಂದು ಒಂದು ಪುಟ್ಟಿ(ಬುಟ್ಟಿ) ತೋರಿಸಿದಳು ಮಡದಿ, ನಾನು ಎತ್ತಿ ಕೊಟ್ಟೆ. ಆಮೇಲೆ ತಿಳಿಯಿತು ಅವರು ಬುಟ್ಟಿಗೆ ಪುಟ್ಟಿ ಅನ್ನುತ್ತಾರೆ ಎಂದು.

Tuesday, April 26, 2011

ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ....

ಮುಂಜಾನೆ ಬೇಗನೆ ಎದ್ದು "ಕರಾಗ್ರೆ ವಸತೆ ಲಕ್ಷ್ಮಿ ಕರ ಮಧ್ಯೆ ಸರಸ್ವತಿ ಕರ ಮೂಲೆ ಸ್ಥಿತೇ ಗೌರಿ ಪ್ರಭಾತೆ ಕರದರ್ಶನಂ" ಎಂದು ಹೇಳುತ್ತ ಏಳುತ್ತಿದ್ದಂತೆ. ನನ್ನ ಮಗ ಕೂಗಿ "ಅಪ್ಪ ನಿಮ್ಮ ಚಪ್ಪಲಿ ಕಾಣುತ್ತಾ ಇಲ್ಲ" ಎಂದ. ಹೊರಗೆ ಹೋಗಿ ನೋಡಿದೆ. ಒಂದೇ ಚಪ್ಪಲಿ ಇತ್ತು. ಒಂದೇ ಚಪ್ಪಲಿ ಯಾರು ಕದ್ದರು ಎಂಬ ಯೋಚನೆಗೆ, ಯಾರಾದರೂ ಕು೦ಟ ಕಳ್ಳ ಇರಬಹುದು ಎಂದು, ಬರೀ ಕಾಲಲ್ಲಿ ಹೋಗಿ ನೋಡಿದೆ. ಒಂದು ಚಿಕ್ಕ ನಾಯಿ ಮರಿ ನನ್ನ ಚಪ್ಪಲಿ ತೆಗೆದುಕೊಂಡು ಆಟ ಆಡುತ್ತಾ ಇತ್ತು. ಚಿಕ್ಕದಿರಲಿ ಅಥವಾ ದೊಡ್ಡದಿರಲಿ, ನಾಯಿ... ನಾಯಿನೆ ಅಲ್ಲವೇ. ಮೊದಲಿನಿಂದಲೂ ನಾಯಿ ಎಂದರೆ ಹೆದರಿಕೆ. ಅದನ್ನು ಕಷ್ಟ ಪಟ್ಟು ಓಡಿಸಿ, ಒಂದೇ ಚಪ್ಪಲಿ ಹಾಕಿಕೊಂಡು ಬರುತ್ತಾ ಇದ್ದೆ. ಮಂಜ "ಒಂದೇ ಚಪ್ಪಲಿ ಕೊಂಡು ಕೊಂಡಿದ್ದೀಯಾ ಜುಗ್ಗ" ಎಂದು ಅಪಹಾಸ್ಯ ಮಾಡಿದ. ನಾಯಿ ಮಾಡಿದ ಅವಾಂತರ ಹೇಳಿ, ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಮನೆ ಒಳಗಡೆ ನಡೆದೆ.

ಮಡದಿ ಎರಡು ದಿನಗಳಿಂದ ಕೋಪ ಮಾಡಿಕೊಂಡಿದ್ದಳು. ಮನೆ ಕಸ ಇನ್ನೂ ಗುಡಿಸಿರಲಿಲ್ಲ. ಒಳಗೆ ಬಂದು "ಹೊರಗಡೆ ನನ್ನ ಕಾಲು ತುಂಬಾ ಸ್ವಚ್ಛ ಇದ್ದವು, ಒಳಗಡೆ ಬಂದೊಡನೆ ನನ್ನ ಕಾಲು ಹೊಲಸು ಆಗಿದ್ದಾವೆ" ನೋಡು ಪುಟ್ಟ ಎಂದು ನಗುತ್ತಾ ಮಗನಿಗೆ ಹೇಳಿದೆ. ಅಷ್ಟರಲ್ಲಿ ಮಡದಿ ಕೋಪದಿಂದ, ಪೊರಕೆ ನನ್ನ ಬಳಿ ಇಟ್ಟು ಒಳಗಡೆ ಹೋದಳು. ನಾನೇ ಕಸ ಗುಡಿಸಬೇಕಾಯಿತು.

ಈ ಸಿಟ್ಟು ಎನ್ನುವುದು ನನ್ನ ಮಡದಿಯೊಬ್ಬಳ ಕಾಯಿಲೆ ಅಥವಾ ಎಲ್ಲ ಹುಡುಗಿಯರ ಕಾಯಿಲೆನಾ ಎಂಬ ಯೋಚನೆ ಬಂತು. "ಹುಡುಗಿಯರು ಕೋಪ ಮಾಡಿಕೊಂಡಾಗ ತುಂಬಾ ಮುದ್ದಾಗಿ ಕಾಣುತ್ತಾರೆ" ಎಂದು ಅರ್ಥ ಮಾಡಿಕೊಂಡು ಕಾಯಿಲೆ ಅಲ್ಲದೇ ಖಯಾಲಿ ಕೂಡ ಆಗಿರಲೂಬಹುದು. ಆಗ ಎಲ್ಲ ಸಮಯದಲ್ಲೂ ಮುದ್ದಾಗಿ ಕಾಣಬಹುದು ಎಂದು ಕೂಡ ಹೀಗೆ ಮಾಡಿರಬಹುದು.

ಕೋಪ ಹೋಗಿಸೋಕೆ ಏನೇನು ಯೋಜನೆಗಳು ಎಂದು ಆಲೋಚನೆಗೆ ಬಿದ್ದೆ. ಚಿಕ್ಕ ವಯಸ್ಸಿನಲ್ಲಿ ನನ್ನ ಒಬ್ಬ ಆಪ್ತ ಗೆಳೆಯ ಹೇಳುತ್ತಿದ್ದ "ಸಿಟ್ಟು ಬಂದರೆ ಪಡಿ ಹಿಟ್ಟು ಮುಕ್ಕು" ಎಂದು. ಆದರೆ ಯಾವ ಹಿಟ್ಟು ಎಂದು ಮಾತ್ರ ಹೇಳಿರಲಿಲ್ಲ ಮಹಾರಾಯ. ಯಾವುದಾದರೂ ಮುಕ್ಕಬಹುದು ಆದರೆ ಸಿಟ್ಟು ಜ್ಯಾಸ್ತಿ ಆಯಿತು ಎಂದರೆ ಕಷ್ಟ. ಅಥವಾ ಗಿರಣಿಯಲ್ಲಿರುವ ಹಿಟ್ಟಿನ ಮಿಶ್ರಣವ ಎಂದು ಕೂಡ ಯೋಚಿಸಿದೆ.

ಮತ್ತೆ ಕೆಲವರು ಸಿಟ್ಟು ಬಂದಾಗ ನಮ್ಮ ಇಂಗ್ಲೀಶ್ ಮೇಷ್ಟ್ರು ಹೇಳುವ ಕೌಂಟ್ ವನ್ ಟು ಟೆನ್ ಕೂಡ ನೆನಪು ಆಯಿತು. ಆದರೆ ಕೋಪ ಬಂದರೆ ಇಂಗ್ಲೀಶ್ ಕಡ್ಡಾಯವಾಗಿ ಬರಲೇ ಬೇಕು. ಅಷ್ಟರಲ್ಲಿ ಲಗುಬಗೆಯಿಂದ ಏನೇ? ನಿನಗೆ ಇಂಗ್ಲೀಶ್ ಬರುತ್ತ ಎಂದೆ. ಇಲ್ಲ ಕಣ್ರೀ ನೀವೇ ಜಾಣರು ಎಂದು ಮತ್ತಷ್ಟು ಕೋಪ ಮಾಡಿಕೊಂಡಳು. ಮತ್ತೆ ಕನ್ನಡದಲ್ಲಿ ಒಂದರಿಂದ ಹತ್ತರವರಗೆ ಎಣಿಸು ಎಂದೆ. ಅದು ಬರಲ್ಲ ಕಣ್ರೀ ಏನ್ರೀ? ಈವಾಗ ಎಂದಳು.

ಅವಳ ಕೋಪಕ್ಕೂ ಮತ್ತು ನಮ್ಮ ಜಗಳಕ್ಕು ಒಂದು ಕಾರಣವಿದೆ. ಅವಳು ಊರಿಗೆ ಹೋಗುತ್ತೇನೆ ಎಂದು ಕ್ಯಾತೆ ತೆಗೆದಿದ್ದು. ಹೀಗಾಗಿ ನಾನು ಹೋಗಿ ಟಿಕೆಟ್ ಮಾಡಿಸಿಕೊಂಡು ಬಂದು ಅವಳಿಗೆ ಕೊಟ್ಟೆ. ಅವಳು ಕೋಪಕ್ಕೆ ತಿಲಾಂಜಲಿ ಹಾಕಿದ್ದಳು.

ಮರುದಿನ ಬೆಳಿಗ್ಗೆ ಅವರನ್ನು ಕಳುಹಿಸಲು ಆಟೋ ಹುಡುಕಿದೆ. ಬೆಳಿಗ್ಗೆ ಒಂದೂ ಆಟೋ ಸಿಗಲೇ ಇಲ್ಲ. ಕಡೆಗೆ ಒಂದು ಆಟೋ ಮಾಡಿ ಹೋಗುವಷ್ಟರಲ್ಲಿ ತುಂಬಾ ಲೇಟ್ ಆಗಿತ್ತು. ಮೂರು ಬ್ಯಾಗ್ ನಾನೇ ಹಿಡಿದುಕೊಂಡು ಹೋಗಿ ಲಗುಬಗೆಯಲ್ಲಿ ಬಿಟ್ಟು ಬಂದೆ. ಸ್ಟೇಶನ್ ಹೊರಗೆ ಬಂದೆ. ಅಷ್ಟರಲ್ಲಿ ಒಬ್ಬ ಕರೆದು "ಬರುತ್ತೀಯ..." ಎಂದ ಕೇಳಿದ. ನನಗೆ ದಿಕ್ಕೇ ತೋಚದಾಗಿತ್ತು. ಎಲ್ಲಿ? ಎಂದೆ. ನೀವು ಕೂಲಿ ಅಲ್ಲವ ಎಂದ. ನಾನು ಇಲ್ಲ ಸರ್ ಎಂದು ನನ್ನ ಕೆಂಪು ಅಂಗಿ ನೋಡಿ ನಗುತ್ತಾ ಮನೆಗೆ ಬಂದೆ.

ಅವಳಿಲ್ಲದೇ ತುಂಬಾ ಮಜವಾಗಿ ಇರಬಹುದು ಎಂದು ಯೋಚಿಸುತ್ತಾ ಬಂದ ನನಗೆ ಮನೆಯಲ್ಲಿ ಮಡದಿ, ಮಗ ಇಲ್ಲದೇ ನಿಶಬ್ದವಾಗಿತ್ತು. ಮನೆ, ಮನೆಸೆಲ್ಲ ಖಾಲಿ ಖಾಲಿ. ಯಾರು ಇಲ್ಲದಿದ್ದರೂ ಮನೆಯಲ್ಲಿ ನನ್ನೊಟ್ಟಿಗೆ ಇರುವರೇನೋ ಎಂಬ ಹುಸಿ ಭಾವನೆ. ಆಮೇಲೆ ನೋಡಿ ಯಾರು ಇಲ್ಲ ಎಂದು ಮನವರಿಕೆಯಾಗುತಿತ್ತು. "ಇರುವುದೆಲ್ಲವ ಬಿಟ್ಟು ಬೇರೆಡೆಗೆ ತುಡಿವುದೆ ಜೀವನ" ಎಂಬ ಗೋಪಾಲ್ ಕೃಷ್ಣ ಅಡಿಗರ ಉಕ್ತಿಯಂತೆ, ಅಂತಹ ಖುಷಿಯೇನು ಅನ್ನಿಸಲಿಲ್ಲ.

ಚಹಾ ಮಾಡೋಣ ಎಂದು ಅರ್ಧ ಹಾಲನ್ನು ಇನ್ನೊಂದು ಪಾತ್ರೆಗೆ ಸುರುವಿದೆ. ಮತ್ತು ಚಹಾ ಪುಡಿ ಹಾಕಿದೆ. ಅಷ್ಟರಲ್ಲಿ ದೇವರ ಕಟ್ಟೆ ಮೇಲೆ ಇಟ್ಟಿರುವ ಗುಲಾಬಿ ಹೂ ಕಾಣಿಸಿತು. ಅವಳು ಅದನ್ನು ಆತುರದಲ್ಲಿ ಅಲ್ಲಿಯೇ ಇಟ್ಟು ಹೋಗಿದ್ದಳು. ಅದನ್ನು ದೇವರಿಗೆ ಏರಿಸಿ, ಸಕ್ಕರೆ ಹಾಕಿದೆ. ಚಹಾ ಮಾಡಿ ಹೊರಗಡೆ ಬಂದು ಚಹಾ ಹೀರುತ್ತಾ ಕುಳಿತೆ. ಚಹಾ ಕಹಿಯಾಗಿತ್ತು, ಏಕೆಂದರೆ? ನಾನು ಚಹಾ ಪುಡಿ ಮತ್ತು ಸಕ್ಕರೆ ಹಾಕಿದ್ದು ಬೇರೆ ಬೇರೆ ಪಾತ್ರೆಗೆ. ಕಡೆಗೆ ಸಕ್ಕರೆ ಬೆರೆಸಿ ಚಹಾ ಹೀರುತ್ತಾ ಕುಳಿತಾಗ ನಾವಿಬ್ಬರೇ ನಾನು ಮತ್ತು ಒಂದು ಗುಯ್‌ಗೂಡುವ ನೊಣ.

Tuesday, March 22, 2011

ಬಾಡಿಗೆ ಮನೆ ....

ಮಂಜನ ಮನೆಗೆ ಹೋಗಿದ್ದೆ. ಈ ಗ್ಯಾಸ್ ಆಗಿಬಿಟ್ಟರೆ ಊಟ ಮಾಡೋದು ಕಷ್ಟ ಎಂದು ಮಂಜ ಬೇಜಾರಿನಿಂದ ಮಾತನಾಡುತ್ತಾ ಇದ್ದ. ಹಾಗಾದರೆ ಮನೆಯಲ್ಲಿ ಅಡುಗೆ ನಿನ್ನದೆ ಎಂದು ಆಯಿತು ಎಂದೆ. ಲೇ....ನೀನು ನಿನ್ನ ವಿಷಯ ಬೇರೆಯವರ ಮೇಲೆ ಹಾಕಿ ಖುಷಿಪಡಬೇಡ ಎಂದು ನನಗೆ ತಿರುಗು ಬಾಣ ಬಿಟ್ಟ. ಆಗ ನಕ್ಕೂ, ಊಟಕ್ಕೆ ನಮ್ಮ ಮನೆಗೆ ಬಂದು ಬಿಡು ಎಂದೆ. ಹಾ... ಏನು? ಎಂದ. ಊಟಕ್ಕೆ ನಮ್ಮ ಮನೆಗೆ ಬಾ, ಇಲ್ಲ ನನ್ನ ಮನೆಯಲ್ಲಿರುವ ಸಿಲಿಂಡರ್ ತೆಗೆದುಕೊಂಡು ಹೋಗು ಎಂದೆ. ಲೇ ... ನಾನು ಅದನ್ನು ಹೇಳುತ್ತ ಇಲ್ಲ ಕಣೋ ಎಂದು ಗಹ.. ಗಹಿಸಿ.. ನಗುತ್ತಾ.... ಗ್ಯಾಸ್ ಆಗಿದ್ದು ಹೊಟ್ಟೆಯಲ್ಲಿ ಎಂದ. ನಾನು ತಮಾಷೆಗೆ ಇದನ್ನ ಭಾರತ್ ಅಥವಾ ಏಚ್ ಪೀ ಗ್ಯಾಸ್ ಏಜೆನ್ಸೀ ಅವರಿಗೆ ತಿಳಿದರೆ ಕಷ್ಟ ನಿನ್ನನ್ನು ಎತ್ತಿಕೊಂಡು ಹೋಗಿ ಬಿಡುತ್ತಾರೆ ಎಂದೆ.

ಮತ್ತೆ ಏನು? ರಾಯರು ತುಂಬಾ ದಿವಸದ ಮೇಲೆ ಇಲ್ಲಿಗೆ ಪ್ರಯಾಣ ಬೇಳಿಸಿದ್ದೀರಿ ಎಂದ. ಬಾಡಿಗೆ ಮನೆ ನೋಡಿ ಕೊಂಡು ಬರೋಣ ಬರುತ್ತೀಯಾ? ಎಂದು ಕೇಳಿದೆ. ನೀನು ಇದ್ದರೆ ಸ್ವಲ್ಪ ಧೈರ್ಯ ಇರುತ್ತೆ. ಮತ್ತು ಚೌಕಾಸಿ ಮಾಡಲು ನೀನೆ ಸರಿ ಎಂದೆ. ನಾನು ಬರಲ್ಲ, ನೀನು ಬೇಕಾದರೆ ಹೋಗು ಎಂದ. ಕಡೆಗೆ ಒಬ್ಬನೇ ಮನೆ ಹುಡುಕಲು ಹೊರಟೆ. ಗಾಡಿ ಮೇಲೆ ತಲೆ ಅತ್ತ.. ಇತ್ತ.. ಮಾಡುತ್ತಾ ಹೋಗುವ ನನ್ನನ್ನು ನೋಡಿ ತುಂಬಾ ಜನ ವಿಚಿತ್ರವಾಗಿ ನೋಡಿ ನಕ್ಕಿದ್ದು ಆಯಿತು. ಹಲ್ಲು ಇದ್ದಾಗ ಕಡ್ಲೆ ಇರಲ್ಲ , ಕಡ್ಲೆ ಇದ್ದಾಗ ಹಲ್ಲು ಇರಲ್ಲ ಎಂಬ ಗಾದೆ ಹಾಗೆ ನನ್ನ ಅವಸ್ಥೆ ಆಗಿತ್ತು. ಒಂದು ಮನೆ ಕೂಡ ಸಿಗಲೇ ಇಲ್ಲ. ಕಡೆಗೆ ನನಗೆ ನೋ ಪಾರ್ಕಿಂಗ್ ಎಂಬ ಬೋರ್ಡ್ ಕೂಡ ಮನೆ ಬಾಡಿಗೆ ಎಂಬ ಹಾಗೆ ಕಾಣಿಸುತಿತ್ತು.

