Friday, July 2, 2010

ತರ್ಲೆ ಮಂ(ಗ)ಜನ (ನವ) ಗೃಹ ಪ್ರವೇಶ ....

"ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು" ಎಂಬ ಗಾದೆ ಇದೆ. ಹಾಗೆ ನಮ್ಮ ಮಂಜನಿಗೂ ಒಂದು ಮನೆ ತೆಗೆದು ಕೊಳ್ಳಬೇಕೆಂಬ ಆಸೆ ಇತ್ತು. ನಾನು ಅವನಿಗೆ ಬೆಂಗಳೋರಿನಲ್ಲೇ ಒಂದು ಫ್ಲಾಟ್ ತೆಗೆದುಕೋ ಎಂದು ಹೇಳಿದೆ. ಅದಕ್ಕೆ ನಮ್ಮ ಮಂಜ ಅದನ್ನು ತೆಗೆದು ಕೊಂಡರೆ ಅದು ನಮ್ಮ ಸುಬ್ಬನ ಫ್ಲೈಟ್ (2012 ರ ಸುಬ್ಬನ ಫ್ಲೈಟ್.... ) ಹಾಗೆ ಆಕಾಶದಲ್ಲಿ ನೇತ ನಾಡೂವದು ಬೇಡ ಎಂದು ಕಡೆಗೂ ಹುಬ್ಬಳ್ಳಿಯಲ್ಲಿ ಒಂದು ಮನೆ ಖರೀದಿ ಮಾಡಿದ. ಅದಕ್ಕೆ ನಮ್ಮ ಸುಬ್ಬ ಮಂಜನಿಗೆ ಹುಂಬ ಕಡೆಗೂ ಹುಂಬ ಹಳ್ಳಿಲಿ ಮನೆ ಖರೀದಿ ಮಾಡಿದ ಎಂದು ಸತಾಯಿಸುತ್ತಿದ್ದ. ಲೇ ಅದು ಹುಂಬ ಹಳ್ಳಿ ಅಲ್ಲ ಎಂದರೆ, ನಮ್ಮ ಸುಬ್ಬ ಮೊದಲು ಅದು ಹೂ ಬಳ್ಳಿ ಅಂತ ಇತ್ತು. ಈಗ ನಮ್ಮ ಮಂಜ ಹೋದ ಮೇಲೆ ಅದು ಹುಂಬ ಹಳ್ಳೀನೇ ಎಂದ.

ಮನೆಯ ಇಂಟೀರಿಯರ್ ಸಲುವಾಗಿ ಒಬ್ಬ ತಮಿಳು ಮನುಷ್ಯನನ್ನು ನೇಮಕ ಮಾಡಿದ್ದ. ಮಂಜನಿಗೆ ತಮಿಳು ಅರ್ಥ ಆಗುತ್ತಿರಲಿಲ್ಲ. ಅವನಿಗೆ ಕನ್ನಡ ಹೀಗಾಗಿ ಇಬ್ಬರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಆ ತಮಿಳು ಮನುಷ್ಯನಿಗೆ ಅಷ್ಟು ಚೆನ್ನಾಗಿ ಹಿಂದಿ ಬರುತ್ತಿರಲಿಲ್ಲ. ಅವನು ಸ್ವಲ್ಪ ಹಿಂದಿ ತನ್ನ ಮಗಳಿಂದ ಕಲಿತಿದ್ದ. ಮಂಜುಗೆ ಧಾರವಾಡಕ್ಕೆ ಯಾವಾಗ ಬರುತ್ತೀರಿ ಎಂದು ಕೇಳಲು "ಆಪ ಧಾರವಾಡ ಕಾಬಾ ಆ ರಹಿ ಹೇ" ಎಂದು ಕೇಳುತ್ತಿದ್ದ. ಅವನು ಎಲ್ಲದಕ್ಕೂ ಆಮಾ ಆಮಾ ಎನ್ನುತಿದ್ದ. ಇದೇನು ನನಗು ಅಮ್ಮ ಅಮ್ಮ ಅನ್ನುತ್ತಾನೆ ಎಂದು ಬಂದು ಮಂಜ ನನಗೆ ಕೇಳಿದ್ದ. ಅದು ಆಮಾ ಎಂದರೆ "ಹೌದಾ" ಎಂದ ಹಾಗೆ ಎಂದಾಗ ಬಿದ್ದು ಬಿದ್ದು ನಕ್ಕಿದ್ದ ಮಂಜ.

ಒಂದು ದಿನ ಮಂಜ ಅವನ ಕೆಲಸ ನೋಡಲು ಧಾರವಾಡಕ್ಕೆ ಬಂದ. ಅವನಿಗೆ ಎಲ್ಲ ಕಪಾಟುಗಳು ಟೀಕ್ ವುಡ್ ನಿಂದ ಮಾಡಿದ್ದು ಬೇಕಾಗಿತ್ತು. ಮಂಜ ಹೋದಾಗ ಆ ತಮಿಳು ಮನುಷ್ಯನ ಜೊತೆ ಕೆಲಸಕ್ಕೆ ಅವನ ಹೆಂಡತಿನೂ ಬಂದಿದ್ದಳು. ಆಗ ಮಂಜ "ಎ ಟೀಕ್ ನಾಹಿ ಹೈ" ಎಂದು ಆ ಕಟ್ಟಿಗೆ ಟೀಕ್ ವುಡ್ ನಿಂದ ಮಾಡಿದ್ದು ಅಲ್ಲ ಎಂದು ಕೇಳಿದ್ದಾನೆ. ಆಗ ಆ ಮನುಷ್ಯ "ಎ ಠಿಕ ಹೈ" (ಚೆನ್ನಾಗಿದೆ) ಎಂದಿದ್ದಾನೆ. ಹೀಗೆ ಇಬ್ಬರು ಟೀಕ್ ನಾಹಿ - ಠಿಕ ಎಂದು ತಲೆ ಜಜ್ಜಿಕೊಂಡಿದ್ದಾರೆ. ಕಡೆಗೆ ಮಂಜ ಎ ಲಕಡಿ ಠಿಕ ನಾಹಿ ಹೈ ಎಂದ. ಅಷ್ಟೇ ಮಂಜನ ಕಪಾಳಿಗೆ ಆ ತಮಿಳು ಮನುಷ್ಯ ಎರಡು ಎಟು ಕೊಟ್ಟುಬಿಟ್ಟ. ಏಕೆ ಎಂದು ಕೇಳಿದರೆ ತುಮ್ "ಮೇರೆ ಬೀವಿಕೋ ಐಸಾ ಬೊಲ್ತಿ ಹೈ" (ನೀನು ನನ್ನ ಹೆಂಡತಿಗೆ ಹೀಗೆ ಹೇಳುತ್ತಿ ). ಮಂಜ ತಲೆ ಜಜ್ಜಿ ಕೊಳ್ಳುತ್ತಿದ್ದ. "ಮೈ ಕ್ಯಾ ಕಹಾ"( ನಾನೇನು ಹೇಳಿದೆ ಎಂದ). ಆಪ ಮೇರೆ ಬೀವಿ ಕೋ ಲಡಕಿ ಅಚ್ಚಾ ನಾಹಿ ಬೋತಿ ಹೈ" ( ನೀವು ನನ್ನ ಹೆಂಡತಿಗೆ ಹುಡುಗಿ ಚೆನ್ನಾಗಿಲ್ಲ ಎಂದಿರಲ್ಲ ) ಎಂದಾಗ ಮಂಜನಿಗೆ ತಿಳಿಯಿತು. ಕಡೆಗೆ ಅವನಿಗೆ ಒಂದು ದೊಡ್ಡ ನಮಸ್ಕಾರ ಮಾಡಿ, ಅವನ ಅಕೌಂಟ್ ಕ್ಲಿಯರ್ ಮಾಡಿ, ಅವನಿಗೆ ಮನೆಗೆ ಕಳುಹಿಸಿ ಬೇರೆ ಕನ್ನಡದ ಬಡಿಗ(ಬಡಿಗಿ) ನನ್ನು ಗೊತ್ತು ಮಾಡಿಕೊಂಡು ಕೆಲಸ ಪೂರ್ತಿ ಮಾಡಿಸಿ ಮುಗಿಸಿದ.ಅದರಲ್ಲೋ ಒಂದು ಗದ್ದಲ ಮಾಡಿದ್ದ ಮಂಜ ಆಕಸ್ಮಾತಾಗಿ ಅವನಿಗೆ "ಗೌಡ್ರೇ" ಇನ್ನೂ ಆಗಿಲ್ಲ ಕೆಲಸ ಎಂದಿದ್ದ. ಆಗ ನಮ್ಮ ಅಪ್ಪ,ಅಮ್ಮ ನನಗೆ ರಂಜೀತ ಎಂದು ಹೆಸರಿಟ್ಟಿದ್ದಾರೆ ನೀವೇನೂ ನನಗೆ ಗೌಡ್ರೇ ಎನ್ನುವದೆ, ತುಂಬಾ ಮಂಡೆ ಬಿಸಿ ಮಾರಾಯ್ರೆ ಎಂದು ತಲೆ ತಿಂದಿದ್ದ. ಆಗಿನಿಂದ ಅವನನ್ನು ರಂಜೀತ ಸರ್ ಎಂದು ಸಂಭೋದಿಸುತ್ತಿದ್ದ.

ಆಗ ಮಂಜ ಕಡೆಗೋ ಎಲ್ಲ ಕೆಲಸ ಮುಗಿದ ಮೇಲೆ ಗೃಹ ಪ್ರವೇಶದ ಮುಹೂರ್ತ ಫಿಕ್ಸ್ ಆಯಿತು. ಮಂಜನ ಮಡದಿ ಅವನಿಗೆ ಕಾಯಿ-ಪಲ್ಯ ಡ್ರೈ ಫ್ರೂಟ್ಸ್ ಮತ್ತು ನಟ್ಸ್ ತೆಗೆದುಕೊಂಡು ಬನ್ನಿ ಎಂದು ಹೇಳಿದಳು. ಆಗ ಮಂಜ ಕಾಯಿ -ಪಲ್ಯ, ಡ್ರೈ ಫ್ರೂಟ್ಸ್, ತೆಗೆದು ಕೊಂಡು ಬರುವೆ ಆದರೆ, ನಟ್ಸ್ ಬೇಕಾದರೆ ನನ್ನ ಬೈಕ್ ಚಕ್ರದಲ್ಲಿ ಇವೆ ತೆಗೆದು ಕೋ ಎಂದು ತಮಾಷೆ ಮಾಡಿದ. ಮಂಜನ ಮಡದಿ ಮಂಗಳಾರತಿ ಮಾಡಿ ಪೇಟೆಗೆ ಕಳುಹಿಸಿದಳು.

ಕಡೆಗೆ ಕಾಯಿ ಪಲ್ಯ ತೆಗೆದು ಕೊಳ್ಳುವ ಕಡೆ ಹೋಗಿ ಚವಳಿ(ಜವಳಿ) ಕಾಯಿಗೆ ಗೋರೇ ಕಾಯಿ ಎಂದು ಬೆಂಗಳೂರು ಭಾಷೆಯಲ್ಲಿ ರೇಟ್ ಕೇಳಿದ. ಆಗ ಅವಳು ಇವನನ್ನು ಯಾವದೋ ಆದಿ ಮಾನವ ಬಂದಿದ್ದಾನೆ ಎನ್ನುವ ಹಾಗೆ ಮೇಲಿಂದ ಕೆಳಕ್ಕೆ ನೋಡಿದಳು. ಮತ್ತೆ ರೇಟ್ ಹೇಳಿದ ಮೇಲೆ "ಇಷ್ಟೇನಾ ರೇಟ್ ಬೇಡ ಎಂದು" ಮುಂದೆ ಹೋದ. ಆಗ ಆ ಮುದುಕಿ "ಎ ಮೂದೇವಿ ಎಂದು" ಬೈದು ಬಿಟ್ಟಳು.

ತರಲೆ ಮಾಡುತ್ತ ಗೃಹ ಪ್ರವೇಶದ ದಿನ ಊಟ ಮಾಡುವಾಗ "ಹೆಂಗಸರು ಚಿತ್ರಾವತಿ ಇಡಬೇಡಿ(ಅಂದರೆ ಊಟ ಚೆಲ್ಲಬೇಡಿ)" ಎಂದಾಗ ಎಲ್ಲ ಹೆಂಗಸರು ಸೇರಿ ಮಂಜನನ್ನು ತರಾಟೆಗೆ ತೆಗೆದುಕೊಂಡರು. ಆಗ ಮಂಜನಿಗೆ ಅವನ ಹೆಂಡತಿ ನೀವು ಸುಮ್ಮನೇ ಇರುವದು ಬಿಟ್ಟು "ಉಡದಾರ ತೆಗೆದು ಉರ್ಲು ಹಾಕಿ ಕೊಳ್ಳುವವರು" ನೀವು ಎಂದು ಬೈದು ಬಿಟ್ಟಿದ್ದಳು.

ಮಂಜನಿಗೆ ತನ್ನ ಗೃಹ ಪ್ರವೇಶ ಇದೆಯೋ ಅಥವಾ ತನ್ನ ಜೀವನದಲ್ಲೇ ನವ ಗೃಹ ಪ್ರವೇಶ ಆಗಿದೆಯೋ ತಿಳಿಯದಾಗಿತ್ತು.....

Friday, June 25, 2010

ವಟ ..ವಟ... ಸಾವಿತ್ರಿ

ಮಂಜ ತುಂಬಾ ವಧುಗಳನ್ನು ನೋಡಿದ್ದ. ಕೆಲವು ವಧುಗಳು ಇವನ ತರ್ಲೆ ಪ್ರಶ್ನೆಗಳಿಂದ ಇವನನ್ನು ವರಿಸಲಿಲ್ಲ. ಮತ್ತೆ ಕೆಲವನ್ನು ಇವನೇ ಬೇಡವೆಂದ. ಆದರೆ ಇವನು ಮಾತ್ರ ಹೆಣ್ಣು ನೋಡುವ ಶಾಸ್ತ್ರ ಮಾತ್ರ ಬಿಟ್ಟಿರಲಿಲ್ಲ. ಮತ್ತೊಂದು ದಿನ ಹೆಣ್ಣು ನೋಡಲು ಹೋಗಿದ್ದ. ಆ ದಿನ ಅವನಿಗೆ ಹೆಣ್ಣಿಗೆ ಏನು ಪ್ರಶ್ನೆ ಕೇಳಬೇಡ ಎಂದು ಅವರಪ್ಪ ತಕೀತ ಮಾಡಿದ್ದರು. ಎಲ್ಲರೂ ಹೆಣ್ಣಿನ ಮನೆಗೆ ಹೋದೆವು. ಮಂಜ ಮನೆ ಮುಂದೆ ನಿಂತ ಒಂದು ಕಾರ್ ಮೇಲೆ ಬರೆದ ಎನ್ನುವ ಸಂತೂವನ್ನು ಜಂತು ಎಂದು ಓದಿದ.ಆಗ ಅವರಪ್ಪ ಮತ್ತೆ ಅವನಿಗೆ ಎಚ್ಚರಿಸಿದರು.

