Saturday, February 5, 2011

ಹೆಚ್ಚು ಪೂರ್ವಕ್ಷರ....

ಪ್ರಸಿದ್ಧ ವ್ಯಕ್ತಿಗಳ ಹೆಸರುಗಳ ಬಗ್ಗೆ ಒಮ್ಮೆ ಯೋಚಿಸುತ್ತಾ ಇದ್ದೆ. ಎಲ್ಲಾ ಪ್ರಸಿದ್ದ ವ್ಯಕ್ತಿಗಳಲ್ಲಿ ಒಂದು ಸಾಮ್ಯತೆ ಕಂಡು ಬಂತು. ಅದು ಏನೆಂದರೆ ಎಚ್ ಎಂಬ ಪೂರ್ವಕ್ಷರ {ಪೂರ್ವ(ಮೊದಲ) ಅಕ್ಷರ}. ಎಚ್ ಪೂರ್ವಕ್ಷರಗಳಲ್ಲಿ ನನ್ನ ಮೆಚ್ಚಿನ ಹಾಸ್ಯ ಲೇಖಕರಾದ ನಮ್ಮ ಶ್ರೀ ಎಚ್ ಡುಂಡಿರಾಜ್ ಕೂಡ. ಕೆಲವರು ಇದನ್ನು ಹೆಚ್ ಎಂದು ಕೂಡ ಬರೆಯುವುದುಂಟು. ಈ ಹೆಚ್(ಎಚ್) ಎನ್ನುವುದು ಕನ್ನಡೀಕರಿಸಿದರೆ ಹೆಚ್ಚು ಎಂದು ಆಗಬಹುದೇನೋ, ಅದಕ್ಕೆ ಅವರು ಅಷ್ಟು ಹೆಚ್ಚು ಹೆಚ್ಚು ನಮ್ಮನ್ನು ನಗಿಸುತ್ತಾ ಹಾಸ್ಯ ಲೇಖನಗಳನ್ನು ಬರೆದಿರೋದು. ಸಂಪದ ಸೃಷ್ಟಿಕರ್ತರಾದ ಶ್ರೀ ಹರಿಪ್ರಸಾದ್ ನಾಡಿಗ್ ಅವರ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ. ಮತ್ತೆ ನನ್ನ ಆಪ್ತರಾದ ದುಬೈ ಮಂಜಣ್ಣನ ಹೆಸರು ಕೂಡ ಹೆಚ್ ನಿಂದ ಶುರು ಆಗುತ್ತೆ , ಹೊಳೆನರಸಿಪುರ ಮಂಜುನಾಥ ಎಂದು. ಮತ್ತೆ ನನ್ನ ಸಹೃದಯಿ ಮಿತ್ರ ಹರೀಶ್ ಅತ್ರೇಯ....ಹೀಗೆ ಹಲವಾರು...
ನಾನು ಏಕೆ? ಹೀಗೆ ಹೆಚ್ ಹಚ್ಚಿಕೊಳ್ಳಬಾರದು ಎಂಬ ಆಲೋಚನೆ ಮನದಲ್ಲಿ ಮೂಡಿತು. ಅದನ್ನು ಹಚ್ಚಿಕೊಳ್ಳೋಕೆ ಅದೇನು ಎಣ್ಣೆಯೆ?. ಅದನ್ನು ಹಚ್ಚಿಕೊಳ್ಳೋಕೆ ಪೂರ್ವಾಪರ ಬೇಕೇ ಬೇಕು. ಆದರೆ ಈ ಹೆಚ್ ಹಚ್ಚಿಕೊಂಡಲ್ಲಿ, ಮತ್ತೆ ಯಾರಾದರೂ ಕೇಳಿದರೆ ಹೆಚ್ ಏನು? ಎಂದು ಎಂಬ ವಿಷಯ ಕೂಡ ಮನದಲ್ಲಿ ತೇಲಾಡಿತು. ಹೆಚ್ ಎಂದರೆ ಹೆಸರು ಗೋಪಾಲ್ ಎಂದು ಹೇಳಿದರೆ ಹೇಗೆ ಎಂದು ಕೂಡ ಅನ್ನಿಸಿತು. ಇದನ್ನು ಕೇಳಿಯೇ ನನ್ನನ್ನು ಹುಚ್ಚನೆಂದು ಕೊಂಡುಬಿಟ್ಟಾರು ಎಂದು ಬಿಟ್ಟು ಬಿಟ್ಟೆ.
