Monday, September 3, 2012

ಸುಖ ಸಂಸಾರಕ್ಕೆ ಐದೇ ಸೂತ್ರಗಳು....

ಮಡದಿ ಅಧಿಕ ಮಾಸದ ಬಾಗೀನ ಕೊಡುವ ಸಲುವಾಗಿ, ತವರು ಮನೆಗೆ ಹೋಗುವ ಅರ್ಜಿ ಗುಜರಾಯಿಸಿದ್ದಳು. ಲೇ ನೀನೇ ಒಂದು ತಿಂಗಳ ಮೊದಲಿನಿಂದ ಹೇಳುತ್ತಾ ಬ೦ದಿದ್ದೀಯಾ ಅಲ್ಲವೇನೆ, ಅಧಿಕ ಮಾಸದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಎಂದು ಅಂದೆ. ಕೋಪ ಮಾಡಿಕೊಂಡು ಬಿಟ್ಟಳು.  ಮತ್ತೆ, ನಾನು ಬಂಗಾರದಂತಹ ಗಂಡನ ಮನೆ ಬಿಟ್ಟು, 'ತವರ' ಮನೆಗೆ ಏಕೆ? ಹೋಗುತ್ತಿ ಎಂದು ಅವಳಿಗೆ ಕಾಡಿದ್ದೆ.  ಇದಕ್ಕಾಗಿ ನನ್ನ ಮತ್ತು ಮಡದಿಯ ನಡುವೆ ವಾರದಿಂದ ಸಮರ ನಡೆದಿತ್ತು. ನನ್ನ ಆರು ವರ್ಷದ ಮಗ ಕೂಡ, ನಾನು ಅವನಿಗಿಂತ ಮೊದಲೇ ಸ್ನಾನ ಮಾಡಿದ್ದೇನೆ ಎಂದು, ನನ್ನ ಜೊತೆ ಜಗಳ ಶುರು ಮಾಡಿದ. ಅಷ್ಟರಲ್ಲಿ ಮಂಜ ಮನೆಗೆ ಬಂದ. ಮಂಜ ನನ್ನ ಮಗನಿಗೆ ಸಮಾಧಾನಿಸಲು, ನಿಮ್ಮ ಅಪ್ಪ ನಾಳೆಯ ಬುಷ(ಸ್ನಾನ) ಇನ್ನೂ ಮಾಡಿಲ್ಲ, ಹೀಗಾಗಿ ನೀನೇ ಫಸ್ಟ್ ಸ್ನಾನ ಮಾಡಿದ್ದೂ ಎಂದರು ಕೇಳಲಿಲ್ಲ. ಅದಕ್ಕೆ ಮಂಜ ನಿಮ್ಮ ಅಪ್ಪ ಸೊನ್ನೆ, ನೀನೆ ಮೊದಲು ಎಂದು ಸಮಾಧಾನಿಸಿ, ಅವನನ್ನು ಸ್ನಾನಕ್ಕೆ ಕಳುಹಿಸಿದ.