ಕಡೆಗೆ ಒಂದು ಮನೆ ಮುಂದೆ ಬಾಡಿಗೆಗೆ ಎಂಬ ಬೋರ್ಡ್ ನೇತು ಹಾಕಿದ್ದರು. ನಾನು ಒಳಗಡೆ ಹೋದೆ, ನನ್ನ ಮೇಲಿಂದ ಕೆಳಗಡೆವರೆಗೂ ಅನಾಮತ್ತಾಗಿ ನೋಡಿ ನಾವು ನಾನ್-ವೇಜ್ ನವರಿಗೆ ಕೊಡುವುದಿಲ್ಲ ಎಂದರು. ನಾನು ವೇಜ್ ಎಂದೆ. ನಾನು ಅದನ್ನೇ ಹೇಳಿದ್ದು ಕಣ್ರೀ ಎಂದರು. ಕಡೆಗೆ ಕಷ್ಟ ಪಟ್ಟು ತಿಳಿಸಿದ ಮೇಲೆ ಮನೆ ತೋರಿಸಿದರು. ಮನೆ ಅಷ್ಟು ಇಷ್ಟವಾಗಲಿಲ್ಲ. ಹೀಗಾಗಿ ಸುಮ್ಮನೇ ಮತ್ತೆ ಮುಂದೆ ಹೊರಟೆ.

ಮತ್ತೊಂದು ಬಾಡಿಗೆ ಮನೆ ಕಾಣಿಸಿತು. ಬೆಲ್ ಮಾಡಿ, ನಾನು ಅವರು ಕೇಳುವ ಮೊದಲೇ ನಾನು ಸಸ್ಯಾಹಾರಿ ಎಂದೆ. ಅವರು ಅವಾಕ್ಕಾಗಿ ನೋಡಿದರು. ಕಡೆಗೆ ಸುಧಾರಿಸಿಕೊಂಡು ಮನೆ ಬಾಡಿಗೆ ಎಂದೆ. ಓsss ಅದಾ ಎಂದು ಮನೆ ತೋರಿಸಿದರು. ಮನೆಯಲ್ಲಿ ಇರುವ ವಸ್ತು ಎಲ್ಲೆಲ್ಲಿ ಇಡಬೇಕು ಎಂದು ನಾನು ಯೋಚಿಸುತ್ತಿದ್ದರೆ, ಅವರು ಮಾತ್ರ ವಾಸ್ತು ಬಗ್ಗೆ ಪುರಾಣ ಶುರು ಮಾಡಿದ್ದರು. ಇದು ವಾಯು ಮೂಲೆ , ಅಗ್ನಿ ಮೂಲೆ ಎಂದೆಲ್ಲ ಹೇಳಿ ತಲೆ ತಿಂದಿದ್ದರು. ಇಲ್ಲಿ ಮೊದಲು ಒಬ್ಬ ಹುಡುಗ ಇರುತ್ತಿದ್ದ. ಬಂದ ಎರಡೇ ತಿಂಗಳಲ್ಲಿ ಮದುವೆ ಆಯಿತು ಎಂದರು. ಮತ್ತೆ ಎರಡು ವರ್ಷ ಇಲ್ಲೇ ಇದ್ದರು ಮತ್ತು ಒಂದು ಮಗು ಕೂಡ ಆಯಿತು ಎಂದರು. ನನಗೆ ಮೊದಲೇ ಮದುವೆ,ಮಗು ಎರಡು ಆಗಿದೆ ಎಂದು ಹೇಳೋಣ ಎಂದುಕೊಂಡೆ. ಆದರೂ ಸುಮ್ಮನೇ ಮನೆ ನೋಡಿ ಮನೆಯವರನ್ನೂ ಕರೆದುಕೊಂಡು ಬಂದು ತೋರಿಸಿ, ಆಮೇಲೆ ಹೇಳುತ್ತೇನೆ ಎಂದು ಕಾಲುಕಿತ್ತೆ.

ಮತ್ತೆ ಎಷ್ಟು ತಿರುಗಿದರು ಮನೆ ಸಿಕ್ಕಲಿಲ್ಲ. ಕಡೆಗೆ ಮನೆಗೆ ಬಂದೆ. ಅಷ್ಟರಲ್ಲಿ ಮಡದಿ ನಾನು ಒಂದು ಮನೆ ನೋಡಿದ್ದೇನೆ ಎಂದಳು. ಆಯಿತು ಅದನ್ನು ನೋಡಿಯೇ ಬಿಡೋಣ ಎಂದು ಹೋದೆವು. ಬಾಡಿಗೆ ಏನೋ ಕಡಿಮೆ ಇತ್ತು...ಆದರೆ ಮನೆ ಮಾತ್ರ ಉದ್ದವಾಗಿ ಪಟ್ಟಿಯ ಹಾಗೆ ಇತ್ತು. ಯಾವುದು ಬೆಡ್‌ರೂಮ್ ಯಾವುದು ಹಾಲ್ ಎಂದು ಪತ್ತೆ ಹಚ್ಚುವುದೇ ಒಂದು ಸಮಸ್ಯೆಯಾಗಿತ್ತು. ಅವರ ಎದುರಿಗೆ ಏನು ಹೇಳದೇ ಆಮೇಲೆ ಬರುತ್ತೇವೆ ಎಂದು ಹೇಳಿ ಹೊರಗಡೆ ಬಂದೆವು. ನನ್ನ ಮಡದಿಗೆ ಅದು ಇಷ್ಟವಾಗಿತ್ತು. ನಾನು ಮನೆ ಸರಿ ಇಲ್ಲ ಎಂದೆ. ನಿನ್ನ ಚಾಯ್ಸ್ ಸರಿ ಇಲ್ಲ ಕಣೇ ಎಂದೆ. ಅದು ನಿಜ ಕಣ್ರೀ ಈಗೀಗ ಅರ್ಥ ಆಗುತ್ತಾ ಇದೆ ಎಂದು ನನ್ನ ಮುಖ ನೋಡಿ ಅಂದಳು.

ಸಂಜೆ ಅಂತರ್ಜಾಲದಲ್ಲಿ ಒಂದೆರಡು ಬಾಡಿಗೆ ಮನೆ ಹುಡುಕಿದೆ. ಒಬ್ಬರಿಗೆ ಫೋನ್ ಮಾಡಿ ನಿಮ್ಮ ಮನೆ ಟುಲೆಟ್ ಇದೆ ಅಲ್ಲ ಎಂದೆ. ಅಲ್ಲಿಂದ ಯೂ ಆರ್ ಟೂ ಲೇಟ್ ಎಂದು ಉತ್ತರ ಬಂತು. ಮತ್ತೆ ಒಂದೆರಡು ಜನರಿಗೆ ಕರೆ ಮಾಡಿ ಅವರ ವಿಳಾಸ ತಿಳಿದು ನಾಳೆಗೆ ಹೋಗೋಣ ಎಂದು ನಿರ್ಧರಿಸಿ ಆಗಿತ್ತು.

ಮರುದಿನ ವಿಳಾಸ ಹಿಡಿದು ಹೊರಟೆ. ಒಂದು ಮನೆಯಲ್ಲಿ ಅಜ್ಜಿ ಮಾತ್ರ ಇದ್ದರು. ನನ್ನನ್ನು ಹೊರಗಡೆ ಇಂದ ಮಾತ್ರ ಮಾತನಾಡಿಸಿ ಕಳುಹಿಸಿದರು. ಮತ್ತೊಂದು ಮನೆಯಲ್ಲಿ ಅವರಿಗೆ ಬಾಡಿಗೆ ಸ್ವಲ್ಪ ಕಡಿಮೆ ಮಾಡಿ ಎಂದು ಕೇಳಿದೆ. ಅದಕ್ಕೆ ನಮ್ಮ ಮೋಟರ್ ಕೆಟ್ಟರೆ ನೀವು ದುಡ್ಡು ಕೊಡಬೇಕು ಎಂಬ ಉದ್ದಟ್ ವಾಗಿ ಹೇಳಿದರು. ಇವರ ಸಹವಾಸ ಸಾಕು ಎಂದು ಮತ್ತೊಂದು ಮನೆಗೆ ಹೋದೆ. ಮನೆ ತುಂಬಾ ಚೆನ್ನಾಗಿ ಇತ್ತು. ಸಂಜೆಗೆ ಹೋಗಿ ಮನೆ ಮಡದಿಗೂ ತೋರಿಸಿದೆ. ಅವಳಿಗೂ ಸರಿ ಅನ್ನಿಸಿತು. ಕಡೆಗೆ ಅದನ್ನೇ ಒಪ್ಪಿಗೆ ಸೂಚಿಸಿದೆವು. ಅವರು ನನ್ನ ಮಗನ ಜೊತೆ ತಮಾಷೆ ಮಾಡುತ್ತಾ, ಅವನಿಗೆ ಎ ಬಿ ಸಿ ಡಿ ಎಲ್ಲ ಕೇಳಿದರು. ಕೂದಲಿನ ಬಣ್ಣ ಏನು? ಎಂದು ಇಂಗ್ಲೀಶ್ ನಲ್ಲಿ ಕೇಳಿದರು. ಆಗ ಮಗ ನನ್ನ ಕೂದಲಿನ ಬಣ್ಣ ಕರಿ, ನಿಮ್ಮದು ಬಿಳಿ ಎಂದು ಬಿಟ್ಟ. ಸಧ್ಯ ಅವರು ಬೇಜಾರ್ ಮಾಡಿಕೊಳ್ಳಲಿಲ್ಲ. ಮನೆ ಬಾಡಿಗೆ ಎಲ್ಲವನ್ನು ಮಾತನಾಡಿ ಮನೆಗೆ ಬಂದೆವು.