ಮತ್ತೆ ಇದನ್ನು ನನ್ನ ಗೆಳೆಯ ಸುಬ್ಬನಿಗೆ ಕೇಳಿದೆ. ಸುಬ್ಬ ಸಿಕ್ಕಿದ್ದೇ ಚಾನ್ಸ್ ಎಂದು, ಹುಚ್ಚ ಎಂದು ಬಿಡಬೇಕೆ. ಸಧ್ಯ ಯಾರು ಕೇಳಿಸಿಕೊಳ್ಳಲಿಲ್ಲ. ಮತ್ತೆ ಯಾರಿಗೂ ಕೇಳಬಾರದು ಎಂಬ ನಿರ್ಧಾರಕ್ಕೆ ಬಂದುಬಿಟ್ಟೆ. ನಾನು ಹುಟ್ಟಿದ್ದು ಧಾರವಾಡ, ಅಲ್ಲಿ ಕೂಡ ಡಿ ಬರುತ್ತೆ, ಹರಿಹರ,ಹಾವೇರಿಯಲ್ಲಿ ಹುಟ್ಟಿದ್ದರೆ ಚೆನ್ನಾಗಿರುತಿತ್ತು ಎಂದು ಯೋಚಿಸಿದೆ. ಛೇ ಈಗ ಹುಟ್ಟಿ ಆಗಿದೆಯಲ್ಲಾ, ಎನ್ನೆನೂ ಮಾಡಲಾಗುವುದಿಲ್ಲ. ಮತ್ತೆ ಹುಟ್ಟಿದ್ದು ಹಾಸ್ಪಿಟಲ್ ನಲ್ಲಿ ಅಲ್ಲವಾ.. ಆದರೆ ಈ ಹೆಚ್ ಸೂಕ್ತವಲ್ಲ ಎಂದೆನಿಸಿ ಬಿಟ್ಟಿತು. ಮತ್ತೆ ಧಾರವಾಡದಲ್ಲಿ ಪ್ರಸಿದ್ದಿ ಇದ್ದಿದ್ದು ಎಂಬ ಯೋಚನೆಗೆ ನಗೆ ಬೀರಿ ಹುಚ್ಚರ ಆಸ್ಪತ್ರೆ ಎಂದು ಕೂಡ ಮನದಲ್ಲಿ ಬಂತು. ನನ್ನಷ್ಟಕ್ಕೆ ನಾನೇ ನಕ್ಕೂ ಮತ್ತೆ ಆಲೋಚನೆ ಶುರು ಮಾಡಿದೆ. ತಂದೆ ಹೆಸರು ಹಾಕಿಕೊಂಡರೆ ಎಂ ಮಾಧವ. ಹೆಚ್ಚು.. ಹೆಚ್ಚು.. ಯೋಚಿಸಿದಷ್ಟು ತಲೆ ಬಿಸಿಯಾಗತೊಡಗಿತು.
ಹೆಚ್ ಬಗ್ಗೆ ಯೋಚಿಸುತ್ತಾ "ಹಚ್ಚೇವು ಕನ್ನಡದ ದೀಪ" ಎಂಬ ಹಾಡು ಕೂಡ ನೆನಪು ಆಯಿತು. ಹೀಗೆ ಯೋಚಿಸುತ್ತಾ ಏನೇನೋ ಕೈ ಕಾಲು ಆಡಿಸುತ್ತಾ ಒಬ್ಬನೇ ಮಾತನಾಡುವುದು ಎಲ್ಲವನ್ನು ಮಾಡುತ್ತಾ ಇದ್ದೆ. ರಾತ್ರಿ ನಿದ್ದೆ ಕೂಡ ಬರಲಿಲ್ಲ. ಕಡೆಗೆ ನನ್ನ ವಿಚಿತ್ರ ವರ್ತನೆ ನೋಡಿ ಮಡದಿ ಕೇಳಿಯೇ ಬಿಟ್ಟಳು. ಏನು? ಯಾಕೆ ಹೀಗೆ ಆಗಿದ್ದೀರಿ ಎಂದು. ನಾನು ಪ್ರಸಿದ್ದ ವ್ಯಕ್ತಿ ಆಗಬೇಕೆಂದಿರುವೆ, ಏನಾದರೂ? ಮಾಡಿ ಎಂದು ಹೇಳಿದೆ. ಅದೆಲ್ಲ ದೇವರ ಇಚ್ಛೆ ನೀವೇಕೆ ಅಷ್ಟು ಯೋಚಿಸುತ್ತೀರಿ ಎಂದಳು. ಎಚ್ ಬಗ್ಗೆ ತುಂಬಾ ವಿವರವಾಗಿ ಹೇಳಿದೆ. ನನ್ನನ್ನು ಕುಹಕವಾಡಿ ನಗಲು ಆರಂಭಿಸಿದಳು. ಹೆಚ್ ಹಚ್ಚುವ ಕೆಲಸ ಆಮೇಲೆ ಮುಂದುವರಿಸಿ, ಮೊದಲು ಈ ತರಕಾರಿ ಹೆಚ್ಚಿ ಎಂದು ಹೇಳಿ ನಗುತ್ತಾ ಅಡುಗೆ ಮನೆಗೆ ಹೊರಟು ಹೋದಳು. ತರಕಾರಿ ಅಷ್ಟು ಹೆಚ್ಚಿ ಕೊಟ್ಟರು ಹೆಚ್ ಮಾತ್ರ ಹೊಳಿಲೆ ಇಲ್ಲ. ಮತ್ತೆ ಅಡುಗೆ ಮನೆಯಿಂದ ಬಂದು, ಬರಿ ಹೆಸರು ಬದಲು ಮಾಡಿದರೆ ಆಗುತ್ತಾ, ಮೊದಲು ನಿಮ್ಮನ್ನು ನೀವು ಬದಲಿಸಿ. ಒಳ್ಳೆಯ ಹವ್ಯಾಸ ಬೇಳಿಸಿಕೊಳ್ಳಿ. ದೇವರ ಮೇಲೆ ನಂಬಿಕೆ ಇರಲಿ, ತಾನಾಗಿಯೇ ಪ್ರಸಿದ್ಧಿಗೆ ಬರುತ್ತೀರಿ. ಅದು ಎಲ್ಲಾ ಬಿಟ್ಟು ಹೀಗೆ ಹೆಸರು ಬದಲಿಸುವ ವಿಚಾರಕ್ಕೆ ಏಕೆ? ಬರುತ್ತೀರಿ ಎಂದು ಹೇಳಿದಳು. ಅವಳು ಹೇಳಿದ ಮಾತಿಗೆ ನನ್ನ ಅಹಂ ಸ್ವೀಕರಿಸಲಿಲ್ಲ. ಕಡೆಗೆ ತಿಂಡಿ ತಿಂದು ಆಫೀಸ್ ಕಡೆಗೆ ಹೊರಟೆ.
ದಾರಿಯುದ್ದಕ್ಕೂ ಹಳಿಯೇ ಇಲ್ಲದ ರೈಲಿನ ಹಾಗೆ ನನ್ನ ಮನಸ್ಸು ಎಲ್ಲೆಲೋ ಹೊರಳಾಡುತ್ತಾ ಹೊರಟಿತ್ತು. ಹರಿಯುವ ನೀರಿಗೆ ಕಡಿವಾಣ ಹಾಕಬಹುದು, ಆದರೆ ಈ ಮನಸ್ಸಿಗೆ ಮಾತ್ರ ಕಡಿವಾಣ ಹಾಕಲು ಆಗುವುದಿಲ್ಲ. ಇದಕ್ಕೆ ಪ್ರತಿಯಾಗಿ ಹರಿ-ಹರರನ್ನು ಕೂಡ ನೆನದಿದ್ದು ಆಯಿತು. ಮಗ ಹಾಡುತ್ತಿದ್ದ ಹಮ್ ಹೋಂಗೆ ಕಾಮಿಯಾಬ್ ಎಂಬ ತುಂಬಾ ಸುಂದರವಾದ ಹಾಡು ಕೂಡ ಮನದಲ್ಲಿ ಬಂತು. ಈ ಕಾಮಿಯಾಬಿ ಎಂಬುದು ಮಾತ್ರ ಹತ್ತಿರ ಸುಳಿಯಲಿಲ್ಲ. ಪೂರ್ವಾಪರ ಸಿಗದೆ ಒದ್ದಾಡಿ ಹಣಿ ಹಣಿ ಗಟ್ಟಿಸಿದೆ, ಒಂದು ಹನಿ ಕಣ್ಣೀರು ಕೂಡ, ನನ್ನ ಮಾತು ಕೇಳಲಿಲ್ಲ. ಹನಿ ಹನಿ ಕೂಡಿದರೆ ಹಳ್ಳ ಎಂಬ ಗಾದೆ ಮಾತ್ರ ನೆನಪಿಗೆ ಬಂತು.
ಇದನ್ನು ನನ್ನ ಆಪ್ತ ಗೆಳೆಯನಾದ ಮಂಜನಿಗೆ ಹೇಳಬೇಕು ಎಂದು ಅನ್ನಿಸಿತು. ಕೇಳಿಯೇ ಬಿಟ್ಟೆ. ಅವನು ಸಿಕ್ಕೆದ್ದೆ ಚಾನ್ಸ್ ಎಂದು ಹೆಚ್ಚು.. ಹೆಚ್ಚು.. ನನ್ನನ್ನು ಧಾರವಾಡದ ಭಾಷೆಯಿಂದ ಹೊಗಳಿ ಹಾಡಿದ. ಮತ್ತೆ

