Friday, August 28, 2009

ಬಳುಕುವ ಬಿಂಕದ ಬಳ್ಳಾರಿ ....

ನನ್ನ ಟೀಂ ಲೀಡರ್ ಪಾಂಡುರಂಗನ ಆಜ್ಞೆಯಂತೆ ನಿದ್ದೆ ಇಲ್ಲದೆ (ಏಕೆ ಎಂದು ತಿಳಿಯಬೇಕಾದರೆ ಓದಿ ಮನಸೂರೆಗೊಳ್ಳುವ ಮೈಸೂರು.... ) ಬಳ್ಳಾರಿ ತಲುಪಿಯಾಗಿತ್ತು. ಬರಿ ಸಿನಿಮಾದಲ್ಲಿ ಬಳ್ಳಾರಿಯ ಹೆಸರು ಕೇಳಿದ್ದೆ. ಯಾವುದಾದರು ದಕ್ಷ ಅಧಿಕಾರಿ ನ್ಯಾಯಕ್ಕಾಗಿ ಹೋರಾಡುವಾಗ. ಅವನನ್ನು ನೀರಿಲ್ಲದ ಊರಿಗೆ Transfer ಮಾಡಿ ಬಿಡುತ್ತೇನೆ ಎಂಬ ವಿಲನ್ ಉದ್ಗಾರ. ಇಲ್ಲವೊ ಬಳ್ಳಾರಿ ಜೈಲಿಗೆ ಕಳುಹಿಸಿಬಿಡುತ್ತೇನೆ ಎಂದು ವಿಲನ್ ಪೋಲಿಸ್ ಹೇಳುವ ಪರಿ ಸಿನಿಮಾದಲ್ಲಿ ನೋಡಿದ್ದೇ. ಇಲ್ಲಿ ನನ್ನ ತಪ್ಪು ಮಾತ್ರ ನನಗೆ ಅರಿವಾಗಿರಲಿಲ್ಲ. ಆದರು ಬಳ್ಳಾರಿಯಲ್ಲಿ ಇದ್ದೆ. ಗುಡ್ಡದ ಕೆಳಗೆ ಬಸ್ ಸ್ಟ್ಯಾಂಡ್. ಆಗಿನ್ನೂ 8.00 ಘಂಟೆ ಉರಿಬಿಸಿಲಿನಿಂದ ಮಧ್ಯಾಹ್ನ 11.00 ಘಂಟೆ ಆದ ಹಾಗೆ ಅನ್ನಿಸಿತು. ಇಳಿದ ಮೇಲೆ ಅಲ್ಲೇ ಇದ್ದ ಬೇಕರಿಗೆ ಹೋಗಿ "ಟೀ ಕೊಡಿ ಸ್ವಾಮಿ" ಎಂಬ ಸವಿನಯದಿಂದ ಕೇಳಿದೆ. ಟೀ ಅದ ಮೇಲೆ "ಎ ಟೀ ತಗೋ" ಎಂದು ಒರಟು ಭಾಷೆಯಿಂದ ಹೇಳಿದ. ಆದು ತುಂಬಾ ಚೆನ್ನಾಗಿರುವ "ಇರಾನಿ ಟೀ" ಅಂತಹ ಟೀ ನಾನು ಜೀವನದಲ್ಲೇ ಸವಿದಿರಲಿಲ್ಲ. ಅನಂತರನೇ ಗೊತ್ತಾಗಿದ್ದು ಇದು ಧಾರವಾಡದ ಭಾಷೆ ಹಾಗೇನೇ ಎಂದು ಆದರೆ ಅದಕ್ಕಿಂತಲೂ ತುಂಬ ಒರಟು ಭಾಷೆ.

ಆಟೋ ಹಿಡಿದು ಅಡ್ರೆಸ್ ದಾರಿಹೋಕರನ್ನು ಕೇಳಿ ತಿಳಿದು ಮನೆ ತಲುಪಿದೆ. ಅದು ಮನೆ ಹಾಗಿರದೆ ಒಂದು ಚಿಕ್ಕದಾದ ಕೋಣೆ. ಒಬ್ಬರು ಮಾತ್ರ ಇರಬಹುದಾಗಿತ್ತು. ಅರ್ಧ ಘಂಟೆ ಹಾಗೆ ವಿಶ್ರಾಂತಿ ತೆಗೆದುಕೊಂಡು ನಿತ್ಯಕರ್ಮಗಳನ್ನು ಮುಗಿಸಿ ಆಫೀಸ್ ತಲುಪಿದೆ. ಗೇಟಿನಲ್ಲಿ ಸೆಕ್ಯೂರಿಟಿ ಕೇಳಿದ ಯಾರು ಬೇಕು ಎಂದು "ನಾನು ನಿದ್ದೆಗಣ್ಣಲ್ಲಿ" ಡೈರಿ ಎಂದೆ. ಹೌದು ಡೈರಿನೆ ಹಾಲು ಬೇಕಾದರೆ ಆ ಕೌಂಟರ್ ಗೆ ಹೋಗಿ ಕೈ ಮಾಡಿ ಕೌಂಟರ್ ತೋರಿಸಿದ. ನಾನು ಅನಂತರ ಸಾಫ್ಟವೇರ್ Implementation ಗೆ ಬಂದಿದ್ದೇನೆ ಎಂದು ಹೇಳಿದಾಗ ಒಳಗಡೆ ಬಿಟ್ಟ.

ನಾನು ಮೈಸೂರಿನಲ್ಲಿ ಪ್ರತಿದಿನವು ಶ್ರೀರಾಮ ಮಂದಿರಕ್ಕೆ ಹೋಗುತ್ತಿದ್ದೆ. ಇಲ್ಲಿ ಏನು ಗೊತ್ತಿಲ್ಲವಾದ್ದರಿಂದ. ಹಾಗೆ ಬಂದಿದ್ದೆ. ಏನು ಆಘಾತ ಕಾದಿದೆ ಎಂದು ಮನದಲ್ಲೇ ಶ್ರೀರಾಮನನ್ನು ನೆನೆದು ಒಳಗಡೆ ಕಾಲಿಟ್ಟೆ. ಒಳಗಡೆ ಒಂದು ಆಕಳು ನಿಂತಿತ್ತು. ತುಂಬಾ ಖುಷಿ ಆಯಿತು. "ಗೋ ಮಾತೆ ತಾಯಿ" ಎಂದು ಹೋಗಿ ಅದನ್ನು ಹಿಂದಿನಿಂದ ನಮಸ್ಕರಿಸಿದೆ. ಆಗಲೇ ಹಿಂದಿನಿಂದ ಒಬ್ಬ ವ್ಯಕ್ತಿ ಬಂದು "ಸರ್, ಏನಾದ್ರು ಮಾಡಿ ನನ್ನ ಆಕಳಿಗೆ ಹಾಲು ಬರುವ ಹಾಗೆ ಮಾಡಿ" ಎಂದು ಕಾಲಿಗೆ ಬಿದ್ದ. ನೋಡುವಷ್ಟರಲ್ಲೇ ಗೊಳೋ ಎಂದು ಅಳಲಾರಂಬಿಸಿದ. ನನಗೆ ದಿಕ್ಕೇ ತೋಚದಾಗಿತ್ತು. ನಾನು ಏನು ಇದೆಲ್ಲ? ನನ್ನ ಕಾಲುಬಿಡು ಎಂದೆ. ಇಲ್ಲ ನಾನು ಕಾಲು ಬಿಡುವದಿಲ್ಲ. ನೀವು ಸಹಾಯ ಮಾಡುತ್ತೇನೆ ಎಂದರೆ ಮಾತ್ರ ಬಿಡುತ್ತೇನೆ ಎಂದ. ನಾನು ....ನಾನು ಎಂದು ತಡವರಿಸಿದೆ. ಡಾಕ್ಟರೆ ಏನಾದರು ಮಾಡಿ ಹಾಲು ಬರಿಸಿ ಎಂದು ಹೇಳಿದ. ಆಗ ನನಗೆ ತಿಳಿಯಿತು. ನಾನು ಡಾಕ್ಟರ ಅಲ್ಲ ಎಂದೆ. ಮತ್ತೆ ನೀವು ಡಾಕ್ಟರ ಅಲ್ಲವಾ? ಎಂದ. ಇಲ್ಲ ನಾನು ಕಂಪ್ಯೂಟರ್ ನವನು ಎಂದು ಹೇಳಿದೆ. ಓ ಕಂಪ್ಯೂಟರಾ... ಎಂದು ರಾಗವೆಳೆದು. ನನ್ನನ್ನು ಓರೆಗಣ್ಣಿಂದ ನೋಡಿ. ಮೊದಲೇ ಹೇಳಬಾರದ ಎಂದು ನನ್ನನ್ನು ಜಬರಿಸಿ. ಮತ್ತೆ ಹೋಗಿ ಮರದ ಕೆಳೆಗೆ ಕುಳಿತ. ಹೇಳಿಕೊಳ್ಳಲು ಬಿಟ್ಟಿದ್ದೆಲ್ಲಿ ಎಂದು ನಾನು ಮನದಲ್ಲೇ ಅಂದುಕೊಂಡೆ. ಆಗ ಅನ್ನಿಸಿತು ಬಿಳಿ ಅಂಗಿ ಹಾಕಿಕೊಂಡು ಬರಬಾರದಿತ್ತೆಂದು.
ಮತ್ತೆ ಹೆದರಿಕೆಯಿಂದಲೇ ಒಳಗಡೆ ಕಾಲಿಟ್ಟ ಕೂಡಲೇ ಒಬ್ಬ ಮನುಷ್ಯ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ. ನನಗೆ ಈಗ ಪೂರ್ತಿ ಭಯ ಶುರು ಆಗಿತ್ತು. ನನಗೆ ಆ ಸೆಕ್ಯೂರಿಟಿ ಗಾರ್ಡ್ ಮೇಲೆ ಡೌಟ್ ಬಂತು. ಎಲ್ಲಿ ಡೈರಿ ಅಂತ ಹೇಳಿ ಹುಚ್ಚರ ಆಸ್ಪತ್ರೆ ಒಳಗಡೆ ಬಿಟ್ಟಿದ್ದಾನೋ ಎಂದು. ಸ್ವಲ್ಪ ಹೊತ್ತು ಕಾದ ಮೇಲೆ ಕಂಪ್ಯೂಟರ್ ಡಿಪಾರ್ಟ್ಮೆಂಟ್ ಹೆಡ್ ಆದ ಹೆಗಡೆ ಬಂದರು ತಾವಯಿಗೆಯೇ ನನ್ನನ್ನು ಪರಿಚಯ ಮಾಡಿಕೊಂಡರು. ತುಂಬ ಒಳ್ಳೆಯ ಮನುಷ್ಯ. ಅನಂತರ ಎಲ್ಲ ಡಿಪಾರ್ಟ್ಮೆಂಟ್ ಪರಿಚಯಿಸಲು ಕರೆದು ಕೊಂಡು ಹೋದರು.ಮ್ಯಾನೇಜರ್ ರೂಂ ಪ್ರವೇಶಿಸಿದೊಡನೆ ಮತ್ತೊಂದು ಆಘಾತ ಕಾದಿತ್ತು. ಮ್ಯಾನೇಜರ್ ತನ್ನ ತಲೆಯ ಕೂದಲನ್ನು ಕಿತ್ತಿ ಕೊಳ್ಳುತ್ತಿದ್ದರು. ಪರಿಚಯ ವಾದ ಮೇಲೆ ಹೊರಗೆ ಬಂದೊಡನೆ ಹೆಗಡೆ ನನಗೆ ಹೇಳಿದರು ಇವರೆಲ್ಲ ಹೀಗೆ ನೀವೇನು ತಲೆ ಕೆಡಿಸಿಕೊಳ್ಳಬೇಡಿ ಎಂದು. ತಲೆ ಕೆಡಿಸಿ ಕೊಳ್ಳಲು ತಲೆಯಲ್ಲಿ ಏನು ಉಳಿದಿದೆ ಎಂದು ಕೇಳಬೇಕೆಂದೆ ಆದರೆ ಕೇಳಲಿಲ್ಲ... ಅನಂತರ ಭೇಟಿಯಾಗಿದ್ದು ಆ ಫೈಲಿನಿಂದ ತಲೆ ಚಚ್ಚಿ ಕೊಳ್ಳುತ್ತಿದ್ದ ವ್ಯಕ್ತಿ ಅವರು ಮಿಲ್ಕ್ ಬಿಲ್ ಆಫೀಸರ್ ಎಂದು ಆಗಲೇ ತಿಳಿದಿದ್ದು. ಅವರಿಗೆ ಬಿಲ್ ಬೇಕು ಎಂದು ಮ್ಯಾನೇಜರ್ ಪೀಡಿಸಿದ್ದರು ಕಾರಣ ಆ ಆಸಾಮಿ ತಲೆ ಚಚ್ಚಿ ಕೊಳ್ಳುತಿದ್ದ. ಹಾಗು ಹೀಗು ಎಲ್ಲರ ಪರಿಚಯವಾದ ಮೇಲೆ ಕ್ಯಾಬಿನ್ನಿನಲ್ಲಿ ಬಂದು ಕುಳಿತೆ. ಅಷ್ಟರಲ್ಲೇ ಫೈನಾನ್ಸ್ ಆಫೀಸರ್ ಗಳು ನನಗೆ ಕಾಯುತ್ತಿದ್ದರು ಅವರಿಗೆ ಮಿಲ್ಕ್ ಬಿಲ್ ಬ್ಯಾಲೆನ್ಸ್ ಶೀಟ್ ಬೇಕಾಗಿತ್ತು. ಗುಬ್ಬಿ ಮೇಲೆ ಬ್ರಹ್ಮಾಸ್ತ್ರ ತಯಾರಾಗಿತ್ತು. ಹಾಗು ಹೀಗು ಅವರಿಗೆ ಓಪನಿಂಗ್ ಬ್ಯಾಲೆನ್ಸ್ ಎಂಟ್ರಿ ಮಾಡಲು ಹೇಳಿ. ಮರುದಿವಸ ಬ್ಯಾಲೆನ್ಸ್ ಶೀಟ್ ರೆಡಿ ಮಾಡಿ ಕೊಟ್ಟಿದ್ದೆ.

ಗುಡ್ಡದ ಕೆಳಗೆ ಚಿಕ್ಕ ಕೋಣೆ. ತುಂಬ ಉರಿಬಿಸಿಲು ಒಬ್ಬನೇ ಹೇಗೆ ಕಾಲ ಕಳೆಯುವದು ಒಂದು ದೊಡ್ಡ ಪ್ರಶ್ನೆ ಯಾಗಿತ್ತು. ಆಗ ನನಗೆ ಪುಸ್ತಕ ಓದುವ ಹವ್ಯಾಸ ಹತ್ತಿಕೊಂಡಿತ್ತು. ಮತ್ತೆ ಸಮಯ ಸಿಕ್ಕಾಗ ಶ್ರೀ ರಾಮ ನಾಮವನ್ನು ಬರೆಯುವದು. ತುಂಬಾ ಒಳ್ಳೊಳ್ಳೆ ವಿಷಯಗಳನ್ನು ಅರಿತಿದ್ದೆ. ಅದಕ್ಕೆ ಹೇಳಿರಬೇಕು ಹಿರಿಯರು "ದೇಶ ಸುತ್ತು ಇಲ್ಲ ಕೋಶ ಓದು" ಎಂದು. ನನಗೆ ಅಕಸ್ಮಾತ್ತಾಗಿ ಎರಡು ಸದಾವಕಾಶಗಳು ದೊರೆತಿದ್ದವು. ನನಗೆ ನಿಜವಾಗಿಯು ಬಳ್ಳಾರಿ ಸಿನಿಮಾದಲ್ಲಿ ತೋರಿಸುವ ಹಾಗೆ ಅನ್ನಿಸಲೇ ಇಲ್ಲ. ಅಲ್ಲಿಯ ಖಾರವಾಗಿರುವ ರೋಟಿ ಊಟ. ಈಗಲೂ ಬಾಯಿಗೆ ಚಪಲತೆ ನೆನಪಿಸುತ್ತದೆ. ಮತ್ತೆ "ತುಂಗಾ ಪಾನ ಗಂಗಾ ಸ್ನಾನ" ಎಂದು ಹಿರಿಯರು ಹೇಳಿದ ಹಾಗೆ ತುಂಗೆಯ ನೀರನ್ನು ಸವಿಯುವ ಅವಕಾಶ ದೊರೆತಿತ್ತು. ತುಂಬಾ ಒಳ್ಳೆಯ ಸಿಹಿ ನೀರು.
ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ ಆದರೆ 4 ತಿಂಗಳಿಗೆ ಪಾಂಡುರಂಗನಿಗೆ ಬೇರೆ ನೌಕರಿ ಸಿಕ್ಕಿತ್ತು. ಎಲ್ಲ ಜವಾಬ್ದಾರಿ ನನ್ನ ತಲೆಯ ಮೇಲೆ ಹೇರಿ ಹೋಗಿದ್ದರು ಇದು ರಾಮ ನಾಮದ ಫಲವೋ ಗೊತ್ತಿಲ್ಲ. ನಾನು ಮೊದಲ ಬಾರಿ ಟೀಂ ಲೀಡರ್ ಆಗಿದ್ದೆ. ಅದನ್ನು ನಿಭಾಯಿಸುವ ಪರಿಪಕ್ವತೆ ನನಗೆ ಬಂದಿತ್ತು. ಹೀಗೆ ಬಳ್ಳಾರಿ ನನಗೆ ತುಂಬ ಪಾಠ ಕಲಿಸಿತ್ತು. ಅಲ್ಲಿಯ ಫೈನಾನ್ಸ್ ಆಫೀಸರ್ ಗಳಾದ ಹಯವದನ ಆಚರ್ಯರಿಂದ ತುಂಬಾ ಕಲಿತ್ತಿದ್ದೆ. ಮತ್ತೆ ನನಗೆ ಹೆಗಡೆಯವರ ಸಹಾಯದಿಂದ 4 department computerise ಮಾಡಿದ್ದೆ.