ಮನೆ ಒಳಗೆ ಹೋದೆವು. ಮತ್ತೆ ವಧು ಪರೀಕ್ಷೆ ಶುರು ಆಯಿತು. ಮಂಜ ನಿನ್ನ ಹೆಸರು ಎಂದು ಕೇಳಿದ. ಆಗ ವಧು ಸಾವಿತ್ರಿ ಎಂದಳು. ನೀನು ಕಲೆತಿದ್ದು ಎಂದಾಗ, ನಾನು ಮೊದಲು ೭ ಪಬ್ಲಿಕ್ , ೧೦ ಪಬ್ಲಿಕ್ , ಪೀಯೂಸಿ , ಬೀ ಕಾಮ್ , ಎಮ್ ಕಾಮ್, ಕಂಪ್ಯೂಟರ್ ಕೋರ್ಸ್, ಅಡುಗೆ ಕ್ಲಾಸ್ , ಮೇಹಂದಿ ಕ್ಲಾಸ್ ... ಹೀಗೆ ಶುರು ಹಚ್ಚಿದಳು. ನಾನು ಮತ್ತೆ ಮಂಜ ಮುಖ ಮುಖ ನೋಡುತ್ತಾ ಕುಳಿತು ಬಿಟ್ಟೆವು. ನ‌ನ‌ಗೆ ನಗು ಬಂದರು ಸುಮ್ಮನೇ ಕುಳಿತಿದ್ದೆ. ಹಾಡು ಎನ್ನುತ್ತಿದ್ದಂತೆ ಬರೋಬ್ಬರಿ ೨ ಸುಗಮ ಸಂಗೀತ, ೨ ದಾಸರ ಪದಗಳು, ೨ ಸಿನಿಮಾ ಹಾಡು, ಇನ್ನೂ ತಡೆಯದೇ ಇದ್ದರೆ, ೨ ರಾಕ್ ಸಾಂಗ್ ಕೂಡ ಹೇಳುತಿದ್ದಳು. ಸಧ್ಯ ಎಲ್ಲಿ ಮಂಜ ಡ್ಯಾನ್ಸ್ ಎಂದು ಹೇಳುತ್ತಾನೆ ಎಂದು ಹೆದರಿಕೆ ಬರುತಿತ್ತು. ಮತ್ತೆ ಓದಲು ಪೇಪರ್ ಕೊಟ್ಟು ಓದಲು ಹೇಳಿದರೆ ಅನಾಮತ್ತಾಗಿ ೨ ಪೇಜ್ ಓದಿ ಮುಗಿಸಿದಳು. ಆಗ ಅವರಪ್ಪ ಹುಡುಗಿ ತುಂಬಾ ಚೆನ್ನಾಗಿ ಇದ್ದಾಳೆ ಎಂದರು. ಮಂಜ ಅವರಪ್ಪನ ಮುಖ ನೋಡಿ ಸನ್ನೆ ಮಾಡಿದ ಅವರಪ್ಪ ಅವನಿಗೆ ಕೆಂಗಣ್ಣಿನಿಂದ ನೋಡಿದರು. ಕಡೆಗೂ ಪಾಲಿಗೆ ಬಂದಿದ್ದೆ ಪಂಚಾಮೃತ ಎಂದು ಮಂಜ ಒಪ್ಪಿಬಿಟ್ಟ. ಕಡೆಗೂ ಮಂಜನ ಮದುವೆ ನೆರವೇರಿತು.

ನನ್ನ ಮಡದಿ ತನ್ನ ಗೆಳತಿಯ ಮನೆಗೆ ಎರಡು ದಿವಸ ಹೋಗಿದ್ದರಿಂದ. ನನಗೆ ಮಂಜನ ಮನೆಯ ಆಹ್ವಾನ ಬಂದಿತ್ತು. ಬೇಡ ಎಂದರು ಮಂಜನ ಮಡದಿ ಸಾವಿತ್ರಿ ಕೇಳಬೇಕಲ್ಲ...

ಮಂಜಾನೆ ಎದ್ದ ಕೂಡಲೇ ಸಾವಿತ್ರಿ "ರೀ ನಾಳೆ ಹಬ್ಬ ನೇರಳೆ ಹಣ್ಣು ತೆಗೆದುಕೊಂಡು ಬನ್ನಿ" ಎಂದಳು ಮಂಜನಿಗೆ. ಮಂಜನಿಗೆ ಘಾಬರಿ ಆಯಿತು. ಏನೇ ಇದು ತಿಂಗಳಲ್ಲಿ ಎರಡು-ಮೂರು ಹಬ್ಬ ಎಂದ. ನೀವು ತರುತ್ತೀರೋ ಇಲ್ಲವೋ ಅದು ಹೇಳಿ ಎಂದಳು. ಹಾಗೆ ಜೇಬು ಮುಟ್ಟಿ ನೋಡಿ ಕೊಂಡ. ನಿನ್ನೆ ಬ್ರಿಗೇಡ್ ರೋಡ್ ನಲ್ಲಿ ಏನೋ ಬೇಕೋ ಎಲ್ಲವೂ ಸಿಗುತ್ತೆ ಎಂದು ಭಾಷಣ ಬಿಗಿದಿದ್ದ. ಹಾಗೆ ಹೇಳಿದ್ದೆ ಮಹಾ ಅಪರಾಧ ಆಯಿತು ಎಂದು ಸುಮ್ಮನೇ, ಆಯಿತು ಎಂದು ಮರು ಮಾತನಾಡದೇ ಮಗನಿಗೆ ಶಾಲೆ ಕಳುಹಿಸುವ ಜವಾಬ್ದಾರಿ ಕೂಡ ಅವನದೇ ಇದ್ದಿದ್ದರಿಂದ ಅವನನ್ನು ಶಾಲೆಗೆ ಬಿಟ್ಟು, ಆಫೀಸ್ ಹೊರಟ.

ನೇರಳೆ ಹಣ್ಣು ಎಲ್ಲಿ ಹುಡುಕುವದು ಎಂದು ಯೋಚಿಸುತ್ತಾ, ಬೈಕ್ ಓಡಿಸುತ್ತಿದ್ದ. ಮುಂದೆ ಬಂದ ನೇರಳೆ ಕಲರ್ ಒಮ್ನಿ ಕಾರ್ ಗೆ ಗುದ್ದಿ ಬಿಟ್ಟಿದ್ದ. ಮಂಜನಿಗೆ ಏನು ಆಗಿರಲಿಲ್ಲ. ಸಾರಿ ಹೇಳಿ ಹಾಗೆ ಸಾವಕಾಶವಾಗಿ ಆಫೀಸ್ ತಲುಪಿದ. ಆಫೀಸ್ ನಲ್ಲಿ ಕಾರ್ ಗೆ ಗುದಿದ್ದ ಸಮಾಚಾರ ನಟರಾಜನಿಗೆ ಹೇಳಿದ. "ರೀ ನನಗೆ ಒಂದು ಉಪಾಯ ಗೊತ್ತು. ನೀವು ಯಾರಿಗೂ ಗುದ್ದುವದಿಲ್ಲ, ನಿಮಗೆ ಯಾರು ಗುದ್ದುವದಿಲ್ಲ ಅಂತಹ ಉಪಾಯ ಎಂದರು. ಮಂಜನಿಗೆ ಅದನ್ನು ಕೇಳಿ ತುಂಬಾ ಸಂತೋಷದಿಂದ ಏನು? ಎಂದು ಕೇಳಿದಾಗ . ನೀವು ಸರಿಯಾದ ರೋಡು ಬಿಟ್ಟು ತೆಗ್ಗುಗಳಲ್ಲಿ ಮಾತ್ರ ಗಾಡಿ ಓಡಿಸಿ ಎಂದರು. ನಿಮ್ಮ ಹಿಂದೆ ಯಾರು ಬರುವದಿಲ್ಲ ಮತ್ತೆ ನಿಮ್ಮ ಮುಂದೆ ಯಾರು ಇರುವದಿಲ್ಲ ಎಂದರು. ಹಾಗೆ ಓಡಿಸುತ್ತಾ ದೊಡ್ಡ ಒಂದು ಖೆಡ್ಡದಲ್ಲಿ ಓಡಿಸಿದರೆ ನಾನು ಆಫೀಸ್ ಗೆ ಬರುವದಿಲ್ಲ ಎಂದು ಕೋಪದಿಂದ ಹೇಳಿ ಕಾಫೀ ಕುಡಿದು ಸುಧಾರಿಸಿಕೊಂಡು. ಆಫೀಸ್ ಕೆಲಸ ಶುರು ಮಾಡಿದ.

ಸಂಜೆ ಹುಡುಕಾಡಿ ನೇರಳೆ ಹಣ್ಣು ರೇಟ್ ಕೇಳಿದಾಗ ೧೦೦ ಗ್ರಾಂ ಗೆ ೨೦ ರೂಪಾಯಿ ಎಂದಾಗ, ಹೆಂಡತಿಯನ್ನು ಮತ್ತೆ ಫೋನ್ ಮಾಡಿ ಕೇಳಿ ಬೇಡವೆಂದಾಗ ಹಾಗೆ ಮನೆಗೆ ಬಂದ. ಊಟವಾದ ಮೇಲೆ ಯಾವದು ನಾಳೆಯ ಹಬ್ಬ ಎಂದು ಕೇಳಿದ. ಅದಕ್ಕೆ ಮಂಜನ ಹೆಂಡತಿ ನಿಮಗೆ ಸತ್ಯವಾನ ಸಾವಿತ್ರಿ ಗೊತ್ತು ತಾನೇ ಎಂದಾಗ, ನಾನು ಮೊನ್ನೆ ಟೀವೀಯಲ್ಲಿ ನೋಡಿದ್ದೆ ಸಿನಿಮಾ. ರಮೇಶ್ ನಟಸಿದ್ದು ತಾನೇ, ತುಂಬಾ ಚೆನ್ನಾಗಿದೆ ಎಂದ, ಸೀಡೀ ಕೂಡ ಸಿಗುತ್ತೆ ತೆಗೆದು ಕೊಂಡು ಬರೆಲೇನು ಎಂದಾಗ, ಅದಕ್ಕೆ ಮಂಜನ ಮಡದಿ ರೀ ಅದು ಅಲ್ಲ ಎಂದು ಸತ್ಯವಾನ್ ಸಾವಿತ್ರಿ ಕಥೆ ಹೇಳಿ, ಇದಕ್ಕೆ ವಟ ಸಾವಿತ್ರಿ ವೃತ ಅನ್ನುತ್ತಾರೆ ಎಂದಳು. ಸಾವಿತ್ರಿ ಸತ್ಯವಾನ ಬದುಕಿಸುವ ರೀತಿ ಕೇಳಿ, ಮಂಜ ಆ ರೀತಿ ಹೆಂಡತಿಯರು ಈಗಲೂ ಇರುತ್ತಾರೇನೇ? ಎಂದು ಪ್ರಶ್ನಿಸಿದಾಗ. ಮರುಮತನಾಡದೇ ಸುಮ್ಮನೇ ಮಲಗಿಕೊಳ್ಳಿ ಎಂದು ಹೇಳಿದಳು. ನಾನು ಸುಮ್ಮನೇ ನಗುತ್ತಿದ್ದೆ.

ನಾಳೆ ಬೇಗ ಎದ್ದೇಳಿ ಎಣ್ಣೆ ಸ್ನಾನ ಮಾಡಬೇಕು ಎಂದಳು. ಸಂಜೆಗೆ ಗೆಳೆಯನ ಜನ್ಮದಿನದ ಪಾರ್ಟೀ ಅಲ್ಲೇ ಮಾಡುತ್ತೇನೆ ಎಂದ ಮಂಜ, ಮಂಜನ ಮಡದಿಯ ಮುಖ ಕೆಂಪಾಗಿತ್ತು. ಸುಮ್ಮನೇ ಮಲಗಿಕೊಂಡೆವು.

ಮರುದಿನ ಮಂಜನಿಗೆ ೨೦೦ ಮಿಲಿ ಎಣ್ಣೆಯಿಂದ ಅಭಿಷೇಕ ಆಗಿತ್ತು. ನಾನು ಮುಸಿ ಮುಸಿ ನಗುತ್ತಿದ್ದೆ. ಕಡೆಗೆ ನನಗೂ ಎಣ್ಣೆ ಹಚ್ಚಿ ಸ್ನಾನ ಮಾಡಿ ಎಂದು ಹೇಳಿದಳು. ರೀ ಇವತ್ತು ವಟ ಸಾವಿತ್ರಿ ವೃತ "ನಾನು ತಂಗಳು ತಿನ್ನುವದಿಲ್ಲ" ನಿನ್ನೆ ಮಿಕ್ಕ ಅನ್ನ ನೀವೇ ತಿಂದು ಹೋಗಿ ಎಂದಳು ಮಂಜನಿಗೆ. ದಿನಾಲೂ ನಾನೇ ತಿನ್ನಬೇಕು ಎಂದು ಕೋಪದಿಂದ ಹೇಳಿ ಪ್ಲೇಟ್ ಕೈಗೆ ಕೊಟ್ಟಳು. ಲೇ ನಿನ್ನೆ ಅದೇನೋ ಕಥೆ ಹೇಳಿದ್ಯಲ್ಲೇ?. ಎಂದ ಮಂಜ ಕೋಪದಿಂದ ಇದೊಂದು ಗೊತ್ತು ನಿಮಗೆ ಎಂದು ಹೇಳಿ ನಮ್ಮಿಬ್ಬರನ್ನೂ ಆಫೀಸ್ ಗೆ ಹೋಗಿ ಎಂದು ಬೀಳ್ಕೊಟ್ಟಳು. ಆದರೂ ನಿನ್ನೆ ಮಾಡಿದ ಚಿತ್ರಾನ್ನ ಚೆನ್ನಾಗೆ ಇತ್ತು ಎಂದ ಮಂಜ. ನನಗೆ ಮಾತ್ರ ದೋಸೆ ಸಿಕ್ಕಿತ್ತು.

ಅವನ ಮಡದಿ ವಟ ..ವಟ... ಅನ್ನುವದನ್ನು ಬಿಟ್ಟರೆ, ತುಂಬಾ ಒಳ್ಳೆಯವಳು. ನಿಜವಾಗಿಯೂ ಸತ್ಯವಾನ್ ಸಾವಿತ್ರಿನೇ.

Saturday, June 19, 2010

"ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ..".

ನಮ್ಮ ಮನೆ ಎದುರು ಒಂದು ಅಜ್ಜಿ ಇದ್ದಾರೆ. ಅವರ ಹೆಸರು ಶಾಂತಮ್ಮ ಕೇವಲ ನಾಮ ಮಾತ್ರಕ್ಕೆ ಶಾಂತಮ್ಮ. ಮೊನ್ನೆ ನಮ್ಮ ಮನೆಗೆ ಬಂದಿದ್ದರು. ಅವರು ನನ್ನ ಹೆಂಡತಿ ಜೊತೆ ಹರಟುತ್ತ ಇರುತ್ತಾರೆ. ಅದೇನೆಂದು ನಾನು ತಲೆ ಕೆಡಿಸಿಕೊಂಡಿಲ್ಲ. ತಪ್ಪು ತಿಳೀಬೇಡಿ ತಲೆ ಕೆಡಿಸಿಕೊಂಡಿಲ್ಲ ಅಂದರೆ ಮನಸ್ಸಿಗೆ ಹಚ್ಚಿಕೊಂಡಿಲ್ಲ. ಅವತ್ತು ಇವರು ಏನು ಮಾತಾಡುತ್ತಾರೆ ಎಂದು ಹಾಗೆ ಅವರ ಮಾತಿಗೆ ಕಿವಿಗೊಟ್ಟೆ. ಅವರ ಒಂದು ಮಾತು ಕೂಡ ಅರ್ಥವಾಗಲಿಲ್ಲ. ಅಷ್ಟರಲ್ಲಿ ಶಾಂತಮ್ಮ ಯಾರದೋ ಹೆಸರು ಹೇಳಿ ಅವನಿಗೆ ಬೈಯಲು ಶುರು ಮಾಡಿಕೊಂಡಳು. ಅವನಿಗೆ ಎಲ್ಲ ಅಷ್ಟೋತ್ತರ, ಸಹಸ್ರನಾಮ ಎಲ್ಲವು ಮುಗಿದಿದ್ದವು. ಬರಿ ಬ್ಲಾಕ್ ಪೇಯಿಂಟ್ ಮಾಡುತ್ತಾನೆ ಎಂದು ಬೈಯುತ್ತ ಕುಳಿತಿದ್ದಳು. ಅವನು ಯಾರಪ್ಪ ಬ್ಲ್ಯಾಕ್ ಪೈಂಟ್ ಮಾಡುವವನು ಎಂದು ಯೋಚಿಸಿದೆ. ಮನೆಗೆ ಬ್ಲ್ಯಾಕ್ ಪೈಂಟ್ ಮಾಡಿದರೆ ಹೇಗೆ ಕಾಣುತ್ತೆ ಎಂದು ಯೋಚಿಸುತ್ತಾ ಕುಳಿತೆ. ಹಾಗೇನಾದರೂ ಆದರೆ ನನ್ನನ್ನು ನನ್ನ ಹೆಂಡತಿ ಕಂಡು ಹಿಡಿಯುವದು ಕಷ್ಟ ಎಂದು ಆ ಯೋಚನೆಗೆ ಇತಿಶ್ರೀ ಹಾಡಿ ವಾಸ್ತವಕ್ಕೆ ಬಂದೆ.ಅವರಿಬ್ಬರ ಅಬ್ಬರದ ಮಾತಿನಿಂದ, ನನ್ನ ಹೊಟ್ಟೆ ಅಬ್ಬರಿಸಿದ್ದು ಕೇಳದೆ ನನ್ನ ಮಡದಿ ಹರಟುತ್ತಿದ್ದಳು.