ಬೆಂಗಳೂರಿನಲ್ಲಿ ಬಾಡಿಗೆ ಮನೆ ಹುಡುಕುವುದು ಎಷ್ಟು ಕಷ್ಟ ಎಂದು ಅನ್ನಿಸಿತು. ಮೊದಲನೆ ಮನೆ ಹುಡುಕಿ ಕೊಟ್ಟಿದ್ದು ನನ್ನ ಗೆಳೆಯ. ಮರುದಿನ ಬಾಡಿಗೆ ಮನೆ ಹುಡುಕಲು ಪಟ್ಟ ಕಷ್ಟದಿಂದ ಬಾಡಿ ಬೆಂಡಾಗಿ ಹೋಗಿತ್ತು.

Friday, March 11, 2011

ಟ್ರೈನಿನ ಲೋಚಗುಡುವಿಕೆ ....

ಇವತ್ತು ಬೈಸಿಕೊಳ್ಳುವುದೂ ಗ್ಯಾರಂಟೀ ಎಂದು ಕೊಳ್ಳುತ್ತ, ಮನೆಯೊಳಗೆ ಕಾಲು ಇಟ್ಟೆ. ಹಲ್ಲಿ ಲೋಚಗುಡುತ್ತಾ ಇತ್ತು. ಹಲ್ಲಿ ನೋಡಿ ಹಲ್ಲು ಕಡಿದು ಒಳಗಡೆ ಹೋದೆ. ಅದನ್ನು ಓಡಿಸಲು ಹೋದೆ. ತುಂಬಾ ಜೋರಾಗಿ ಓಡಿ ದಣಿದವನಂತೆ ನಿಂತು ಮತ್ತೆ ಲೋಚಗುಟ್ಟಿತು. ಮತ್ತೊಮ್ಮೆ ಅದನ್ನು ಓಡಿಸಲು ಹೋದೆ. ಸ್ವಲ್ಪ ಕೂಡ ಅಲುಗಾಡದೆ ಹಾಗೆ ನಿಂತು ಬಿಟ್ಟಿತು. ಸಧ್ಯ ಅದಕ್ಕೂ ಗೊತ್ತಾಗಿ ಬಿಟ್ಟಿದೆ, ಇವನ ಪರಾಕ್ರಮ ಇಷ್ಟಕ್ಕೆ ಮಾತ್ರ ಸೀಮಿತ ಎಂದು. ಇನ್ನೇನು ಮಾಡದೆ ಸುಮ್ಮನೇ ಒಳಗಡೆ ನಡೆದೆ.

ನಾನು ಒಳ್ಳೆಯ ವಿಚಾರ ಮಾಡುವಾಗ ಒಮ್ಮೆಯೂ ಲೋಚಗೂಡದ ಹಲ್ಲಿ, ನಾನು ಕೆಟ್ಟ ವಿಚಾರ ಮಾಡುವಾಗ ಮಾತ್ರ ಖಂಡಿತ ಲೋಚಗುಡುತ್ತದೆ. ಅದನ್ನು ನಾನು ತುಂಬಾ ಕೆಟ್ಟ ಕಣ್ಣಿನಿಂದ ನೋಡಿ, ಮತ್ತೆ ನಾನೇ ಲೋಚಗೂಡಲು ಶುರು ಮಾಡುತ್ತೇನೆ. ನನ್ನ ಲೋಚಗುಡುವಿಕೆಯಿಂದ ನನಗೆ ಯಾವುದೇ ಫಾಯಿದೆ ಆಗಿದೆಯೋ ಖಂಡಿತ ಗೊತ್ತಿಲ್ಲ. ಹೆಂಡತಿ ಮಾತ್ರ ಕೃಷ್ಣ ಕೃಷ್ಣ .. ಎಂದು ಎರಡು ಬಾರಿ ಶ್ರೀ ಕೃಷ್ಣ ಪರಮಾತ್ಮನನ್ನು ಎರಡು ಬಾರಿ ನೆನಸುತ್ತಾಳೆ. ಅಷ್ಟು ಚೆನ್ನಾಗಿ ಮಿಮಿಕ್ರಿ ಮಾಡುತ್ತೇನೆ. ಅದು ಹಲ್ಲಿಯದು ಮಾತ್ರ.

ನಾನು ಲೇಟಾಗಿ ಆಫೀಸ್ ನಿಂದ ಬಂದಿದ್ದೆ. ಲೇಟ್ ಆಗುವುದಕ್ಕೂ ಒಂದು ಕಾರಣ ಇತ್ತು. ಆಫೀಸ್ ನಲ್ಲಿ ಟ್ರೇನಿಂಗ್ ಇತ್ತು. ಮಡದಿ ಕರೆ ಮಾಡಿ ಕೂಡ ಹೇಳಿರಲಿಲ್ಲ. ಹೀಗಾಗಿ ಮಡದಿ ಕೋಪ ಮಾಡಿಕೊಂಡಿರಬಹುದೆಂದು ಭಯದಿಂದ ಬಂದಿದ್ದೆ. ಟ್ರೈನಿಂಗ್ ತೆಗೆದುಕೊಳ್ಳುವರು ಒಬ್ಬ ಫ್ರೆಂಚ್ ಮನುಷ್ಯ ಇಂಗ್ಲೀಷ್ ಉಚ್ಚಾರಣೆ ಚೆನ್ನಾಗಿ ಬರುತ್ತಿರಲಿಲ್ಲ. ತುಂಬಾ ಕಷ್ಟ ಪಟ್ಟು ಪ್ರಯಾಸದಿಂದ ಅರ್ಥ ಮಾಡಿಕೊಳ್ಳಬೇಕಿತ್ತು. ಅವರು ಟು ಎಂದರೆ ಥೂ ಎಂದು ಉಗಿದ ಹಾಗೆ ಅನ್ನಿಸೋದು. ಇನ್ನೂ 11g Suite ಎಂದರೆ 11g ಸ್ವೀಟ್ ಎಂದ ಹಾಗೆ ಅನ್ನಿಸುತಿತ್ತು. Parallel- ಬ್ಯಾರಲ್ , ಕನ್ಫರ್ಮೇಶನ್ - ಕಾಫೀ ಮಶೀನ್, ಕಾಲಮ್ - ಕೂಲಮ್ ಮತ್ತು ಜೆ ವಿ ಎಂ - ಜಿ ವಿ ಎಂ. ತುಂಬಾ ಕಷ್ಟ ಪಟ್ಟು ಅರ್ಥ ಮಾಡಿಕೊಂಡಿದ್ದೆ.

ಮನೆಯೊಳಗೆ ಹೋದೆ ತುಂಬಾ ಲೇಟ್ ಆಯಿತ ಎಂದು ಕೇಳಿದೆ. ಏನು ಇಲ್ಲವಲ್ಲ ಎಂದಳು. ನನಗೆ ಆಶ್ಚರ್ಯ. ನಾನು ಮತ್ತೆ ವಿಷಯ ಕೆಣಕಿದರೆ ನನಗೆ ಕಷ್ಟ ಎಂದು ಕೈ ಕಾಲು ತೊಳೆದುಕೊಂಡು ಬಂದು, ಊಟಕ್ಕೆ ಹಾಜರ್ ಆದೆ.ಊಟ ಮಾಡುತ್ತಾ ಕುಳಿತಾಗ, ಮಡದಿ ಏನ್ರೀ ಟ್ರೈನಿಂಗ್ ಹೇಗೆ ಆಯಿತು ಎಂದು ಕೇಳಿದಳು. ನನಗೆ ಆಶ್ಚರ್ಯ ಅವಳಿಗೆ ಹೇಗೆ ತಿಳಿಯಿತು ಎಂದು. ನಾನು ಚೆನ್ನಾಗೆ ಇತ್ತು. ಸ್ವಲ್ಪ ಇಂಗ್ಲೀಶ್ ಉಚ್ಚಾರಣೆ ಅರ್ಥ ಮಾಡಿಕೊಳ್ಳುವುದರಲ್ಲಿ ಮಾತ್ರ ತೊಂದರೆ ಅನ್ನಿಸಿತು ಎಂದು ಹೇಳಿದೆ. ಮತ್ತೆ ನಾನು ಅರ್ಥ ಮಾಡಿಕೊಂಡ ಫ್ರೆಂಚ್ ಮತ್ತು ಇಂಗ್ಲೀಶ್ ಪದಗಳನ್ನು ಹೇಳಿದೆ. ಜೋರಾಗಿ ನಕ್ಕೂ ನಿಮಗೆ ತಿನ್ನುವುದು ಬಿಟ್ಟು ಬೇರೆ ಏನು ನೆನಪು ಆಗಲಿಲ್ಲವೇ ಎಂದು ಹೀಯಾಳಿಸಿದಳು. ಆದರೂ ಅನುಮಾನ ಹಾಗೆ ಇತ್ತು. ನಾನೇ ಯಾವಾಗಲಾದರೂ ಹೇಳಿದ್ದೇನಾ ಟ್ರೈನಿಂಗ್ ವಿಷಯ ಎಂದು ನೆನಪು ಮಾಡಿಕೊಂಡೆ. ಯೋಚಿಸಿದಷ್ಟು ತಲೆ ಬಿಸಿಯಾಗ ತೊಡಗಿತು. ಕಡೆಗೆ ತಾಳ್ಮೆ ಮೀರಿ ಕೇಳಿಯೇ ಬಿಟ್ಟೆ. ನಿನಗೆ ಹೇಗೆ ಗೊತ್ತು, ನನಗೆ ಟ್ರೈನಿಂಗ್ ಇದೆ ಎಂದು ಎಂದು ಕೇಳಿದೆ. ಅದು ಟಾಪ್ ಸೀಕ್ರೆಟ್ ಎಂದು ಅಡುಗೆ ಮನೆಗೆ ಮೊಸರು ತರಲು ಹೊರಟು ಹೋದಳು.