ಬಳ್ಳಾರಿಯನ್ನು ಬಿಡುವ ಮನಸಿರಲಿಲ್ಲ. ನಮ್ಮ MD ನನಗೆ ಫೋನ್ ಮಾಡಿ ನೀನು ನಾಳೆ ಶಿವಮೊಗ್ಗಕ್ಕೆ ಬರಬೇಕು ಮೀಟಿಂಗ್ ಇದೆ ಎಂದಾಗ ಯಾಕಾದರೂ ಟೀಂ ಲೀಡರ್ ಆದೆ ಎಂದು ಮನಸಿನಲ್ಲಿ ಅನ್ನಿಸಿತ್ತು. ಆದರೂ ಬೇಡದ ಮನಸಿನಿಂದ ಶಿವಮೊಗ್ಗ ಬಸ್ ಹತ್ತಿದ್ದೆ.

ಬಳ್ಳಾರಿಯಲ್ಲೇ ಇದ್ದಾಗ ಒಮ್ಮೆ ಮಂತ್ರಾಲಯಕ್ಕೆ ಹೋಗಿ ಶ್ರೀ ರಾಘವೇಂದ್ರ ಸ್ವಾಮಿಗಳ ದರ್ಶನ ಮಾಡಿ ಬಂದಿದ್ದೆ. ಮತ್ತೆ ಒಂದು ದಿನ ಕರ್ನಾಟಕ ಇತಿಹಾಸದಲ್ಲೇ ಅತ್ಯುನ್ನತವಾದ ವಿಜಯನಗರ ಸಮ್ರಾಜ್ಯವಾದ ಹಂಪಿಯನ್ನು. ಆದರೆ ಅದನ್ನು ಹಾಳು ಮಾಡಿದ್ದೂ ನೋಡಿದರೆ ಮನ ಕಲುಕುತಿತ್ತು.

ಬಳ್ಳಾರಿ ನನಗೆ ನಿಜವಾಗಿಯು ಬಳುಕುವ ಬಿಂಕದ ಸಿಂಗಾರಿ ಇದ್ದ ಹಾಗೆ. ಅಲ್ಲಿ ಕಳೆದ 4 ತಿಂಗಳು ನನಗೆ ಜೀವನದ ಪ್ರತಿ ಕ್ಷಣವನ್ನು ಹೇಗೆ ಸವಿಯಬೇಕು ಎಂದು ಕಲಿಸಿದ ಊರು. ಅದಕ್ಕೆ ನಾನು ಹೇಳುವದು ಅದು ಬಳುಕುವ ಬಿಂಕದ ಸಿಂಗಾರಿ ನನ್ನ ಪ್ರೀತಿಯ ಬಳ್ಳಾರಿ ಎಂದು ......

ತರ್ಲೆ ಮಂಜ(ಗ)ನ ಎದಿರೇಟು....

ಮಂಜನಿಗೆ ಎದಿರೇಟು ಕೊಡುವ ಏಕೈಕ ವ್ಯಕ್ತಿ ಎಂದರೆ ಮನೋಜ. ಕ್ರೀಡೆಯಲ್ಲಿ. ಜಿದ್ದಾ-ಜಿದ್ದಿನಲ್ಲಿ, ಮಂಜನಿಗೆ ಪ್ರತಿಸ್ಪರ್ಧಿ. ಆದರೆ ಓದಿನಲ್ಲಿ ಮಾತ್ರ ಶೂನ್ಯ. ಮಂಜನ ತರಲೆಗಳಿಗೆ ಇವನ ಆಟ ನಡೆಯುತ್ತಿದ್ದಿಲ್ಲ. ಯಾವದೇ ಸ್ಪರ್ಧೆ ಇರಲಿ ಮಂಜ ಭಾಗವಹಿಸಿದ ಎಂದರೆ ಮನೋಜ ಕೂಡ ಸ್ಪರ್ಧಿಸಲೇ ಬೇಕು. ಒಂದೇ ಕ್ಲಾಸಿನಲ್ಲಿ ಇದ್ದರು ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುತ್ತಿರಲಿಲ್ಲ. ಆದರು ಪರೀಕ್ಷೆಯಲ್ಲಿ ಮನೋಜನಿಗೆ ಸಹಾಯ ಮಾಡುತ್ತಿದ್ದ ಮಂಜ.


ಒಂದು ದಿವಸ ಕ್ರಿಕೆಟ್ ಆಡುತ್ತಿದ್ದಾಗ ಮನೋಜನ ಟೀಂ, ಮಂಜನ ಟೀಂ ಮೊದಲ ಬಾರಿ ಸೋಲಿಸಿ ಬಿಟ್ಟಿತ್ತು. ಆಟದ ನಡುವೆ ಸ್ವಲ್ಪ ಜಿದ್ದಾ - ಜಿದ್ದಿನಿಂದ ಮಂಜನ ಜೊತೆ ಜಗಳ ಆಯಿತು .. ಮನೋಜನ ಗೆಲುವಿನ ಖುಷಿಗೆ ಪಾರವೇ ಇರಲಿಲ್ಲ. ತಮ್ಮ ಟೀಂ ಫೋಟೋ ತಗಿಸಿ ನೋಟೀಸ್ ಬೋರ್ಡ್ ಗೆ ಅಂಟಿಸಿದ್ದ. ಮಂಜನಿಗೆ ಎಲ್ಲಿಲ್ಲದ ಕೋಪ ಉಕ್ಕಿ ಹರಿದಿತ್ತು. ಇವನನ್ನು ಹೇಗಾದರೂ ಮಾಡಿ ಎದಿರೇಟು ಕೊಡಬೇಕಾಗಿತ್ತು. ಮನೋಜ ಆನಂತರ ಕ್ಷಮೇ ಕೇಳಿದನಾದರೂ ಪ್ರಯೋಜನವಾಗಿರಲಿಲ್ಲ....
6 ತಿಂಗಳ ಪರೀಕ್ಷೆಯ ಸಮಯ ಬಂದಿತ್ತು. ಪರೀಕ್ಷೆಯಲ್ಲಿ ಮಂಜ ಮತ್ತು ಮನೋಜನ ಸೀಟ್ ಹಿಂದೆ ಮುಂದೆಯೇ ಬರುತಿತ್ತು. ಮನೋಜನಿಗೆ ಪಾಸಾಗಲು ಸಹಾಯ ಮಾಡುವ ಏಕೈಕ ವೈಕ್ತಿ ನಮ್ಮ ಮಂಜ. ಅವನೇ ಕೈಕೊಟ್ಟಿದ್ದರಿಂದ ಮನೋಜನಿಗೆ ಪಾಸಾಗುವದು ಸಾಧ್ಯವೇ ಇರಲಿಲ್ಲ.


ಆವತ್ತು ವಿಜ್ಞಾನ ಪರೀಕ್ಷೆ ಇತ್ತು. ಮಂಜ ನಮ್ಮ ಹತ್ತಿರ ಬಂದು. "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಬೀಗಿದ. ಏನು ಮಾಡಿದೆ? ಎಂದು ನಾವೆಲ್ಲರೂ ಕೇಳಿದರು ಮಂಜ ಹೇಳಲಿಲ್ಲ. ರಿಸಲ್ಟ್ ಬರಲಿ ನಿನಗೆ ಗೊತ್ತಾಗುತ್ತೆ ಎಂದ. ಏನು ಮಾಡಿದ್ದ ಎಂದು ಯಾರಿಗೂ ತಿಳಿಯದಾಗಿತ್ತು.


ಮರುದಿನ ಕನ್ನಡ ಪೇಪರ್ ಇತ್ತು. ಮನೋಜ ಮಂಜನ ಕಾಲಿಗೆ ಬಿದ್ದು ಕ್ಷಮೇ ಕೇಳಿದ. ಇನ್ನೊಮ್ಮೆ ಹೀಗೆ ಮಾಡುವುದಿಲ್ಲ ಎಂದು. ಕಡೆಗೆ ಮಂಜ ಮನೋಜನಿಗೆ ಸಹಾಯ ಮಾಡಲು ಒಪ್ಪಿದ. ಪರೀಕ್ಷೆಯ ಮುಂಚೆ ಮನೋಜನಿಗೆ ಮಂಜ "ಸೀದಾ ಸೀದಾ ನನ್ನ ಪೇಪರ್ ಕಾಪಿ ಮಾಡಬೇಡ ಸ್ವಲ್ಪ ತಿರುಚಿ ಬರಿ" ಎಂದು ತಕೀತ ಮಾಡಿದ್ದ .


ಪರೀಕ್ಷೆಯಲ್ಲಿ ನಿಜವಾಗಿಯು ಮಂಜ ಸಹಾಯ ಮಾಡಿದ್ದ. ಮನೋಜನಿಗೆ ತನ್ನ ತಪ್ಪಿನ ಅರಿವಾಗಿತ್ತು.


ಒಂದು ವಾರದ ನಂತರ ಎಲ್ಲರು ನೋಟೀಸ್ ಬೋರ್ಡ್ ಕಡೆಗೆ ಜಮಾಯಿಸಿದ್ದರು. ನೋಡಿದರೆ ಮನೋಜನ ವಿಜ್ಞಾನ ಪೇಪರ್ ನೇತಾಡುತಿತ್ತು. Alcohol ತಯಾರಿಸುವ ಹೊಸ ವಿಧಾನ ಕಂಡು ಹಿಡಿದವರು ಮನೋಜ್ ಎಂದು ಬರೆದಿತ್ತು. Alcohol ತಯಾರಿಸಲು ಬೇಕಾದ ಸಾಮಾನು ಏಲಕ್ಕಿ ಬಾಳೆ ಹಣ್ಣು, ಸಕ್ಕರೆ , ಹಾಲು, ಏಲಕ್ಕಿ, ತುಪ್ಪ ಮತ್ತು ಜೇನು ತುಪ್ಪ. ಎಲ್ಲ ಸಾಮಾನುಗಳ ಮಿಶ್ರಣ ಮಾಡಿ. ಅದನ್ನು ಒಂದು ಬಾಟಲಿಯಲ್ಲಿ ಹಾಕಿ ಅನಂತರ ಅದನ್ನು ನೆಲದಲ್ಲಿ ಮೂರೂ ದಿವಸ ಹುಗಿದು ಇಡಿ ಎಂದು ಬರೆದಿತ್ತು. ಮತ್ತೆ ಅವುಗಳ ಚಿತ್ರ ಬೇರೆ ಬರೆದಿತ್ತು.


ರಾಜಣ್ಣ ಮಾಸ್ತರ ಆಗಲೇ ಬಂದು "ಎಲ್ಲಿ ಮನ್ಯಾ ಎಂದು ಕೂಗಲಾರಮ್ಬಿಸಿದರು". "Alcohol ತಯಾರಿಸುವ ವಿಧಾನ ಬರೆಯಿರಿ ಎಂದರೆ ಪಂಚಾಮೃತ ಮಾಡ್ಯಾನ ಎಂದು" ಮನೋಜನಿಗೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.
ಅನಂತರ ತಿಳಿಯಿತು ಇದರಲ್ಲಿ ಮಂಜನ ಕೈವಾಡ ಇದೆ ಎಂದು. ಪರೀಕ್ಷೆಯ ದಿವಸ ಮನೋಜ ಮಂಜನಿಗೆ ಭೇಟಿಯಾಗಿ "ನೀನು ಪೇಪರ್ ತೋರಿಸದಿದ್ದರೂ ಪರವಾಗಿಲ್ಲ. ಯಾವ ಯಾವ ಪ್ರಶ್ನೆ ಬೀಳುತ್ತವೆ ಅದನ್ನಾದರೂ ಹೇಳು" ಎಂದು ಕೇಳಿದ್ದ . ಅದಕ್ಕೆ ಮಂಜ Alcohol ತಯಾರಿಸುವ ವಿಧಾನ ಗ್ಯಾರಂಟೀ ಬಿಳುತ್ತೆ ಎಂದು ಹೇಳಿದ್ದ. "ಅದು ಹೇಗೆ ಅಷ್ಟು ಖಚಿತವಾಗಿ ಹೇಳುತ್ತಿ?" ಎಂದು ಮನೋಜ ಕೇಳಿದಾಗ. ಮಂಜ ರಾಜಣ್ಣ ಮಾಸ್ತರ್ ನ ನಿನ್ನೆ ಶೆರೆ ಅಂಗಡಿ ಒಳಗೆ ನೋಡಿದೆ. ಅವರು ಗ್ಯಾರಂಟೀ ಅದನ್ನೇ ಕೊಡುತ್ತಾರೆ ಎಂದ. ಅದಕ್ಕೆ ಅದರ ತಯಾರಿಸುವ ವಿಧಾನವನ್ನು ಹೇಳು ಎಂದಾಗ. ಮಂಜ ಈ ತರ್ಲೆ ಮಾಡಿದ್ದ. ಅದಕ್ಕೆ ನಮಗೆ "ಈಗ ಮಾಡಿದೆ ನೋಡು ಈ ಮನ್ಯಾಗೆ" ಎಂದು ಹೇಳಿದ್ದು.


ಮತ್ತೆ ಮರುದಿನ ಕನ್ನಡ ಮಾಸ್ತರ ಬಂದು ಎಲ್ಲಿ ಆ "ಪಂಚಾಮೃತ ಮನ್ಯಾ". ಎಂದು ಎಲ್ಲರೆದುರು ಕೇಳಿದರು. ಮನೋಜನಿಗೆ ಅಳು ಉಕ್ಕಿ ಬಂದಿತ್ತು. ಮನೋಜನನ್ನು staff ರೂಮಿಗೆ ಕರೆದು ಕೊಂಡು ಹೋಗಿ ಮಾಸ್ತರ "ನೋಡು ಮನೋಜ ನೀನು ಹೊಸದಾಗಿ ತಯಾರಿಸಿರೋ Alcohol ನನಗೆ ಬೇಕು" ಎಂದು ಹೇಳಿದರು "ಇಲ್ಲ ಅಂದರೆ ನಿನ್ನ ಕನ್ನಡ ಪೇಪರ್ ನು ನೋಟೀಸ್ ಬೋರ್ಡ್ ಮ್ಯಾಲೆ ಇರ್ತದ" ಎಂದರು. ಅನಂತರ ಎಲ್ಲರು ಮನೋಜನನ್ನು "ಪಂಚಾಮೃತ ಮನ್ಯಾ" ಎಂದು ಅಂಕಿತ ನಾಮ ಕೊಟ್ಟು ಬಿಟ್ಟಿದ್ದರು.


ಮನೋಜನಿಗೆ ಅರ್ಥವೇ ಆಗಿರಲಿಲ್ಲ. ನಾನು ಕಾಪಿ ಹೊಡೆದದ್ದು ಮಂಜಂದು ಪೇಪರ್ ಅದು ಹೆಂಗ ತಪ್ಪು ಇರಲಿಕ್ಕೆ ಸಾಧ್ಯ? ಎಂದು ಪಂಚಾಮೃತ ತರದೇ ಸುಮ್ಮನೆ ಇದ್ದುಬಿಟ್ಟ.


ಮರುದಿವಸ ಮತ್ತೆ ಕನ್ನಡ ಪೇಪರ್ ನೋಟೀಸ್ ಬೋರ್ಡ್ ಮೇಲೆ. ಮನೋಜ ತಿರುಚಿ ಉತ್ತರ ಬರಿ ಎಂದು ಹೇಳಿದ್ದಕ್ಕೆ ಈ ವಾಕ್ಯವನ್ನು " ಭಾರತಿಗೆ ಮದುವೆ ಆಯಿತು. ಅನಂತರ 2 ಮಕ್ಕಳು ಜನಿಸಿದವು" ಎಂದು ಬರೆಯುವ ಬದಲು "ಭಾರತಿಗೆ ಮಕ್ಕಳು ಜನಿಸಿದವು. ಅನಂತರ 2 ಮದುವೆ ಆಯಿತು." ಎಂದು ತಿರುಚಿ ಬರೆದು ಬಿಟ್ಟಿದ್ದ. ಮತ್ತೆ ಹುಣಿಸೆ ಬರಲಿನಿದ ಚೆನ್ನಾಗಿ ಏಟುಗಳು ಬಿದ್ದಿದ್ದವು.


ಹೀಗೆ ಮಂಜ ತನ್ನ ಸೇಡನ್ನು ತಿರಿಸಿಕೊಂಡಿದ್ದ. ಅನಂತರ ಮನೋಜ ಯಾವತ್ತು ಮಂಜನ ತಂಟೆಗೆ ಹೋಗಲಿಲ್ಲ. ಮಂಜನ ಪಕ್ಕ ಭಂಟನಾಗಿ ಹೋದ....

ತರ್ಲೆ ಮಂಜ(ಗ)ನ ಪ್ರೇಮ ಪಾಠ ....

ಮಂಜ ಎಷ್ಟೇ ತರ್ಲೆ ಆದರು ತುಂಬಾ ಜಾಣ. ಪರೀಕ್ಷೇಲಿ ಮಾತ್ರ 100 ಕ್ಕೆ 90 ರ ಮೇಲೆಯೇ.. ತುಂಬಾ ವಿದ್ಯಾರ್ಥಿಗಳಿಗೆ ಪರೀಕ್ಷೇಲಿ ಪಾಸಾಗಲು ಸಹಾಯ ಮಾಡಿದ್ದಾನೆ. ಹಾಗೆಯೆ ಪ್ರೀತಿಸುವವರಿಗೂ ಸಹಾಯ ಮಾಡುತ್ತಿದ್ದ. ಪ್ರೇಮ ಪತ್ರ ಬರೆದು ಕೊಡುವದು, ಪ್ರೀತಿಯನ್ನು ಅವರ ಪ್ರೇಯಸಿಗೆ ಅರುಹುವದು ಹೀಗೆ ....