ಆಗ ನಾನೆ ಅವಲಕ್ಕಿ ತೆಗೆದು ಅವರಿಬ್ಬರಿಗೂ ಮಾಡಿ ಕೊಟ್ಟು ನಾನು ತಿನ್ನುತ್ತ ಟಿ.ವಿ ಮುಂದೆ ಬಂದು ಕುಳಿತೆ. ನಾನು ಮ್ಯಾಚ್ ನೋಡಲು ಚಾನೆಲ್ ಚೇಂಜ್ ಮಾಡಿದೆ. ಆಗ ಅಜ್ಜಿ ಚಾನೆಲ್ ಚೇಂಜ್ ಮಾಡಬೇಡಪ್ಪ ಈಗ ರಂಗೋಲಿ ಬರುತ್ತೆ ಎಂದರು. ಆಗ ನಾನು ರಂಗೋಲಿ ರವಿವಾರ ಮುಂಜಾನೆ ಮಾತ್ರ ಬರುತ್ತೆ ಅಜ್ಜಿ ಎಂದೆ. ಆಗ ಅಜ್ಜಿ ಇಲ್ಲಪ್ಪ ಪ್ರತಿದಿನ ೮ ಘಂಟೆಗೆ ಬರುತ್ತೆ ಎಂದರು. ನನಗೆ ಆಶ್ಚರ್ಯ ಇದು ಯಾವಾಗ ಚೇಂಜ್ ಆಯಿತು ಎಂದು. ನಾನು ಏನೋ ಟೈಮ್ ಚೇಂಜ್ ಆಗಿರಬೇಕು ಎಂದುಕೊಂಡು, ದೂರದರ್ಶನ ಚಾನೆಲ್ ಹಚ್ಚಿದೆ. ಆಗ ಅಜ್ಜಿ ಇದಲ್ಲ... ಉದಯ ಹಚ್ಚಿ ಎಂದರು. ಮತ್ತೆ ಮ್ಯಾಚ್ ನೋಡದೆ ಉದಯ ಹಚ್ಚಿದೆ. ಆ ಧಾರವಾಹಿ ಶುರು ಆದ ಮೇಲು ಅವರ ಮಾತಿನ ವರಸೆ ಮುಗಿದಿರಲಿಲ್ಲ. ಬಂದ ನೋಡು ..... ಮಗ ಎಂದು ಬಿಡಬೇಕೇ?. ನನಗೆ ಆಶ್ಚರ್ಯ. ಇವರ ಮಾತು ಕೇಳಿ ನನಗೆ ಕಸಿವಿಸಿಯಾದರು ಅವರು ಮಾತ್ರ ತಮ್ಮ ಬೈಗುಳಗಳ ಸುರಿಮಳೆ ನಡೆಸಿದ್ದರು. ಮತ್ತೆ ನೋಡು ಹೇಗೆ ಬ್ಲಾಕ್ ಪೇಯಿಂಟ್ ಮಾಡುತ್ತಾನೆ ಎಂದಾಗ ತಿಳಿಯಿತು ಅದು ಬ್ಲಾಕ್ ಮೇಲ್ ಎಂದು. ನಾನು ನೋಡಿ ಹುಸಿ ನಕ್ಕು ಮತ್ತೆ ಧಾರವಾಹಿ ಮುಗಿಯುವದನ್ನೇ ಕಾಯುತ್ತ ಕುಳಿತೆ. ಧಾರವಾಹಿ ಮುಗಿದಾಗ ನಾನು ಚಾನೆಲ್ ಚೇಂಜ್ ಮಾಡಬೇಕೆಂದಾಗ, ಮತ್ತೆ ಅಜ್ಜಿ ಜೋಗುಳ ಹಚ್ಚಪಾ ಎಂದು ವರಸೆ ಹಿಡಿದರು. ಅಲ್ಲೂ ಮಾತಿನ ಸುರಿ ಮಳೇನೆ. ಅವರು ಹೀಗೆ ಮಾಡಿದರು ಇವರು ಹೀಗೆ ಮಾಡಿದರು ಎಂದು. ಹಾಗೆ ಇಷ್ಟಕ್ಕೆ ಮುಗಿಯಲಿಲ್ಲ. ಮತ್ತೆ ಈ ಟಿವಿ ಯಲ್ಲಿ ಬರುವ ಮುತ್ತಿನ ತೋರಣ, ಮತ್ತೆ ಮುಕ್ತ ಮುಕ್ತ ಎಲ್ಲ ಧಾರವಾಹಿ ನೋಡಿದರು.

ಮತ್ತೆ ಮನೆಗೆ ಹೊರಟು ಹೋದರು. ಅಷ್ಟರಲ್ಲಿ ನಾನು ಕೂಡ ಅರ್ಧ ಘಂಟೆ ಜೋಗಳ ಹಾಡಿದ್ದೇ. ಎದ್ದು ತಡಬಡಿಸಿ ನಾನು ಮ್ಯಾಚ್ ಹಚ್ಚಿದೆ. ಆದರೆ ಮ್ಯಾಚ್ ಮುಗಿದಿತ್ತು. ಬರಿ ಜಾಹಿರಾತುಗಳು ಬರುತ್ತಿದ್ದವು. ಕಡೆಗೆ ಬೇಸರವಾಗಿ ಟಿ.ವಿ ಬಂದ್ ಮಾಡಿ ಊಟ ಮುಗಿಸಿ ಹಾಸಿಗೆ ಮೇಲೆ ಒರಗಿದೆ. ಆಗ ನಾನು ನೋಡುತ್ತಿದ್ದ ದೂರದರ್ಶನ ಧಾರವಾಹಿಗಳ ನೆನಪು ಬಂತು . ಅದರಲ್ಲೂ ಮಹಾಭಾರತ್ , ರಾಮಾಯಣ, ಗುಲ್ದಸ್ತ, ಮುಂಗೇರಿ ಲಾಲ ಕೆ ಹಸಿನ ಸಪ್ನೆ, ನುಕ್ಕಡ, ಹಮ್ ಪಂಚಿ ಏಕ್ ಚಾಲ್ ಕೆ, ಮತ್ತೆ ಸುಮಧುರ ಗೀತೆಗಳ ರಂಗೋಲಿ ಹೀಗೆ ತುಂಬಾ ಹಲವು. ಈಗ ಅವುಗಳ ಕಾಲ ಮುಗಿದಿದೆ ಈಗ ನೂರಾರು ಚಾನೆಲ್‍ಗಳು. ನೂರಾರು ಧಾರಾವಾಹಿಗಳು.

ನಮ್ಮ ಮನೆಯಲ್ಲಿ ಟಿ.ವಿ ಇರಲಿಲ್ಲ. ನನ್ನ ಗೆಳಯ ಆನಂದನ ಮನೆಗೆ ಹೋಗಿ ನೋಡುತ್ತಿದ್ದೆ. ಆನಂದನ ಮನೆ ಓನರ್ ಒಂದು ನಾಯಿ ಸಾಕಿದ್ದರು. ನನಗೆ ಮೊದಲಿಂದು ನಾಯಿ ಕಂಡರೆ ತುಂಬಾ ಭಯ. ಅದನ್ನು ಲೆಕ್ಕಿಸದೆ ಓಡಿ ಆನಂದನ ಅಡುಗಿ ಮನೆಗೆ ಹೊಕ್ಕು ಬಿಡುತ್ತಿದ್ದೆ. ನಾಯಿ ನನ್ನ ಬೆನ್ನು ಹತ್ತಿ ಬಂದು ಮತ್ತೆ ವಾಪಸ್ ಹೋಗಿ ಮಲಗಿ ಬಿಡುತ್ತಿತ್ತು. ಆ ಕ್ಷಣಗಳು ತುಂಬಾ ಸುಮಧುರವಾಗಿದ್ದವು. ಹಾಗೆ FM ಹಚ್ಚಿದೆ ಸುಮಧುರವಾದ ಗೀತೆ "ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ..". ಹಳೆಯ ಮಾಸೀದ ನೆನಪುಗಳೇ ಹಾಗೆ ತುಂಬಾ ಮನಸ್ಸಿಗೆ ಅಹ್ಲಾದವನ್ನು ಉಂಟು ಮಾಡುತ್ತಿರುತ್ತವೆ. ಮತ್ತೆ ಮಾತ್ತೊಂದು ಸುಮಧುರ ಗೀತೆ ಬಂತು " ದೋ ಲಫ್ಜೋ ಕೀ ಹೈ ದಿಲ್ ಕೀ ಕಹಾನಿ...". ಮತ್ತೆ ಮನಸು ಕುದುರೆಯ ಹಾಗೆ ಮೈಸೂರಿಗೆ ನೆಗೆಯಿತು ಮತ್ತೆ ಕಣ್ಣ ಮುಂದೆ ನನ್ನ ಹಳೆಯ ಸ್ನೇಹಿತರಾದ ಮಾಧವ, ವಿಠ್ಠಲ್ , ಪುರುಷೋತ್ತಮ ಎಲ್ಲರೂ ಬಂದು ಹೋದರು. ಹಾಗೆ ಹಳೆಯ ನೆನಪುಗಳನ್ನು ಮೇಲಕು ಹಾಕುತ್ತಿದ್ದಾಗ ನಾನು ನಿದ್ದೆಗೆ ಜಾರಿದ್ದೆ...ಆದರೆ ಆ ಹಾಡು ಯೇ ಕಹಾ ಆಗಯೇ ಹಮ ಯುಹಿ ಸಾತ್ ಸಾತ್ ಚಲತೆ.." ಮಾತ್ರ ನಿತ್ಯ ಸತ್ಯ ಎಂದೆನಿಸಿತು. ನಮ್ಮ ಹಳೆಯ ಹೆಜ್ಜೆಗುರುತನ್ನು ನೆನಪಿಸುತ್ತಾ...

Monday, March 22, 2010

ಸುಬ್ಬನ ಹೊಸ ವರ್ಷದ resolution(revolution)

ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್ನು ಮುರಿದು, ಮತ್ತೆ ಕಾಫಿ ಕುಡಿಯಲು ಪ್ರಾರಂಬಿಸಿದ್ದ. ರೀ ನೀವು ಆರಂಭ ಶೂರ ಎಂದು ಅವನ ಹೆಂಡತಿ ಕಾಡಿದ್ದಳು. resultion ಏನು ಇಲ್ಲ ಮನೆಯಲ್ಲಿ ನನ್ನ ಹೆಂಡತಿ ಒಂದು revolution ನೆ ಮಾಡಿದ್ದಾಳೆ. ನನ್ನ (revenue) ಜೇಬು ಖಾಲಿ ಮಾಡುವ ಒಂದು solution ಎಂದ. ಅಷ್ಟರಲ್ಲಿ ನಮ್ಮ ಮಂಜ ಮತ್ತೆ ಅವನ ಹೆಂಡತಿ ಕೂಡ ಹಾಜರ ಆದರು. ಸುಬ್ಬ ಬೆಳಿಗ್ಗೆಯಿಂದ ಬರಿ ವಿಕ್ರತಿಗಳೇ ನಡೆಯುತ್ತಿವೆ ಎಂದ ಈ ಸಂವತ್ಸರದ ಹೆಸರಿನ ಹಾಗೆ ಎಂದು ಮುಖ ಕಿಚಾಯಿಸಿ ಮಾತನಾಡಿದ. ಏನು ಆಯಿತೋ? ಸುಬ್ಬ ಎಂದು ಮಂಜ ಕೇಳಿದ. ಏನಿಲ್ಲ ನಾನು ಮುಂಜಾನೆ ಎದ್ದ ಕೂಡಲೇ ನನ್ನ ಹೆಂಡತಿ ನನ್ನ ಮೇಲೆ ಅರ್ಧ ಬಾಟಲಿ ಎಣ್ಣೆ ಸುರುವಿದಳು ಎಂದ. ನಾನು ಮಂಜ ನಗುತ್ತಿದ್ದೆವು. ಸ್ನಾನ ಮಾಡಲು ಹೋಗಬೇಕು ಎಂದು ಎಲ್ಲ ಬಟ್ಟೆ ತೆಗೆದುನಿಂತೆ ನನ್ನ ಮಗ ಹೋಗಿ ಬಚ್ಚಲು ಸೇರಿಕೊಂಡ. ಅಷ್ಟರಲ್ಲೇ ಮನೆ ಎದುರಿಗಿರೋ ಅಂಟಿ ಬಂದು ಬಿಡಬೇಕೆ?. ನಾನು ಓಡಿ ಹೋಗಿ ಮತ್ತೆ ಎಣ್ಣೆ ಮ್ಯೆಯಲ್ಲೇ ಬಟ್ಟೆ ಧರಿಸಿ ಬಂದೆ. ಅಂಟಿ ಹೋದ ಮೇಲೆ ನನ್ನ ಹೆಂಡತಿಯ ಅಷ್ಟೋತ್ತರ. ಏನ್ರಿ ಇದು ಎಣ್ಣೆ ಜಿಡ್ಡು ಎಲ್ಲಾsss ಬಟ್ಟೆಗೆ, ಇದನ್ನು ಒಗೆದರು ಹೋಗುವದಿಲ್ಲ ಎಂದಳು. ನನಗೆ ಬಟ್ಟೆ ಒಗೆಯುವದಕ್ಕೆ ಆಗುವದಿಲ್ಲ. ನನಗೆ ವಾಶಿಂಗ್ ಮಷೀನ್ ಬೇಕು ಎಂದು ಹಠ ಹಿಡಿದಳು. ಇವತ್ತು ದಿನ ಚೆನ್ನಾಗಿದೆ ಇವತ್ತೇ ಬೇಕು ರೀ ಎಂದಳು. ಇವತ್ತು ದಿನ ಏನೋ ಚೆನ್ನಾಗಿದೆ, ಆದರೆ ನನ್ನ ಬಳಿ ದುಡ್ಡು ಬೇಕಲ್ಲ? ಎಂದೇ. ರೀ ನಿಮ್ಮದು ಇದೇ ಗೋಳು ನೋಡಿ ಪಕ್ಕದ ಮನೆ ಪ್ರತಿಮಾ ಎರಡು ವಾಶಿಂಗ್ ಮಷೀನ್ ಇಟ್ಟಿದ್ದಾಳೆ ಎಂದಳು. ನಾನು ಅವಳು ಧೋಬಿ ಇರಬೇಕು ನೋಡು ಎಂದಿದಕ್ಕೆ ನನ್ನ ಮೇಲೆ ಕೋಪ ಮಾಡಿಕೊಂಡು ಮಾತು ಬಿಟ್ಟು ಬಿಟ್ಟಳು ಎಂದ. ಆಗ ಮಂಜ ಸುಮ್ಮನಿರದೆ "ಲೇ ನೀನು ಹೇಳಬೇಕಿತ್ತು ನಾನು ಇದ್ದೇನಲ್ಲ ಬಟ್ಟೆ ವಾಶ್ ಮಾಡೋಕೆ" ಎಂದು ಚುಡಾಯಿಸಿದ.