ನಾನು ಮತ್ತೆ ಮತ್ತೆ ಕೇಳಿದ ಮೇಲೆ, ನಿನ್ನೆ ರಾತ್ರಿ ನಿದ್ದೆಯಲ್ಲಿ ಏನೇನೋ ಲೋಚಗುಡುತ್ತಾ ಇದ್ದೀರಿ ಎಂದಳು. ನಾನು ಏನು? ಎಂದು ಕೇಳಿದೆ. ನಾಳೆ ಟ್ರೈನಿಂಗ ಇದೆ ಎಂದು. ಮತ್ತೆ ಲೇಟ್ ಆಗಿ ಬರುತ್ತೇನೆ ಎಂದು ಬೇರೆ ಹೇಳುತ್ತಿದ್ದೀರಿ ಎಂದಳು. ಆಗ ಅರ್ಥ ಆಯಿತು ನನಗೆ ಇವತ್ತಿನ ಅಷ್ಟೋತ್ತರ ಹೇಗೆ ತಪ್ಪಿತು ಎಂದು. ಒಂದೊಂದು ಸಾರಿ ನೀವು ತುಂಬಾ ಲೋಚಗುಡುತ್ತೀರಿ ಅಥವಾ ನಿಮ್ಮ ಗೊರಕೆ ಟ್ರೈನಿನ ಶಬ್ದದ ಹಾಗೆ ಬರುತ್ತೆ ಎಂದಳು. ಇವತ್ತಿನಿಂದ ಹಾಲ್ ನಲ್ಲಿ ಮಲಗಿಕೊಳ್ಳಿ ನಮಗೆ ತುಂಬಾ ಡಿಸ್ಟರ್ಬ್ ಆಗುತ್ತೆ. ನಿನ್ನೆ ಹೀಗೆ ಲೋಚಗುಡುತ್ತಾ ಇದ್ದಾಗ ಮಗ ಬೇರೆ ಎದ್ಡಿದ್ದ ಎಂದು ಬೈದಳು.

ಹೊರಗಡೆ ಹಾಲ್ ಗೆ ಬಂದೆ. ಅಷ್ಟರಲ್ಲಿ ಮಡದಿ ನಾಳೆ ಲೇಟ್ ಆಗುತ್ತಾ? ಎಂದು ಕೇಳಿದಳು. ಇಲ್ಲ ಎಂದೆ. ನಾಳೆ ಆಫೀಸ್ ನಿಂದ ಬರುತ್ತ ತರಕಾರಿ ತೆಗೆದುಕೊಂಡು ಬನ್ನಿ ಎಂದಳು. ನಾನು ಎಷ್ಟು ತಡಕಾಡಿದರು 300 ರೂಪಾಯಿ ಕೆಳಗೆ ಆಗುವುದೇ ಇಲ್ಲ ತರಕಾರಿಗೆ. ಅದಕ್ಕೆ ತರಕಾರಿ ತಂದ ಮೇಲೆ ತಕರಾರು ಇದ್ದೇ ಇರುತ್ತೆ. ಅಷ್ಟರಲ್ಲಿ ಮೊಬೈಲ್ ಜಾಹೀರಾತು ಕಾಣಿಸಿತು ಟಿ ವಿ ಯಲ್ಲಿ. ಈ ಚೈನೀಸ್ ಗಳು ಏನೆಲ್ಲಾ ಕಂಡುಹಿಡಿದಿದ್ದಾರೆ. ಮೊಬೈಲ್, ಟಿ ವಿ ಎಲ್ಲ ಎಲೆಕ್ಟ್ರಾನಿಕ್ ಐಟಮ್ ಗಳನ್ನು, ಹಾಗೆ ತರಕಾರಿ ಕಂಡು ಹಿಡಿದು ಪುಣ್ಯ ಕಟ್ಟಿಕೊಳ್ಳಬಾರದೇ ಎಂದು ಅನ್ನಿಸಿತು.ಚೈನೀಸ್ ತರಕಾರಿ ಬಜಾರ್ ಎಲ್ಲ ಕಡೆ. ಆಗ ಈರುಳ್ಳಿ, ಟೊಮ್ಯಾಟೋ , ಬೀನ್ಸ್ ಎಲ್ಲದಕ್ಕೂ ಒಂದೇ ರೇಟ್ 5 ರೂಪಾಯಿ ಕೆ ಜಿ ಎಂದು ಯೋಚನೆ ಬಂತು. ಆಗ ತರಕಾರಿ ಖರ್ಚು 100 ರೂಪಾಯಿ ದಾಟೊಲ್ಲ ಎಂದು ಯೋಚಿಸಿ ಹಾಗೆ ಒಂದು ಮಂದಹಾಸ ಬೀರಿದೆ.

ಅಷ್ಟರಲ್ಲಿ ಮಡದಿ ಬಂದು ಏಕೆ? ರಾಯರು ಒಬ್ಬರೇ ನಗುತ್ತಾ ಇದ್ದೀರ. ಟ್ರೈನಿಂಗ್ ಕೊಟ್ಟವರು ಗಂಡಸ ಅಥವಾ ಹುಡುಗೀನಾ? ಎಂದು ಕೇಳಿದಳು. ಗಂಡಸೆ ಕಣೇ ಎಂದು ತಡಬಡಿಸಿ ಹೇಳಿದೆ. ಇನ್ನೂ ಸುಮ್ಮನೇ ನಿದ್ದೆ ಮಾಡಿ ಎಂದು ಲೈಟ್ ಆಫ್ ಮಾಡಿ ಹೋದಳು .ಗೋಡೆ ಮೇಲಿರುವ ಹಲ್ಲಿ ಲೋಚಗುಡಿತು. ನಾನು ಲೋಚಗುಡುತ್ತಾ ಕೃಷ್ಣ.. ಕೃಷ್ಣ.. ಎಂದು ಶ್ರೀ ಕೃಷ್ಣ ಪರಮಾತ್ಮನನ್ನು ನೆನೆದು ನಿದ್ದೆಗೆ ಜಾರಿದೆ.

Thursday, February 24, 2011

ತರ್ಲೆ ಮಂಜನ ರಥಸಪ್ತಮಿ....

ನಾನು ಮಂಜನ ಮನೆಗೆ ಹೊರಟಿದ್ದೆ. ಮನೆ ಸಮೀಪಿಸುತ್ತಿದ್ದಂತೆ, ನನಗೆ ಅವರ ಮನೆಗೆ ಹೋಗುತ್ತಿದ್ದೇನೆ ಎಂಬ ಭಾವನೆ ಬರಲಿಲ್ಲ. ಏಕೆಂದರೆ, ಯಾವಾಗಲು ಕೇಳಿಸುವ ನಮ್ಮ ವಟ ಸಾವಿತ್ರಿಯ ಅಥವಾ ನಮ್ಮ ಮಂಜನ ಧ್ವನಿ ಕೇಳಿಸಲಿಲ್ಲ. ಸಾವಿತ್ರಿಗೆ ಮೊದಲೇ ಒಂದು ಬಾಯಿ ಇದ್ದರೂ, ಮದುವೆ ಆದಮೇಲೆ ಇನ್ನೊಂದು ಬಾಯಿ ಸೇರಿ ಸಾವಿತ್ರಿಬಾಯಿ ಆದ ಮೇಲೆ ಇನ್ನೂ ಬಾಯಿ ಜೋರಾಗಿತ್ತು. ಮಂಜ ಮನೆಯಲ್ಲಿ ಇಲ್ಲದಿರಬಹುದಾ ಎಂದು ಕೂಡ ಅನ್ನಿಸಿತು. ವಾಪಸ್ ಹೋಗುವ ಸಮಯದಲ್ಲಿ, ಮಂಜನ ಪಕ್ಕದ ಮನೆಯಲ್ಲಿ ಇರುವ ಸಂತೋಷ ಭೇಟಿಯಾದರು. ಮಂಜನ ಬಗ್ಗೆ ಕೇಳಿದಾಗ ಮಂಜ ಮನೆಯಲ್ಲಿ ಇರುವನೆಂದು ತಿಳಿಯಿತು.