ಸಂದೀಪ ಶಾಂತಿಯನ್ನು ತುಂಬಾ ಪ್ರೀತಿಸುತ್ತಿದ್ದ. ಸದಾ ಅವಳ ಗುಂಗಿನಲ್ಲೇ ಇರುತ್ತಿದ್ದ. ಆದರು ಯಾರಿಗೂ ಹೇಳದೆ ಸುಮ್ಮನೆ ಮನಸ್ಸಿನಲ್ಲಿ ಮಂಡಿಗೆ ತಿನ್ನುತ್ತಿದ್ದ. ಮಂಜನ ಸಹಾಯ ಬೇಕೆನಿಸಿದರು ಕೇಳಿರಲಿಲ್ಲ. ನನಗೆ ಈ ವಿಷಯ ತಿಳಿದಿತ್ತು. ಶಾಂತಿಯ ಮನೆ ನಮ್ಮ ಮನೆಯ ಸಮೀಪವೇ ಇತ್ತು. ಸದಾ ನಮ್ಮ ಓಣಿಯನ್ನು ಸುತ್ತುತ್ತಿದ್ದ. ನಮ್ಮ ಅಪ್ಪ ಅಥವಾ ಅಮ್ಮ ನೋಡಿದರೆ ಮಾತ್ರ ಗೋಪಾಲನನ್ನು ನೋಡಲು ಬಂದಿದ್ದೆ ಎಂದು ಭೂಸಿ ಬಿಡುತ್ತಿದ್ದ. ಹೀಗೆ ಒಂದು ದಿವಸ ನಾನು ಕೇಳಿಯೇ ಬಿಟ್ಟೆ. ಏನಪ್ಪಾ ಶಾಂತಿ .. ಎಂದು ಕೂಡಲೇ. ಏನಾದರು ಮಾಡಿ ಸಹಾಯ ಮಾಡು ಎಂದು ಗೋಗರಿದ. ನಾನು, ನವೀನ ಶಾಂತಿಯ ಅಕ್ಕಪಕ್ಕದ ಮನೆ ಹುಡುಗರು. ನಮ್ಮಿಬ್ಬರನ್ನು ಬಿಟ್ಟು ಬೇರೆ ಯಾವ ಹುಡುಗರನ್ನು ಶಾಂತಿ ಮಾತನಾಡಿಸಿರಲಿಲ್ಲ. ಇವನ ಪ್ರೇಮ್ ಪ್ರಸ್ತಾಪ ಮಾಡಿದ್ದೂ ನಮ್ಮ ಅಪ್ಪನಿಗೇನಾದರೂ ಗೊತ್ತಾದರೆ ನನ್ನನ್ನು ಅಪ್ಪ ಫೋಟೋ ಫ್ರೇಮ್ ಮಾಡುವದು ಗ್ಯಾರಂಟೀ. ಅದ್ದರಿಂದ ನವೀನನಿಗೆ ಕೇಳು ಎಂದು ಹೇಳಿದೆ. ನವೀನ ಒಂಥರಾ ರೇಡಿಯೋ ಇದ್ದ ಹಾಗೆ, ಅವಿನಿಗೆ ಹೇಳಿದರೆ ಊರಿಗೆ ಡಂಗುರ ಸಾರುತ್ತಾನೆ ಎಂದು ಸಂದೀಪ ಹೇಳಿದ. ಮತ್ತೆ ನಮ್ಮಿಬ್ಬರಿಗೂ ಹೊಳೆದಿದ್ದು ದಿ ಗ್ರೇಟ್ ಮಂಜ.

ಮತ್ತೆ ನಾವಿಬ್ಬರು ಮಂಜನ ಹತ್ತಿರ ಹೋಗಿ, ಇವನ ಪ್ರೇಮದ ಬಗ್ಗೆ ತಿಳಿಸಿದೆವು. ಮಂಜ ಬೇರೆ ಯಾವದೇ ವಿಷಯಕ್ಕೆ ಕಾಲೆಳೆಯುತ್ತಿದ್ದ. ಆದರೆ ಪ್ರೀತಿಯ ವಿಷಯದಲ್ಲಿ ಮಾತ್ರ ತನ್ನ ಅಭಯ ಹಸ್ತವನ್ನು ತೋರಿಸುತ್ತಿದ್ದ. ಕೂಡಲೇ ಒಪ್ಪಿಗೆ ಸೂಚಿಸಿದ. ಸಂದೀಪನ ಖುಷಿಗೆ ಪಾರವೇ ಇರಲಿಲ್ಲ.

ಮತ್ತೆ ಸಂಜೆ ನಾನು, ಸಂದೀಪ ಮತ್ತು ಮಂಜ ಅಜಾದ್ ಪಾರ್ಕ್ ನಲ್ಲಿರುವ ಉಪಾಹಾರ ಗ್ರಹದಲ್ಲಿ ಸಂಧಿಸಿದೆವು. ಮಂಜ ಹೇಳಿದ "ನೋಡು ಸಂದೀಪ ಶಾಂತಿನ್ನ ಪಟಾಯಿಸಬೇಕು ಎಂದರೆ ಅವಳ ಜೊತೆ ಇರುತ್ತಾಳಲ್ಲ ನಿಮ್ಮ ಪಕ್ಕದ ಮನಿ ಹುಡುಗಿ ರಾಣಿ ಆಕಿ ಜೊತೆ ಸ್ವಲ್ಪ ಸಲುಗಿಯಿಂದ ಇರು. ಆವಾಗ ಶಾಂತಿಗೆ ಹೊಟ್ಟಿ ಉರ್ಕೊಂಡು ನಿನ್ನ ಹತ್ರ ಓಡಿ ಬರ್ತಾಳ. ನೀನು ಬಾಳ ಚಂದ ಇದ್ದಿ. ನಿನ್ನoತಹ ಹುಡುಗನ್ನ ಯಾರು ಬಿಟ್ಟು ಕೊಡಂಗಿಲ್ಲ ಎಂದ. ಹುಡುಗ್ಯಾರಿಗೆ ಸ್ವಲ್ಪ ಹೊಟ್ಟಿ ಕಿಚ್ಚು ಜ್ಯಾಸ್ತಿ. ಇನ್ನೊಂದು ಹುಡುಗಿಗೆ ಸಿಕ್ಕಿದ್ದು ತಮಗೂ ಸಿಗಬೇಕು ಅಂತ ಅಸೆ ಪಡ್ತಾರ." ತೆಜಾಬ್ ಸಿನಿಮ ನೋಡಿಯಿಲ್ಲ ......? ಅದರೊಳಗ ಮಾಧುರಿ ದಿಕ್ಷಿತ ಪಟಾಯಿಸ್ಲಿಕ್ಕೆ ಮಂದಾಕಿನಿಗೆ ಅನಿಲ್ ಕಪೂರ್ ಗಾಳ ಹಾಕಿದ್ದ. ಹಂಗ ನೀನು ಮಾಡಬೇಕು ಎಂದ.

ಮಂಜ ಈ ಹೇಳಿಕೆಯನ್ನು ವೇದ ವಾಕ್ಯವೆಂದು ತಿಳಿಯುತ್ತೇನೆ ಎಂದು ಹೇಳಿ. ನಮ್ಮಿಬ್ಬರಿಗೂ ಮಸಾಲೆ ದೋಸೆ ಮತ್ತು ಟೀ ಕೊಡಿಸಿ ಬೀಳ್ಕೊಟ್ಟಿದ್ದ.

ಮತ್ತೆ ಶುರು ಆಯಿತು ಸಂದೀಪನ ಸಂದ್ಯರಾಗ...ದಿನವು ರಾಣಿಗೆ ನೋಟ್ಸ್ ಕೇಳುವದು. ತನ್ನ ನೋಟ್ಸ್ ಕೊಡುವದು ಹೀಗೆ.. ದಿನವು ಅವಳನ್ನು ಮಾತನಾಡಿಸುತ್ತಿದ್ದ. ಹೀಗೆ ಒಂದು ತಿಂಗಳು ನಡಿಯಿತು. ಆದರು ಏನು ಪ್ರಯೋಜನವಾಗಲಿಲ್ಲ. ಶಾಂತಿ ಮಾತ್ರ ಇನ್ನು ಶಾಂತವಾಗಿಯೇ ಇದ್ದಳು.

ಮತ್ತೆ ಬಂದು ಮಂಜನಿಗೆ ತನ್ನ ಕಷ್ಟವನ್ನು ಅಲವತ್ತುಕೊಂಡ. ಮಂಜ ಹೇಳಿದ "ಶಾಂತಳ ಮುಂದೆ ರಾಣಿನ್ನ ಹೊಗಳು ಎಂದು ಹೇಳಿದ". ಸಂದೀಪನಿಗೆ ದಿಕ್ಕೇ ತೋಚದಾಗಿತ್ತು. ಆ ಕಪ್ಪು ಕೃಷ್ಣವೇಣಿ, ದಪ್ಪ ನಾಸಿಕ, ಅನಹುತವಾದ ದೇಹ ಧಾರ್ಡ್ಯ ಹೇಗೆ ವರ್ಣಿಸುವದು ಎಂದು. ಕಣ್ಣನ್ನಾದರೂ.. ವರ್ಣಿಸೋಣವೆಂದರೆ ಮೆಳ್ಳಗಣ್ಣು.. ಆಗ ಮಂಜ "ಕುರುಡುಗಣ್ಣಲ್ಲಿ ಮೆಳ್ಳಗಣ್ಣು ಶ್ರೇಷ್ಟ.." ಎಂದು ಬಿಡು ಎಂದ ತಮಾಶೆಯಾಗಿ. ಹಾಗು.. ಹೀಗು.. ಶಾಂತಳೆದುರಿಗೆ ರಾಣಿನ್ನ ಮಹಾರಾಣಿಯ ಹಾಗೆ ವರ್ಣಿಸಿದ್ದ. ಆದರು ಶಾಂತಿಯ ಶಾಂತತೆ ಕೆಡಲಿಲ್ಲ. ರಾಣಿ ಇನ್ನಷ್ಟು ಉಬ್ಬಿ ಹೋಗಿದ್ದಳು. ಎರಡೇ ತಿಂಗಳಲ್ಲಿ 6 Kg ಜ್ಯಾಸ್ತಿ ಆಗಿತ್ತು.

ಶಾಂತಿಗೆ ಗೊತ್ತಾಗುವ ಹಾಗೆ, ಕಡೆಯ ಪ್ರಯತ್ನವಾಗಿ ನೋಟ್ಸ್ ಪುಸ್ತಕದಲ್ಲಿ ಪ್ರೇಮ ಪತ್ರ ರವಾನಿಸಿದ್ದ. ಅದೇ ಕೊನೆ ಕೃಷ್ಣವೇಣಿ ರಾಣಿ ಹಸಿರು ನಿಶಾನೆ ತೋರಿಸಿ, ಮನೆಯವರಿಗೆಲ್ಲ ಪತ್ರ ತೋರಿಸಿ ಅವನನ್ನು ಮದುವೇಯಾಗುವವರೆಗೆ ಬಿಡಲೇ ಇಲ್ಲ. ಶಾಂತ ಸ್ವರೂಪದ ಶಾಂತಿ ಮಾತ್ರ ದಕ್ಕಲೇ ಇಲ್ಲ. ಇದು ಮಂಜ ಮತ್ತೆ ನನಗು ತಿಳಿಯದಾಗಿತ್ತು. ಮಂಜನ ಈ ಐಡಿಯಾ ತಲೆಕೆಳಗಾಗಿತ್ತು.
ಬಾಯಿಬಿಡದೆ ರಾಣಿಯನ್ನು ತೆಪ್ಪಗೆ ಮದುವೆಯಾಗಿದ್ದ. ಮದುವೆಗೆ ಅವನ ಶಾಂತಿನು ಬಂದಿದ್ದಳು.

ಮೊನ್ನೆ ಒಂದು ದಿವಸ ನಾನು, ಮಂಜ ,ಸಂದೀಪ ಮತ್ತು ನವೀನ ಸೇರಿದ್ದವು. ಸಂದೀಪ ತನಗೆ ಗಂಡು ಮಗು ಆಯಿತು ಎಂದು ಸಂದೀಪ ಪಾರ್ಟಿ ಕೊಟ್ಟಿದ್ದ. ಕಂಠ ಪೂರ್ತಿ ಎಲ್ಲರು ಕುಡಿದಿದ್ದೆವು. ಹಾಗೆ ಗಾಂಧಿ ಚೌಕದವರೆಗೆ ಬಂದು ಹರುಟುತ್ತಿದ್ದೆವು. ಆಗ ನವೀನ "ನಿನ್ನೆ ಶಾಂತಿ ಬಂದಿದ್ದಳು" ಎಂದ. ಸಂದೀಪನ ಕಿವಿ ನಿವೀರೆಳಿದ್ದವು. "ಅವಳ ಮದುವೇ ಅಂತೆ ಕಣೋ" ಎಂದ. ಮೊತ್ತೊಂದು ವಿಷಯ "ಅವಳು ಸಂದೀಪನನ್ನು ತುಂಬಾ ಇಷ್ಟ ಪಡುತ್ತಿದ್ದಳು ಅಂತ ಹೇಳಿ, ಅವನು ಮಾತ್ರ ರಾಣಿನ ಪ್ರೀತಿಸಿದ ಎಂದು ಕಣ್ಣೀರಿಟ್ಟು ಬಿಟ್ಟಳು." ಎಂದು ಬಿಟ್ಟ.

ಸಂದೀಪ ನನ್ನನ್ನು ಮತ್ತು ಮಂಜನನ್ನು ಕೆಟ್ಟ ಕೋಪದಿಂದ ನೋಡಿ, ಏನು ಮಾಡಬೇಕೋ ತಿಳಿಯದೆ ತನ್ನ ಚಪ್ಪಲ ತೆಗೆದು "ರಪ.. ರಪ.. " ನೆ ತನ್ನ ತಲೆಗೆ ಹೊಡೆದುಕೊಂಡು ಸಂದಿಗೊಂದಿಯಿಂದ ಮನೆ ಸೇರಿಕೊಂಡಿದ್ದ.

ನಾನು ಮಂಜನಿಗೆ "ಲೇ ತೆಜ್ಯಾಬ್ , ಗಿಜ್ಯಾಬ್ ಅಂತ ಹೇಳಿ ತಲಿ ಕೆಡಿಸಿ " ಅವನ ಪ್ರೀತಿ ಹಾಳು ಮಾಡಿಬಿಟ್ಟಿಯಲ್ಲೋ ಸೀದಾ ಶಾಂತಿಗೆ ಹೋಗಿ ಹೇಳಿದ್ರ ಆಗುತಿತ್ತು ಎಂದೆ. ಅದಕ್ಕೆ ಮಂಜ "ನೋಡು "ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಅವನ ಹಣಿ ಮೇಲೆ ರಾಣಿ ಅಂತ ಬರೆದಿತ್ತು ಅಂತ ಕಾಣಿಸ್ತದ ಅದಕ ' ಶಾಂತಿನ ಬಿಟ್ಟು ವಾಂತಿನ ಕಟ್ಗೊಂಡ ' ನಾವೇನು ಮಾಡಬೇಕು" ಎಂದ. ನಾವಿಬ್ಬರು ನಕ್ಕಿದ್ದೆ.. ನಕ್ಕಿದ್ದು... ನವೀನನಿಗೆ ಮಾತ್ರ ಏನು ಅರ್ಥ ಆಗದೆ ಪೆಕರನಂತೆ ನೋಡುತ್ತಿದ್ದ.
ಮಂಜನ ಇನ್ನಷ್ಟು ತರಲೆಗಳು ಬರಲಿವೆ ನಿರೀಕ್ಷಿಸಿ ....

ತರ್ಲೆ ಮಂಜ(ಗ) ನಾಟ....

ಮೊನ್ನೆ ಮಂಜ ನಾನು ನಿನ್ನ ಜೊತೆ ಮನೆಗೆ ಬರುತ್ತೇನೆ ಎಂದು ಆಫೀಸ್ಗೆ ಫೋನ್ ಮಾಡಿದ್ದ. ಇವನ ಮಂಗನಾಟ ತಿಳಿದಿದ್ದರಿಂದ ನನಗೆ ಲೇಟ್ ಆಗುತ್ತೆ ನೀನು ಹೋಗು ಎಂದು ಹೇಳಿದೆ. ಅದಕ್ಕೆ ಅವನು "ಇವತ್ತು ನಿನಗೆ ಪಾನಿಪುರಿ ಮತ್ತು ಮಿರ್ಚಿ ತಿನ್ನಿಸುತ್ತೇನೆ ಎಂದು" ಆಸೆ ಹುಟ್ಟಿಸಿದ. ಮಂಜ ಎಷ್ಟೇ ತರ್ಲೆ ಇದ್ದರು ಅವನ ಜೊತೆ ಹೋದರೆ ಪಾನಿಪುರಿ ಗ್ಯಾರಂಟೀ. ಆದರು ಮನಸ್ಸಿನಲ್ಲಿ ಏನೋ ಒಂದು ದುಗುಡ.

ಆಯಿತು ಎಂದು ಹೊರಟೆವು. ಅವತ್ತು ಬಸ್ಸಿನಲ್ಲಿ ಕಾಲು ಇಡಲಿಕ್ಕು ಬಾರದಷ್ಟು ಜನ ಜಂಗುಳಿ ಇತ್ತು.

ಹೀಗೆ ಮತ್ತೊಂದು ಬಸ್ ಬರುವವರೆಗೆ ಕಾಯುತ್ತಾ ಇದ್ದಾಗ ಒಂದು ಹುಡುಗಿ ನಮ್ಮ ಸಮೀಪ ಬಂದು ನಿಂತಳು. ಅವಳನ್ನು ನೋಡಿ ಹಲ್ಲು ಕಿರಿದ ಮಂಜ. ಇವನನ್ನು ನೋಡಿ ಹೆದರಿ ಆ ಹುಡುಗಿ ಬೇರೆ ಕಡೆಗೆ ಹೋಗಿ ನಿಂತು ಬಿಟ್ಟಳು. ಮಂಜನಿಗೆ ಎಲ್ಲಿಲ್ಲದ ಕೋಪ ಬಂದಿತ್ತು. ಆಗಲೇ ಬೇರೊಂದು ಬಸ್ ಬಂತು. ನಾವು ಅದೇ ಬಸ್ ಹತ್ತಿದರೂ ಸಿಟ್ ಸಿಕ್ಕಲಿಲ್ಲ. ಆ ಹುಡುಗಿಯೂ ಅದೇ ಬುಸ್ ಹತ್ತಿದಳು. ಆದರೆ ಅವಳಿಗೆ ಸೀಟ್ ಸಿಕ್ಕಿತ್ತು. ಮಂಜ ನನಗೆ ಒಂದು ಸೀಟ್ ಕೊಡಿಸುವೆ ಎಂದು ಹೇಳಿದ ನಾನು ಬೇಡ ಎಂದೆ. ಇವನು ಮೊದಲೇ ದೊಡ್ಡ ತರ್ಲೆ ಏನು ಮಹಾಪ್ರಲಾಪ ಮಾಡುತ್ತಾನೋ ಎಂದು. ಕಡೆಗೂ ತನ್ನ ಪಾಠ ಪುರಾಣಗಳಿಂದ ಒಪ್ಪಿಸಿಯೇ ಬಿಟ್ಟ.