ಹೆಸರು ಹೆಸರೆಂದು ನೀಂ ಬಸವಳಿವುದೇಕಯ್ಯ? |
ಕಸದೊಳಗೆ ಕಸವಾಗಿ ಹೋಹನಲೆ ನೀನು? ||
ಮುಸುಕಲೀ ಧರೆಯ ಮರೆವೆನ್ನನ್; ಎನ್ನುತ ಬೇಡು |
ಮಿಸುಕದಿರು ಮಣ್ಣಿನಲಿ - ಮಂಕುತಿಮ್ಮ ||

ಮತ್ತು

ಅನ್ನದಾತುರಕಿಂತ ಚಿನ್ನದಾತುರ ತೀಕ್ಷ್ಣ
ಚಿನ್ನದಾತುರಕಿಂತ ಹೆಣ್ಣುಗಂಡೊಲವು
ಮನ್ನಣೆಯ ದಾಹವಂ ಎಲ್ಲದಕೂ ತೀಕ್ಷ್ಣತಮ
ತಿನ್ನುವುದದಾತ್ಮವನೆ -ಮಂಕುತಿಮ್ಮ||

ಎಂದು ಮಂಕುತಿಮ್ಮನ ಕಗ್ಗ ಹೇಳಿ ನನ್ನನ್ನು ಹೀಯಾಳಿಸಿದ.

ಇನ್ನೂ ಎಲ್ಲರನ್ನೂ ಕೇಳಿ ಹುಚ್ಚನಾಗುವುದು ಸಾಕೆನಿಸಿತು. ನನ್ನ ಹೆಸರಿಗೆ ಏನು? ಆಗಿದೆ ಎಂದು ಯೋಚಿಸಿದೆ. ಸರಿಯಾಗಿಯೇ ಇದೆಯಲ್ಲ, ಇದೆಲ್ಲವನ್ನೂ ಬಿಟ್ಟು ನನ್ನ ಮಡದಿ ಹೇಳಿದ ಹಾಗೆ ನನ್ನ ಕೆಲಸ,ಕರ್ತವ್ಯಕ್ಕೆ ಮಹತ್ವ ಕೊಟ್ಟು, ಒಳ್ಳೆಯ ಹವ್ಯಾಸ ಬೆಳಿಸಿ ಕೊಳ್ಳಬೇಕು ಎಂದು. ಹಾಡು ಹಳೆಯದಾದರೇನು ಭಾವ ನವ ನವೀನಾ ಎನ್ನುವ ಹಾಗೆ, ನಾವು ಬದುಕಿದರೆ ಸಾಕಲ್ಲವೇ?....

ಮತ್ತೆ ಡಿ.ವಿ.ಜಿ ಅವರು ಹೇಳಿದ ಹಾಗೆ

ಹೆಸರು ಹೆಸರೆಂಬುದೇಂ? ಕಸುರು ಬೀಸುವ ಗಾಳಿ |
ಹಸೆಯೊಂದು ನಿನಗೇಕೆ ಬ್ರಹ್ಮಪುರಿಯೊಳಗೆ? ||
ಶಿಶುವಾಗು ನೀಂ ಮನದಿ; ಹಸುವಾಗು; ಸಸಿಯಾಗು |
ಕಸಬೊರಕೆಯಾಗಿಳೆಗೆ - ಮಂಕುತಿಮ್ಮ || 

(ಸ್ಪೂರ್ತಿ :-ಹಾಸ್ಯ ಲೇಖಕರಾದ ಶ್ರೀ ಡುಂಡಿರಾಜರ ಪೂರ್ವಕ್ಷರ ಪೂರ್ವಾಪರ ಎಂಬ ಲೇಖನ.)

3 comments:

  1. ಹ ಹ ಹ ,ಎಚ್ /ಹೆಚ್ ಮಹಿಮೆ ಚೆನ್ನಾಗಿದೆ.
    --
    ಪ್ರೀತಿಯಿಂದ ನಿಮ್ಮವ ಬಾಲು.[ನಿಮ್ಮೊಳಗೊಬ್ಬ ]

    ReplyDelete
  2. ತಮ್ಮ ನಿರಂತರ ಅಭಿಮಾನದ ಮಾತುಗಳೇ ನನಗೆ ಬೆರೆಯಲು ಪ್ರೇರಣೆ ಬಾಲು ಸರ್, ತುಂಬಾ ಧನ್ಯವಾದಗಳು ಮತ್ತು ವಂದನೆಗಳು.
    ----
    ಪ್ರೀತಿಯಿಂದ ಗೋಪಾಲ್ ಮಾ ಕುಲಕರ್ಣಿ

    ReplyDelete
  3. ಸೀತಾರಾಮ. ಕೆ. sir ಮೆಚ್ಚಿ ಪ್ರತಿಕ್ರಿಯಿಸಿದ್ದಕ್ಕೆ ತುಂಬಾ ಧನ್ಯವಾದಗಳು ಮತ್ತು ವಂದನೆಗಳು...
    ಪ್ರೀತಿಯಿಂದ ಗೋಪಾಲ್

    ReplyDelete