ಸುಬ್ಬ ಮತ್ತೆ ಶುರು ಹಚ್ಚಿಕೊಂಡ. ಅಷ್ಟರಲ್ಲೇ ನನ್ನ ಮಗ ಸ್ನಾನ ಮುಗಿಸಿ ಬಂದಿದ್ದರಿಂದ. ನಾನು ಬಚ್ಚಲಿಗೆ ಹೋಗಿ ಸ್ನಾನ ಮುಗಿಸಿ ಬಂದೆ. ಮೊದಲೇ ಸಿಟ್ಟಿಗೆ ಎದ್ದ ನನ್ನ ಹೆಂಡತಿ ನನ್ನ ಮಗನಿಗೆ ಉದ್ದೇಶಿಸಿ "ಲೇ ರಾಜ ಇವತ್ತು ನಾವು jcb ಅವರಿಗೆ ಬರಲು ಹೇಳಬೇಕು ನಿನ್ನ ಅಪ್ಪ ಅರ್ಧ ಘಂಟೆ ಸ್ನಾನ ಮಾಡಿ ಬಂದಿದ್ದಾರೆ". ನನಗೆ ಈ ಕೊಳಕು ಸ್ವಚ್ಚ ಮಾಡಲು ಆಗುವದಿಲ್ಲ ಎಂದಳು. ನನಗೆ ತುಂಬಾ ಕೋಪ ಬಂದಿತ್ತು. ಮತ್ತೆ ಪೂಜೆ ಎಲ್ಲ ಮುಗಿದ ಮೇಲೆ, ಪಂಚಾಗ ಶ್ರವಣವಾದ ಮೇಲೆ ನನ್ನ ಭವಿಷ್ಯ ತುಂಬಾ ಕೆಟ್ಟದಾಗಿ ಇತ್ತು ಎಂದು ಹೇಳಿದ. ಅವನ ಮುಖ ನೋಡಿದರೆ ಅಳುವದೊಂದೇ ಬಾಕಿ ಇತ್ತು. ಆಗ ಮಂಜ " ಲೇ ಇದನ್ನು ನೀನು ಮೊದಲೇ ಹೇಳಿದ್ದರೆ ನಾನು ಸರಿ ಮಾಡುತ್ತಿದ್ದೆ" ಎಂದ. ಅದು ಹೇಗೆ ಎಂದು ಕೇಳಿದಾಗ ಈ ಪಂಚಾಂಗ ಯಾರು ಬರೆದಿದ್ದಾರೆ ಗೊತ್ತ?, ಅವ ನಮ್ಮ ಪಂಚಾಮೃತ ಮನ್ಯ( ಮನೋಜ). ಅವನಿಗೆ ಒಂದು ಸ್ವಲ್ಪ ತೀರ್ಥ ಕೊಡಿಸಿದ್ದರೆ ಎಲ್ಲ ಸರಿ ಮಾಡುತ್ತಿದ್ದ ಎಂದ ಮಂಜ. ನೋಡು ನಂದು ಹೇಗೆ ಇದೆ ಭವಿಷ್ಯ. ನಾನು ಮೊದಲೇ ಎಲ್ಲಾ ವ್ಯವಸ್ಥೆ ಮಾಡಿದ್ದೆ ಎಂದ. ಆಗ ಸುಬ್ಬ ನಾವು ಆ ಮನೋಜನ ಪಂಚಾಗ ತೆಗೆದುಕೊಳ್ಳುವದಿಲ್ಲ ಎಂದು ಕೋಪಗೊಂಡು ಹೇಳಿದಾಗ ನನಗೆ ತುಂಬಾ ನಗು ಬಂತು.

ಆಗ ಮಂಜ, ನೋಡು ಸುಬ್ಬ ಈ ಪಂಚಾಂಗ ಎಲ್ಲಾ ಖರೆ ಇರುವದಿಲ್ಲ. ಅದಕ್ಕೆ ಹಿರಿಯರು ಹೇಳಿದ್ದಾರೆ "ಪಂಚ ಭವತಿ ಪಂಚ ನ ಭವತಿ" ಇತಿ ಪಂಚಾಂಗ. ಅಂದರೆ ೫ ಕೆಲಸ ಆಗುತ್ತವೆ ೫ ಆಗುವದಿಲ್ಲ. ಹಾಗೆಂದು ಎಲ್ಲಾ ಸುಳ್ಳೇನೋ ಅಲ್ಲ. ಅಲ್ಲಿ ನಮಗೆ ಒಳ್ಳೆ ವಿಚಾರ ಕೂಡ ಇವೆ. ಆದರೆ ಈ ಭವಿಷ್ಯ ಒಂದು ಬಿಟ್ಟು ಎಂದ ಮಂಜ. ನೋಡು ಸುಬ್ಬ ವಿಕೃತಿ ನಾಮ ಸಂವತ್ಸರ ಬಂತು ಎಂದರೆ, ಎಲ್ಲಾ ವಿಕೃತಿ ಆಗುತ್ತ?. ಮತ್ತೆ ನೋಡು ಸುಬ್ಬ ವಿಕೃತಿ ಇರಲಿ ಏನೇ ಇರಲಿ ಅದು ಕೂಡ ಒಂದು ಸೌಂದರ್ಯದ ಭಾಗ ಕೂಡ. ಕೆಲವರಿಗೆ ಗುಂಡು ಮೂಗಿನ ಹುಡುಗಿಯರು ಇಷ್ಟವಾದರೆ ಮತ್ತೆ ಕೆಲವರಿಗೆ ಉದ್ದನೆ ಮೂಗಿನ ಹುಡುಗಿಯರು. ಅದು ಅವರವರ ಭಾವಕ್ಕೆ ತಕ್ಕ ವಿಚಾರ. ಒಂದು ಇಷ್ಟ ಆಗಲಿಲ್ಲ ಎಂದರೆ ಇನ್ನೊಂದು ವಿಕೃತಿ ಕೂಡ ಆಗುವದಿಲ್ಲ. ಆ ವಿಕೃತಿ ನಮ್ಮ ಮನಸಿನ ಭಾವಕ್ಕೆ ಬಂದ ವಿಚಾರ ಅಷ್ಟೇ ಎಂದು ತಿಳಿಹೇಳಿದ. ನಾವು ಬೇವು ಬೆಲ್ಲ ಎರಡನ್ನು ಸಮನಾಗಿ ಸ್ವೀಕರಿಸಬೇಕು. ಬೇವು ಕಹಿ ಇದ್ದರೂ ಕೂಡ ಅದಕ್ಕೆ ಔಷಧಿಯ ಗುಣ ಇದೆ. ನನ್ನ ಮಾವ ಬೇವಿನ ಎಣ್ಣೆ ದಿನಾಲೂ ಒಂದು ಚಮಚ ಕುಡಿಯುತ್ತಾರೆ. ನಾನು ಒಂದು ಲೋಟದಷ್ಟು ತೊಗೋತೀನಿ, ಆದರೆ ನನ್ನ ಎಣ್ಣೆ ಬೇರೆ ಎಂದಾಗ ನಾವೆಲ್ಲರೂ ನಕ್ಕೆವು.

ಮಂಜ ತನ್ನ ಗೆಳೆಯನಿಗೆ ಫೋನ್ ಮಾಡಿ ವಾಶಿಂಗ್ ಮಷೀನ್ ಬೇಕೆಂದು ಆರ್ಡರ್ ಮಾಡಿದ. ನೀನು ಹೋಗಿ ನಿನ್ನ ಹೆಂಡತಿಗೆ ಒಂದು surprise ಕೊಡು ಎಂದ. ದುಡ್ಡಿನ ಬಗ್ಗೆ ಯೋಚನೆ ಮಾಡಬೇಡ ಕಂತಿನಲ್ಲಿ ಕಟ್ಟು. ಅವನು ನನ್ನ ಗೆಳೆಯ ಇದ್ದಾನೆ ಎಂದು ಹೇಳಿದ. ಈ ಸಾರಿ ನೀನು "ಬಟ್ಟೆ ಒಗೆಯುವದಿಲ್ಲ ಅಂತ resolution" ಮಾಡು ಎಂದಾಗ ನಾವೆಲ್ಲರೂ ಮಂದಹಾಸ ಬೀರಿದ್ದೆವು

ಮರು ದಿನ ಸುಬ್ಬ ನಮ್ಮಿಬ್ಬರಿಗೂ ಮನೆಗೆ ಬನ್ನಿ ಎಂದು ಅಹ್ವಾನ ನೀಡಿದ. ನಾವಿಬ್ಬರು ಮನೆಗೆ ಹಾಜರ ಆದೆವು. ಸುಬ್ಬನ ಮಗ ಹೀಗೆ ಇಂಗ್ಲಿಷ್ ರೈಮ್ಸ ಧಾಟಿಯಲ್ಲಿ ಹಾಡುತ್ತ ಇದ್ದ.

ಅಮ್ಮ ಅಮ್ಮ ಸ್ಕೂಲ್ ಹೋಗ್ತಾನೆ ...
ಅಪ್ಪ ಅಪ್ಪ ಮನೇಲಿ ಇರ್ತಾಳೆ ...
ನಾನು ನಾನು ಆಫೀಸ್ ಹೋಗ್ತಾಳೆ ...

ಮಂಜ ಏನು ನಿನ್ನ ಹೆಂಡತಿ ಕೋಪ ಇಳಿದಿದೆಯೋ ಇಲ್ಲವೋ ಎಂದು ಕೇಳಿದ. ಆಗ ಸುಬ್ಬ ನಿನ್ನೇನೆ ಸಾರಿ ಕೇಳಿದ್ದಾಳೆ ಎಂದ. ಆಗ ಅವನ ಹೆಂಡತಿ ನಮಗೆ ಕಾಫಿ ತಂದು ಕೊಟ್ಟಳು. ನಾವು ಕಾಫಿ ಕುಡಿಯುತ್ತ ಇದ್ದೆವು. ಮತ್ತೆ ಅವನ ಹೆಂಡತಿ "ರೀ ಸಾರೀ" ಎಂದಳು. ನೀನು ನಿನ್ನೇನೆ ಕೇಳಿದೆಯಲ್ಲಾ ಎಂದ ಸುಬ್ಬ. ರೀ ನಾನು ಹೇಳಿದ್ದು ಆ ಸಾರಿ ಅಲ್ಲ, ಕೆಂಪು ಹೊಸ ಸಾರಿ ಬೇಕು ರೀ ನನಗೆ ಹಬ್ಬಕ್ಕೆ ಎಂದಳು. ನನಗೆ ಬಾಯಿಯಲ್ಲಿದ್ದ ಕಾಫಿ ಅನಾಯಾಸವಾಗಿ ಹೊರಗಡೆ ಬಂತು. ನೋಡಿ ನಕ್ಕರೆ ಮತ್ತೆ ಸುಬ್ಬನ ಹೆಂಡತಿ ಸಿಟ್ಟ ಆಗ್ತಾಳೆ ಎಂದು ಸುಮ್ಮನೆ ಇದ್ದೆವು. ಆಗ ಮಂಜ ಸುಮ್ಮನಿರದೆ ನಿಮ್ಮ ವಾಶಿಂಗ್ ಮಷೀನ್ ಗೆ ಮೊದಲು ಹಾಕೋಕೆ ಕೆಂಪು ಸಿರೇನೇ ಆಗಬೇಕಿಲ್ಲಾ, ನೀವು ಬೇಕಾದರೆ ನಮ್ಮ ಸುಬ್ಬನ ಬನಿಯನ್ ಕೂಡ ಹಾಕಬಹುದು ಎಂದಾಗ. ಸುಬ್ಬನ ಹೆಂಡತಿ ಕೋಪ ಇನ್ನು ಜ್ಯಾಸ್ತಿ ಆಗಿ, ಅಡುಗೆಮನೆಗೆ ಹೋದಳು. ಅವಳನ್ನು ಹಿಂಬಾಲಿಸಿ ಒಳಗಡೆ ಸುಬ್ಬ ಹೋದ. ಒಳಗಡೆ ಕರ್ಫ್ಯೂ ಜಾರಿ ಆಗಿತ್ತು. ಸ್ವಲ್ಪ ಸಮಯದ ನಂತರ ಕರ್ಫ್ಯೂನಿಂದ ೧೪೪ ಗೆ ಇಳಿಯಿತು ಎಂದು ಅನಿಸಿತು. ಆಗ ಸುಬ್ಬ ಹೊರಗಡೆ ಬಂದ. ಸುಬ್ಬನ ಹೆಂಡತಿ ಸ್ವಲ್ಪ ಸಮಯದ ನಂತರ ಉಪ್ಪಿಟ್ಟು ತೆಗೆದು ಕೊಂಡು ಬಂದಳು. ಉಪ್ಪಿಲ್ಲದ ಮತ್ತು ಖಾರವಾದ ಉಪ್ಪಿಟ್ಟು ಮತ್ತು ಎರಡು ತಂಬಿಗೆ ನೀರು ಕುಡಿದು ಮನೆಗೆ ಹೋಗುತ್ತೇವೆ ಎಂದು ಹೇಳಿ ಬಂದೆವು. ಇಲ್ಲದಿದ್ದರೆ ಮತ್ತೆ ಸುಬ್ಬ ಯಾವುದಾದರು ಕಂತಿನಲ್ಲಿ ಸೀರೆ ಕೊಡಿಸು ಎಂದು ಗಂಟು ಬಿದ್ದರೆ ಕಷ್ಟ ಎಂದು......D):)

-----------
ಹೊಸ ವರ್ಷ
ಹೊಸ ಹರ್ಷ
ಹೊಸ ರಾಗ
ಹೊಸ ಯುಗ
ಹೊಸತು ಹೊಸತು ಜೀವನ

ಹೊಸ ಜಾವ
ಹೊಸ ಭಾವ
ಹೊಸ ಆಟ (ಊಟ)
ಹೊಸ ಓಟ
ಹೊಸತು ಹೊಸತು ಜೀವನ

(ಏನ್ರಿ ಇದು ಎಲ್ಲಾ, ಹೊಸ ಹೊಸ ಅಂತ ಬರೆದಿದ್ದಿರಾ?. ಇದೇನು ಹೊಸ ಕಾರ್, ಹೊಸ ಮನೆ ಜಾಹಿರಾತಿನ ಹಾಗೆ ಹೊಸ ಹೆಂಡತಿ ಇಲ್ವಾ ಎಂದು ಮಾತ್ರ ಕೇಳಬೇಡಿ. ಹ್ಹಾ ಹ್ಹ ಹ್ಹ ಹಾ :)D))

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಕುಂಟ ಕಾಲಿನ ಕಾಮಣ್ಣ

ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದು ಇಲ್ಲವೇ ಕದಿಯುವದು. ಹೀಗೆ "ಕಾಮಣ್ಣನ ಮಕ್ಕಳು ಕಳ್ಳ ..... ಮಕ್ಕಳು" ಎಂದು ಒದರುತ್ತ ಬೀದಿ ಬೀದಿ ಬಾಯಿ ಬಡೆದು ಕೊಳ್ಳುತ್ತಾ ತಿರುಗುವದು. ಒಂದೊಂದು ಸಲ ನಮ್ಮ ಗೆಳೆಯರ ಮನೆಯಲ್ಲಿನ ಕಟ್ಟಿಗೆಗಳನ್ನು ಕದ್ದು ತರುತ್ತಿದ್ದೆವು.