ಮೆಲ್ಲನೆ ಆ ಹುಡುಗಿಯ ಸೀಟ್ ಹತ್ತಿರ ಹೋಗಿ ನಿಂತ. ಮತ್ತೆ ಎಲ್ಲಿ ತರ್ಲೆ ಮಾಡುತ್ತಾನೋ ಎಂದು ತುಂಬಾ ಹೆದರಿದ್ದೆ. ಹೋದವನೇ ಹುಡುಗಿಗೆ ನಾನು "Dr ಮಂಜುನಾಥ ಅಂತ" ಎಂದ. ನೀವು ಹೀಗೆ ಕುಳಿತು ಕೊಳ್ಳಬೇಡಿ ಮುಖಕ್ಕೆ ಏನಾದರು ಧರಿಸಿ ಎಂದು "H1N1" ಬಗ್ಗೆ ದೊಡ್ಡದಾದ ಲೆಕ್ಚರ್ ಕೊಟ್ಟ. ಮತ್ತೆ ರೋಗ ತಡೆಹಿಡಿಯುವ Homeopathic ಔಷಧಿ - Gelsemium 30 ( one dram ) for one week (5+5) ಎಂದು ಅವಳಿಗೆ ಹೇಳಿದ. ಮತ್ತೆ ದಿನವೂ ಮುಂಜಾನೆ ಎದ್ದಮೇಲೆ ಒಂದು ತುಳಸಿ ದಳ ತಿನ್ನಿರಿ ಎಂದು ಅಭಯವನ್ನಿತ್ತ. ಆ ಹುಡುಗಿ ಮುಖಕ್ಕೆ ತನ್ನ ಕರ್ಚಿಫ್ ಸುತ್ತಿಕೊಂಡಳು. ಚೆನ್ನಾಗಿ ಹಚ್ಚಿದ್ದ ಲಿಪ್ಸ್ಟಿಕ್ ವೇಸ್ಟ್ ಆಗಿತ್ತು. ಅಷ್ಟರಲ್ಲೇ ನನ್ನನ್ನು ತೋರಿಸಿ "ಈವ ನನ್ನ ಗೆಳೆಯ" ಎಂದು ಪರಿಚಯ ಮಾಡಿ ಕೊಟ್ಟ. ಆ ಹುಡುಗಿ ನನ್ನ ನೋಡಿ ನಮಸ್ಕರಿಸಿತು. ಇವನಿಗೆ ಸ್ವಲ್ಪ ನೆಗಡಿ ಎಲ್ಲಿ "H1N1" ಇದೆಯೋ ಅಂತ ಸ್ವಲ್ಪ ಪರೀಕ್ಷೆ ಮಾಡಿಸಲು ಕರೆದು ಕೊಂಡು ಹೊರಟಿದ್ದೇನೆ ಪ್ಲೀಸ್ ಸ್ವಲ್ಪ ಕೆಟಕಿ ಸೀಟ್ ಬಿಟ್ಟು ಕೊಡುತ್ತೀರಾ ಎಂದು ಅಂದು ಬಿಟ್ಟ. ಎಲ್ಲರು ಒಮ್ಮೆ ನನ್ನ ಹುಚ್ಚನಂತೆ ನೋಡಿದ್ದರು. ನಾನು ಖುದ್ದಾಗಿ ಹೋಗಿ ನಿಮ್ಹಾನ್ಸ್ ಸೇರುವದೊಂದೇ ಬಾಕಿ. ಆನಂತರ ಡ್ರೈವರ್ ಮತ್ತು ಕಂಡಕ್ಟರ್ ಸಮೇತ ಪೂರ್ತಿ ಬಸ್ ಖಾಲಿ ಆಗಿ ಬಿಟ್ಟಿತ್ತು. ಬಸ್ನಲ್ಲಿ ಇದ್ದದ್ದು ನಾನು ಮತ್ತು ಮಂಜು ಮಾತ್ರ. ಒಬ್ಬರನೊಬ್ಬರು ಮುಖ ಮುಖ ನೋಡಿಕೊಂಡು ನಗು ತಡಿಯಲಾರದೆ ಜೋರಾಗಿ ನಕ್ಕು ಬಿಟ್ಟೆವು. ಮತ್ತೆ ಬಸ್ನಿಂದ ಇಳಿದು ಆಟೋ ಹತ್ತಿ ಗೂಡು ಸೇರಿಕೊಂಡೆವು.

ಈ ಗದ್ದಲದಲ್ಲಿ ಪಾನಿಪುರಿ ಮತ್ತು ಮಿರ್ಚಿ ನೆನಪು ಹಾರಿ ಹೋಗಿತ್ತು. ಆದರೆ ಮಂಜನ ತರ್ಲೆಗಳು ಮಾತ್ರ ತಲೆಯಲ್ಲಿ ಗುನುಗುಡುತಿತ್ತು.

ಒಂದು ದಿವಸ ಮಂಜ ರಾಜಣ್ಣ ಮಾಸ್ತರ ಮನೆಗೆ ಹೋಗಿದ್ದ. ಅವರು ಆಗಲೇ ದಾಡಿ ಮಾಡಿಕೊಳ್ಳಲು ನೊರೆ ಮುಖಕ್ಕೆ ಹಚ್ಚಿಕೊಂಡು ಶೇವಿಂಗ್ ಮಾಡಲು ರೆಡಿ ಆಗಿದ್ದರು. ಆಗಲೇ ಈ ಮಂಜ "ಸರ್ ಹೆಡ್ ಮಾಸ್ತರ್ ಕರಿತಿದ್ದಾರೆ ತುಂಬಾ ಅರ್ಜೆಂಟ್ " ಎಂದ. ಮಾಸ್ತರರು ಏನು ಮಾಡಬೇಕೆಂದು ತಿಳಿಯದೆ ಮುಖಕ್ಕೆ ಹಚ್ಚಿದ ಶೇವಿಂಗ್ ಕ್ರೀಂ ಟೊವೆಲ್ನಿಂದ ಒರಿಸಿ ಹೆಡ್ ಮಾಸ್ತರ್ ಮನೆಗೆ ಹೋದರು.

ಹೆಡ್ ಮಾಸ್ತರು ಹೆಂಡತಿಯೊಂದಿಗೆ ಜಗಳವಾಡಿದ್ದರು. ಅವರೇ ತಮ್ಮ ಬಟ್ಟೆ ಮತ್ತು ಹೆಂಡತಿಯ ಸೀರೆಯನ್ನು ತೊಳೆಯುತ್ತಿದ್ದರು. ಹೆಡ್ ಮಾಸ್ತರರನ್ನು ಹುಡುಕುತ್ತ ಪೂರ್ತಿ ಮನೆಯಲ್ಲ ಜಾಲಾಡಿ ಹಿತ್ತಲ ಮನೆಗೆ ಕಾಲಿಟ್ಟು "ಏನ್ ಸರ್ ಅರ್ಜೆಂಟ್ ಕರೆದಿರಲ್ಲ" ಎಂದು ಕೇಳಿದರು. ಮೊದಲೇ ಕೆಂಡ ಮಂಡಲಾಗಿದ್ದ ಹೆಡ್ ಮಾಸ್ತರ್ ಹೆಂಡತಿ ಸೀರೆ ಬೇರೆ ನೋಡಿಬಿಟ್ಟ ಎಂಬ ಕೋಪದಿಂದ. ಯಾರು ರೀ ನಿಮಗೆ ಕರೆದಿದ್ದು ಎಂದು ಕೋಪಿಸಿಕೊಂಡು, ಅಷ್ಟು ಬಟ್ಟೆ ರಾಜಣ್ಣ ಮಾಸ್ತರ ಕಡೆ ಒಗಿಯಿಸಿ ಕಳುಸಿದ್ದರು. ಮನೆಗೆ ಬರುವ ದಾರಿಯಲ್ಲಿ ಈ ಮಂಜ "ಏಪ್ರಿಲ್ ಫೂಲ್ ಸರ್" ಎಂದು ಬಿಟ್ಟ. ಮೊದಲೇ ಉರಿದು ಹೋಗಿದ್ದ ಮಾಸ್ತರರಿಗೆ ಕೆಟ್ಟ ಕೋಪ ಬಂದು ಹುಣಿಸಿ ಬರಲು ತೆಗೆದು ಬಾಸುಂಡೆ ಬರುವ ಹಾಗೆ ಬಾರಿಸಿದ್ದರು.

ಹೀಗೆ ಒಂದು ದಿವಸ ಟ್ರೈನಿನಲ್ಲು ತುಂಬಾ ಜನ ಜಂಗುಳಿ ಇತ್ತು. ಮಂಜನಿಗೆ ಮಲಗಲು ಜಾಗ ಬೇಕಾಗಿತ್ತು. ಆಗ ಮಂಜ "ಹಾವು... ಹಾವು.... " ಎಂದು ಚೀರಿದ. ಒಂದೇ ನಿಮಿಷದಲ್ಲಿ ಪೂರ್ತಿ ಟ್ರೈನ್ ಖಾಲಿಯಾಗಿತ್ತು. ಮಂಜ ಮತ್ತು ರಾಜು ಸಿಟಿನಲ್ಲಿ ಮಲಗಿ ಬಿಟ್ಟರು. ಮರುದಿನ ಎದ್ದು ನೋಡಿದಾಗ ಇಬ್ಬರು ಅದೇ ಊರಲ್ಲಿ ಇದ್ದರು. ಆನಂತರ ಕೇಳಿದಾಗ ಗೊತ್ತಾಯಿತು ಹಾವು ಇದ್ದಿದ್ದರಿಂದ ಅದೊಂದು ಭೋಗಿ ಬಿಟ್ಟು ಟ್ರೈನ್ ಹೊರಟು ಹೋಗಿದೆ ಎಂದು.

ಅದಕ್ಕೆ ಇವನಿಗೆ ನಾವೆಲ್ಲರೂ ಕರೆಯುವದು ತರ್ಲೆ ಮಂಜ(ಗ) ಅಂತ....ಇವನ ಪಾಠ ಪ್ರವಚನಗಳು ಇನ್ನೂ ತುಂಬಾ ಇವೆ.
(ಇವನ ಕಾಲ ಸೆಂಟರ್ ಪ್ರವಚನನು ಓದಿ).

ಕಾಲ್ ಸೆಂಟರ್ ....

ನಿನ್ನ ಜನ್ಮದಲ್ಲಿ ನೀನು PUC ಪಾಸಾಗಲ್ಲ ಕಣೋ " ಎಂದು ಶ್ರೀಧರರಾಯರು ಮಗ ಸುಬ್ಬನಿಗೆ ಉಗಿದಿದ್ದರು. ತ್ರಿವಿಕ್ರಮನಂತೆ ಸತತವಾಗಿ 6 ನೆ ಬಾರಿ ಸುಬ್ಬ PUC ಪರೀಕ್ಷೆ ಕಟ್ಟಿ ಫೇಲ್ ಆಗಿದ್ದ. ಮಾಡು ಇಲ್ಲವೇ ಮಡಿ ಎಂದು ಅಪ್ಪ ಕೊಟ್ಟ ಕಡೆಯ ಚಾನ್ಸ್ ಅದು ಕೂಡ ಕೈ ಕೊಟ್ಟಿತ್ತು. ಇಲ್ಲಿಯೇ ಏನಾದರು ನೌಕರಿ ಮಾಡು ಎಂದು ಅವನ ಅಪ್ಪ ತಾಕಿತ ಮಾಡಿದ್ದರು. ಸುಬ್ಬನಿಗೆ ಊರಲ್ಲಿ ಯಾರಿಗೂ ಮುಖ ತೋರಿಸುವ ಮನಸಿರಲಿಲ್ಲ. ತಂದೆಯ ಮಾತನ್ನು ಮೀರುವಂತಿಲ್ಲ.

ಹೀಗಿರುವಾಗ ಬೆಂಗಳೂರಿಂದ ಪಕ್ಕದ ಮನೆ ಪಚ್ಚು(ಪ್ರಶಾಂತ) ಬಂದಿದ್ದ. ತನ್ನ ಗೋಳನ್ನು ಪಚ್ಚು ಮುಂದೆ ಗೊಗರಿದ. ಆಯಿತು ನಾನು ಬೆಂಗಳೂರಿಗೆ ಹೋದ ಮೇಲೆ ನಿನಗೆ ಒಂದು ಕೆಲಸ ಹುಡುಕಿ ನಿನಗೆ ತಿಳಿಸುವೆ ಎಂದು ಹೇಳಿ ಬೆಂಗಳೂರು ಬಸ್ ಹತ್ತಿದ್ದ ಪಚ್ಚು.

ಕೆಲ ದಿನಗಳ ನಂತರ ಪಚ್ಚು ಫೋನ್ ಮಾಡಿ, ನಿನಗೆ ಒಂದು ಒಳ್ಳೆಯ ಕೆಲಸ ಹುಡುಕಿದ್ದೇನೆ. ತಿಂಗಳಿಗೆ 15000 ಸಂಬಳ. "ಕಾಲ್ ಸೆಂಟರ್" ನಲ್ಲಿ ಕೆಲಸ ಎಂದು ಹೇಳಿ. ಬೆಂಗಳೂರಿಗೆ ಬರುವ ವ್ಯವಸ್ಥೆ ಮಾಡಿಕೋ ಎಂದು ಹೇಳಿದ್ದ. ಪಚ್ಚು ಸಂಬಳದ ವಿಷಯ ಕೇಳಿದ ಮೇಲೆ ಬೇರೆ ಏನನ್ನು ಅಷ್ಟು ಸರಿಯಾಗಿ ಕೇಳಿಸಿಕೊಂಡಿರಲಿಲ್ಲ. ಆದರೆ ನನ್ನ ರೂಮಿನಲ್ಲಿ ಮಾತ್ರ ಜಾಗ ಇಲ್ಲ. ಮಂಜು ಮತ್ತು ಗೋಪಾಲ್ ರೂಂ ಗೆ ಹೋಗು ಎಂದು ಹೇಳಿದ್ದ.

ನನಗೆ ಕೆಲಸ ಸಿಕ್ಕಿದೆ ನಾನು ಬೆಂಗಳೂರಿಗೆ ಬರುತ್ತೇನೆ ಎಂದು ಹೇಳಿ ನನಗೆ ಮತ್ತೆ ಮಂಜುಗೆ ಫೋನ್ ಮಾಡಿ ಹೇಳಿ ಬೆಂಗಳೂರು ಬಸ್ ಹತ್ತಿದ್ದ ಸುಬ್ಬ.

ಬೆಂಗಳೂರು ಬಂದೊಡನೆಯೇ ಖುಷಿಯ ಭರದಲ್ಲಿ ಬಸವನಗುಡಿ ಬಸ್ ಹತ್ತುವ ಬದಲು ಬಾನಸ್ವಾಡಿ ಬಸ್ ಹತ್ತಿ, ಬಾನಸ್ವಾಡಿ ಬಸ್ ಸ್ಟಾಪ್ ನಿಂದ ನನಗೆ ಫೋನ್ ಮಾಡಿ ಎಲ್ಲಿ ಬರಬೇಕು? ಎಂದು ಕೇಳಿದ. ಪೂರ್ತಿ ವಿಷಯ ತಿಳಿದ ಮೇಲೆ ಉಗಿದು ಆಟೋ ಮಾಡಿ ಕೊಂಡು ಬಾ ಎಂದು ಹೇಳಿ, ಅಡ್ರೆಸ್ ಆಟೋ ಡ್ರೈವರ್ ಗೆ ಹೇಳಿದ್ದೆ.

ಹಾಗು ಹೀಗು ಮನೆ ತಲುಪಿದ ನಮ್ಮ ಸುಬ್ಬ. ಮತ್ತೆ ಏನೋ ವಿಷಯ ಮನೆಯವರ ಯೋಗಕ್ಷೇಮ ವಿಚಾರಿಸಿ, ಟೀ ಕುಡಿದು ಮುಂದಿನ ಸಮಾಚಾರವೇನು ಸುಬ್ಬ ಎಂದು ಕೇಳಿದೆವು. ಪಚ್ಚು ನೌಕರಿ ಕೊಡಿಸ್ತಾನಂತೆ ಕಣೋ ಎಂದ. ತಿಂಗಳಿಗೆ 15000 ಸಾವಿರ ಸಂಬಳ ಎಂದ. ಮಂಜು ಎಲ್ಲಿಯಪ್ಪ ನೌಕರಿ ಎಂದು ಕೇಳಿದ. ಅದು.. ಅದು ..ಎಂದು ಸ್ವಲ್ಪ ನೆನಪು ಮಾಡಿ ಕೊಂಡು "ಕಾರ್ ಸೆಂಟರ್" ಎಂದ. ಯಾವದೋ ಅದು ಕಾರ್ ಸೆಂಟರ್ ಗ್ಯಾರೆಜ ಏನೋ?. ಗೊತ್ತಿಲ್ಲಪ ನೀನೆ ಪಚ್ಚು ಗೆ ಫೋನ್ ಮಾಡು ಎಂದ.

ಪಚ್ಚುಗೆ ಫೋನ್ ಮಾಡಿದಮೇಲೆ ತಿಳಿಯಿತು ಅದು "ಕಾಲ್ ಸೆಂಟರ್" ಎಂದು. ಇವತ್ತೇ ಇಂಟರ್ವ್ಯೂ ನಾನು ಹೋಗಬೇಕು ಎಂದು ತಡಬಡಿಸಿ ಸ್ನಾನ ಮುಗಿಸಿ ಇಂಟರ್ವ್ಯೂ ಗೆ ಹೋದ.