ಮಂಜನ ಮನೆಗೆ ಹೋದೆ. ಮಂಜ ಪೇಪರ್ ಓದುತ್ತಾ ಕುಳಿತಿದ್ದ. ಸಾವಿತ್ರಿ ಇಷ್ಟು ಶಾಂತವಾಗಿದ್ದು ತುಂಬಾ ಖುಷಿ ತಂದಿತು. ಆದರೆ ಏನೋ ನಡೆದಿದೆ ಎನ್ನುವುದು ಮಾತ್ರ ಖಾತ್ರಿ ಅನ್ನಿಸಿತು. ಏನು? ತಂಗ್ಯಮ್ಮಾ ಹೇಗಿದ್ದೀಯ ಎಂದು ಕೇಳಿದೆ. ಇವರನ್ನು ಕಟ್ಟಿಕೊಂಡ ಮೇಲೆ ರಾಮ.... ರಾಮ.... ಎಂದು ಆರಾಮ್ ಆಗಿ ಇರಲಾರದೇ ಆಗುತ್ತೆ? ಎಂದು ಉತ್ತರ ಬಂದಿತು. ಮಂಜನಿಗೆ ಕೇಳಿದೆ ಏನು? ಸಮಾಚಾರ ಎಂದು. ಏನೋ ಗೊತ್ತಿಲ್ಲಪ್ಪಾ? ಮುಂಜಾನೆಯಿಂದ ಏಳು ಬಾರಿ ಇವತ್ತು ರಥಸಪ್ತಮಿ ಕಣ್ರೀ ಎಂದು ಹೇಳಿದ್ದಾಳೆ ಎಂದ. ಕೋಪ ಏತಕ್ಕೆ ಎಂದು ಗೊತ್ತಿಲ್ಲ ಎಂದ. ಮತ್ತೆ ಸ್ವೀಟ್ ಏನು? ಮಾಡಬೇಕು ಎಂದು ಕೇಳಿದಳು. ನಾನು ಏನಾದ್ರೂ ಮಾಡು ಎಂದೆ. ಅದಕ್ಕೆ ಕೋಪದಿಂದ ಏನು? ಬೇಕು ಅದನ್ನು ಹೇಳಿ ಅಂದಳು. ಮತ್ತೆ ನಾನು ಏನಾದ್ರೂ ಮಾಡು, ಹೇಗಿದ್ದರು ನೀನು ತಾನೇ ತಿನ್ನುವವಳು ಎಂದೆ. ಅದಕ್ಕೆ ಇರಬೇಕು ಇಷ್ಟು ಕೋಪ ಅಂದ.

ಸಾವಿತ್ರಿ ಕಾಫೀ ತೆಗೆದುಕೊಂಡು ಬಂದು ನನಗೆ ಮಾತ್ರ ಕೊಟ್ಟಳು. ಮಂಜ ಆಗ ಕಾಫೀ ನನಗೆ ಎಂದ. ಅವಳು ನಿಮಗೆ ಇಲ್ಲ ತುಂಬಾ ಕೂಡಿಬೇಡಿ ಆರೋಗ್ಯ ಹಾಳಾಗುತ್ತೆ ಎಂದು ಕೋಪದಿಂದಲೇ ನುಡಿದಳು. ಆಗ ಮಂಜ ಕಾಫೀಗೆ ಹಾರ್ಟ್ ಅಟ್ಯಾಕ್ ಆಗಲ್ಲ ಗೊತ್ತಾ ಎಂದ. ಕಾಫೀಗೆ ಜೀವ ಇದ್ದರೆ ತಾನೇ ಹಾರ್ಟ್ ಅಟ್ಯಾಕ್ ಆಗೋದು ಎಂದಳು. ನಾನು ನನ್ನ ಬಗ್ಗೆ ಹೇಳಿದ್ದು ಎಂದ ಮಂಜ. ಕಡೆಗೆ ಮಂಜನಿಗೂ ಒಂದು ಕಾಫೀ ಲಭಿಸಿತು. ಮಂಜ ಈ ಪೇಪರ್ ನವರು ದುಬಾರಿ ಎನ್ನುವ ಒಂದು ಕಾಲಮ್ ಪರ್ಮನೆಂಟ ಮಾಡಿದ್ದಾರೆ ಅನ್ನಿಸುತ್ತೆ ಎಂದ. ಮೊನ್ನೆ ಈರುಳ್ಳಿ, ನಿನ್ನೆ ಪೆಟ್ರೋಲ್ ಇವತ್ತು ಹಾಲು ನಾಳೆ ಹಾಳು ಮೂಳು ಹೀಗೆ.. ಎಂದ.

ಅಷ್ಟರಲ್ಲಿ ಮಂಜನ ಮಡದಿ ಸಾವಿತ್ರಿ ಒಳಗಡೆಯಿಂದ ಬಂದು, ನಿಮ್ಮ ಗೆಳಯನಿಗೆ ಊರ ವಿಚಾರ ಎಲ್ಲಾ ಗೊತ್ತಾಗುತ್ತೆ. ಆದರೆ ಮನೆಯವರು ಎಂದರೆ ಅಷ್ಟಕ್ಕೇ ಅಷ್ಟೇ ಎಂದಳು. ಮೊನ್ನೆನೇ ಹೇಳಿದ್ದೆ ರಥಸಪ್ತಮಿ ದಿವಸ ಒಂದು ಸೀರೆ ಕೊಡಿಸಿ ಎಂದು ತನ್ನ ಅಳಲನ್ನು ತೋಡಿಕೊಂಡಳು. ನೋಡಿ ಇವತ್ತು ಹೊಸ ಸೀರೆ ಉಟ್ಟುಕೊಂಡರೆ ವರ್ಷದಲ್ಲಿ ಏಳು ಹೊಸ ಸೀರೆ ಬರುತ್ತವೆ ಎಂದಳು. ನೀನು ಕೊಡಿಸಿದ್ದೀಯ ತಾನೇ, ನಿನ್ನ ಮಡದಿಗೆ ಎಂದು ನನಗೆ ಕೇಳಿದಳು. ನಂಗೆ ದಿಕ್ಕೇ ತೋಚದಾಗಿತ್ತು. ಸಧ್ಯ ಪಕ್ಕದಲ್ಲಿ ಹೆಂಡತಿ ಇರಲಿಲ್ಲ. ಅದೇನೋ ಅಂತಾರಲ್ಲ ದಾರಿಯಲ್ಲಿ ಹೋಗುವ ಮಾರಿ ತಂದು ಮನೆಯಲ್ಲಿ ಇಟ್ಟುಕೊಂಡರು ಅನ್ನುವ ಹಾಗೆ ಆಗಿತ್ತು. ಆಗ ಮಂಜ ಹಾಗಾದರೆ ಇವತ್ತು ನಾನು ದುಡ್ಡು ಖರ್ಚು ಮಾಡಿದರೆ ನನ್ನ ಜೇಬು ವರ್ಷದಲ್ಲಿ ಏಳು ಬಾರಿ ಕತ್ತರಿ ಎಂದ. ನೀನು ಹೇಳುವ ಹಾಗೆ ಇದ್ದರೆ ಇವತ್ತು ಮದುವೆ ಅದವರು ಬೇಜಾನ್ ಜನ ಇದ್ದಾರೆ. ಅವರಿಗೆ ವರ್ಷದಲ್ಲಿ ಏಳು ಬಾರಿ ಮತ್ತೆ ಮದುವೆ ಆಗುತ್ತಾ ಸುಮ್ಮನೇ ಏನೇನೋ ಹೇಳಬೇಡ ಎಂದು ದಬಾಯಿಸಿದ. ಆಮೇಲೆ, ಗೊತ್ತಾ ನೀನು ಹೀಗೆ ಜಗಳಮಾಡಿಕೊಂಡು ಮುನಿಸಿಕೊಂಡು ಕುಳಿತಿದ್ದರೆ, ವರ್ಷದಲ್ಲಿ ಇನ್ನೂ ಏಳು ಪಟ್ಟು ಜ್ಯಾಸ್ತಿ ಜಗಳ ಆಗುತ್ತೆ ಎಂದು ತನ್ನ ಅಪಾರ ಜ್ಞಾನ ಪ್ರದರ್ಶಿಸಿದ.

ಅದು ಬೇರೆ ನಮ್ಮ ಎಂಗೇಜ್ಮೆಂಟ್ ಇವತ್ತೇ ಆಗಿತ್ತು ತಾನೇ...ಹಾಗೆ ನೋಡಿದರೆ ಅದೇ ವರ್ಷದಲ್ಲಿ ನನಗೆ ಏಳು ಬಾರಿ ಆಗಬೇಕಿತ್ತು. ಇನ್ನುವರೆಗೆ ಮತ್ತೊಂದು ಕೂಡ ಆಗಿಲ್ಲ ಎಂದು ನಗುತ್ತಾ ಹೇಳಿದ. ಅದಕ್ಕೆ ಸಪ್ತಪದಿ ತುಳಿದಿರಲ್ಲ ನನ್ನ ಜೊತೆ ಅಂದಳು ಸಾವಿತ್ರಿ. ಅವರಿಬ್ಬರ ಜಗಳಕ್ಕೆ ಸಾಕ್ಷಿ ಎನ್ನುವಂತೆ ನಾನು ಕುಳಿತಿದ್ದೆ. ನಿನ್ನನ್ನು ಮದುವೆ ಮಾಡಿಕೊಳ್ಳಬೇಕಾದರೆ ನಾನು ಪಟ್ಟ ಕಷ್ಟ ಎಷ್ಟು ಗೊತ್ತಾ ಎಂದ. ನಾನು ನನ್ನ ಅಪ್ಪನಿಗೆ, ನನ್ನ ಕೆಲಸ ಮಾಡುವ ಟೀಮ್ ನಲ್ಲಿ ಎಲ್ಲರ ಮದುವೆ ಆಗಿದೆ ಎಂದು ಹೇಳಿದೆ. ಹೌದಾ... ಹಾಗಾದರೆ ನೀನು ನಿನ್ನ ಟೀಮ್ ಚೇಂಜ್ ಮಾಡಿ ಬಿಡು. ಅವರ ನಡುವೆ ಇದ್ದು ಕೆಟ್ಟು ಹೋಗಿ ಬಿಡುತ್ತಿಯ, ನನ್ನ ನೋಡಿದ ಮೇಲೆ ನಿನಗೆ ಅರ್ಥ ಆಗಿರಬೇಕಲ್ಲ ಎಂದರು. ನಾನು ಬೆಪ್ಪನ ಹಾಗೆ ಸುಮ್ಮನೇ ಇರದೆ, ನನ್ನ ಅಪ್ಪನ ಒಪ್ಪಿಸಿ, ನಿನ್ನ ಮದುವೆ ಆದೆ ಅಂದ. ಅಷ್ಟರಲ್ಲಿ ನಗುತ್ತಾ, ತನ್ನ ಬ್ಯಾಗ್ ತೆಗೆದು ಒಂದು ಹೊಸ ಸೀರೆ ಸಾವಿತ್ರಿಗೆ ಕೊಟ್ಟ.