ಮಡದಿಯ ಕೋಪ ಇಳಿದಿರಲಿಲ್ಲ, ಕೋಪದಿಂದಲೇ ನಮ್ಮಿಬ್ಬರಿಗೆ ತಿಂಡಿ ತಂದು ಟೇಬಲ್ ಮೇಲೆ ಕುಕ್ಕಿ ಹೋದಳು. ತಿಂಡಿ ಮುಗಿಸಿದ ಮೇಲೆ ಕಾಫಿ ತಂದು ಕೊಟ್ಟಳು. ನಾನು ಮತ್ತೊಮ್ಮೆ ನೀರು ಕೇಳಿದೆ. ನಿಮ್ಮ ಗೆಳೆಯ ತಮ್ಮ ರಾಶಿಯ(ಮೀನ) ಹಾಗೆ ನೀರಿನಲ್ಲೇ ಇರಬೇಕಿತ್ತು ಎಂದು ಹಾಗೆ ಕಾಫಿ ಕುಡಿಯಿರಿ ಎಂದಳು. ನಿಜ, ಅನ್ನಿಸಿತು ನಾನು ನೀರು ಸ್ವಲ್ಪ ಜ್ಯಾಸ್ತಿನೇ ಕುಡಿಯುತ್ತೇನೆ. ನನಗೆ ಸಮಾಧಾನ ಆಗಲಿಲ್ಲ, ನೀರು ಕೊಡಲಿಲ್ಲ ಎಂದರೆ, ಮುಂದಿನ ಜನ್ಮದಲ್ಲಿ ಹಲ್ಲಿ ಆಗಿ ಹುಟ್ಟುತ್ತಾರೆ ಎಂದು ಮತ್ತೊಮ್ಮೆ ನೀರು ಕೇಳಿದೆ. ಅವಳು ಲೋಚ್ಚ.. ಲೋಚ್.. ಎಂದು ಲೋಚಗುಡಿದಳು. ಅದಕ್ಕೆ , ಮಂಜ ಮುಂದಿನ ಜನ್ಮದವರೆಗೂ ಕಾಯಬಾರದೇ ತಂಗ್ಯಮ್ಮ ಎಂದ. ಎಲ್ಲರು ನಕ್ಕೆವು, ಮಡದಿ ನೀರು ತಂದು ಟೇಬಲ್ ಮೇಲೆ ಕುಕ್ಕಿದಳು. ಸ್ನಾನ ಮಾಡಿದ್ದರೂ ಇನ್ನೊಮ್ಮೆ ಸ್ನಾನ ಮಾಡಿದ ಹಾಗೆ ಆಗಿತ್ತು. ನಾನು ಕೋಪದಿಂದ, ಏನಿದು ಹೀಗೆ ಎಂದು ಒದರಿದೆ. ನಿಮ್ಮ ಗೆಳೆಯನಿಗೆ ಮೂಗಿನ ಮೇಲೆ ಕೋಪ ಎಂದು ಹೇಳಿದಳು. ಅದು ಇವನ ತಪ್ಪಲ್ಲ ಬಿಡಿ ತಂಗ್ಯಮ್ಮ...ಇದು ಇವನ ಅಪ್ಪ ಅಮ್ಮ ಉಪ್ಪು... ಉಪ್ಪು .. ಮಾಡಿ ಬೆಳಸಿದ್ದಾರೆ, ಅದಕ್ಕೆ, ಇವನಿಗೆ ಬಿ.ಪಿ ಜ್ಯಾಸ್ತಿ. ಅವರ ಮಮಕಾರ ಜ್ಯಾಸ್ತಿ ಆಗಿ, ಮಗ ಬದಲು ಮಂಗ ಆಗಿದ್ದಾನೆ ಅಷ್ಟೇ... ಎಂದ. ಮಡದಿ ಮತ್ತು ಮಂಜ ಜೋರಾಗಿ ನಗಹತ್ತಿದರು. ನೀನೇನು ಕಡಿಮೇನಾ?, ನೀನು ಮನೇಲಿ ಪೂಜಾರಿ, ಬೀದಿಲಿ ಪುಡಾರಿ ಎಂದು ನಾನೊಬ್ಬನೇ ನಕ್ಕೆ.