ಮಂಜು ಯಾವತ್ತು ತಮಾಷೆಯ ಹುಡುಗ. ಅವನು ಎಲ್ಲರೊಂದಿಗೆ ತಮಾಷೆ ಮಾಡುತ್ತ ಇರುವದು ಅವನ ಚಟ. ಸಂಜೆ ಇಂಟರ್ವ್ಯೂ ಮುಗಿಸಿ ಬಂದ ಮೇಲೆ ಸುಬ್ಬನಿಗೆ ಮಂಜು ಏನಪ್ಪಾ ಏನಾಯಿತು ನಿನ್ನ ಗ್ಯಾರೆಜ ಇಂಟರ್ವ್ಯೂ? ಎಂದ. ನನಗೆ ನೌಕರಿ ಸಿಕ್ಕಿದೆ ಕಣ್ರೋ 15000 ನೆ ಸಂಬಳ ಎಂದ. ಅವನ ಖುಷಿಗೆ ಪಾರವೇ ಇರಲಿಲ್ಲ. ಮಂಜು ನಿನಗೆ ಕಾಲ್ ಸೆಂಟರ್ ಬಗ್ಗೆ ಪೂರ್ತಿ ಮಾಹಿತಿ ಕೊಡುತ್ತೇನೆ ಎಂದು ಸುಬ್ಬನಿಗೆ ಹೇಳಿದ. ನನಗೆ ಗೊತ್ತು ಈ ಮಂಜ ಏನೋ ಮಸಲತ್ತು ನಡಿಸಿದ್ದಾನೆ ಎಂದು. ಮಂಜ ಶುರು ಹಚ್ಚಿ ಕೊಂಡ "ಕಾಲ್ ಸೆಂಟರ್" ಎಂದರೆ ಕಾಲಗಳನ್ನೂ X-Ray ಮಾಡುವ ಸೆಂಟರ್ ಎಂದ. ನಾನು ಒಳಗೊಳಗೇ ನಗುತ್ತಿದೆ. ಅಂದರೆ X-Ray Technician ತರಹ ಎಂದ. ಆದರೆ ...ಆದರೆ ... ನನಗೆ ಎಲ್ಲಿ ಬರುತ್ತೆ X-Ray ಮಾಡಲು ನಾನು ಬೇರೆ PUC ಫೇಲ್ ಎಂದ ಸುಬ್ಬ. ಅದಕ್ಕೆ ನಿನ್ನ ದಡ್ಡ(ಗುಬಾಲ್) ಅನ್ನೋದು ಎಂದ ಮಂಜು. ಯಾರು ಕಾಲಿನ ಮತ್ತು ಬೆವರಿನ ಕೆಟ್ಟ ವಾಸನೆ ತಡೆದುಕೊಳ್ಳುತ್ತಾರೋ ಅಂತವರನ್ನೇ ಸೆಲೆಕ್ಟ್ ಮಾಡುತ್ತಾರೆ ಎಂದ. ಹೌದಾ ಅದಕ್ಕೆ ಇರಬೇಕೆ ನನ್ನ ಇಂಟರ್ವ್ಯೂ ಮಾಡುತಿದ್ದವ ತನ್ನ ಶೂ ತೆಗೆದಾಗ ಕೆಟ್ಟ ವಾಸನೆ ಬರುತಿತ್ತು. ಆದರು ತಡೆದು ಕೊಂಡೆ ಎಂದ. ಅದಕ್ಕೆ ಕಣೋ ನಿನ್ನನ್ನು ಸೆಲೆಕ್ಟ್ ಮಾಡಿದ್ದೂ ದಡ್ಡ. ಹುಡಿಗಿಯರ ಕಾಲ ಬಗ್ಗೆ ಹುಶಾರಪ್ಪ ಅವರು ಸ್ಯಾಂಡಲ್ ನಂಬರ್ ಕೆನ್ನೆ ಮೇಲೆ ಮುಡಿದರೆ ಕಷ್ಟ ಎಂಬ ವೇದಾಂತ ಬೇರೆ ಹೇಳಿಕೊಟ್ಟ.

ಮೊದಲನೇ ದಿನದ ಕೆಲಸ ಮುಗಿಸಿಕೊಂಡು ಬಂದಾಗ ಸುಬ್ಬ ತುಂಬಾ ಸಂತೋಷದಿಂದ ಇದ್ದ. ಮತ್ತೆ ನಮ್ಮಿಬ್ಬರಿಗೂ ಎಂಥ ಚೆನ್ನಾಗಿದೆ ಕಣೋ ಆಫೀಸು ಕಾಫಿ,ಟೀ ಎಲ್ಲದಕ್ಕೂ ಮೆಶಿನ್. ಅಮ್ಮನಿಗೆ ಎರಡು ಸರಿ ಕೇಳಿದರೆ ಕಾಫಿ ಕೊಡುವದಿಲ್ಲ. ಆದರೆ ಆಫೀಸಿನಲ್ಲಿ ಎಷ್ಟು ಸರಿ ಬೇಕಾದರು ಕುಡಿಯಬಹುದು ಎಂದ. ಮಂಜ ಸುಮ್ಮನಿರದೆ ಮತ್ತೆ ಊಟಕ್ಕು ಮೆಶಿನ್ ಇದೆನಾ?. ಇಲ್ಲ ಮಾಡಿಸೋದಕ್ಕು ಮೆಶಿನ್ ಇದೆ ಎಂದು ಹೇಳಿ ಸಿಟ್ಟಿನಿಂದ ಸುಬ್ಬ ಮಂಜನನ್ನು ನೋಡಿದ್ದ.

ಎರಡನೇ ದಿನ ಸುಬ್ಬ ಬಂದವನೇ ಎಲ್ಲಿ ಆ "ಕಳ್ಳ ಮಂಜ" ಎಂದು ಕೂಗಲಾರಂಬಿಸಿದ. ಏಕೆ? ಏನಾಯಿತೋ? ಎಂದು ನಾನು ಕೇಳಿದಾಗ ಆ ನನ್ನ ಮಗ ಮಾಡಿದ್ದ ಅವಾಂತರದಿಂದ ನನ್ನ ಮಾನ ಮರ್ಯಾದೆ ಎಲ್ಲ ಹೋಯಿತು ಎಂದು ಗೊಳಡಿದ ಅದು ಹುಡುಗಿಯರ ಮುಂದೆ ಕೂಡ ಎಂದ. ಅಷ್ಟರಲ್ಲೇ bathroom ನಿಂದ ಬಂದ ಮಂಜ ನೀನು ಮೊದಲೇ ಹೇಳಬಾರದೆ ಹುಡುಗಿಯರು ಇದ್ದಾರೆ ಅಂತ ಮತ್ತೆ ಬೇರೆಯಾವುದಾದರು ಐಡಿಯಾ ಕೊಡುತ್ತಿದ್ದೆ ಎಂದ. ಜಗಳ ಮಾಡಬೇಡಿ ಏನು ಆಯಿತು ಹೇಳೋ ಸುಬ್ಬ ಎನ್ದೆ. ಇವತ್ತು ಟ್ರೇನಿಂಗನಲ್ಲಿ ನಮ್ಮ ಪ್ರಾಜೆಕ್ಟ್ ಲೀಡರ್ ಕಾಲ್ ಸೆಂಟರ್ ಅಂದರೆ ಏನು? ಎಂದು ಕೇಳಿದ. ಅದಕ್ಕೆ ಈ ಕಳ್ಳ ಮಂಜ ಕೊಟ್ಟಿದ್ದ ಭಾಷಣ ಬಿಗಿದು ಉಗಿಸಿಕೊಂಡು ಬಂದೆ ಎಂದ. ಮತ್ತೆ ಮಂಜ ಕೈ ಸೆಂಟರ್ ಬಗ್ಗೆ ನು ಹೇಳಬೇಕಿತ್ತು ಅದನ್ನು ಹೇಳಿಲ್ಲ ಅದಕ್ಕೆ ಉಗಿದಿರಬೇಕು ಎಂದ.

ಹಾಗು ಹೀಗು ಇಬ್ಬರಿಗೂ ಒಪ್ಪಂದ ಮಾಡಿಸಿದೆ. ಈ ಮಂಜನನ್ನ ಹೀಗೆ ಮಾಡುವಾಗ ಯಾರಾದರು ತಡೆದರೆ ಅವರಿಗೂ ಏನಾದರು ತಂದು ಇಟ್ಟು ಬಿಡುತ್ತಾನೆ. ಹೀಗೆ ಒಂದು ದಿವಸ ನನ್ನ ಸ್ಕೂಲ್ ಬಾಗ್ನಲ್ಲಿ ಗಣೇಶ್ ಬಿಡಿ ಇಟ್ಟು ನನ್ನ ಮನೆಯಲ್ಲಿ ಬೈಯುವ ಹಾಗೆ ಮಾಡಿದ್ದ.

ಮತ್ತೆ ಒಂದು ದಿವಸ ಸುಬ್ಬ ತುಂಬಾ ಬೇಜಾರಾಗಿ ಮನೆಗೆ ಬಂದಿದ್ದ. ಏನಾಯಿತು ಎಂದು ಕೇಳಿದಾಗ ನಾನು ನೌಕರಿ ಬಿಡುತ್ತೇನೆ ಎಂದು ಹೇಳಿದ. ಏನಾಯಿತು ಪೂರ್ತಿ ವಿವರಿಸು ಎಂದಾಗ. ಈ ನೌಕರಿಯಲ್ಲಿ ಕಿಮ್ಮತ್ತೆ ಇಲ್ಲ ಕಣೋ ಫೋನ್ ಮಾಡಿದ ವ್ಯಕ್ತಿಗಳೆಲ್ಲರು ಹೊರ ದೇಶದವರು ನನ್ನ ಹೆಸರನ್ನು ಹೇಗೆ ಹೇಗೋ ಉಚ್ಚರಿಸುತ್ತಾರೆ. ಒಬ್ಬ ನನ್ನನ್ನ ಡಬ್ಬ, ಇನ್ನೊಬ್ಬ ಮಬ್ಬ, ಇವತ್ತು ಒಬ್ಬ ಫೋನ್ ಮಾಡಿ ನನ್ನ ಗಬ್ಬ ಎಂದು ಬಿಟ್ಟ ಎಂದು ಗೊಳೋ ಅಂತ ಅತ್ತು ಬಿಟ್ಟ. ಮತ್ತೆ ತಿಂದು ..ತಿಂದು.. ಗಬ್ಬ ಆದವರೇ ತರಹನೆ ಆನೆ ಮರಿ ಆಗಿ ಅದಕ್ಕೆ ಅಂದಿರಬೇಕು ಎಂದ ಮಂಜ. ಮಂಜ ಸುಮ್ಮನಿರದೆ ಚಂಬು ಅಂತ ಯಾರು ಅನ್ನಲಿಲ್ಲ ವೇನೋ ಎಂದು ಕೇಳಿದ. ಮತ್ತೆ ಶುರು ಆಯಿತು ಇವರಿಬ್ಬರ ಮಹಾಭಾರತ.

ಎಲ್ಲ ತಣ್ಣಗಾದ ಮೇಲೆ ಇದಕ್ಕೆ ಒಂದು ಪರಿಹಾರ ನಾನು ಕೊಡುತ್ತೇನೆ ಎಂದು ಮಂಜ ಹೇಳಿದ. ನೀನು ನಿನ್ನ ಹೆಸರನ್ನ ಶಾರ್ಟ್ ಆಗಿ ಬೇರೆ ಹೆಸರು ಇಟ್ಟುಕೋ ಎಂದು ಹೇಳಿದ. ಅದಕ್ಕೆ ನೀನೆ ಏನಾದರು ಹೇಳೋ ? ಎಂದ. ಮತ್ತೆ ತಮಾಷೆಗೆ ಪಬ್ ಸುಬ್ಬ ಅದನ್ನೇ ....ಮತ್ತೆ ಸುದಾರಿಸಿ ಸಾರೀ... ಸಾರೀ ...ಅಂತ ಹೇಳಿ ಸ್ಯಾಮ ಅಂತ ಇಟ್ಟುಕೋ ಎಂದು ಹೇಳಿದ. ರಾಮಕೃಷ್ಣನಿಗು ನಾನೆ ಹೆಸರು ಇಟ್ಟಿದ್ದು ರಾಕಿ ಅಂತ ನೋಡು ಎಷ್ಟು ಫೇಮಸ್ ಆಗಿದ್ದಾನೆ ಎಂದ. ಕಡೆಗೆ ಹಾಗು ಹೀಗು 5 ವರ್ಷ ಅದೇ ನೌಕರಿಯಲ್ಲಿ ಹೆಣಗಾಡಿ.

ಈಗ ಸಾಫ್ಟವೇರ್ ಫೀಲ್ಡ್ ಗೆ ಬಂದಿದ್ದಾನೆ. ಈಗಲೂ ಮಂಜನ ಪಾಠ ಪ್ರವಚನಗಳು ಮುಗಿದಿಲ್ಲ ......

ಮನಸೂರೆಗೊಳ್ಳುವ ಮೈಸೂರು....

ಆಗ ತಾನೆ ನಾನು ಕೆಲಸ ಮಾಡುತ್ತಿದ್ದ ಕಂಪನಿಗೆ ಬೀಗ ಬಿದ್ದಿತ್ತು. ಇನ್ನೇನು ಮುಂದೆ ಎಂಬ ಭಾವನೆ ಆಳವಾಗಿ ಮನಸ್ಸಿನಲ್ಲಿ ಬೇರುರಿತ್ತು. ಬೆಳೆಗ್ಗೆಯಿಂದ ಸಂಜೆಯವರೆಗೆ ಇಂಟರ್ನೆಟ್ನಲ್ಲಿ ನನ್ನ ನೌಕರಿ ಹುಡುಕುವುದೆ ನನ್ನ ಕೆಲಸವಾಗಿತ್ತು. ಅಷ್ಟರಲ್ಲೇ ಒಂದು ನೌಕರಿಗೆ ಆಹ್ವಾನ ಬಂದಿತ್ತು. ಆದರೆ ಕೆಲಸ ಮಾತ್ರ ಮೈಸೂರಿನಲ್ಲಿ. "ಪಾಲಿಗೆ ಬಂದದ್ದು ಪಂಚಾಮೃತ" ವೆಂದು ತಿಳಿದು ಮೈಸೂರು ಬಸ್ ಹತ್ತಿದೆ.

ಮೈಸೂರು ಬಂದರು ಇನ್ನು ಮಲಗಿಯೇ ಇದ್ದೆ. ಕಂಡಕ್ಟರ್ ಬಂದು ಎಬ್ಬಿಸಿ ಚಾಮರಾಜನಗರಕ್ಕೆ ಹೋಗಬೇಕೆ? ಎಂದು ಕೇಳಿದರು. ಇಲ್ಲ ಮೈಸೂರು ಎಂದೆ. ಇದೇ ಮೈಸೂರು ಇಳಿದುಕೊಳ್ಳಿ ಎಂದರು. ತಡಬಡಿಸಿ ಕೆಳಗೆ ಇಳಿದೆ.

ನಾನು ಯಾವದೇ ಊರಿಗೆ ಹೋಗುವ ಮೊದಲೇ ಅದರ ಒಂದು ಚಿತ್ರಣ ನನ್ನ ಮನಸ್ಸಿನಲ್ಲಿ ಮೂಡಿರುತ್ತದೆ. ಅದು ಯಾವತ್ತು ನಿಜವಾಗಿಲ್ಲವಾದರೂ. ಆದರೆ ಹೀಗೆ ಇರಬಹುದೆಂದು ಉಹಿಸುವದು ಮಾತ್ರ ಬಿಟ್ಟಿಲ್ಲ. ಇಲ್ಲೂ ಆಗಿದ್ದು ಹಾಗೇನೆ. ನನ್ನ ಮನಸ್ಸಿನಲ್ಲಿದ್ದ ಮೈಸೂರು ಬೇರೆ ಯಾವುದೋ ಊರು ಆಗಿತ್ತು ...

ನನ್ನ Team Leader ಗೆ ಫೋನು ಹಾಯಿಸಿ ಹೇಗೆ ಬರಬೇಕು ಎಂದು ತಿಳಿದು. ನಜರಬಾದ ಕ್ಕೆ ಹೋಗಬೇಕು ಎಂದು ಆಟೋ ಏರಿದೆ. ನಜರಬಾದದ ನಜಾರ ತುಂಬಾನೇ ಚೆನ್ನಾಗಿತ್ತು. ಎದುರಿಗೆ ಕಾಣುವ ಮನೋಹರವಾದ ಚಾಮುಂಡಿ ಬೆಟ್ಟ. ಕಾಲುನಡಿಗೆಯಲ್ಲಿ ತಲುಪುವ ಮೈಸೂರು ಅರಮನೆ, ಕಾರಂಜಿ ಕೆರೆ, ಪ್ರಾಣಿಸಂಗ್ರಹಾಲಯ.....ಹೀಗೆ ಹಲವಾರು.

ನಮ್ಮದು ಹಾಲಿನ ಡೈರಿ ಪ್ರಾಜೆಕ್ಟ್. ಆಗ ತಾನೆ ಬಂದಿದ್ದರಿಂದ ಸ್ವಲ್ಪ ವಿಶ್ರಾಂತಿ ತೊಗೊಂಡು ಆಫೀಸಿಗೆ "ಬಾ" ಎಂದು, ನನ್ನ ಟೀಂ ಲೀಡರ್ ಪಾಂಡುರಂಗ ಆಫೀಸ್ ಹೊರಟರು. ನಾನು ಆಫೀಸ್ ವಿಳಾಸವನ್ನು ಹಿಡಿದು ಒಬ್ಬ ದಾರಿಹೋಕನನ್ನು ಕೇಳಿದೆ. "ಇದು ಎಲ್ಲಿ ಬರತದ" ಎಂದು. ಅವನಿಗೆ ಅರ್ಥವಾಗಲಿಲ್ಲ. ಮತ್ತೆ ಸುದಾರಿಸಿ ಧಾರವಾಡ ಭಾಷೆ ಬಿಟ್ಟು ಮೈಸೂರು ಭಾಷೆಯಲ್ಲಿ "ಇದು ಎಲ್ಲಿದೆ ಸರ್ " ಎಂದು ಕೇಳಿದಾಗ. ಸರಿಯಾದ ದಾರಿಯನ್ನು ತೋರಿಸಿದ್ದ.