ಅವರಿಬ್ಬರ ಮಾತುಗಳು ಜೋರು ಇದ್ದರೂ, ಮನಸು ಮಾತ್ರ ತಿಳಿ ನೀರು....

Thursday, February 10, 2011

ತರಲೆ ಮಂಜನ ತತ್ವಜ್ಞಾನ ....

ಮೊದ ಮೊದಲು ತುಂಬಾ ಓದುತ್ತಿದ್ದೆ. ಆಮೇಲೆ ಏನಾದರೂ ಬರೆಯಬೇಕು ಎಂಬದು ಮನಸ್ಸಿನಲ್ಲಿ ಹೊಯ್ದಾಡಹತ್ತಿತ್ತು. ಆಮೇಲೆ ಏನು? ಬರೆಯಬೇಕು, ಏನು? ಬರೆದರೆ ಎಲ್ಲರೂ ಸ್ವೀಕರಿಸುತ್ತಾರೆ ಎಂದು ಯೋಚಿಸಹತ್ತಿದೆ. ತತ್ವಜ್ಞಾನದ ಬಗ್ಗೆ ಎಂದು ನಿಶ್ಚಯಿಸಿ ಆಗಿತ್ತು. ಮಂಜನಿಗೆ ಒಮ್ಮೆ ಕೇಳಿ ನೋಡಿದರೆ ಹೇಗೆ ಎಂದು ಯೋಚಿಸಿ ಮಂಜನಿಗೆ ಕೇಳಿದೆ. ಮಂಜ ಈ ತತ್ವಜ್ಞಾನ ಎಂಬುದು ಎಲ್ಲರೂ ಕೊಡುವ ಜ್ಞಾನ, ಬೇಕಾದರೆ ಎಲ್ಲರೂ ತಮ್ಮ.. ತಮ್ಮ.. ಶೈಲಿ ಮಾತ್ರ ಬದಲಿಸಿ ಅರುಹುತ್ತಾರೆ ಅಷ್ಟೇ ಎಂದ. ಒಬ್ಬ ಎಳೆನೀರು ಮಾರುವ ಮನುಷ್ಯ ಕೂಡ ಹೇಳುತ್ತಾನೆ ಅದನ್ನ ಎಂದ. ಅದು ಹೇಗೆ? ಎಂದು ಕೇಳಿದೆ. ಬಾ ತೋರಿಸುತ್ತೇನೆ ಎಂದ.

ಒಬ್ಬ ಎಳೆನೀರು ಮಾರುವವನ ಬಳಿ ಹೋದೆವು. ಮಂಜ ಇದನ್ನು ಕೊಡಿ ಎಂದು ಒಂದು ಎಳೆನೀರು ಕಾಯಿ ತೋರಿಸಿದ. ನಿಮಗೆ ನೀರಾ, ಗಂಜಿನಾ ಹೇಳಿ ನಾನು ಕೊಡುತ್ತೇನೆ ಎಂದ. ಗಂಜಿ ಎಂದ ಮಂಜ. ಮತ್ತೆ ಬಿಡಿ ನಾನು ಕೊಡುತ್ತೇನೆ ಎಂದ ನೀರು ಮಾರುವವ. ಬೇಡ ಇದೆ ಕೊಡಿ ಎಂದ ಮಂಜ. ಎಳೆನೀರು ಮಾರುವವ ನೋಡಿ... ಸ್ವಾಮಿ ಮೇಲೆ ಇರುವ ಸೊಬಗು ನೋಡಿ ತೆಗೆದು ಕೊಂಡರೆ ಆಗಲ್ಲ, ಒಳಗೆ ಚೆನ್ನಾಗಿ ಇದ್ದರೆ ಸಾಕು ಎಂದು ತನ್ನ ಎದೆ ಮುಟ್ಟಿಕೊಂಡು ಹೇಳಿದ. ಆಗ ಮಂಜ ಹೇಳಿದ ಮಾತು ನಿಜ ಅನ್ನಿಸಿತು. ಹೀಗೆ ... ಕಣೋ ಎಲ್ಲರೂ ತಮ್ಮ.. ತಮ್ಮ.. ಜ್ಞಾನವನ್ನು ಭೋಧಿಸುತ್ತಾರೆ ಅಷ್ಟೇ... ಪಂಚರ್ ತಿದ್ದುವ ಮನುಷ್ಯನಿಂದ ಹಿಡಿದು ಕಾರ್ ಮಾರುವ ಮನುಷ್ಯನವರೆಗೆ ಎಂದ. ನೀನು ಬರೆಯಬೇಕು ಎಂದರೆ ಹಾಸ್ಯ ಆರಿಸಿಕೋ, ಇದರಿಂದ ಕೆಲ ಜನರಲ್ಲಿ ಮಂದಹಾಸ ಮೂಡಿದರೆ ಸಾಕು. ನಿನ್ನ ಬರಹ ಸಾರ್ಥಕವಾಗುತ್ತೆ. ತತ್ವಜ್ಞಾನ ಕೊಡೋಕೆ ತುಂಬಾ ಜನ ಇದ್ದಾರೆ. ಸ್ವಾರ್ಥವಿಲ್ಲದೇ ಯಾವುದೇ ತತ್ವಜ್ಞಾನ ಕೂಡ ಇರುವುದಕ್ಕೆ ಸಾಧ್ಯವೇ ಇಲ್ಲ. ಮತ್ತೆ ಕೆಲವರು ತಾವು ಒಳ್ಳೆಯವರು ಎಂದು ತೋರಿಸುವುದಕ್ಕೆ ಇಂತಹ ತತ್ವಜ್ಞಾನ ಪ್ರದರ್ಶಿಸುತ್ತಾರೆ. ಈ ಫಿಲಾಸಫೀ ಯಾವತ್ತೂ ಫಿಲ್ ಆಗದ ವಸ್ತು.

ಮತ್ತೆ ನನ್ನ ಪಕ್ಕದ ಮನೆಯಲ್ಲಿ ಇರುವ ಒಬ್ಬ ಹಿರಿಯರು ತತ್ವ ಜ್ಞಾನ ಹೇಳುತ್ತಿದ್ದರು. ಮತ್ತು ಪ್ರತಿ ಬಾರಿ ತಮ್ಮ ಅಕ್ಷರಗಳ ಬಗ್ಗೆ ವರ್ಣನೆ ಕೂಡ ಮಾಡುತ್ತಿದ್ದರು. ನಮಗೂ ಅಕ್ಷರ ಗುಂಡಾಗಿ ಬರೆಯಿರಿ ಎಂದು ಹೇಳಿ ರಾತ್ರಿ ಗುಂಡು ಹಾಕಿ ಕುಳಿತಿರುತ್ತಿದ್ದರು. ಉಪದೇಶ,ವೇದಾಂತ, ತತ್ವಜ್ಞಾನ ಎಲ್ಲರೂ ಪರಿಪಾಲಿಸಿದರೆ ಎಲ್ಲರೂ ದೊಡ್ಡವರಾಗಿಯೇ ಇರುತ್ತಾರೆ ಅಲ್ಲವೇ, ಚಿಕ್ಕ ಮನುಜರು ಕಡಿಮೆ ಆಗಿಬಿಡುತ್ತಾರೆ. ಆಮೇಲೆ ಎಲ್ಲರಿಗೂ ಮ್ಯಾನೇಜರ್ ಲೆವೆಲ್ ನಲ್ಲೇ ಇರುತ್ತಾರೆ. ಆದರೆ ಕೆಳಗೆ ಕೆಲಸ ಮಾಡುವವರು ಯಾರು? ಎಂದು ಪ್ರಶ್ನೆ ಹಾಕಿದ.