ಹೋಳಿ ದಿವಸ ಕುಡಿದು ಜನಪದ ಹಾಡು ಹಾಡುತ್ತ ತಿರುಗವ ಜನರನ್ನು ನೋಡುವದೆ ನಮಗೆ ತುಂಬಾ ತಮಾಷೆ. ಅವರು ನೇತಾಡುತ್ತಾ ಬಂದು ಗಟಾರಿನಲ್ಲಿ ಬಂದು ಹೋಳಿ ಆಡುತ್ತಿದ್ದರು. ಕೆಲ ಹಾಡುಗಳು ತುಂಬಾ ಅರ್ಥಪೂರ್ಣ ಆಗಿರುತ್ತಿದ್ದವು. ಕೆಲವು ತುಂಬಾ ಕೆಟ್ಟ ಭಾಷೆಯಿಂದ ಕೂಡಿರುತ್ತಿದ್ದವು.

ಹೋಳಿ ಹುಣ್ಣಿಮೆ ಸಮಯದಲ್ಲಿ ಗೆಳೆಯರು ಏನಾದರು ಜಗಳ ಮಾಡಿಕೊಂಡಿದ್ದರೆ ಮತ್ತೆ ಗೆಳೆತನ ಬೆಳೆಸಲು ಒಳ್ಳೆಯ ಸದಾವಕಾಶ. ಸುಬ್ಬ ಮಂಜನೊಡನೆ ಜಗಳ ಮಾಡಿಕೊಂಡಿದ್ದ. ಹೀಗಾಗಿ ಅವನು ಮಂಜನ ಗೆಳೆತನಕ್ಕೆ ಹಾತೊರೆಯುತ್ತಿದ್ದ, ಏಕೆಂದರೆ ಮಂಜ ಯಾವತ್ತು ತಮಾಷೆಯಾಗಿ ನಮ್ಮನ್ನು ನಗಿಸುತ್ತಾ, ಮಾತು ಮಾತಿಗೆ ಜೋಕ ಹೇಳುತ್ತಾ ಇರುತ್ತಿದ್ದ. ಪ್ರತಿ ಸಲದಂತೆ ಈ ಬಾರಿ ಕೂಡ ಕಟ್ಟಿಗೆಗಳನ್ನೂ ಕದ್ದು ತರುವ ಯೋಜನೆ ಹಮ್ಮಿಕೊಂಡಿದ್ದೆವು. ಇದಕ್ಕೆ ಸುತ್ರಧಾರನೆ ನಮ್ಮ ಮಂಜ. ಮಂಜ ಸುಬ್ಬನ ಮನೆ ಕದಿಯುವ ಪ್ಲಾನ್ ಮಾಡಿದ. ಮತ್ತೆ ನಾವೆಲ್ಲರೂ ಅವರ ಮನೆ ಹಿಂದೆ ನೀರು ಕಾಯಿಸಲು ಇಟ್ಟಿರುವ ಕಟ್ಟಿಗೆಗಳನ್ನು ಕದಿಯಲು ಹೋದೆವು. ಆದರೆ ಮಂಜ ಕಟ್ಟಿಗೆ ಅಲ್ಲದೆ, ಅವರ ಮನೆ ಹಿತ್ತಲಲ್ಲಿ ಇರುವ ಪೇರಳ ಗಿಡದ ಹಣ್ಣುಗಳನ್ನು ಮತ್ತು ಅಷ್ಟು ಹೂವುಗಳನ್ನು ಖಾಲಿ ಮಾಡಿ ಬಿಟ್ಟಿದ್ದ.

ಮರುದಿನ ಬೆಳಿಗ್ಗೆ ಎದ್ದೊಡನೆ ಹಿತ್ತಲಲ್ಲಿ ಆದ ಅವಾಂತರ ನೋಡಿ ಸುಬ್ಬ ತುಂಬಾ ಕೋಪಗೊಂಡಿದ್ದ. ತಾನು ಒಂದಿಷ್ಟು ಹುಡುಗರನ್ನು ಕೂಡಿಸಿ ಮಂಜನ ಮನೆಗೆ ಕದಿಯಲು ಯೋಜನೆ ಹಾಕಿಕೊಂಡ. ಅವರ ಮನೆ ಹಿತ್ತಲಲ್ಲಿ ಇದ್ದ ಕಟ್ಟಿಗೆಗಳನ್ನೂ ಕದ್ದು ಸುಮ್ಮನೆ ಹೋಗುವದು ಬಿಟ್ಟು, ತೆಂಗಿನ ಮರ ಏರಿ ತೆಂಗಿನ ಕಾಯಿ ಕೀಳಹತ್ತಿದ. ಅಷ್ಟರಲ್ಲೇ ಒಂದು ತೆಂಗಿನ ಕಾಯಿ ಕೆಳಗೆ ಬಿದ್ದು ಬಿಟ್ಟಿತು. ಆಗ ಮಂಜನಿಗೆ ಎಚ್ಚರ ಆಗಿದೆ ಮಂಜ ಎದ್ದವನೇ, ಸೀದ ಅವರ ನಾಯಿಯನ್ನು ಬಿಟ್ಟ. ಮತ್ತೆ "ಕೋಲು ತೊಗೋರಿ ಕಳ್ಳ ಬಂದಿದ್ದಾನೆ" ಎಂದು ಕೂಗಲಾರಮ್ಬಿಸಿದ. ನಾಯಿ ಹೋಗಿ ತೆಂಗಿನ ಮರದ ಕೆಳಗೆ ನಿಂತು ಕೂಗಲಾರಮ್ಬಿಸಿತು. ಮತ್ತೆ ಉಳಿದ ಹುಡುಗರೆಲ್ಲರೂ ಓಡಿ ಹೋದರು.

ಸುಬ್ಬ ಒಬ್ಬನೇ ಮರದ ಮೇಲೆ ನೇತಾಡುತ್ತಾ ಇದ್ದ. ಅವನಿಗೆ ನಾಯಿ ಕಂಡರೆ ತುಂಬಾ ಭಯ. ಕಡೆಗೆ ಮಂಜನಿಗೆ ನಾನು ಕಣೋ ಸುಬ್ಬ ಎಂದು ಹೇಳಿದ. ನಾಯಿ ತುಂಬಾ ಜೋರಾಗಿ ಓದುರುತ್ತ ಇದ್ದಿದ್ದರಿಂದ ಮಂಜನಿಗೆ ಸರಿಯಾಗಿ ಕೇಳಲಿಲ್ಲ. ಪ್ಲೀಸ್ ಆ ನಾಯಿ ಸ್ವಲ್ಪ ಕಟ್ಟು ನನ್ನನ್ನು ಕ್ಷಮಿಸು ಎಂದು ಜೋರಾಗಿ ಹೇಳಿದ. ಕಡೆಗೆ ಮಂಜ ಒಪ್ಪಿ ನಾಯಿಯನ್ನು ಕಟ್ಟಿ ಹಾಕಿದ. ಆದರೆ ನಾಯಿ ಮಾತ್ರ ಸುಬ್ಬನನ್ನು ನೋಡಿ ಒದರುತ್ತಾನೆ ಇತ್ತು.

ಅಷ್ಟರಲ್ಲೇ ಸುಬ್ಬ ನೇತಾಡುತ್ತಾ ಇದ್ದ ರೆಂಬೆ ಮುರಿದು ಸುಬ್ಬ ಕೆಳಗಡೆ ಬಿದ್ದು ಬಿಟ್ಟ. ಮಂಜನ ನಾಯಿ ಹೆದರಿ ಕೊಯ್ಗುಡುತ್ತ ಇತ್ತು. ಸುಬ್ಬ ಕಾಲಿಗೆ ಪೆಟ್ಟು ಆಗಿತ್ತು. ಮರುದಿನ ಸುಬ್ಬ ಕುಂಟುತ್ತ ಇದ್ದ. ಅದನ್ನು ನೋಡಿದ ಅವರಪ್ಪ ಅವನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದರು. ಅವನ ಕಾಲಿಗೆ fracture ಆಗಿತ್ತು. ಅವರಪ್ಪ ಅವನಿಗೆ ತುಂಬಾ ಬೈದಿದ್ದರು. ಮರುದಿನ ಸುಬ್ಬ ನಮ್ಮ ಮುಂದೆ ಬಂದು ಈ ದೊಡ್ಡವರೆಲ್ಲ ಹೀಗೆನಾ? ... ದೊಡ್ಡವರೆಲ್ಲ ಜಾಣರಲ್ಲ ಎಂಬ ಹಾಡು ಇವರಿಗೆ ತುಂಬಾ ಹೋಲಿಕೆ ಆಗುತ್ತೆ ಅನ್ನಿಸಿತು ಎಂದ. ನನಗೆ ಸಿಗುವ ಎಲ್ಲ ದೊಡ್ಡ ಮನುಷ್ಯರು ನಮಗೆ ಉಪದೇಶ ಮಾಡಲು ಬರುವರು. ಅದೇ ಹಳೆ ರಾಗ ಹಳೆ ತಾಳ ಎಂಬಂತೆ. ನಾನು ಚಿಕ್ಕ ಹುಡುಗ ಇದ್ದ ಸಮಯದಲ್ಲಿ 1 ರುಪಾಯಿಗೆ KG ಅಕ್ಕಿ ಸಿಗುತಿತ್ತು. ನಾನು ತುಂಬಾ ಕಷ್ಟ ಪಟ್ಟು ಓದಿದೆ ಎಂದೆಲ್ಲ. ಎಂದು ಕೋಪದಿಂದ ಓಟಗುಡುತ್ತಲೇ ಇದ್ದ. ನಾವೆಲ್ಲರೂ ಸುಮ್ಮನೆ ನಿಂತಿದ್ದೆವು. ಹಿಂದೆ ಸುಬ್ಬನನ್ನು ಹುಡುಕಿಕೊಂಡು ಬಂದಿದ್ದ ಅವರಪ್ಪ ಇದೆನ್ನಲ್ಲಾ ಕೇಳಿ ಕೋಪಗೊಂಡು ಮತ್ತೆ ನಾಲ್ಕು ಒದೆಗಳನ್ನು ಕೊಟ್ಟು ಸುಬ್ಬನನ್ನು ಲೇ ಕಾಮಣ್ಣ ಮನೆಗೆ ಬಾರೋ ಎಂದು ಕರೆದುಕೊಂಡು ಹೋಗಿ ಬಿಟ್ಟರು.

ಸುಬ್ಬ ಪ್ರತಿ ಬಾರಿ ದುಂಡಿ ಓಣಿ ಒಳಗೆ ಹೋಗಿ ಹೋಳಿ ಆಡುತ್ತಿದ್ದ. ಏಕೆಂದರೆ ಅಲ್ಲಿ ಇದ್ದದ್ದು ಶೋಭಾ ಮನೆ. ಬಣ್ಣ ಹಚ್ಚಿಕೊಂಡಾಗ ಯಾರೆಂದು ತಿಳಿಯುವದಿಲ್ಲ ಎಂಬ ಕಾರಣಕ್ಕಾಗಿ. ಆದರೆ ಈ ಬಾರಿ ಅದು ಸಹ ಕೈ ಕೊಟ್ಟಿತ್ತು ಏಕೆಂದರೆ, ಶೋಭಾ ಇವನ ಕಾಲಿನ ಬ್ಯಾನ್ದೆಜ ನೋಡಿದ್ದಳು. ನಾವೆಲ್ಲರೂ ಬಣ್ಣ ಆಡುತ್ತಿದ್ದರು ಸುಬ್ಬ ಮಾತ್ರ ಮನೆ ಮಳಿಗೆ ಮೇಲೆ ನಿಂತು ಸಪ್ಪೆ ಮುಖದಿಂದ ನೋಡುತ್ತಿದ್ದ.

ತುಂಬಾ ದಿನಗಳ ವರೆಗೆ ನಾವು ಸುಬ್ಬನನ್ನು ಕುಂಟ ಕಾಲಿನ ಕಾಮಣ್ಣ ಎಂದು ಸಂಭೋದಿಸುತ್ತಿದ್ದೆವು.

ಮಂಜ ಕಂಡು ಹಿಡಿದ ಕೆಲವು ವಿಷಯಗಳು

ಮಂಜ ಎಲ್ಲದರಲ್ಲಿಯೂ ತುಂಬಾ ತಮಾಷೆ. ಅವನು ಶಾಲೆಯಲ್ಲಿ ಕಂಡು ಹಿಡಿದ ಕೆಲವು ವಿಷಯಗಳು ...

Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.
ಯಾವತ್ತಾದರೂ ಹೋಟೆಲಿಗೆ ಹೋಗುವ ವಿಷಯ ಬಂದರೆ ನಮ್ಮ ಮಂಜ ಲೇ ಇವತ್ತು mathemetics ಓದಬೇಕು ಕಣ್ರೋ ಎಂದು ಹೇಳುತ್ತಿದ್ದ.
Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.
Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.
Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.
Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ
Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.
physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).
chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.
sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.
biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.

ಮತ್ತೆ ನಿವೇನಾದರು ಕಂಡು ಹಿಡಿದಿದ್ದಿರಾ? ಮತ್ತೆ ನಮೂದಿಸಿ....

Saturday, March 6, 2010

ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ....

"ರೀ ಏಳ್ರಿ" ಯಾವಾಗಲು ನಿದ್ದೆ ನಿದ್ದೆ. ಯಾಕಾದ್ರು ಈ ಕುಂಭಕರ್ಣನನ್ನು ಕಟ್ಟಿ ಕೊಂಡೆನೋ . ಇರುವ ಒಂದು ಭಾನುವಾರ ಕೂಡ ಬೇಗ ಎದ್ದು ಎಲ್ಲಿಯಾದರೂ ಕರೆದುಕೊಂಡು ಹೋಗಬೇಕು ಅನ್ನೋ ಜ್ಞಾನ ಕೂಡ ಇಲ್ಲ ಇವರಿಗೆ. ನಾನು ಹಾಗೆ ಹಾಸಿಗೆ ಮೇಲೆ ಹೊರಳಾಡುತ್ತ ಎದ್ದು ಯಾರನ್ನೋ ನೆನಸುತ್ತ ಇದ್ದ ಹಾಗೆ ಇತ್ತು ಎಂದೇ. ಮಹಾಭಾರತದ ಪಾತ್ರಗಳನ್ನಾ? ಎಂದೇ. ಅದಕ್ಕೆ ನಸು ನಕ್ಕು ಕುಂಭಕರ್ಣ ಮಹಾಭಾರತದಲ್ಲಿ ಯಾವಾಗ ಬಂದ ಎಂದಳು ನನ್ನಾಕೆ. ನಾನು ಕುಂಭ ರಾಶಿಯ ಕರ್ಣನ ಬಗ್ಗೆ ಅಂತ ತಿಳಿದುಕೊಂಡು ಕೇಳಿದೆ ಅಷ್ಟೇ ಎಂದು ಸುಮ್ಮನೆ ಮಾತು ಹಾರಿಸಿದೆ. ನಿಮಗೆ ಇದೊಂದು ಗೊತ್ತು, ಬರಿ ಮಾತು ಎಂದಳು. ನಿನ್ನ ಕಟ್ಟಿಕೊಂಡ ಮೇಲೆ ತತ್ವಜ್ಞಾನಿ ಆಗಲೇ ಬೇಕಲ್ಲ ಎಂದು ಅನ್ನಬೇಕು ಅಂದು ಕೊಂಡರು ಅನ್ನಲಿಲ್ಲ. ಇರುವ ಒಂದು ಭಾನುವಾರವಾದರೂ ಒಂದೊಳ್ಳೆ ರುಚಿ ತಿಂಡಿ ಕಳೆದುಕೊಳ್ಳುವ ಮನಸ್ಸಿಲ್ಲದೆ . ದಿನಾಲೂ ಹೋಟೆಲಿನಲ್ಲಿ ತಿಂದು ತಿಂದು ಬಾಯಿ ಕೆಟ್ಟುಹೋಗಿತ್ತು. ರೀ ಇವತ್ತೇನು ಬೇಗ ಬೇಗ ಸ್ನಾನ ಮುಗಿಸಿ, ಎಲ್ಲಾದರೂ ತಿಂಡಿ ತಿನ್ನಲು ಹೋಟೆಲ್ಗೆ ಹೋಗೋಣ ಎಂದಾಗ, ಇಂಗು ತಿಂದ ಮಂಗನಂತೆ ಅವಳನ್ನು ನೋಡಿದ್ದೇ.