ಹಾಲಿನ ಡೈರಿ ಒಳಗೆ ಕಾಲು ಇಡುತಿದ್ದಂತೆ ಒಂದು ಎಮ್ಮೆ ನನ್ನ ಕಡೆಗೆ ಅಟ್ಟಿಸಿಕೊಂಡು ಬಂತು. ಹೆದರಿ ಅದರ ದಾರಿಯಿಂದ ಸರಿದು "ಎ ನಿನಗೆ ನಿನ್ನ ಎಮ್ಮೆ ನೋಡ್ಕೊಲಿಕ್ಕೆ ಬರುದಿಲ್ಲ ಏನು" ಎಂದು ಎಮ್ಮೆಯ ಹಿಂದೆ ಬಂದ ಮನುಷ್ಯನನ್ನು ಉಗಿದು ಆಫೀಸ್ ಒಳಗಡೆ ಹೋದೆ.

ಪಾಂಡುರಂಗ ತುಂಬಾ ಬ್ಯುಸಿಯಾಗಿ ಇದ್ದರು. ಆದರು ನನ್ನನ್ನು ಎಲ್ಲ ಅಧಿಕಾರಿಗಳನ್ನು ಭೇಟಿ ಮಾಡಿಸಲು ಕರೆದೊಯ್ದರು. ಎಲ್ಲಾ ಅಧಿಕಾರಿಗಳನ್ನು ಭೇಟಿಯಾದ ಮೇಲೆ ಮ್ಯಾನೇಜರ್ ಭೇಟಿಯಾಗಬೇಕಿತ್ತು. ತುಂಬಾ ಜನಗಳು ಅವರ ಕ್ಯಾಬಿನ್ ಬಳಿ ನಿಂತಿದ್ದರು. ಆದರು ಸೆಕ್ಯೂರಿಟಿ ಗಾರ್ಡ್ ಪಾಂಡುರಂಗ ಮತ್ತು ನನ್ನನ್ನು ಮೊದಲು ಒಳಗಡೆ ಕಳುಹಿಸಿದ. ಎದುರಿಗೆ ಒಂದು ಆಘಾತ ಕಾದಿತ್ತು. ಅದೇ ಎಮ್ಮೆ ಹಿಂದೆ ಇದ್ದ ಮನುಷ್ಯ ಎದುರುಗಡೆ ಮ್ಯಾನೇಜರ್ ಕುರ್ಚಿಯ ಮೇಲೆ ಕುಳಿತಿದ್ದರು. ನನಗೆ ಒಳಗೊಳಗೇ ಭಯ ಶುರುವಾಗಿತ್ತು. ಎಲ್ಲಿ ನನ್ನನ್ನು ನೋಡಿ ಉಗಿಯುತ್ತಾನೋ ಎಂದು. ಆದರೆ ಮನುಷ್ಯ ತುಂಬಾ ಒಳ್ಳೆಯವ ಆದರದಿಂದ ಮಾತನಾಡಿ ಚಹಾ ಕುಡಿಸಿ "ನಾನು ಎಮ್ಮೆ ಕಾಯುವವನಲ್ಲ Veternary ಡಾಕ್ಟರ" ಎಂದು ಹೇಳಿ ಈ ಗೋವುಗಳ ಪಾಲ (ಯಾನಿ ಗೋಪಾಲ)ನನ್ನು ಕಳುಹಿಸಿದ್ದ. ಹೀಗೆ ಭೇಟಿ ಮಾಡುತ್ತ Production Departmentಗೆ ಹೋದೆವು ಅಲ್ಲಿ ಎಲ್ಲರ ಪರಿಚಯವಾದ ಮೇಲೆ ತಿನ್ನಲು ಪೇಡ, ಮೈಸೂರು ಪಾಕ ತಂದು ಇಟ್ಟರು. ನಾನು ಬರಿ ಪೇಡ ತಿಂದೆ. ಆಗ ಪಾಂಡುರಂಗ ಇದು ಮೈಸೂರು Special ಮೈಸೂರು ಪಾಕ ತಿನ್ನಿ ಗೋಪಾಲ್ ಎಂದರು. ಧಾರವಾಡದಲ್ಲಿ ಸಿಗುವ ಮೈಸೂರು ಪಾಕ ಪಾಕದಂತೆ ಇರದೇ ರಾಕ್ ದಂತೆ ಗಟ್ಟಿ ಇರುತ್ತದೆ ಅದರಿಂದ ಅದನ್ನು ತಿಂದಿರಲಿಲ್ಲ. ಅದನ್ನು ತಿಂದ ಮೇಲೆ ಬಾಯಲ್ಲಿ ನೀರುರಿತ್ತು. ತುಂಬಾ ಚೆನ್ನಾಗಿತ್ತು ಮೈಸೂರು ಪಾಕ.
ಅಷ್ಟೊತ್ತಿಗಾಗಲೇ ಊಟದ ಸಮಯವಾಗಿತ್ತು. ಮುದ್ದೆ ನೋಡಿದ್ದೇ ಅವಾಗ. ಒಂದು ಮುದ್ದೆ ಹಾಕಿಸಿಕೊಂಡೆ. ಅದನ್ನು ಬಾಯಿಯಿಂದ ಜಗಿಯಲಾರoಬಿಸಿದಾಗ ಹಲ್ಲುಗಳಿಗೆ ಮುದ್ದೆ ಅಂಟಿಕೊಂಡಿತ್ತು. ಅದನ್ನು ಜಗಿಯದೆ ಹಾಗೆ ನುಂಗಬೇಕು ಎಂದು ಪಾಂಡುರಂಗ ಹೇಳಿದರು. ಅದರ ಸಹವಾಸ ಸಾಕೆಂದು ಅದನ್ನು ಬಳಿಗಿಟ್ಟು, ಅನ್ನ ಹಾಕಿಸಿಕೊಂಡು ತಿಂದು ಮುಗಿಸಿದ್ದೆ.ಹಾಗು ಹೀಗು ಸಂಜೆವರೆಗೆ ಕಾಲ ಕಳೆದು ಮನೆ ಹಾದಿ ಹಿಡಿದಿದ್ದೆ. ಬರಿ ಅನ್ನ ತಿಂದಿದ್ದರಿಂದ ಹೊಟ್ಟೆ ಚಿರಗುಡುತಿತ್ತು. ಬಿಸಿ ಬಿಸಿ ಯಾಗಿ ಬಜ್ಜಿ ಮಾಡುವದನ್ನು ನೋಡಿ, ಅಲ್ಲಿಗೆ ಹೋಗಿ ಮೈಸೂರು ಬಜ್ಜಿ ಕೊಡಿ ಎಂದೆ.ಏನು? ಎಂದ ಅಂಗಡಿಯವ. ಎಲ್ಲರು ನನ್ನನ್ನು ಮಂಗನಂತೆ ನೋಡಿದರು. ನಂತರ ಕೈ ಮಾಡಿ ತೋರಿಸಿ "ಮೈಸೂರು ಬಜ್ಜಿ" ಕೊಡಿ ಎಂದೆ. "ಓ" ಅದಾ "ಮಂಗಳೂರು ಬಜ್ಜಿ" ಎಂದು ಕೊಟ್ಟ.ಧಾರವಾಡದಲ್ಲಿ ಇದನ್ನ ಮೈಸೂರು ಬಜ್ಜಿ ಅಂತಾನೆ ಅನ್ನೋದು. ಇಲ್ಲಿ ನೋಡಿದರೆ ಇದನ್ನ ಮಂಗಳೂರು ಬಜ್ಜಿ ಅಂತಾರೆ. ಇನ್ನು ಮಂಗಳೂರುನಲ್ಲಿ ಏನೆಂದು ಕರೆಯುತ್ತಾರೋ ಆ ದೇವರೇ ಬಲ್ಲ.

ಮನೆಗೆ ಹೋಗುವದರಷ್ಟರಲ್ಲಿಯೇ ಮನೆಯಲ್ಲಿ ಮುಕುಂದ ಬಂದಿದ್ದ ಅವನು ಮಂಡ್ಯ ಪ್ರಾಜೆಕ್ಟ್ ನೋಡುತಿದ್ದ. ಹಾಗೇ ಪರಸ್ಪರ ಪರಿಚಯ ಮಾಡಿಕೊಂಡೆವು. ರಾತ್ರಿ 9 ಆದರು ಪಾಂಡುರಂಗನ ಸುದ್ದಿ ಇಲ್ಲ. ಹೊಟ್ಟೆ ಹಸಿದಿದ್ದರಿಂದ ಮುಕುಂದನಿಗೆ ನಾನು ಮತ್ತು ಶಿವಾಜಿ ಊಟ ಮಾಡೋಣವೆ ಎಂದು ಕೇಳಿದೆವು. ಸಿಟ್ಟಿನಿಂದ ನಮ್ಮಿಬ್ಬರನ್ನು ದುರುಗುಟ್ಟಿ, ನೀವು ಬೇಕಾದರೆ ಮಾಡಿ ಎಂದ. ನಾನು ಪಾಂಡುರಂಗ ಬರುವವರೆಗೆ ಕಾಯುವೆ ಎಂದು ಓದುತ್ತ ಕುಳಿತ .

ಹೊಟ್ಟೆ ಹಸಿದಿದ್ದರು ನಾವು ಹಾಗೇ ಸುಮ್ಮನೆ ಕುಳಿತೆವು. 10 ಘಂಟೆಗೆ ಪಾಂಡುರಂಗ ಬಂದರು. ಊಟ ಮುಗಿದಮೇಲೆ ಎಲ್ಲರಿಗೂ ನಮ್ಮ ಪ್ರಾಜೆಕ್ಟ್ ಬಗ್ಗೆ ಪ್ರವಚನ ಆಯಿತು. ಮರುದಿನ ರಜೆ ಇದ್ದದ್ದರಿಂದ ಎಲ್ಲರು ಹಾಗೇ ಹರಟಿ ಹಾಸಿಗೆ ಮೇಲೆ ಒರಗಿಕೊಂಡೆವು. ಮರುದಿನ ಪಾಂಡುರಂಗ ಬೆಳಿಗ್ಗೆ ಎದ್ದು ಕಟಿಂಗ ಮಾಡಿಸಲು ಹೋಗಿದ್ದರು. ಇರುವ ನಾಲ್ಕು ಕೂದಲಿಗೆ ೩೦ ರುಪಾಯಿ ದಂಡ ಎಂದು ನಾನು ಮುಕುಂದ ನಕ್ಕಿದ್ದೆವು.

ಊರಿಗೆ ಹೋಗಿದ್ದ ಹೃಷಿಕೇಶ ಅವತ್ತು ಬಂದಿದ್ದ ಎಲ್ಲರು ಮೈಲಾರಿ ಹೋಟೆಲ್ಗೆ ಹೋಗಿ ದೋಸೆ ತಿಂದೆವು. ಅದು ತುಂಬಾ ಫೇಮಸ್ ಹೋಟೆಲ್.

ನನಗೆ ಒಂತರಹ ಹೊಸ ಅನುಭವ ಹೊಸ ಹೊಸ ಗೆಳೆಯರು...ಹೊಸ ಭಾಷೆ ತುಂಬಾ ಎಂಜಾಯ್ ಮಾಡ್ತಾ ಇದ್ದೆ....
ಒಂದು ಸಂಜೆ ಮಂಡ್ಯ ದಿಂದ ಹೃಷಿಕೇಶ ಮತ್ತು ಮುಕುಂದ ಬೇಗನೆ ಬಂದಿದ್ದರು. ಹೃಷಿಕೇಶ ಮಲಗಿದ್ದ ಅವನು ಟೆನ್ಶನ್ ಆಗಿ Low BP ಆಗಿತ್ತು. ಮರುದಿನದಿಂದ ಮುಕುಂದನ ಜೊತೆ ಮಂಡ್ಯಕ್ಕೆ ಹೋಗುವ ಕೆಲಸ ನನಗೆ ಬಿದ್ದಿತ್ತು.ಮಂಡ್ಯಕ್ಕೆ ಹೋದೊಡನೆಯೆ ಮತ್ತೆ ಎಲ್ಲರ ಪರಿಚಯ, ಎಲ್ಲರು ಅರ್ಧ-ಅರ್ಧ ಘಂಟೆ ಮಾತನಾಡಿಸಿ ತಲೆ ತಿಂದಿದ್ದರು. ಮತ್ತೆ ಅಲ್ಲಿಯ MIS ಆಫೀಸರ್ ನಿಮ್ಮ software ನಲ್ಲಿ ತುಂಬಾ debugs ಇವೆ ಎನ್ನಬೇಕೆ ನಕ್ಕು ನಕ್ಕು ಸಾಕಾಗಿತ್ತು. ಮತ್ತೆ ಎಲ್ಲ ಮಾತಿನ ನಂತರ ಲೆಕ್ಕಾಚಾರ ಎನ್ನುವ ಪದ ಬೇರೆ. ಇನ್ನು Marketing ನಲ್ಲಿ ಇರುವ ಮ್ಯಾನೇಜರ್ ಎಲ್ಲದ್ದಕ್ಕೂ ಅಲ್ವೇನ್ರಿ ಎನ್ನುವ ಪದ....ತಲೆ ಕೆಟ್ಟು ಹೋಗಿತ್ತು ಆಗಲೇ ಗೊತ್ತಾಗಿದ್ದು ಹೃಷಿಕೇಶ ನಿಗೆ Low BP ಏಕೆ ಬಂದಿತ್ತೆಂದು. ನನಗೆ ಮಾತ್ರ BP ಪೂರ್ತಿ ಏರಿ High BP ಬಂದಿತ್ತು.
ಹೃಷಿಕೇಶನನ್ನು ಬಳ್ಳಾರಿ ಪ್ರಾಜೆಕ್ಟ್ಗೆ ಕಳುಹಿಸಲಾಯಿತು. ಹಾಗು ಹೀಗು ಹೆಣಗಾಡಿ ಒಂದೆರಡು ಡಿಪಾರ್ಟ್ಮೆಂಟ್ computerise ಮಾಡಿದೆವು. ಆರು ತಿಂಗಳುಗಳು ಹೇಗೆ ಕಳೆದವು ಎನ್ನುವದೇ ನನಗೆ ಯಕ್ಷ ಪ್ರಶ್ನೆ ಅಗತ್ತು. ತುಂಬಾ ಒಳ್ಳೆಯ ಗೆಳೆಯರು.

ಅಷ್ಟೊತ್ತಿಗಾಗಲೇ ಹೃಷಿಕೇಶ ಬಳ್ಳಾರಿ ಬಿಟ್ಟು ಬೆಂಗಳೂರು ಸೇರಿದ. ಬಳ್ಳಾರಿ ಪ್ರಾಜೆಕ್ಟ್ ಗೆ ನಾನು ಹೋಗ ಬೇಕೆಂದು ಪಾಂಡುರಂಗ ಆಜ್ಞೆ ಮಾಡಿದರು. ಅದು ನನಗೆ ನುಂಗಲಾರದ ತುತ್ತಾಗಿತ್ತು. ಒಲ್ಲದ ಮನಸ್ಸಿನಿಂದ ಹೋಗುವೆ ಎಂದು ಹೇಳಿದೆ.

ಬಳ್ಳಾರಿ - ಮೈಸೂರು ಬಸ್ಸಿನಲ್ಲಿ ಕುಳಿತರು ಮೈಸೂರು ನೆನಪು ಮಾತ್ರ ಕಾಡುತಿತ್ತು.. ಮತ್ತೆ ಒಬ್ಬನೇ ಇರುವದು ಹೇಗೆ? ಎನ್ನುವ ಯೋಚನೆ ಬೇರೆ. ಆಗಲೇ ರಾತ್ರಿ 2 ಆಗಿತ್ತು. ನಿದ್ದೆ ಕಣ್ಣಲ್ಲಿದ್ದರು ನಿದ್ದೆ ಮಾಡಿ ನನ್ನ ಸವಿ ನೆನಪುಗಳ ಬೈ ಹೇಳುವ ಮನಸಿರಲಿಲ್ಲ. ಹಾಗೇ ಮೆಲಕು ಹಾಕುತ್ತಿದ್ದಾಗ .. ಆಗಲೇ "ಫಟ" ಎಂಬ ಶಬ್ದ. ಎದುರಿಗೆ ಕುಳಿತ ಒಬ್ಬನಿಗೆ ಮುಂದೆ ಇರುವ ಆಂಟಿ ಕಪಾಳಕ್ಕೆ ಬಾರಿಸಿದ್ದಳು. ಅದು ಏನು ಮಾಡಿದ್ದನೋ ಆ ಮಹಾಶಯ ಬಸಿನ್ನಲ್ಲಿ ಗದ್ದಲದ ವಾತಾವರಣ ಸೃಷ್ಟಿ ಯಾಗಿತ್ತು. ಹೀಗು ಹಾಗು ಬಳ್ಳಾರಿ ತಲುಪಿದೆ ನಿದ್ದೆ ಮಾಡಲಾರದೆ ....

ಮೈಸೂರು ಮಾತ್ರ ನನಗೆ ಮನಸೂರೆಗೊಳ್ಳುವ ಮೆರೆಯಲಾರದ ಮರೀಚಿಕೆಯ ಹಾಗೆ ಸ್ವಲ್ಪು ದಿವಸ ಕಾಡಿತ್ತು...

ಭಾವ ಬಂಧನದ ಬೆಸುಗೆ ........