ಮಗ ಸ್ನಾನ ಮುಗಿಸಿ ಬಂದ. ಮಂಜ ಅವನಿಗೆ "ಗೌಡ್ರು ಬಾಯಿ" ಎಂದ. ಮಗನಿಗೆ ತಿಳಿಯಲಿಲ್ಲ. ಹಾಗೆ ಅಂದರೆ ಅಂಕಲ್ ಎಂದ. good boy ಅಂತ ಅಂದ. ನನ್ನ ಮಗ ತಿಂಡಿ ತಿನ್ನುವಾಗ ಹಠ ಮಾಡುತ್ತ ಇದ್ದ. ನಾನು, ತಿಂಡಿ ಹೀಗೆ ಒಣ.. ಒಣ.. ಮಾಡಿದರೆ ಹೇಗೆ ತಿನ್ನಬೇಕು ಎಂದು ಮಡದಿಗೆ ಬೈದೆ. ಏನು? ಮುದುಕರ ಹಾಗೆ ಆಡುತ್ತೀರಿ, ನಿಮಗೆ ಏನು ಹಲ್ಲು ಇಲ್ಲವಾ ಎಂದು ಹಲ್ಲು ಕಡಿದು ಮಾತನಾಡಿದಳು. ಏನು ಮಾಡಿದರು ಒಂದು ಹೆಸರು ಇಡುವುದೇ ಆಯಿತು ನಿಮ್ಮದು ಎಂದಳು. "ನಿಂದಕರಿರಬೇಕು ಇರಬೇಕು...ಹಂದಿ ಇದ್ದರೆ ಕೇರಿ...ಹ್ಯಾಂಗೆ ಶುದ್ಧಿಯೊ ಹಾಂಗೆ" ಎಂದು ಪುರುಂದರ ದಾಸರ ಪದ ಕೇಳಿಲ್ಲವೇ ಎಂದೆ. ಮಗ ಅಪ್ಪ ಏನು? ಎಂದರು ಎಂದು ಅವರ ಅಮ್ಮನಿಗೆ ಕೇಳಿದ. ನಿಮ್ಮ ಅಪ್ಪನಿಗೆ ಹಂದಿ ಅನ್ನಬೇಕಂತೆ ಎಂದಳು. ನಿನಗೆ ಗೊತ್ತ? ಎಲ್ಲರೂ ಒಳ್ಳೆಯ ಊಟಕ್ಕೆ ರಸಗವಳ ಎನ್ನುತ್ತಾರೆ. ಯಾರು ಒಣಗವಳ ಅನ್ನುವುದಿಲ್ಲ, ಹಾಗೆ ಮಾಡಿದರೆ ಬಾಯಿಯೊಳಗೆ ಲಾವಾರಸ ಬರುತ್ತೆ ಎಂದು ಬಾಯಿ ತಪ್ಪಿ, ಲಾಲಾರಸದ ಬದಲು ಅಂದೆ. ಹೌದು ನಿಮ್ಮ ಬಾಯಲ್ಲಿ ಯಾವತ್ತು ಅದೇ ಇರುತ್ತೆ, ಯಾವತ್ತು ಕೆಂಡ ಕಾರುತ್ತಾ ಇರುತ್ತೀರಿ ಎಂದಳು. ನಿಮ್ಮ ಪ್ರತಾಪವೆಲ್ಲ ನನ್ನ ಮುಂದೆ ತೋರಿಸಬೇಡಿ, ಎಲ್ಲಾ ಅಳ್ಕ ತಿಂದು.. ತಿಂದು.. ಅಳು ಪುಂಜಿ ಆಗಿದ್ದೀರಾ ಎಂದಳು.

ಮಗ ತಿಂಡಿ ಮುಗಿಸಿ ನೀರಿನಿಂದ ಬರೆಯುತ್ತ ಇದ್ದ. ಮಡದಿ ಅವನಿಗೆ ಕೋಪದಿಂದ "ನೀರಿನಿಂದ ಎಷ್ಟು ಸಾರಿ ಹೇಳುವುದು ಬರಿಬೇಡ" ಎಂದು ಚೀರಿದಳು. ನಾನು ಏನು ಆಗುತ್ತೆ, ಏನೋ ಅಪ್ಪನ ದುಡ್ಡು ಉಳಿಸುತ್ತಾ ಇದ್ದಾನೆ. ಬುಕ್, ಪೆನ್ಸಿಲ್ ನಲ್ಲಿ ಬರೆದು ಖಾಲಿ ಮಾಡುವ ಬದಲು ಒಳ್ಳೆಯದೇ ಅಲ್ಲವೇ ಎಂದೆ. ನಿಮ್ಮ ಇಷ್ಟ ನೀರಿನಿಂದ ಬರೆದರೆ ಸಾಲ ಆಗುತ್ತೆ ಎಂದು ಹೇಳಿದಳು. ಕಡೆಗೆ ನಾನೇ ಹೋಗಿ ಅವನನ್ನು ಬಿಡಿಸಿ, ಪೆನ್ನು ಬುಕ್ ಕೊಡಬೇಕಾಗಿ ಬಂತು. ಅದಕ್ಕೆ ಮಂಜ "ಲೇ ನೀನು ತುಂಬಾ ದಿನದಿಂದ ಹೋಂ ಲೋನ್ ಸಿಕ್ಕಿಲ್ಲ" ಎಂದು ಒದ್ದಾಡುತ್ತಾ ಇದ್ದೆ. ಈಗ ನಿನ್ನ ಮಡದಿನೇ ಐಡಿಯಾ ಕೊಟ್ಟಿದ್ದಾಳೆ, ನೀನು ಬರಿ ನೀರಿನಿಂದ ಎಂದು ನಗುತ್ತ ನನಗೆ ಹೇಳಿದ.