ಟೀ ಪಾತ್ರೆ ಕುಕ್ಕುತ್ತ ಇದ್ದ ನನ್ನ ಮಡದಿನ ನೋಡಿ, ಇವಳ ಕೋಪ ಯಾಕೋ ಕಡಿಮೇ ಆಗುವ ಲಕ್ಷಣ ಕಂಡು ಬರಲಿಲ್ಲ. ಹೊರಗೆ ಹೋಗುವದನ್ನು ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಇವತ್ತು ಹೋಳಿ ಕಣೆ ಯಾರಾದರು ಬಣ್ಣ ಗಿಣ್ಣ ಎರಚಿದರೆ ಕಷ್ಟ ಎಂದೇ. ಅದೇನು ಇಲ್ಲ, ಇದೇನು ಧಾರವಾಡನಾ?. ಅಷ್ಟರಲ್ಲಿ ಯಾಕೋ ಹೊಟ್ಟೆ ನೋವು ಕಣೆ ಎಂದು ಹಾಗೆ ಒಂದು ರೈಲು ಬಿಟ್ಟೆ. ಮತ್ತೆ "ಯಾಕೆ ರೀ ಏನಾಯಿತು ನಡೀರಿ ಹಾಸ್ಪಿಟಲ್ಗೆ " ಎಂದು ಗಂಟುಬೀದ್ದಳು. ಅದೆಲ್ಲ ಏನು ಇಲ್ಲ ಕಣೆ. ಸುಮ್ಮನೆ ಸ್ವಲ್ಪ ನೋಯುತ್ತಾ ಇದೆ ಟೀ ಕೊಡೆ ಎಂದೇ. ಎಲ್ಲಾ ಟೀ ಇಂದಾನೆ ಅಗಿದ್ದು, ಇದರ ಮನೆ ಹಾಳಾಗ ಎಂದು ಟೀ ನೆಲ್ಲಾ ವಾಶ್ ಬೇಸಿನಗೆ ಸುರಿದಳು. ತಡಿರಿ ಸ್ವಲ್ಪ ಕಷಾಯ ಮಾಡುತ್ತೇನೆ ಎಂದು ಕಷಾಯ ಮಾಡಿದಳು. ಅದೇಕೆ ಗೊತ್ತಿಲ್ಲ ಕಷಾಯ ಒಲ್ಲದ ಮನಸ್ಸಿನಿಂದ ಕುಡಿದು ಮುಗಿಸುವಷ್ಟರಲ್ಲಿ ಹೊಟ್ಟೆ ನೋವು ನಿಜವಾಗಿಯೂ ಶುರು ಹಚ್ಚಿ ಕೊಂಡಿತು. ಲೇ ತುಂಬಾ ನೋವು ಕಣೆ ನಡಿ ಯಾವುದಾದರು ಹಾಸ್ಪಿಟಲ್ಗೆ ಹೋಗೋಣ ಎಂದು ಹೇಳಿದೆ.


ಇಬ್ಬರು ಸ್ಕೂಟರ್ ಏರಿ ಹಾಸ್ಪಿಟಲ್ ದಾರಿ ಹಿಡಿದೆವು. ಸ್ವಲ್ಪ ದೂರ ಹೋಗುವಷ್ಟರಲ್ಲಿ ತುಂಬಾ ಟ್ರಾಫಿಕ್ ಜಾಮ್ ಆಗಿತ್ತು. ಸಿಗ್ನಲ್ ಇಲ್ಲದ ಜಾಗದಲ್ಲಿ ಇಷ್ಟೊಂದು ಟ್ರಾಫಿಕ್ ಎಂದು ನೋಡಿದಾಗ ತಿಳಿಯಿತು ಅಲ್ಲಿ ಒಬ್ಬ ಪಾಲಿಟಿಸಿಯನ್ ಬರುತ್ತಿದ್ದಾರೆ ಎಂದು. ನನ್ನ ಹೆಂಡತಿ ಮಾತ್ರ ಅವನಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಳು. ನನ್ನ ಹೆಂಡತಿಯನ್ನು ನೋಡಿ ಒಬ್ಬ ಮನುಷ್ಯ ನಕ್ಕು, ಅವರು ಹಾಗೆ ಮೇಡಂ, ಅವರು ಬಂದರೆ ನಮ್ಮ ಆಫೀಸಿಗೆ ಲೇಟ್. ಇನ್ನು ಯಾರದಾದರೂ ಪರೀಕ್ಷೆ ಇದ್ದರೆ ಅಧೋಗತಿ. ಇವರು ಪಾಲಿಟಿಸಿಯನ್ ಅಲ್ಲ ಪೋಲಿ-ಟಿಸಿಯನ್ ಎಂದಾಗ ನನ್ನ ಮಡದಿಯ ಮುಖದಲ್ಲಿ ಮಂದಹಾಸ ಮೂಡಿತ್ತು. ನನ್ನ ಮಡದಿಯ ಮುಖದಲ್ಲಿಯ ಕಳೆ ಕಂಡ ಮೇಲೆ, ಹೊಟ್ಟೆ ನೋವು ಸ್ವಲ್ಪ ಕಡಿಮೆ ಅನ್ನಿಸತೊಡಗಿತು. ಮನೆಗೆ ಹೋಗೋಣ ಕಣೆ ಈಗ ಸ್ವಲ್ಪ ಪರವಾಗಿಲ್ಲ ಎಂದರು ನನ್ನ ಹೆಂಡತಿ ಕೇಳಲಿಲ್ಲ. ಸ್ವಲ್ಪ ಸಮಯದ ನಂತರ ಒಂದು ಮಾರುತಿ ಕಾರು ನನ್ನ ಸ್ಕೂಟರ್ ಪಕ್ಕ ಬಂದು ನಿಂತಿತು. ಹಾಗೆ ಕಣ್ಣು ಹಾಯಿಸಿದಾಗ ಹೆಲ್ಮೆಟ್ ಹಾಕಿಕೊಂಡು ಒಬ್ಬ ಮನುಷ್ಯ ಕಾರಿನೊಳಗೆ ಕುಳಿತ ಹಾಗೆ ಕಾಣಿಸಿತು, ನೋಡೇ ಅಲ್ಲಿ ಯಾರೋ ಹೆಲ್ಮೆಟ್ ಹಾಕಿಕೊಂಡು ಕಾರಿನಲ್ಲಿ ಕುಳಿತಿದ್ದಾರೆ ಎಂದು ಹೇಳಿದೆ. ಆಗ ನನ್ನ ಹೆಂಡತಿ ಗಹ ಗಹಿಸಿ ನಗಲು ಶುರು ಮಾಡಿದಳು. ರೀ ನೋಡ್ರಿ ಅದು ಇಲಿಯ ಮೇಲಿನ ಗಣಪ ಎಂದಾಗ, ನಾನು ಕೂಡ ಮಂದಹಾಸ ಬಿರಿದೆ. ಆಗ ನನ್ನನ್ನು ಒಮ್ಮೆ ನಾನೆ ಅನಾಮತ್ತಾಗಿ ಪೂರ್ತಿ ನೋಡಿದಾಗ ತಿಳಿಯಿತು ನಾನು ಇಷ್ಟು ಅನಾಹುತವಾಗಿ ನನ್ನಷ್ಟಕ್ಕೆ ನಾನೆ ಘಾಬರಿ ಪಡುವಷ್ಟು ದಪ್ಪಗಾಗಿದ್ದೇನೆ ಎಂದು.


ಕ್ಲಿನಿಕ್ ಒಳಗೆ ಬಂದು ಕುಳಿತೆವು ಡಾಕ್ಟರ ಇನ್ನು ಬಂದಿರಲಿಲ್ಲ. ಯಾರು ಪೇಷೆಂಟ್ ಕೂಡ ಇರಲಿಲ್ಲ. ನಾವೇ ಮೊದಲು ಹೋಗಿದ್ದು. ರಿಸೆಪ್ಶನಿಷ್ಟ ಬಳಿ ಹೋಗಿ ಹೆಸರು ಹೇಳಿ ಬಂದೆವು. ಈ ಡಾಕ್ಟರಗೆ ಇಷ್ಟು ಸುಂದರವಾದ ರಿಸೆಪ್ಶನಿಷ್ಟ ಏಕೆ ಬೇಕು? ಎಂದು ಯೋಚಿಸುತ್ತಿರುವಾಗಲೇ, ಡಾಕ್ಟರ ಹಾಜರಾಗ ಬೇಕೇ. ಯೋಚಿಸುವದು ಬಿಟ್ಟು ಅವಳನ್ನು ಚೆನ್ನಾಗಿ ನೋಡಬಹುದಿತ್ತು. ಸ್ವಲ್ಪ ಸಮಯದ ನಂತರ ರಿಸೆಪ್ಶನಿಷ್ಟ ನನ್ನ ಹೆಸರು ಕೂಗಿದಳು. ಡಾಕ್ಟರ ತಿಂಡಿ ಮಾಡುತ್ತಿದ್ದರು. ವಾಸನೆ ತುಂಬಾ ಚೆನ್ನಾಗಿ ಬರುತಿತ್ತು. ತಿಂಡಿಯ ಚಮಚ ಹಿಡಿದು ನನ್ನ ಬಳಿ ಬಂದು ಎಲ್ಲಿ ಬಾಯಿ ತೆಗೆಯಿರಿ ಎಂದರು. ಬೇಡ ಡಾಕ್ಟರ ಹೊಟ್ಟೆ ನೋವು.... ಎಂದು ಮಕ್ಕಳು ಆಸೆ ಪಟ್ಟರು ದೊಡ್ಡವರ ಅನುಮತಿ ಪಡೆಯುವ ಹಾಗೆ ನನ್ನ ಮಡದಿಯ ಮುಖ ನೋಡಿದೆ. ಚಮಚದಲ್ಲಿಯ ತಿಂಡಿ ಬೇಗನೆ ತಿಂದು. (ಮನಸಿನಲ್ಲಿ ಬಕಾಸುರ ಎಂದುಕೊಂಡಿರಬಹುದು) ರೀ ಬಾಯಿ ತೆಗಿರಿ ನೋಡಬೇಕು ಎಂದರು. ನಾನು ಹಲ್ಲು ಚೆನ್ನಾಗೆ ಉಜ್ಜಿದ್ದೇನೆ ಡಾಕ್ಟರ ಎಂದೇ. ರೀ ನಿಮಗೆ ತಿಂಡಿ ತಿನಿಸೋಕು,ಹಲ್ಲು ಉಜ್ಜೋಕೆ , ಅಥವಾ ಹಲ್ಲು ಉಜ್ಜಿದ್ದು ನೋಡುವದಕ್ಕೆ ಅಲ್ಲ. ನಾನು ಹೇಳಿದಷ್ಟು ಮಾಡಿ ಎಂದರು. ಇದೆ ಮೊದಲ ಸರಿ ನಾ ಹೊಟ್ಟೆ ನೋವು? ಎಂದರು. ಈಗೀಗ ಸ್ವಲ್ಪ ಜ್ಯಾಸ್ತಿ ಡಾಕ್ಟರ ಎಂದೇ. ಈಗೀಗ ಎಂದರೆ ಒಂದೆರಡು ವರ್ಷದಿಂದ ಎಂದೇ. ಹೋಗಿ ತಮ್ಮ ಸಿಟ್ ಮೇಲೆ ಒರಗಿ, ಏನಾದರು ಹಾಳು-ಮುಳು ತಿನ್ದಿರೆನು? ಎಂದು ಕೇಳಿದರು. ನನಗೆ ಹಾಲು ಮೂಳೆ ಅಂದ ಹಾಗೆ ಅನ್ನಿಸಿ, ನನಗೆ ಹಾಲು ಇಷ್ಟ ಇಲ್ಲ ಡಾಕ್ಟರ, ಇನ್ನು ಮೂಳೆ ನಾನು ಮುಟ್ಟೋದೇ ಇಲ್ಲ ನಾನು ಸಸ್ಯಾಹಾರಿ ನೋಡಿ ಬೇಕಾದರೆ ಎಂದು ಜನಿವಾರ ತೋರಿಸಿದೆ. ಆಗ ಡಾಕ್ಟರ ನನ್ನ ಬಿಟ್ಟು ಹೆಂಡತಿಯ ಬಳಿ ಮಾತು ಆರಂಬಿಸಿದರು. ಏನು ತಿಂದರು ನಿಮ್ಮ ಯಜಮಾನರು. ಆಗ ನನ್ನ ಹೆಂಡತಿ ಅಪ್ಪ ಮಗನಿಗೆ ಅದೇ ಧ್ಯಾನ ಡಾಕ್ಟರ ಪಿಜ್ಜಾ.. ಪಿಜ್ಜಾ.. ಮತ್ತೆ ಆ ಚಿಪ್ಸ್ ಎಂದಳು. ನೋಡ್ರಿ ಯಾವತ್ತು ತಳಪಾಯ ಘಟ್ಟಿ ಇರಬೇಕು ಎಂದರು. ನಾನು ಘಾಬರಿ ಇವರೇನು ಡಾಕ್ಟರ ಅಥವಾ ಆಕ್ಟರ್?. ಏನಿದು ಡಬಲ್ ಮೀನಿಂಗ್ ಎಂದು ಮನಸಿನಲ್ಲೇ (ಅಂದುಕೊಂಡೆ ಅವರಂದ ಮಾತಿಗೆ ಹಿಂದೆ ನೋಡದೆ). ಮತ್ತೆ ನಿಮ್ಮ ದಿನಚರಿ ಏನು? ಎಂದು ನನ್ನನ್ನು ಕೇಳಿದರು. ಆಗ ನಾನು ಬೆಳಿಗ್ಗೆ ೭ ಘಂಟೆ ಏಳುವದು ಮತ್ತೆ ಟೀ, ಸ್ನಾನ , ತಿಂಡಿ, ಆಫೀಸ್, ಊಟ, ಮನೆ ಮತ್ತೆ ತಿಂಡಿ ಮತ್ತು ಟೀ ಅನಂತರ ರಾತ್ರಿ ಊಟ ಎಂದೇ. ಡಾಕ್ಟರ ೫ ವರ್ಷದ ಹಿಂದಿನ ದಿನಚರಿ ನೆನಪು ಮಾಡಿ ಹೇಳಿ ಎಂದರು. ಆಗ ಸ್ವಲ್ಪ ಬೇಗನೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಸಂದ್ಯಾವಂದನೆ, ಸ್ನಾನ ನಂತರ ತಿಂಡಿ ಟೀ..... ಅಷ್ಟಕ್ಕೇ ತಡೆದು ನೋಡಿ ನೀವು ಆಗ ಹೇಗೆ ಇದ್ದೀರಿ. ಈಗ ಏನಾಗಿದೆ? ಎಂದು ನೀವೇ ಊಹಿಸಿಕೊಳ್ಳಿ. ನಾವು ನಮ್ಮ ಸಂಸ್ಕೃತಿಯ ಕೆಲವು ವಿಷಯಗಳನ್ನು ಎಂದು ಮರೆಯಬಾರದು. ನಾನು ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ, ಸಂದ್ಯಾವಂದನೆ, ಪ್ರಾಣಾಯಾಮ ಇವುಗಳನ್ನು ತಪ್ಪದೆ ಮಾಡುತ್ತೇನೆ. ಅಲ್ಲದೆ ದಿನಾಲೂ ಒಂದು ತುಳಸಿದಳ ತಿನ್ನುತ್ತೇನೆ. ಹೀಗೆ ಹತ್ತು ಹಲವಾರು ವಿಷಯಗಳನ್ನೂ ತಿಳಿ ಹೇಳಿದರು. ನಿಮ್ಮ ಆಲಸ್ಯತನವನ್ನು ಬಿಟ್ಟು ಮೊದಲಿನ ಹಾಗೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ ಮತ್ತೆ ಹಾಳು-ಮುಳು ತಿನ್ನುವದು ಬಿಟ್ಟು ಬಿಡಿ ಎಂದು ಹೇಳಿದರು. ಮಡದಿ ಇವರು ಯಾವಾಗಲು ಹೀಗೆ ತಲೆ ಇಲ್ಲ.... ಹೊಟ್ಟೆ ಇಲ್ಲ... ಕಣ್ಣು ಯಾವುದಾದರು ಒಂದು ನೋಯುತ್ತಿರುತ್ತದೆ. ಇವರಿಗೆ ಏನಾದರು ಒಳ್ಳೆಯ ಔಷಧ ಕೊಡಿ ಎಂದಳು. ಆಗ ಡಾಕ್ಟರ ನಮಗೂ ಬದುಕಲು ಬಿಡಿ ಮೇಡಂ ಎಂದು ಗಹ ಗಹಿಸಿ ನಕ್ಕು, ನೋಡಿ "ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ". ಎಂದರು. ನೋಡಿ ಯಾರಿಗೆ ಏನೂ ಆಗುವದಿಲ್ಲವೋ ಅವ್ರಿಗೆ ಒಮ್ಮೆ ಲೇ ಏನಾದರು ಆಗುತ್ತೆ ಎಂದರು. ಈ ವಾಕ್ಯ ನನಗೆ ತುಂಬಾ ಹಿಡಿಸಿತು. ನಾವು ಮಣಿದಾಗ ಮಾತ್ರ ಮತ್ತೆ ಸರಿ ಮಾಡಬಹುದು, ಆದರೆ ಮುರಿದೆ ಹೋದರೆ ...?. ಒಂದೆರಡು ಮಾತ್ರೆ ಕೊಟ್ಟರು.ಡಾಕ್ಟರ ಫೀಸ್ ಎಂದಾಗ, 10 ರುಪಾಯಿ ಮಾತ್ರ ತೆಗೆದು ಕೊಂಡರು.