ಒಂದು ಕತೆ ಹೇಳುತ್ತೇನೆ ಕೇಳು. ಆಚಾರ್ಯ ಹೇಳುವುದಕ್ಕೆ ಮತ್ತು ಬದ್ನೆಕಾಯಿ ತಿನ್ನುವುದಕ್ಕೆ ಇದು ಸರಿಯಾಗಿ ಹೊಂದುತ್ತದೆ ಎಂದ. ಒಮ್ಮೆ ಒಬ್ಬ ಸಂಪ್ರದಾಯಸ್ತರ ಮನೆಯಲ್ಲಿ ಹಿರಿಯರು ತೀರಿಕೊಂಡಿದ್ದರು. ಅವರ ಪಿಂಡ ಇಟ್ಟು ಕಾಯುತ್ತಾ ನಿಂತಿದ್ದರು. ಯಾವುದೇ ಕಾಗೆ ಬಂದು ಮುಟ್ಟಲಿಲ್ಲ. ತುಂಬಾ ಹೊತ್ತು ಕಾದರೂ ಆಗಲೂ ಯಾವುದೇ ಕಾಗೆ ಮೂಸಲ್ಲಿಲ್ಲ. ಇನ್ನೂ ಕಾದರೆ ಆಗುವುದಿಲ್ಲ, ನನಗೆ ಶುಗರ್ ಬೇರೆ ಇದೆ ಎಂದು, ಅವರ ಮನೆಯಲ್ಲಿ ಇರುವ ಒಬ್ಬ ಹೊಟೇಲಿನಿಂದ ಚಿಕನ್ ತಂದು ಪಿಂಡದ ಪಕ್ಕ ಎಸೆದ. ಅಷ್ಟೇ... ಕಾಗೆಗಳ ದಂಡೆ ಬಂದು, ಎಲ್ಲವನ್ನು ತಿಂದು ಹೋಗಿತ್ತು. ಪಾಪ ತಮ್ಮ ಹೊಟ್ಟೆ ಸಲುವಾಗಿ ಸತ್ತವರ ಆಸೆ ಅವರಿಗೆ ಅಷ್ಟಕ್ಕೇ ಅಷ್ಟೇ ಎಂದ.

ನೋಡು ನಾವೆಲ್ಲರೂ ತೂತು ಮಡಿಕೆ ಇದ್ದ ಹಾಗೆ ಎಂದ. ನನಗೆ ಅರ್ಥವಾಗಲಿಲ್ಲ. ಹಾಗೆ ಅಂದರೆ ಎಂದೆ. ಮತ್ತೆ ಅದರ ಕತೆ ಶುರು ಮಾಡಿದ. ನೋಡು ಒಬ್ಬ ಮನುಷ್ಯನ ಹತ್ತಿರ ಎರಡು ಮಡಿಕೆಗಳು ಇದ್ದವು. ಒಂದು ಮಡಿಕೆ ಚೆನ್ನಾಗಿ ಇತ್ತು. ಇನ್ನೊಂದು ಸ್ವಲ್ಪ ತೂತು ಇತ್ತು. ದಿನಾಲೂ ಎರಡನ್ನೂ ತೆಗೆದುಕೊಂಡು ಹೋಗಿ ನೀರು ತುಂಬುತ್ತಿದ್ದ. ಅದನ್ನು ನೀರು ತುಂಬುವ ಸಮಯದಲ್ಲಿ ತೂತು ಇರುವ ಮಡಿಕೆ ಅರ್ಧ ಅಗಿರುತಿತ್ತು. ಅದನ್ನು ನೋಡಿದ ಅದನ್ನು ನೋಡಿದ ಅವನ ಮಡದಿ ಇದನ್ನು ಒಗೆದು ಬಿಡಬಾರದೇ ಎಂಬ ಸಲಹೆ ಇಟ್ಟಳು. ಅದಕ್ಕೆ ಅವನು ಅವನ ಹೆಂಡತಿಯನ್ನು ಕರೆದುಕೊಂಡು ಹೋಗಿ, ತನ್ನ ಬಾವಿಯಿಂದ ಮನೆಯವರೆಗೂ ಇರುವ ಹೂವಿನ ಕುಂಡಗಳನ್ನು ತೋರಿಸಿ, ಇವೆಲ್ಲವೂ ಈ ತೂತುಮಡಿಕೆಯ ಉಪಕಾರದಿಂದ ಬೆಳೆದ ಹೂವಿನ ಗಿಡಗಳು ಮತ್ತು ದಿನಾಲೂ ಇವುಗಳನ್ನು ಕಿತ್ತು ದೇವರಿಗೆ ಮತ್ತು ನಿನಗೆ ಕೊಡುತ್ತೇನೆ. ಅದರ ಸೋರುವಿಕೆಯ ನೀರು ಈ ಗಿಡಗಳಿಗೆ ಆಹಾರವಾಗುತ್ತೆ. ಮತ್ತು ನನ್ನ ಕೆಲಸ ಕೂಡ ತಪ್ಪುತ್ತೆ. ಈಗ ಹೇಳು ಇದನ್ನು ನಾನು ಬಿಸಾಡಲೆ ಎಂದು ಕೇಳಿದ. ಆಗ ಹೆಂಡತಿ ತನ್ನ ತಪ್ಪು ಅರಿವಾಗಿ ಬೇಡ.. ಬೇಡ... ಎಂದಳು. ಹೀಗೆ, ಎಲ್ಲರಲ್ಲಿಯೂ ಕೆಲ ದೋಷಗಳು ಸಹಜವಾಗಿಯೇ ಇರುತ್ತವೆ. ಅವುಗಳನ್ನು ತಿದ್ದುವುದು ಅಥವಾ ಕಡೆಗಣಿಸುವುದು ಬಿಟ್ಟು, ಅವುಗಳನ್ನು ಹಾಗೆಯೇ ಸ್ವೀಕರಿಸಿ, ಅವುಗಳ ಉಪಯೋಗ ಪಡೆದುಕೊಳ್ಳಬೇಕು....ಇಷ್ಟೆಲ್ಲಾ ಹೇಳಿದ್ದೇನೆ, ನೀನು ಬೇಕಾದರೆ ತತ್ವಜ್ಞಾನಿ ಆಗು ಎಂದು ಹೀಯಾಳಿಸಿದ.

ಮತ್ತೆ ನೀನು ಈಗ ಏನು? ಮಾಡಿದೆ ಎಂದು ಕೇಳಿದೆ. ಲೇ ಗುರುವಿಗೆ ತಿರುಮಂತ್ರನಾ ಎಂದು ದಬಾಯಿಸಿದ. ನಾನು ನೀಡಿದ್ದು ಬರೀ ಸಲಹೆ ಮಾತ್ರ. ಉಪದೇಶ ಅಥವಾ ತತ್ವಜ್ಞಾನ ಅಲ್ಲ ಎಂದ. ನಾನು ಏನು? ಬರೆಯಬೇಕು ಎಂದು ತಲೆಯಲ್ಲಿ ಬರೆ ಎಳೆದ ಹಾಗೆ ಹೇಳಿದ್ದ. ಅದರ ಕಲೆ(ಎರಡು ಅರ್ಥದಲ್ಲಿ ಸ್ವೀಕರಿಸಿ) ಈಗಲೂ ಇದೆ ಎಂದರೆ ಅತಿಶಯೋಕ್ತಿ ಆಗಲಾರದು.

ಅವನು ಹೇಳಿದ ಹಾಗೇನೆ ಮಾಡಿದೆ. ಮೊದಮೊದಲು ಲೇಖನ ಬರೆದ ಮೇಲೆ, ಅವನಿಗೆ ಫೋನ್ ಮಾಡಿ ಹೇಳುತ್ತಿದ್ದೆ. ಈ ಪ್ಯಾರಾದಲ್ಲಿ ಇರುವ ಪಂಚ್ ನೋಡು ಎಂದು ಹೇಳಿ ತಲೆ ತಿನ್ನುತ್ತಿದ್ದೆ. ಈಗ ನನ್ನ ಫೋನ್ ಬಂದರೆ ಎತ್ತುವುದೇ ಇಲ್ಲ ಆಸಾಮಿ. ಕೆಲವೊಮ್ಮೆ ಬ್ಯೂಸಿಯಾಗಿ ಇದ್ದೇನೆ, ಆಮೇಲೆ ಕಾಲ್ ಮಾಡುತ್ತೇನೆ ಎಂದು ಹೇಳಿ ಕಾಲಿಗೆ ಬುದ್ದಿ ಹೇಳುತ್ತಾನೆ.

-----------------
ಮಂಜನ ಹನಿ

ಮಂಜ ಬಾಡಿಗೆಗೆಎಂದು ವಿಜಯನಗರದಲ್ಲಿ ಇದ್ದ. ಒಮ್ಮೆ ಅವರ ಮನೆ ಮಾಲೀಕರು ಬಂದರು.
ಮಾಲೀಕರು - ರೀ ಮಂಜುನಾಥ, ನೀವು ಬಂದು ಒಂದು ವರ್ಷ ಆಯಿತು ಅಲ್ಲವಾ?
ಮಂಜ - ಹೌದು ಸರ್...
ಮಾಲೀಕರು - ನೋಡಿ ಈ ತಿಂಗಳಿಂದ ಎರಡು ನೂರು ಬಾಡಿಗೆ ಎಕ್ಸ್‌ಟ್ರಾ ಕೊಡಿ.
ಮಂಜ - ಸರ್, ನೋಡಿ ನಾನು ಒಬ್ಬನೇ ಇರೋದು ದಯ ತೋರಿ ಎಂದು ಗೋಳಾಡಿದ.
ಮಾಲೀಕರು - ಪಾಪ ಹೌದಲ್ಲವಾ, ನೀನು ಒಬ್ಬನೇ ಇದ್ದೀಯ ಅಂತ ನನಗೆ ಗೊತ್ತು. ಆಯಿತು, ನನ್ನ ಹೆಂಡ್ತೀನ ಕೇಳಿ ನೋಡ್ತೀನಿ, ಅವಳು ಒಪ್ಪಿದರೆ, ವಿಚಾರ ಮಾಡೋಣ.
ಮಂಜ ಸುಸ್ತೋ ಸುಸ್ತು ....