"ಋಣಾನು ಬಂಧ ರೂಪೇಣ ಪಶು ಪತ್ನಿ ಸುತಾಲಯಃ" ಎಂದು ಹಿರಿಯರು ಹೇಳುತ್ತಾರೆ. ನಿಜ ಹಾಗೆಯೆ "ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ" ಎಂದು ಹೇಳುತ್ತಾರೆ. ನಿಜ, ಆದರೆ ಈಗ ಸ್ವಲ್ಪ ಸಂಶಯದ ಹುಳ ತಲೆಯಲ್ಲಿ ಕೊರಿತಿದೆ. "ಬದುಕು ಜಟಕಾ ಬಂಡಿ" ಮತ್ತು "ಇದು ಕಥೆಯಲ್ಲ ಜೀವನ" ದಂತಹ ಧಾರಾವಾಹಿಗಳನ್ನು ನೋಡಿದ ಮೇಲೆ ಈ ಸಂಶಯ ನನ್ನ ಮನಸಿನಲ್ಲಿ ಮನೆ ಮಾಡಿದೆ. ಗಂಡಸು ತನ್ನ ಇಚ್ಛೆಯಂತೆ 2-3 ಮದುವೆಯಾಗಿರುವದು ನೋಡಿ ತುಂಬಾ ಅಸಹ್ಯವೆನಿಸುತ್ತದೆ ಮತ್ತು ಅವನು ಕೊಡುವ ಕಿರುಕಳ ನೋಡಿ ಇವನ್ಯಾರೋ ಉತ್ತರ ಕುಮಾರನೇ ಇರಬೇಕು. ಗಂಡಸೊಂದಿಗೆ ಜಗಳವಾಡಲು ಬರಲಾರದೆಂಬ ವಿಷಯ ಅರಿತು ಹೆಂಡತಿಯೊಂದಿಗೆ ಯುಧ್ಧ ಸಾರುವ ಹುನ್ನಾರ. ಒಂದು ಮದುವೆ ಮೊದಲೇ ಆಗಿದ್ದರು ಎರಡು ಹೆಂಡತಿ ನನಗೆ ಬೇಕು ಎನ್ನುವ ಇಂತಹ ಗಂಡಸಿನ ಕ್ಷುಲ್ಲಕ ಬುದ್ಧಿಗೆ ಏನು ಹೇಳುವದು. ಈ ಜೀವನದಲ್ಲಿ ಸಿಗುವ ಎಲ್ಲ ಭೋಗಗಳು ಇವನ ಸೊತ್ತೋ ಗೊತ್ತಿಲ್ಲ?. ನಮ್ಮ ಜೀವನದ ನಿಜವಾದ ಸಾರ್ಥಕತೆ ಏನು? ನಾವು ಹುಟ್ಟಿರುವದು ಏತಕೆ? ಎಂಬುದನ್ನು ಯಾರು ವಿಚಾರ ಮಾಡಲು ಹೋಗುವದಿಲ್ಲ. ನನ್ನ ಅಹಂ ಮತ್ತು ನನ್ನ ಸುಖ ಎರಡೇ ಜೀವನದಲ್ಲಿ ಎಂಬ ಕತ್ತಲೆಯಲ್ಲಿ ಬದುಕುವ ಜನ ತುಂಬಾ ಇದ್ದಾರೆ.
ಹೋಗಲಿ ಬಿಡಿ ಇದೆಲ್ಲ ನಮಗ್ಯಾಕೆ ನಮ್ಮದೇನಿದ್ದರೂ ಬ್ಲಾಗ್ ಬಳಗವೆಂಬ ಪುಟ್ಟ ಪ್ರಂಪಚದಲ್ಲಿ ನಮ್ಮ ಸುಖ,ದುಖ ಎಲ್ಲವನ್ನು ನಾವು ಹಂಚಿಕೊಂಡು ಆನಂದದಿಂದ ಇರುವದು. ಅದೇ ನಮ್ಮ ಸೌಭಾಗ್ಯ.


ಭಾವ, ಬಂಧನ, ಬೆಸುಗೆ ಅಂತೆಲ್ಲ ಬರೆದು ತುಂಬಾ ತಲೆ ಕೊರಿತ ಇದ್ದಾನಲ್ಲಪ್ಪ ಅಂದ್ಕೋಬೇಡಿ. ನಿಜವಾಗಿಯೂ ಮದುವೆ ಸ್ವರ್ಗದಲ್ಲೇ ನಿಶ್ಚಯವಾಗಿರುತ್ತದೆ.ನನ್ನ ಗೆಳೆಯ Engineering 4 Semester ಇದ್ದಾಗಲೇ ಮನೆ ಎದುರಿಗೆ ಇರುವ ಹುಡುಗಿಯನ್ನು ಪ್ರೀತಿಸಿ ಹೆತ್ತವರನ್ನು ಕಡೆಗಣಿಸಿ ಮದುವೆಯಾಗಿದ್ದ. ಅವನ ಜೊತೆ ಅವನ ಹೆಂಡತಿಯನ್ನು ಸಾಕುವ ಕಷ್ಟ ಅವರ ಅಮ್ಮನಿಗೆ ಬಿದ್ದಿತ್ತು.


ಈ ಪ್ರಿತಿಯೇ೦ದರೆನೆ ಹೀಗೆ ಕಣ್ರೀ ಯಾರು? ಯಾರನ್ನ? ಯಾವಾಗ? ಪ್ರೀತಿಸುತ್ತಾರೆ ಅಂತ ಹೇಳೋಕಾಗೋದಿಲ್ಲ.ನಾನು ಪ್ರೀತಿಸಿದ್ದೆ ಆದರೆ ಅ೦ಜಪುಕಲ ಹೇಳಲಾಗದೆ, ಮನಸಿನಲ್ಲಿಯೇ ಅವಳನ್ನು ಆರಾಧಿಸಿದ್ದೆ. ಹೋಗಲಿ ಅದೆಲ್ಲ ಹಳೆಯ ಅಳಿದು ಉಳಿದ ಮಾತು. ಈಗೇನಿದ್ದರೂ ನನ್ನ ಹೆಂಡತಿನೇ ನನಗೆ ಸರ್ವಸ್ವ.


ಹೀಗೆ ನನ್ನ ಒಬ್ಬ ಗೆಳೆಯ ಶ್ರೀಧರ ಸವಿತಾಳಿಗೆ ಗಾಳ ಹಾಕಿದ್ದ. ಅವಳೋ ಮುಂಬಯಿಯಲ್ಲಿ ಬೆಳೆದವಳು ಇವನೋ ಧಾರವಾಡ - ಹುಬಳ್ಳಿ ಬಿಟ್ಟು ಬೇರೇನೂ ನೋಡದ ಹುಡುಗ. ಅದೇನೋ ಪ್ರತಾಪ ಮಾಡಿ ತೋರಿಸಿದ್ದನೋ ಗೊತ್ತಿಲ್ಲ. ಕನ್ನಡ ಬರದ ಸವಿತಾಳಿಗೆ ಕನಕಾಂಬರಿ ತೊಡಿಸಲು ಸಿದ್ದವಾಗಿದ್ದ. ಜೋಡಿನು ಪಸಂದಾಗೆ ಇತ್ತು. ಲೋರ್ರೆಲ್ ಹಾರ್ಡಿ ತರಹ(ಬಡಕಲು ಶ್ರೀಧರ, ಡುಮ್ಮಿ ಸವಿತಾ).


ಆಗ ತಾನೆ ನಮ್ಮ ಮದುವೆಯಾಗಿತ್ತು . ನನ್ನ ಹೆಂಡತಿಯನ್ನ ಒಡುಪು ಅಥವಾ ಒಗಟು ಹಾಕಿ ಗಂಡನ ಹೆಸರು ಹೇಳೆಂದು ಅಕ್ಕ ಪಕ್ಕದವರು ಪೀಡಿಸುತ್ತಿದ್ದರು. ಅವಳಿಗೂ ಒಡುಪುಗಳ ಸಂಭ್ರಮ. ತನ್ನ ಎಲ್ಲ ಗೆಳತಿಯರು ಮತ್ತು ಸಂಭoದಿಕರಿಂದ ಕೇಳಿ ಒಡುಪುಗಳನ್ನು ಮನನ ಮಾಡಿ ಸುಂದರವಾಗಿ ಹೇಳುತ್ತಿದ್ದಳು.


* ಸರಸ್ವತಿಯ ವಾಹನ ನವಿಲು. _______ರಾಯರ ಹೆಸರು ಹೇಳುವೆನು ಇದೆ ಮೊದಲು.

* ಸಕಲ ಮಂಗಳ ಕಾರ್ಯಕ್ಕೂ ಗಜಾನನೇ ಪೂಜ್ಯ, ಭಕ್ತರು ಯುಕ್ತಿಯಿಂದ ಪೂಜೆ ಮಾಡಲು ಒಲಿದು ಕೊಡುವನು ಇಷ್ಟ ಸ್ವರಾಜ್ಯ.________ ರಾಯರ ಪಾದ ಸೇವೆಯ ಸೌಭಾಗ್ಯವೆ ನನಗೆ ಪರಮ ಪೂಜ್ಯ.

* ವಸಂತ ಮಾಸದಲ್ಲಿಚಿಗಿಯುವುದು ಮಾವಿನ ಮುಗುಳು. .________ ರಾಯರ ಹೆಸರು ಹೇಳುವೆನು ________ರವರ ಮಗಳು.

* ಈಶ್ವರನಿಗೆ ಏರಿಸುವದು ಮೂರುದಳದ ಪತ್ರಿ .________ ರಾಯರ ಹೆಸರು ಹೇಳುವೆನು .________ ಅವರ ಪುತ್ರಿ.

* ಪಾಂಡವರು ಅರಗಿನ ಮನೆಯಿಂದ ಪಾರಾಗಿದ್ದು ಯುಕ್ತಿಯಿಂದ .________ ರಾಯರ ಹೆಸರು ಹೇಳುವೆನು ಭಕ್ತಿಯಿಂದ.

* ರುಕ್ಮಿಣಿಯು ಶ್ರೀಕೃಷ್ಣನಿಗೆ ಓಲೆ ಬರೆಯುವಾಗ ಮುತ್ತು ಸುತ್ತು ಮಾಡಿದಳು ಮಸಿ. _________ರಾಯರ ಹೆಸರು ಹೇಳುವೆನು _______ಅವರ ಸೊಸಿ.

* ವಿಜಯನಗರ ಸಾಮ್ರಾಜ್ಯವನ್ನು ಸ್ಥಾಪಿಸಿದವರು ಗುರು ವಿದ್ಯಾರಣ್ಯ. _________ರಾಯರು ಪತಿಯಾಗಿ ದೊರೆತದ್ದು ನನ್ನ ಪೂರ್ವ ಜನ್ಮದ ಪುಣ್ಯ.

* ಸಖಿ ಸಖಿಯರಲ್ಲಿ ಸಖಿಯಾದ _________ ಮಗಳಾದೆ _______ರಾಯರ ಕೈ ಹಿಡಿದು _______ಅವರ ಸೊಸೆಯಾದೇ.

* ಕೈಯಲ್ಲಿ ಕೈಕೊಟ್ಟು ಸಪ್ತಪದಿಯಲ್ಲಿ ನಿಂತೆ, ಹಿಂದೆ ಸಾಗುವೆ ನಿಮ್ಮ ನೆರಳಿನಂತೆ. _________ರಾಯರೆ ನನ್ನನ್ನು ಕೈ ಹಿಡಿದು ನಡಿಸಿರಿ ನಾಲ್ಕು ಜನ ನಮ್ಮನ್ನು ಹೊಗಳುವಂತೆ.

* ರಾಮ ಲಕ್ಷ್ಮಣರು ಶೃಂಗವೇರಪುರಕ್ಕೆ ಬಂದ ಮೇಲೆ ಆಯಿತು ಗುಹನ ಸ್ನೇಹ, ನನಗೆ ಸದಾ ಇರಲಿ _________ರಾಯರ ಸ್ನೇಹ.

* ಶ್ರೀಕೃಷ್ಣನು ಗೋವರ್ಧನ ಗಿರಿಯಲ್ಲಿ ಗೋಪಿಯರೊಡಗೂಡಿ ಸೂರೆ ಮಾಡಿದನು ಹಾಲು ಮೊಸರು, ಇವತ್ತು ಪ್ರೀತಿಯಿಂದ ಹೇಳುವೆನು ನಾನು _________ ರಾಯರ ಹೆಸರು.

* ಲಗ್ನಕ್ಕೆ ಮೊದಲು ಮಾಡುವರು ಯಾದಿ, _________ರಾಯರ ಹೆಸರು ಹೇಳುವೆನು ಬಿಡಿರಿ ಹಾದಿ.

* ತವರಿಂದ ದೂರಾದೆ ಹೊಸಮರಕೆ ಬೇರಾದೆ _________ರಾಯರ ಕೈ ಹಿಡಿದು ಧನ್ಯಳಾದೆ.

* ಒಂದೊಂದು ಉ೦ಗುರಕ್ಕೂ ಒಂದೊಂದು ಹರಳು ಅದರಿಂದ ಶೋಭಿಸುವದು ಕೈ ಬೆರಳು _______ರಾಯರೇ ನನ್ನ ಮಾoಗಲ್ಯದ ಹರಳು.

* ಸಿರಿತನವಿರಲಿ ಬಡತನವಿರಲಿ _________ರಾಯರ ಪಾದಸೇವೆ ಕೊನೆತನಕವಿರಲಿ.

* ನೋಡಲ್ಲಿ ವಿಶ್ವದಾ ಮರದಡೆಯಲ್ಲಿ ತೂಗುತಿದೆ ಉಯ್ಯಾಲೆ ಅದರಲ್ಲಿ ನಡೆಯುತಿದೆ ಮಾನವನ ಜೀವನದ ಜೋಕಾಲೆ ______ ರಾಯರ ಕೈ ಹಿಡಿದು ನಾನಾದೆ ಸುಮಂಗಲೆ

* ಹತ್ತಾವತಾರದಲಿ ಮೊದಲನೇ ಅವತಾರವೇ ಮತ್ಸ್ಯ. ______ರಾಯರ ಹೆಸರು ಹೇಳುವೆನು ಕನ್ನಡದಲ್ಲಿ ಸ್ವಚ್ಚ.

* ನದಿಗಳು ಎಷ್ಟೇ ಹರಿದರು ಕೊನೆಗೆ ಸೇರುವದು ಸಮುದ್ರವನ್ನ. ನನ್ನ ಮನವು ಸೇರುವದು _____ ರಾಯರ ಹೃದಯವನ್ನ.

* ಕಲ್ಲಾಗಿ ಬಿದ್ದಿದ್ದ ಅಹಲ್ಯಯನ್ನ ಉಧಾರ ಮಾಡಿದ ಶ್ರೀರಾಮ ತನ್ನ ಪಾದ ಸ್ಪರ್ಶದಿಂದ _______ರಾಯರ ಹೆಸರು ಹೇಳುವೆನು ಪ್ರೇಮ ಭಾವದಿಂದ.

* ಶ್ರೀ ಕೃಷ್ಣನು ಶೇಷಶಯನದ ಮೇಲೆ ಮಲಗಿರುವಾಗ ಬ್ರುಗು ಮುನಿಯು ತಾಡಣನ ಮಾಡಿದ್ದೂ ವೃಕ್ಷ ಸ್ಥಳ ________ ರಾಯರ ಚರಣ ಸೇವೆಯೇ ನನ್ನ ಮೋಕ್ಷ ಸ್ಥಳ.

* ಸಿರಿವಂತರ ಸೊಬಗು ಧನದಿಂದ ________ರಾಯರನ್ನು ಪೂಜಿಸುವೆನು ತನು ಮನದಿಂದ.

* ಸೂರ್ಯ ನಾರಾಯಣನಿಂದಲೇ ಲೋಕಕ್ಕೆ ಆರೋಗ್ಯ ______ ರಾಯರಿಂದಲೇ ಸಕಲ ಸೌಭಾಗ್ಯ.

* ಬ್ರಾಹ್ಮಣರಿಗೆ ಪವಿತ್ರ ಜನಿವಾರ ________ ರಾಯರೇ ನನ್ನ ಜೀವನದ ಆಧಾರ.

* ಆಕಾಶಕ್ಕೆ ಶೋಭಿಸುವದು ನಕ್ಷತ್ರವಲ್ಲಿ ಅಂಗಳಕ್ಕೆ ಶೋಭಿಸುವದು ರಂಗವಲ್ಲಿ ______ ರಾಯರ ಹೆಸರು ಹೇಳುವೆನು ಗುರು-ಹಿರಿಯರ ಸಮ್ಮುಖದಲ್ಲಿ.

* ಗಾಂಧೀಜಿಯವರು ಸತ್ಯಾಗ್ರಹ ಮಾಡಿದ್ದೂ ಲೋಕಕಲ್ಯಾಣಕ್ಕಾಗಿ _______ರಾಯರ ಹೆಸರು ಹೇಳುವೆನು ಕೇಳಿದ ಕಾರಣಕ್ಕಾಗಿ.

* ಕಣ್ಣಿಗೆ ಕಾಡಿಗೆ ಆಸೆ, ಹೆಣ್ಣಿಗೆ ಗಂಡಿನ ಆಸೆ ______ರಾಯರ ಹೆಸರು ಗೊತ್ತಿದ್ದರೂ ನಿಮಗೆಲ್ಲರಿಗೂ ಕೇಳುವ ಆಸೆ.
ಒಂದೊಂದು ಒಡಪುಗಳು ಮತ್ತೊಂದನ್ನು ಮೀರಿಸುವಂತವು. ಇನ್ನು ಊಟಮಾಡುವಾಗ, ನಮಸ್ಕರಿಸುವಾಗ ಬೇರೆ ಬೇರೆ ಒಡಪುಗಳು.
* ಉಡುಪಿಯಲ್ಲಿ ಇರುವದು ಕನಕನ ಕಿಂಡಿ _________ರಾಯರಿಗೆ ತಿನಿಸುವೇನು ಉಂಡಿ.
ಉಂಡಿ ಒಂದೇ ಇದ್ದರೆ ಪರವಾಗಿಲ್ಲ, ಎರಡೆರಡು ಉಂಡಿ ಇದ್ದರೆ ಬೇರೆ ಬೇರೆ ಒಡಪು ಹಾಕಿಯೇ ಹೇಳಬೇಕು. ಮತ್ತೆ ಕೇಳಿಯೇ ಬಿಟ್ಟರು
* ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ __________ರಾಯರಿಗೆ ತಿನಿಸುವೇನು ಉಂಡಿ.
ಹೀಗೆ ನಮಸ್ಕರಿಸುವಾಗ .....ಒಲವೆ ಜೀವನ ಸಾಕ್ಷಾತ್ಕಾರ ________ರಾಯರಿಗೆ ಮಾಡುವೆನು ನಮಸ್ಕಾರ.