ಪುಣ್ಯಾತ್ಮ ಎಂದು ಮನಸಿನಲ್ಲೇ ಅಂದುಕೊಂಡು ಹೊರಗೆ ಬಂದೆವು. ಅವರ ಮಾತುಗಳು ನನಗೆ ತಲೆಯಲಿ ಗುನುಗುಡುತಿತ್ತು. ಅದೇ ಗುಂಗಿನಲ್ಲಿ ಮತ್ತೆ ರಿಸೆಪ್ಶನಿಷ್ಟ ನೆನಪೇ ಹಾರಿ ಹೋಗಿದ್ದಳು ಛೆ.. ಛೆ... ನೋಡೋಣ ನಾಳೆ ಮತ್ತೆ ಚಾನ್ಸ್ ಸಿಗುತ್ತಾ ಅಂತ. ಆದರೆ ದಿನಚರಿ ಬದಲಿಸಬೇಕು ಎಂಬ ನಿರ್ಧಾರ ?......

Sunday, February 14, 2010

ತರ್ಲೆ ಮಂಜನ ಸಮಯ ಪ್ರಜ್ಞೆ ....

ನಾನು ಒಂದು ದಿವಸ ಕೆಲಸಕ್ಕಾಗಿ ಮೈಸೂರ್ ಹೋಗುವ ಪರಿಸ್ತಿತಿ ಬಂದಿತ್ತು. ಮಂಜ ತಾನು ಬರುತ್ತೇನೆ ಎಂದು ಹೇಳಿದ. ನಾವಿಬ್ಬರು ಪ್ರಾತಃ ಕಾಲದ ವಿಧಿ ವಿಧಾನ ಮುಗಿಸಿ. ತಿಂಡಿ ತಿಂದು ಹೊರಡುವ ಸಮಯದಲ್ಲಿ ಸುಬ್ಬ ಬಂದ. ಸುಬ್ಬ ತನ್ನ ಮದುವೆ ಫಿಕ್ಸ್ ಅಗುವದಿದೆ ಎಂದು ಹೇಳಿದ. ಮತ್ತೆ ಹುಡುಗಿಯ ಫೋಟೋ ತೋರಿಸಿದ. ನಮ್ಮ ಮೈಸೂರ್ ಟ್ರೈನ್ 7.00 ಘಂಟೆಗೆ ಇದ್ದಿದ್ದರಿಂದ ಚೆನ್ನಾಗಿದ್ದಾಳೆ ಎಂದು ಹೇಳಿ ಅವಸರ ಮಾಡಿ ಹೊರಡುತಲಿದ್ದರು. ನಮ್ಮನ್ನು ತಡೆದು ಮತ್ತೆ ಮತ್ತೆ "ಹೇಗಿದ್ದಾಳೆ ಹುಡುಗಿ" ಎಂದು ಸತಾಯಿಸಹತ್ತಿದ. ಆಗ ಮಂಜ ನೀನು ತಾನೆ ನೋಡಿದ್ದು, ಅವಳ ಗುಣ ಸ್ವಭಾವ ಮತ್ತೆ ಮನೆಯಲ್ಲಿ ಹೊಂದಿಕೊಂಡು ಹೋಗುವ ಹಾಗೆ ಇದ್ದರೆ ಸಾಕು ಎಂದು ಹೇಳಿದ. ಮತ್ತೆ ಈ ರೂಪ, ಸೌಂದರ್ಯ ಎಲ್ಲ ಗೌಣ ಎಂದು ತಿಳಿ ಹೇಳಿದ. ಅಷ್ಟಕ್ಕೇ ಸುಮ್ಮನಿದ್ದರೆ ಸಾಕಾಗಿತ್ತು ಸುಬ್ಬ ಅದನ್ನು ಹೇಗೆ ಕಂಡುಹಿಡಿಯುವದು ಹೇಳು ಎಂದು ಸತಾಯಿಸಹತ್ತಿದ. ನಾನು ಗಡಿಯಾರ ಓಡುವದನ್ನೇ ನೋಡುತ್ತಿದ್ದೆ. ಸುಬ್ಬ ಮಂಜನ ಪೂರ್ತಿ ಪಾಠ ಆಗುವವರೆಗೆ ಬಿಡುವನಲ್ಲ ಎಂದು ಮಂಜನಿಗೆ ನಾನೊಬ್ಬನೇ ಹೊರಡುತ್ತೇನೆ ಎಂದು ಹೇಳಿ ಹೊರಟು ನಿಂತೆ. ಮಂಜ ನಾನು ಬರುವೆ ಒಂದು ನಿಮಿಷ ತಡಿ ಎಂದು ಹೇಳಿದ. ಅರ್ಧ ಘಂಟೆಯಾದರು ಬರುವ ನಿಶಾನೆ ಕಾಣಲಿಲ್ಲ. ಅವಳ ಮನೆ ಸಮೀಪ ಹೋಗಿ ಅವಳ ಬಗ್ಗೆ ವಿಚಾರಿಸು ಎಂದು ಹೇಳಿದ. ಅವಳ ಹಿಂದೆ ಹೋಗಿ ಅವಳ ನಡೆ ನುಡಿಯ ಬಗ್ಗೆ ತಿಳಿದು ಕೊಂಡು ಬಾ ಎಂದು ತಾಕೀತ್ ಮಾಡಿದ. ಸುಬ್ಬನಿಗೆ ಎಲ್ಲಿಲ್ಲದ ಖುಷಿಯೋ ಖುಷಿ. ತನ್ನ ಹರಕು ಮುರುಕು ಇಂಗ್ಲಿಷ್ ನಿಂದ ಮತ್ತೆ ಯಾರಿಗೂ Expose ಮಾಡಬೇಡ ಎಂದು ಹೇಳಿದ.

ನಾನು ಬರುತ್ತೇನೆ ಎಂದು ಹೊರಟು ಗೇಟ್ ಬಳಿ ಬಂದೆ. ಅಷ್ಟರಲ್ಲೇ ಮಂಜ ನಗುತ್ತ ಹೊರಗಡೆ ಬಂದ. ಮತ್ತೆ ಮೇಲೆ ನಿಂತು ಸುಬ್ಬ ಯಾರಿಗೂ Expose ಮಾಡಬೇಡ ಎಂದ. ಮಂಜ ಮತ್ತೆ ನಾನು ಒಬ್ಬರನ್ನ ಒಬ್ಬರು ನೋಡಿ ನಕ್ಕು ಆಟೋ ಹಿಡಿದು ಸ್ಟೇಶನ್ ತಲಿಪಿದೆವು.

ಟ್ರೈನ್ ಹತ್ತಿ ಎರಡೆರಡು ಪ್ಲೇಟ್ ಇಡ್ಲಿ , ದೋಸೆ ಸ್ವಾಹಾ ಮಾಡಿ ಸೀಟ್ ಮೇಲೆ ಬಂದಾಗ ತಿಳಿದಿತ್ತು. ಅವಸರದಲ್ಲಿ ಟಿಕೆಟ್ ತರುವದೆ ಮರೆತುಬಿಟ್ಟಿತ್ತು. ಆಗ ಸುಬ್ಬನಿಗೆ ಹಿಡಿ ಶಾಪ ಹಾಕುತಿದ್ದಂತೆ TC ಹಾಜರ್ ಅದ. ನನಗೆ ತುಂಬಾ ಗಲಿಬಿಲಿ ಶುರು ಆಗಿತ್ತು. ಮನಸಿನೊಳಗೆ ಏನೋ ಗೊಂದಲ,ತಳಮಳ. ಆದರೆ ಮಂಜ ಮಾತ್ರ ಆರಾಮಾಗಿ ಇನ್ನೊಂದು ದೋಸೆ ತಿನ್ನುತ್ತ ಕುಳಿತಿದ್ದ. ಮಂಜ ನೀನು ಸುಮ್ಮನಿರು ನಾನು ಸಂಭಾಳಿಸುವೆ ಎಂದು ಹೇಳಿದ. ಅಷ್ಟರಲ್ಲೇ ನಮ್ಮ ಮಂಜ TC ಇರುವ ಕಡೆ ಹೋಗಿ, ನಮ್ಮ ಕಷ್ಟ ವಿವರಿಸಿದ. ಆದರೆ ಆ TC ತುಂಬಾ ಶಾನೆ ಕಿರಿಕ ಮಾಡಲು ಶುರು ಮಾಡಿದ. ಅದೆಲ್ಲ ಆಗೋಲ್ಲ ಮೊದಲು ಟಿಕೆಟ್ ತೋರಿಸಿ ಎಂದು ಹೇಳಿದ. ಎಲ್ಲರು ನಮ್ಮನ್ನೇ ಗುರಾಯಿಸುತ್ತಾ ಇದ್ದರು. ನನಗೆ ಏನೋ ಒಂದು ಅಪರಾಧಿ ಮನೋಭಾವ. ಕೈಯಲ್ಲಿ ದುಡ್ಡಿಲ್ಲ, ಬರಿ Credit ಇಟ್ಟುಕೊಂಡು ಬಂದಿದ್ದೆವು. ಫೈನ್ ಕಟ್ಟಲು ದುಡ್ಡು ಇರಲಿಲ್ಲ. ಇದ್ದಿರುವ 100 ರೂಪಾಯಿಗಳಲ್ಲಿ ಇಡ್ಲಿ ದೋಸೆ ತಿಂದು ಮುಗಿಸಿದ್ದೆವು. ಇನ್ನು ಉಳಿದಿದ್ದು ಚಿಲ್ಲರೆ ದುಡ್ಡು ಮಾತ್ರ ... ಮತ್ತೆ ತುಂಬಾ ಪಿಡಿಸತೊಡಗಿದ TC. ಇದರಿಂದ ಬೇಸತ್ತ ಮಂಜ, ಆಯಿತು ನಾವು ಮ್ಯಾಜಿಸ್ಟ್ರೇಟ್ ಬಳಿ ಹೋಗಲು ರೆಡಿ ಎಂದು ಹೇಳಿದ. ನನಗೆ ಒಳಗೊಳಗೇ ಭಯ. ನೀವೇನಾದರು ಮ್ಯಾಜಿಸ್ಟ್ರೇಟ್ ಬಳಿ ಕರೆದೊಯ್ದರೆ ನಿಮಗೆ ತೊಂದರೆ ಎಂದ ಮಂಜ. ಅದಕ್ಕೆ ಅದು ಹೇಗೆ ಎಂದು ಮಂಜನಿಗೆ ತರಾಟೆಗೆ ತೆಗೆದುಕೊಂಡ TC. ಅದಕ್ಕೆ ಮಂಜ ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುತ್ತೇನೆ ಎಂದ. ಅದನ್ನು ಹೇಳೋಕೆ ನೀನ್ಯಾರಯ್ಯ ಎಂದ. ನೋಡುತ್ತೀರಿ ನಿಮಗೆ ತೊಂದರೆ ಎಂದ. ಅದು ಹೇಗೆ? ಎಂದು ಕೇಳಿದಾಗ ನಾನು ಮ್ಯಾಜಿಸ್ಟ್ರೇಟ್ ಬಳಿ ಎರಡು ವರ್ಷದಿಂದ ಟಿಕೆಟ್ ಇಲ್ಲದೆ ಪ್ರಯಾಣ ಮಾಡುತ್ತಿದೇನೆ. ನೀವು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಹೇಳುವೆ ಎಂದಾಗ, TC ಮೈಯಲ್ಲ ಬೆವತಿತ್ತು . ಆಗ ಮತ್ತೆ ನಮ್ಮನ್ನು ಮುಂದೆ ಕರೆದು ಇದೊಂದು ಸರಿ ಸುಮ್ಮನೆ ಬಿಡುವೆ ಎಂದು ತಾಕೀತ್ ಮಾಡಿ ಹೊರಟು ಹೋದ.

ಈಗ ನಮ್ಮ ಮಂಜನಿಗೆ ಚಿಲ್ಲರೆ ದುಡ್ಡು ಮೇಲೂ ಕಣ್ಣು ಬಿತ್ತು. ಚಾ.. ಪಾ.. ಏನರ? ಕೊಡಿಸ್ತಿಯೇನು? ಎಂದ. ಆಗ ಒಬ್ಬ ಕಾಫಿ ತೆಗೆದುಕೊಂಡು ಬಂದ. ಮಂಜ ಅವನನ್ನು ನೋಡಿ ಇನ್ನೊಂದು ಭೋಗಿ ಒಳಗೆ ಇದ್ದರೂ, ಏ "ಕಪಿ" ಎಂದು ಒದರಿದ. ಬರುತ್ತೇನೆ ತಡಿರಿ ಎಂದು ಕಾಫಿ ಮಾರುವವನು ನಿಂತಲ್ಲೇ ಒದರಿದ. ಎಲ್ಲರು ಇವರಿಬ್ಬರನ್ನೇ ಗುರಯಿಸುತ್ತಿದ್ದರು. ನಾನು ಮಾತ್ರ ನಗುತ್ತಲಿದ್ದೆ. ಕಾಫಿ ಬಂತು ಕಾಫಿ ಹಿರಿ ಕುಳಿತಾಗಲೇ, "ಟೀಚಾ" "ಟೀಚಾ" ಎಂಬ ಶಬ್ದ ಬಂತು. ನೋಡಿದಾಗ ತಿಳಿಯಿತು ಟೀ ಮಾರುವವ ಎಂದು. ಮೊದಲು ಇವನನ್ನು ನೋಡಿದ್ದರೆ ಏ "ಹುಚ್ಚ" ಎಂದೇ ಒದರುತ್ತಿದ ಏಕೆಂದರೆ ಅವನು ಟೀ ಮತ್ತು ಚಾ ಸೇರಿಸಿ "ಟೀಚಾ" "ಟೀಚಾ" ಎಂದು ಒದರುತ್ತ ಟೀ ಮಾರುತ್ತಿದ್ದ.