ಮಡದಿ ಕಸ ಗೂಡಿಸಲು ಶುರು ಮಾಡಿದಳು, ನನ್ನ ಕಾಲನ್ನು ಮೇಲೆ ಎತ್ತು ಎಂದಳು. ನಾನು ಎತ್ತುವುದಿಲ್ಲ ಎಂದು, ಸುಮ್ಮನೆ ಹಾಗೆ ಕುಳಿತೆ. ಕಸಬರಿಗೆ ನಿಮಗೆ ತಗುಲಿದರೆ ನೀವೇ ಸೊರಗುತ್ತೀರಾ ಎಂದಳು. ಕಡೆಗೆ ವಿಧಿ ಇಲ್ಲದೆ ಕಾಲು ಮೇಲೆ ಎತ್ತಿದೆ. ಕಸ ಗೂಡಿಸಿ ಬಂದಳು.

ಇನ್ನು ಕಾಯಲು ಆಗುವುದಿಲ್ಲ ಎಂದು ಮಂಜ ನಗುತ್ತಾ... ಕಡೆಗೆ, ತನ್ನ ಜೇಬಿನಿಂದ ಕವರ್ ತೆಗೆದು ಕೊಟ್ಟ. ಏನೋ ಇದು ಎಂದೆ. ನೀನೆ ಹೇಳಿದ್ದೆ ಅಲ್ಲವಾ ಟಿಕೆಟ್ ಎಂದ. ನಿನ್ನೆ ಅವನಿಗೆ ಫೋನ್ ಮಾಡಿ, ಮಡದಿಯ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಲು ಹೇಳಿದ್ದೆ. ಬೇಗ ಕೊಡಲು ನಿನಗೇನೋ ಧಾಡಿ ಎಂದು ಬೈದೆ. ಬೇಗನೆ ಕೊಟ್ಟಿದ್ದರೆ ನನಗೆ ಸಿಕ್ಕ ಪುಕ್ಕಟೆ ಮನರಂಜನೆ ಮಿಸ್ ಆಗುತ್ತಿತ್ತು ಎಂದು ನಕ್ಕ. ಇದನ್ನು ಅಡುಗೆ ಮನೆಯಿಂದ ಕೇಳಿಸಿಕೊಂಡ ಮಡದಿ, ಎರಡೇ ಸೆಕೆಂಡಿನಲ್ಲಿ ಪಕ್ಕಕ್ಕೆ ಬಂದು ನಿಂತಿದ್ದಳು. ನನಗೆ ಗೊತ್ತಿತ್ತು ನೀವು ತುಂಬಾ ಒಳ್ಳೆಯವರು ಎಂದು ಉಲಿದಳು. ಇದೆ ಸರಿಯಾದ ಸಮಯ ಎಂದು, ಲೇ ಸ್ವಲ್ಪ ಅಡಿಕೆ ಕೊಡೆ ಎಂದೆ. ಹೋಗಿ ಅಡಿಕೆ ಡಬ್ಬದ ಸಹಿತ ಎರಡೇ ಸೆಕೆಂಡಿನಲ್ಲಿ ಹಾಜರ್ ಆಗಿದ್ದಳು. ಮಂಜನಿಗೆ ಕೊಟ್ಟಳು. ನಾನು ಎಡ ಕೈ ಮುಂದೆ ಚಾಚಿದೆ. ರೀ ನಿಮಗೆ ಬುದ್ಧಿ ಇಲ್ಲವಾ ಎಷ್ಟು ಬಾರಿ ಹೇಳುವುದು ಎಡ ಕೈಯಲ್ಲಿ ಅಡಿಕೆ ತೆಗೆದುಕೊಂಡರೆ ಜಗಳ ಆಗುವದೆಂದು ಎಂದು, ಜಗಳ ಶುರು ಮಾಡಿದಳು. ಮತ್ತೆ ಬಲ ಕೈಯಲ್ಲಿ ಅಡಿಕೆ ತೆಗೆದುಕೊಂಡೆ. ಅಡುಗೆ ಮನೆಗೆ ಹೊರಟು ಹೋದಳು. ನಮ್ಮಿಬ್ಬರನ್ನು ನೋಡಿ ಮಂಜ ಮತ್ತೆ ನಗಲು ಶುರು ಮಾಡಿದ. ಅಷ್ಟರಲ್ಲಿ ಉದಯ ಟಿ.ವಿಯಲ್ಲಿ "ಸುಖ ಸಂಸಾರಕ್ಕೆ ಏಳು ಸೂತ್ರಗಳು" ಎಂಬ ಚಲನಚಿತ್ರ ಶುರು ಆಯಿತು. ಅದಕ್ಕೆ ಮಂಜ ನಿನ್ನ ಸುಖ ಸಂಸಾರಕ್ಕೆ ಏಳು ಸೂತ್ರಗಳು ಏನು? ಗೊತ್ತೇ...ತವರು ಮನೆಗೆ ಆಗಾಗ ಕರೆದುಕೊಂಡು ಹೋಗಬೇಕು... ತುಂಬಾ ಸಾರಿ, ನೀರು ಕೇಳಬಾರದು... ಕಸ ಹೊಡೆಯುವಾಗ, ಕಾಲು ಮೇಲೆತ್ತ ಬೇಕು...ನೀರಿನಿಂದ ಬರೆಯಬಾರದು,ಲೇಖನ ಬರೆದು ಬಿಟ್ಟೀಯಾ ನೀರಿನಿಂದ ಹುಷಾರ್ ಎಂದ...ಎಡ ಕೈಯಿಂದ ಅಡಿಕೆ ತೆಗೆದುಕೊಳ್ಳಬಾರದು... ಅಯ್ಯೋ ಐದೇ ಅಯಿತಲ್ಲೋ? ಎಂದು ಜೋರಾಗಿ ನಗಹತ್ತಿದ.