ಅಷ್ಟರಲ್ಲೇ ರಾಮನಗರ ಸಮೀಪ ಬುರುತ್ತಿದ್ದಂತೆ ಒಬ್ಬ ವ್ಯಕ್ತಿ ಹೊಸ ಲ್ಯಾಪ್ಟಾಪ್ , ಪ್ರಿಂಟರ್ ತೆಗೆದು ಕೊಂಡು ಬರುತ್ತಿದ್ದ. ಅವನ ಬಳಿ ತುಂಬಾ ಕೇಳಿಕೊಂಡು ಲ್ಯಾಪ್ಟಾಪ್ ನಲ್ಲಿ ನೆಟ್ ನಲ್ಲಿ ಟಿಕೆಟ್ ಪ್ರಿಂಟ್ ತೆಗೆದು TC ಗೆ ತೋರಿಸಿಬೇಕೆಂದು ಕಾಯುತ್ತ ಕುಳಿತ್ತಿದ್ದೆವು. TC ನಮ್ಮನ್ನು ನೋಡಿ ಹೆದರಿ ನಾವಿರುವ ಭೋಗಿ ಮತ್ತೆ ಹಾಯಲೇ ಇಲ್ಲ. ಮಂಜ ಸ್ಟೇಷನ್ ಬಳಿ ಟಿಕೆಟ್ ಹಿಡಿದು TC ಬಳಿ ಹೋದ TC ಮಾತ್ರ ಮುಂದೆ ಮುಂದೆ ಓಡುತ್ತಲೇ ಇದ್ದರು. ಇದನ್ನು ನೋಡಿ ನಮ್ಮಿಬ್ಬರಿಗೂ ನಗು ತಡಿಯಲು ಆಗಲೇ ಇಲ್ಲ .

Tuesday, January 12, 2010

ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ..

ನೀ ಸುಮ ಬಾಲೆಯೇ .. ಕುಸುಮ ಬಾಲೆಯೇ ಅಥವಾ ಬೆಳದಿಂಗಳ ಬಾಲೆಯೇ .. ಎಂದೆಲ್ಲಾ ಹೊಗಳುತ್ತಿದ್ದ ಅವಳನ್ನ ರವಿ. ಆ ಅವಳು ಯಾರು? ಎಂಬುದು ಮಾತ್ರ ಒಂದು ದೊಡ್ಡ ಯಕ್ಷ ಪ್ರಶ್ನೆ ಆಗಿತ್ತು. ಏನೇನೋ ಮನಸಿನಲ್ಲಿ ಅಂದು ಕೊಳ್ಳುವದು, ಕೈ ಸನ್ನೆ ಇವೆಲ್ಲವೂ ನೋಡಿದರೆ ಇವನನ್ನು ನಿಜವಾಗಿಯೂ ಒಬ್ಬ ಹುಚ್ಚ ಎಂದು ಯಾರುಬೇಕಾದರು ಹಣೆ ಪಟ್ಟಿ ಅಂಟಿಸಿ ಬಿಡುತ್ತಿದ್ದರು.ಹೆಸರು ಮಾತ್ರ ರವಿ ಆದರೆ ನಿಜವಾಗಿಯೂ ಕಪಿಯ ಪರಾವತಾರವೇ ಆಗಿದ್ದ. ಮೇಘ ಸಂದೇಶ ಅವನಿಗೆ ತುಂಬಾ ಮನಸಿಗೆ ಹಿಡಿಸಿದ ಒಂದು ಕೃತಿ.... ಕ್ಷಮಿಸಿ ಮೇಘನಾ ಅಂತ ಸಂದೇಹ. ಅದನ್ನು ನಮ್ಮೆಲ್ಲರಿಗೂ ವಿವರಣೆ ನೀಡುವಾಗ ಪ್ರತಿಯೊಂದು ಜೀವಿಗೂ ಒಂದೊಂದು ಕನೆಕ್ಷನ್ ಇದೆ ಎಂತಲೂ. ಮತ್ತೆ ನಾವು ಗುನುಗಿಸುತ್ತಿರುವ ಒಂದು ಹಾಡು ಕೂಡ ಬೇರೆಲ್ಲಾದರೂ ತರಂಗಗಳ ಮೂಲಕ ನಮಗೆ ಪ್ರಚೋದಿಸಿ ಅದನ್ನು ಹಾಡುವಂತೆ ಮಾಡುತ್ತವೆ ಎಂದು ಹೇಳುತ್ತಿದ್ದ. ಅವನ ಯಾವ ಮಾತು ನಮಗೆ ಅರ್ಥವಾಗುತ್ತಿರಲಿಲ್ಲ. ಹತ್ತಿರದಿಂದ ಅವನನ್ನು ನೋಡಿದ ಎಲ್ಲರೂ ಅವನ ಅಪ್ಪ ಅಮ್ಮನಿಗೂ ಅರ್ಥವಾಗದ ಒಂದು ಜೀವ ಅದು. ನಮ್ಮ ಮಾಸ್ಟರ್ ಕೂಡ ಅವನಿಗೆ ಎಷ್ಟು ಬೈದರು ಎಂದಿಗೂ ಅದನ್ನು ಕ್ಷುಲ್ಲಕವಾಗಿಯ ಪರಿಗಣಿಸುತ್ತಿದ್ದ. ಅವನ ನಿಜವಾದ ಹಂಬಲಿಕೆ ಏನು?.[ಆದರೆ ನನಗೆ ಗೋತಿತ್ತು :) ಮೇಘನಾ] ಎಂದು ನಾವೆಲ್ಲ ಗೆಳೆಯರು ಕೇಳಿದರು ಹೇಳಲಿಲ್ಲ. ಮಂಜ ಇವನ ಹಾಡನ್ನು ಒಂದು ದಿವಸ ಕೇಳಿದ್ದರಿಂದ "ಲೇ ಅವಳು ಕುಸುಮ ಇರಬೇಕು ಎಂದು". ನಮಗೆ ಹೇಳಿದ. ಲೇ ಆ ಕುಳ್ಳಿ ಕುಸುಮ ಎಂದು ಮಂಜನ ಮೇಲೆ ತುಂಬಾ ಕೆಂಡಾಮಂಡಾಲಾಗಿದ್ದ ರವಿ. ಕಡೆಗೆ ಶಾಲೆ ಬಿಟ್ಟು ಬೇರೆಡೆ ಸೇರಿಕೊಂಡಬಿಟ್ಟ ರವಿ.

ಮೊನ್ನೆ ಗಾಂಧಿ ಬಜಾರ್ ನಲ್ಲಿ ಭೇಟಿಯಾದ ಹಳೆಯ ಎಲ್ಲ ವಿಚಾರಗಳನ್ನು ಮತ್ತೆ ಸ್ಮರಿಸಿಕೊಂಡೆವು. ಮತ್ತೆ ಕಾಫೀ ಕುಡಿದು ಮನೆ ಸೇರಿಕೊಂಡೆವು. ಅನಂತರ ನಮ್ಮ ನಮ್ಮ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತಿಳಿದುಕೊಂಡೆವು. ಮೊದಲಿನ ಹಾಗೆ ಇವ ಇಲ್ಲ ಎಂದು ಅಂದು ಕೊಂಡು, ಇದನ್ನು ಮಂಜನಿಗೆ ಹೇಳಿದೆ. ಆಗ ಮಂಜ ಲೇ "ಹುಟ್ಟು ಗುಣ ಸುಟ್ಟರೂ ಹೋಗುವದಿಲ್ಲ" ಎಂದು ನನಗೆ ಹೇಳಿದ. ಆದರೂ ಅವನು ಸುಧಾರಿಸಿದ್ದಾನೆ ಎಂದು ಹೇಳಿದೆ. ಮಂಜನಿಗೆ ಆಯಿತು ನೋಡೋಣ ಎಂದು ಅವನ ಮಿಂಚಾಂಚೆ ವಿಳಾಸ, ಮೊಬೈಲ್ ನ್೦ ತೆಗೆದುಕೊಂಡ.

ನಾನು ಒಂದು ಹಾಸ್ಯ ಪ್ರಸಂಗದ ಬಗ್ಗೆ ಲೇಖನ ಬರೆದು, ಅದನ್ನು ನನ್ನೆಲ್ಲ ಮಿತ್ರ ಬಾಂಧವರಿಗೆ ಕಳುಹಿಸಿದ್ದೆ. ಎಲ್ಲರು ತುಂಬಾ ಚೆನ್ನಾಗಿದೆ ಎಂದು ಹೇಳಿದರು. ಆದರೆ ರವಿ ಯಾರು ಬರೆದಿದ್ದು ಇದು. ಮಂಜನಾ ಎಂದು ಕೇಳಿದ . ಏಕೆಂದರೆ ಎಲ್ಲರಿಗೂ ಪ್ರೀತಿಯ ಮತ್ತು ಪ್ರಣಯ ಸಂದೇಶ ರವಾನಿಸುವದಕ್ಕೆ ಪ್ರೇಮ ಪತ್ರ ಬರೆಯುವ ಏಕೈಕ ವ್ಯಕ್ತಿ ನಮ್ಮ ಮಂಜ ಒಬ್ಬನೇ. ಇದೇನು ಏನು ಅರ್ಥನೆ ಆಗಲಿಲ್ಲ, ಇದರಲ್ಲಿ ಹೇಳಿಕೊಳ್ಳುವಂತಹ ಏನು ವಿಶೇಷತೆ ಇಲ್ಲ ಎಂದ. ನನಗೆ ಬರೆಯುವ ಹಂಬಲ ಏನೋ ಇದೆ, ಆದರೆ ಓದುವವರು ನನಗೆ ಹೀಗೆ ಹೀಯಾಳಿಸಿದರೆ ಹೇಗೆ ಎಂದು ಯೋಚನೆ ಮಾಡಿ. ನಾನೇ ಬರೆದಿದ್ದು ಎಂದು ಧೈರ್ಯ ಮಾಡಿ ಹೇಳದೇ ಸುಮ್ಮನಾದೆ. ನಾನು ಆಗಿನಿಂದ ಏನು ಬರೆಯ ಬಾರದೆಂದು ನಿರ್ಧಾರಕ್ಕೆ ಬಂದು. ತುಂಬಾ ದಿನಗಳ ಕಾಲ ಏನು ಬರೆಯದೆ ಇದ್ದು ಬಿಟ್ಟೆ. ಒಂದು ದಿನ ಅದೇ ಗೆಳೆಯ ಮತ್ತೆ ನನಗೆ ಫೋನ್ ಮಾಡಿ " ಲೇ ಮತ್ತೆ ಏನು ಬರೆದಿಲ್ಲವಾ? ಎಂದು ಕೇಳಿದ". ನನಗೆ ಆಶ್ಚರ್ಯ, ಹೃದಯಾಘಾತ ಅಗುವದೊಂದೇ ಬಾಕಿ. ಏನಪ್ಪಾ, ನಿನ್ನ ಅರೋಗ್ಯ ಸರಿಯಾಗಿದೆಯಾ? ಎಂದು ನಾನು ವಿಚಾರಿಸಿದೆ. ಆಗ ಚೆನ್ನಾಗಿಯೇ ಇದ್ದೇನೆ ಎಂದು ಹೇಳಿದ. ನಿನ್ನ ಲೇಖನ ನಿಜವಾಗಿಯೂ ಚೆನ್ನಾಗೆ ಇತ್ತು. ಹಾಗೆ ತಮಾಷೆ ಮಾಡಿದ್ದೆ ನಿನಗೆ ಎಂದ. ನನಗೆ ಬರಬಾರದ ಕೋಪ ಬಂದಿತ್ತು. ತನ್ನ ಮನೆಗೆ ನನ್ನನ್ನು ಕಾಫಿಗೆ ಆಹ್ವಾನಿಸಿದ. ನಿನಗೆ ಯಾರು ಹೇಳಿದ್ದು ನಾನು ಬರೆದಿದ್ದೆ ಎಂದು ಕೇಳಿದಾಗ ಮಂಜ ಎಂದು ತಿಳಿಯಿತು.

ಮತ್ತೆ ಮನೆಗೆ ಹೋದ ಮೇಲೆ ತುಂಬಾ ಚೆನ್ನಾಗಿ ನನ್ನನ್ನು ಉಪ್ಪಿಟ್ಟು ಕಾಫಿಯಿಂದ ಉಪಚರಿಸಿದ. ಅನಂತರ ನನಗೆ ಒಂದು ಮುದ್ದು ಮುದ್ದಾದ ಚಿಕ್ಕ ಮಗುವನ್ನು ಕರೆದು ತೋರಿಸಿ ಇವಳು ನನ್ನ ಮಗಳು ಸಹನಾ ಇವಳ ಸ್ಕೂಲ್ ನಲ್ಲಿ ಪ್ರಬಂದ ಸ್ಪರ್ಧೆ ಇದೆ. ಇವಳಿಗೆ ಒಂದು ಪ್ರಬಂದ ಬೆರೆದು ಕೊಡು ಎಂದು ಅಲವತ್ತುಕೊಂಡ. ಈಗ ಅವನ ನಿಜವಾದ ವಿಚಾರ ಏನೆಂದು ನನಗೆ ತಿಳಿಯ ಹತ್ತಿತು. ನನಗೆ ಆ ಮುದ್ದಾದ ಮಗುವನ್ನು ನೋಡಿ ಬರೆಯುವದಿಲ್ಲ ಎಂದು ಹೇಳುವ ಮನಸಾಗಲಿಲ್ಲ ಮತ್ತು ಆಗಲೇ ಉಪ್ಪಿಟ್ಟು ಕಾಫಿ ಹೊಟ್ಟೆ ಸೇರಿದ್ದರಿಂದ ಏನು ಹೇಳುವ ಸ್ತಿತಿಯಲ್ಲಿರಲ್ಲ. ಮೊದಲೇ ಇದನ್ನು ಹೇಳಿದ್ದರೆ ಉಪ್ಪಿಟ್ಟು ಕಾಫಿ ಶತಯುಗತಾಯ ಮುಟ್ಟುತ್ತಿರಲಿಲ್ಲ. ಈಗ ಏನು ಮಾಡಲಾರದೆ ಪ್ರಬಂದ ಬರೆದು ಕೊಟ್ಟು ಮನೆಗೆ ಬಂದೆ.

ಆದರೂ ತನ್ನ ಆ ಮೊದಲಿನ ಬುದ್ಧಿ ಮಾತ್ರ ರವಿ ಬಿಟ್ಟಿರಲಿಲ್ಲಾ. ಸುತಾರಾಂ ತನ್ನ ಹೆಂಡತಿಯನ್ನು ತೋರಿಸಲಿಲ್ಲ ಮತ್ತು ಅವಳ ಬಗ್ಗೆ ಒಂದು ಮಾತನಾಡಲಿಲ್ಲ. ಅವಳು ಮಾತ್ರ ಅಡುಗೆ ಮನೆಯಲ್ಲಿ ಅಡುಗೆ ಮಾಡುತ್ತಿರುವಾಗ ಪಾತ್ರೆಗಳ ಶಬ್ದ ಮಾಡುತ್ತಿದ್ದರಿಂದ ಮನೆಯಲ್ಲಿಯೇ ಇದ್ದಾಳೆ ಎಂಬ ವಿಷಯ ಮಾತ್ರ ತಿಳಿಯಿತು. ಅವನ ಮಖಿನ ಬುದ್ಧಿ ಗೊತ್ತಿದ್ದರಿಂದ ಮುಂದೆಂದೂ ಅವನ ಮನೆ ದಿಕ್ಕಿಗೂ ಮುಖ ಮಾಡಿ ಮಲಗೂವದು ಬೇಡ ಎಂದು ತೀರ್ಮಾನಿಸಿ ಮನೆಗೆ ಬಂದುಬಿಟ್ಟೆ.