11 comments:

  1. Chennaagi barediddiri....nivu maaDida tappannu naanu maaDalla...

    thank you..

    ReplyDelete
  2. sir....tumbaa chennagide nimma nage baraha....

    ReplyDelete
  3. ಮಂಜ ಇಡೀ ದಿನ ಅಥವಾ ಒಂದೆರಡು ದಿನ ನಿಮ್ಮ ಮನೆಯಲ್ಲಿ ನಿಂತಿದ್ದರೆ ಬಹುಶಃ ಸುಖಸಂಸಾರಕ್ಕೆ ಸಾವಿರ ಸೂತ್ರ ಹೇಳುತ್ತಿದ್ದನೋ ಏನೋ!!!!!
    ಚೆನ್ನಾಗಿದೆ

    ReplyDelete
    Replies
    1. :-)))ನಿಜ...
      ತುಂಬಾ ಧನ್ಯವಾದಗಳು ಮತ್ತು ವಂದನೆಗಳು ...
      --ಅಕ್ಕರೆಯಿಂದ ಗೋಪಾಲ್.

      Delete
  4. Tumba chenagide sir super agi baritira

    ReplyDelete
    Replies
    1. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ...
      --ಅಕ್ಕರೆಯಿಂದ ಗೋಪಾಲ್.

      Delete
  5. ಸರ ನೀವಂತು ಸಖತ ಬರೀತ್ತಿರಾ

    ReplyDelete
  6. ತುಂಬಾ ಧನ್ಯವಾದಗಳು ಮತ್ತು ವಂದನೆಗಳು ...
    --ಅಕ್ಕರೆಯಿಂದ ಗೋಪಾಲ್.

    ReplyDelete