ಇದು ಸವಿತಾನಿಗು ಬಿಡದ ಕರ್ಮ. ಅವಳು ಮದುವೆಯಾದ ಮೇಲೆ ಒಡಪು ಹೇಳಲೇಬೇಕು. ಅದಕ್ಕೆ ನನ್ನ ಹೆಂಡತಿಗೆ ಗಂಟು ಬಿದ್ದಳು ಹೇಳಿ ಕೊಡು ಎಂದು. ಅವುಗಳನ್ನು ಹಿಂದಿಯಲ್ಲಿ ಬರೆದು ಕೊಡುವ ಕೆಲಸ ನನ್ನದಾಗಿತ್ತು. ನನ್ನ ಹೆಂಡತಿ ಎಲ್ಲಿ _____ ಇದೆ ಅಲ್ಲಿ ಗಂಡ ಹೆಸರು ಹೇಳಬೇಕು ಎಂದು ತಾಕಿತ ಮಾಡಿದ್ದಳು. ಮತ್ತೆ ಎರಡು _____ ಇದ್ದರೆ ಅಪ್ಪನ ಹೆಸರೋ, ಅತ್ತೆ ಯವರ ಹೆಸರು ಇರುತ್ತದೆ ಎಂದು ಹೇಳಿದ್ದಳು. ಹಾಗು ಹೀಗು ಮನನ ಮಾಡಿದ್ದಳು ಸವಿತಾ.

ಮದುವೆಯಾದ ಮೇಲೆ ಒಂದೊಂದಾಗಿ ಒಡಪು ಹೇಳಲು ಶುರುಮಾಡಿದಳು. ಎಲ್ಲ ಹೆಂಗಸರು "ವಾಹ್ ವಾಹ್" ಎಂದು ಬೆನ್ನುತಟ್ಟಿದರು. ಈ ಹಿಂದಿ ಹುಡುಗಿ ಎಷ್ಟು ಚೆನ್ನಾಗಿ ಒಡಪು ಹೇಳುತ್ತಾಳೆ ಅಂತ. ಸವಿತಾಳಿಗೆ ಆನಂದದ ಪರಿವೆ ಇಲ್ಲದ ಹಾಗೆ ಆಕಾಶಕ್ಕೆ ಏಣಿ ಹಾಕ್ಕಿದ್ದಳು. ಆಮೇಲೆ ಖುಷಿಯಿಂದ ಶ್ರೀಧರರಾಯರ ಎನ್ನುವ ಬದಲು ಗೋಪಾಲರಾಯರ ಎಂದು ಬಿಡಬೇಕೇ. ನನ್ನ ಗೆಳೆಯ ಶ್ರೀಧರ ನನ್ನನ್ನು ಮತ್ತು ನನ್ನ ಹೆಂಡತಿಯನ್ನು ಕೊಲ್ಲುವ ಹಾಗೆ ದುರುಗುಟ್ಟಿದ್ದ. ಸಾರೀ.... ಸಾರೀ..... ಎಂದು ಮತ್ತೆ ತಿದ್ದಿ ಶುರು ಹಚ್ಚಿ ಕೊಂಡಳು.


ಇನ್ನೇನು ಆಗಲಿಕ್ಕಿಲ್ಲ ಎಂದುಕೊಂಡ ನಾನು ಮತ್ತು ನನ್ನ ಹೆಂಡತಿ ಅಂದುಕೊಂಡಾಗಲೇ ಶ್ರೀಧರರಾಯರ ಮಗಳು ಎಂದು ಬಿಟ್ಟಿದ್ದಳು. ನಾವು ಕಲಿಸಿದ ಗಿಳಿಪಾಠ ಕೈ ಕೊಟ್ಟಿತ್ತು. ಇನ್ನು ಮುಗಿದಿರಲಿಲ್ಲ ನನ್ನ ಗೆಳೆಯನ ಮಡದಿಯ ಪ್ರತಾಪ. ಊಟಕ್ಕೆ ಕುಳಿತಾಗ "ಕರ್ನಾಟಕದಲ್ಲಿರುವದು ಕೆಮ್ಮನಗುಂಡಿ ಶ್ರೀಧರರಾಯರಿಗೆ ತಿನಿಸುವೇನು ಹಿಂಡಿ". ಹಿಂಡಿ ತಿನ್ನಿಸಿದಳೋ ಅಥವಾ ಉಂಡಿ ತಿನ್ನಿಸಿದಳೋ ಗೊತ್ತಿಲ್ಲ. ಕಿವಿ ಹಿಂಡಿ ನನ್ನ ಗೆಳೆಯನನ್ನು ಮನೆ ಅಳಿಯನನ್ನಾಗಿ ಮಾಡಿಕೊಂಡು. ಒಡಪು ಹೇಳಿ ಓಡಿಸಿಕೊಂಡು ಹೋಗಿದ್ದಾಳೆ. ಏನೇ ಇರಲಿ ಮದುವೆ ಮಾತ್ರ ಜನುಮ ಜನುಮದ ಅನುಭಂದ ಅನ್ನುವದು ಮಾತ್ರ ನಿಜ.
ನನಗೆ ರವಿಚಂದ್ರನ/ಹಂಸಲೇಖ ಜೋಡಿ ಚಿತ್ರದ ಈ ಹಾಡು ನೆನಪಿಸುತ್ತದೆ.


"ಯಾರ ಯಾರ ಚೆಲುವೆ ಎಲ್ಲಿಹಳೋ

ಯಾರ ಯಾರ ಒಲವು ಎಲ್ಲಿಹದೋ

ಒಂದೊಂದು ಕಾಳಿನ ಅನ್ನದಲು ತಿನ್ನೋರ ಹೆಸರು ಕೆತ್ತಿಹದೋ "


ತನ್ನ ಒಡಪುಗಳಿಂದ ನನ್ನ ಮನ ಸೆರೆ ಹಿಡಿದ ನನ್ನ ಮಡದಿ ನನ್ನ ಪ್ರೀತಿಯ ಮನೆ ಒಡತಿ.

ಯಾವ ಹೂವು... ಯಾರ ಮುಡಿಗೋ..? ಯಾರ ಒಲವು.. ಯಾರ ಕಡೆಗೋ? ಎಂಬುದಂತೂ ನಿಜ.............

ಅಡ್ಡ ಹೆಸರು ಪ್ಲೀಸ್ ...............

ನಾನು, ನನ್ನ ಮಗ, ಮಡದಿ ಮತ್ತು ಅಮ್ಮನೊಂದಿಗೆ ಶೃಂಗೇರಿ,ಹೊರನಾಡು,ಧರ್ಮಸ್ಥಳಕ್ಕೆ ಪ್ರವಾಸ ಹೋಗಿದ್ದೆವು. ನನ್ನ ಮಗನಿಗೆ ಏನು ಅನ್ನಿಸಿತೋ ಗೊತ್ತಿಲ್ಲ. ಯಾವಾಗಲು "ಆ ಮನಿ..", "ಈ ಮನಿ" ಎಂದು ಸಂಭೋದಿಸುತ್ತಿದ್ದ. ಅವನು ಚಿಕ್ಕಮಗಳೂರಿನ ಎಸ್ಟೇಟ್ ಮನೆಗಳನ್ನು ನೋಡಿ ಹಾಗೆ ಅoದಿರಬಹುದು. ಮನಸ್ಸು ಆಗಲೇ ಧಾರವಾಡಕ್ಕೆ ಹೋಗಿತ್ತು. ಧಾರವಾಡದಲ್ಲಿ ಅಡ್ಡ ಹೆಸರುಗಳು ಅಂದರೆ Surnameಗಳು ತುಂಬ ವಿಚಿತ್ರವಾಗಿ ಇರುತ್ತವೆ. ಹಂಚಿನಮನಿ,ಮೇಲಿನಮನಿ, ಕಡೆಮನಿ, ಹಿತ್ತಲಮನಿ ಹೀಗೆ etc etc ...


ಒಮ್ಮೆ ಸುಂದರರಾವ್ ಎನ್ನುವ ಪೋಸ್ಟ್ ಮ್ಯಾನ್ ಬೆಂಗಳೂರಿನಿಂದ ಧಾರವಾಡಕ್ಕೆ Transfer ಆಗಿ ಬಂದಿದ್ದರು. ಅವರಿಗೆ ಮೊದಲು ಅಂಗಡಿ ಶರಣಪ್ಪ ಎನ್ನುವವರಿಗೆ ಪತ್ರ ಕೊಡಬೇಕಿತ್ತು. ಅದನ್ನು ತೆಗೆದು ಕೊಂಡು ಹೋಗಿ ಒಬ್ಬ ದಾರಿಹೋಕನನ್ನು ಕೇಳಿದರು. ಅವನು ಸಿಡುಕ ಮೂತಿ ಸಿಂಗಾರಪ್ಪನೆ ಇದ್ದಿರಬೇಕು. ಹೆಂಡತಿಯಿಂದ ಬೈಸಿಕೊಂಡಿದ್ದನೋ ಗೊತ್ತಿಲ್ಲ. ಸುಂದರರಾಯರು ಕೇಳಿದರು ಸರ್ ಅಂಗಡಿ ಎಲ್ಲಿ ಎಂದು. ಆಗ ಆ ಮನುಷ್ಯ "ಇಲ್ಲಿ ಎಲ್ಲಿತ್ತ ಅಂಗಡಿ ಮುಂದ ಹೋಗ" ಇಲ್ಲಿ ಇದ್ದದ್ದು ಈ ಹಾಳ ಮನಿ ಮಾತ್ರ ಎಂದು ತನ್ನ ಮನೆಯನ್ನು ತೋರಿಸಿದನು. ಅನಂತರ ರಾಯರು ಪೂರ್ತಿ ಹೆಸರನ್ನೇ ಹೇಳಿ ಮನೆಯ ವಿಳಾಸವನ್ನು ಪಡೆದು ಪತ್ರ ತಲುಪಿಸಿದ್ದರು.


ಹೀಗೆ ಸುಂದರ ರಾವ್ ಅವರ ಮಡದಿ ದಿನಸಿ ಅಂಗಡಿಗೆ ಹೋಗಿ ಒಂದು ದಿವಸ ಅಕ್ಕಿ ಇಲ್ವಾ ಎಂದು ಕೇಳಿದಳು. ಆಗ ಅಂಗಡಿಯವ "ಈಗ ಹೋದನಲ್ಲ" ಎನ್ನಬೇಕೆ. ಆ ಅಂಗಡಿಯವನಿಗೆ ಅಕ್ಕಿ ಎಂಬ ಗೆಳೆಯನಿದ್ದ ಅವನು ಆಗಲೇ ಅವನ ಜೊತೆ ಮಾತನಾಡಿ ಮನೆಯ ಕಡೆಗೆ ಹೊರಟಿದ್ದ. ಆಗ ತಿನ್ನುವ ಅಕ್ಕಿ ಬೇಕು ಎಂದು ಕೇಳಿ ಕೊಂಡು ಬಂದಳು.


ಹೀಗೆ ಒಂದು ದಿವಸ ಕಡ್ಲೆ ಕಾಯಿ ಅಂದಾಗ ಅಂಗಡಿಯವ ಕಡ್ಲೆ ಕೊಟ್ಟಿದ್ದ. ಮತ್ತೆ ಎಲ್ಲಿ ವಾಪಾಸ್ ಕೇಳುವದು ಅಂತ ಸುಮ್ಮನಾಗಿದ್ದರು. ಹೀಗೆ ಸುಂದರ್ ರಾಯರು ಮತ್ತು ಅವನ ಹೆಂಡತಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. (ಕೊತಂಬರಿ ಬೀಜ, ಕಡ್ಲೆ ಪುರಿ etc etc....).


ಮತ್ತೊಂದು ದಿವಸ ತುಂಬ ರುಚಿಯಾಗಿದೆ ಎಂದು ಮಿರ್ಚಿ ಮತ್ತು ಗಿರಮಿಟ್ಟ ತುಂಬ ತಿಂದಿದ್ದರು. ಆನಂತರ ನೋಡಬೇಕು ಅವರ ಅವಸ್ಥೆ.


ಇನ್ನು ಒಂದು ದಿವಸ ಸುಂದರರಾಯರು ನನಗೆ ಪತ್ರದ ವಿಳಾಸವನ್ನು ಕೇಳಿದರು. ಪತ್ರದ ವಿಳಾಸ ನೋಡಿ ತುಂಬಾ ನಕ್ಕಿದ್ದೆ. ಪತ್ರದ ಮೇಲೆ ನಾರಾಯಣ ಶ್ವಾನಭೋಗ ಎಂದು ಬರೆದಿರಬೇಕೆ. ಪಕ್ಕಾ ಬ್ರಾಹ್ಮಣ ನಮ್ಮ ಕಾಕಾ ನಾರಾಯಣ ಶಾನಭೋಗರು ಯಾವಾಗ ನಾಯಿಗಳನ್ನು(ಶ್ವಾನಗಳನ್ನ) ಭೋಗಿಸಲು (ತಿನ್ನಲು) ಕಲಿತಿದ್ದಾರೆ ಎಂದು ಯೋಚಿಸಿದೆ.


ನಮ್ಮ ಊರಲ್ಲಿ ತುಂಬಾ ಶ್ರೀಮಂತವಾದ ಪಾಟೀಲ ಕುಟುಂಬ ಇದೆ. ಆದರೆ ಮನೆ ಮುಂದೆ, ಹಿಂದೆ ಮಾತ್ರ ಸಗಣಿ ಇರುತಿತ್ತು. ಅದಕ್ಕೆ ಅವರಿಗೆ ಸಗಣಿಯವರ ಮನೆಯೆಂದು ಅಡ್ಡ ಹೆಸರು ಬಿತ್ತು. ಆಗ ಅವರ ಮನೆಯವರು ತಮನ್ನು ಸಗಣಿಯವರ ಮನೆಯೆಂದು ಅಡ್ಡ ಹೆಸರಿನಿಂದ ಕರೆಯಬಾರದೆಂದು ಊರಿಗೆಲ್ಲ ಹೋಳಿಗೆ ಮಾಡಿಸಿ ಊಟಕ್ಕೆ ಹಾಕಿದ್ದರು. ಆಗ ನಾನು ಮತ್ತು ರಂಗಣ್ಣ ಊಟ ಮಾಡಿ ಬರುತ್ತಿದ್ದಾಗ ದಾರಿಯಲ್ಲಿ ಬಸಪ್ಪ ಭೇಟಿಯಾದ. ಎಲ್ಲಿ ಹೋಗಿದ್ದಿರಿ ಎಂದು ನಮನ್ನು ಕೇಳಿದ. ನಾನು ಹೇಳುವದಕ್ಕೆ ಮುಂಚೆನೇ ರಂಗಣ್ಣ ತಟ್ಟನೆ ನಾವು "ಸಗಣಿಯವರ ಮನೆಗೆ ಊಟಕ್ಕೆ ಹೋಗಿದ್ದೆವು" ಎಂದು ಬಿಡಬೇಕೇ. ಇನ್ನು ಬಾಯಿಯಲ್ಲಿಯ ಬೀಡ ಮುಗಿದಿರಲಿಲ್ಲ.

ನನಗೆ ಒಬ್ಬ ಗೆಳಯನಿದ್ದಾನೆ ಅವನ ಹೆಸರು ರವಿ ಧರ್ಮಣ್ಣವರ ಅಂತ. ಅವನು ನನ್ನ ಜೊತೆನೆ ಹುಬ್ಬಳ್ಳಿಯಲ್ಲಿ ಕೆಲಸ ಮಾಡುತ್ತಿದ್ದ. ಅವನು Design Engineer, ಅಂದರೆ Machine ಗಳನ್ನು ಕಂಪ್ಯೂಟರ್ ನಲ್ಲಿ ಚಿತ್ರಿಸುವುದೇ ಅವನ ಕೆಲಸ. ನನ್ನದು ಅವನದು ತುಂಬ ಸಲಿಗೆ. ಹೀಗೆ ಸಲಿಗೆಯಿಂದ ಒಂದು ದಿವಸ ನಾನು "ರವಿ ಧರ್ಮಣ್ಣ ಕುಂಚದ ಕಲೆ ಬಲೆ ಸಾಕಾಗಿತೋ.." ಅಂತ ಚೇಷ್ಟೆಯಿಂದ ಹಾಡುತ್ತ ಅವನನ್ನು ಊಟಕ್ಕೆ ಕರೆಯಲು ಹೋದೆ. ಅವನಿಗೆ ಕೆಟ್ಟ ಕೋಪ ಬಂದಿತ್ತು. ಏಕೆಂದರೆ ಅವನು ಡಿಸೈನ್ ಮಾಡಿದ ಡ್ರಾಯಿಂಗ್ನಲ್ಲಿ ಏನೋ ತಪ್ಪು ಇತ್ತು ಅಂತ ಅವನ ಬಾಸ್ ಅವನಿಗೆ ಮಂಗಳಾರತಿ ಮಾಡಿದ್ದರು.

ಹೀಗೆ ನಮ್ಮೂರ ಭಾಷೆ ತುಂಬ ಅಪರೂಪದ ಹಾಸ್ಯ ಭಾಷೆ. ನಮ್ಮಲ್ಲಿಯ ಅಡ್ಡಹೆಸರುಗಳು ತುಂಬ ಹಾಸ್ಯಕರವಾಗಿ ಇರುತ್ತವೆ. ಉಳ್ಳಗಡ್ಡಿ , ಬೆಳ್ಳುಳ್ಳಿ, ಮೆಣಸಿನಕಾಯಿ, ತೆಂಗಿನಕಾಯಿ, ಕೊತಂಬರಿ, ಅಕ್ಕಿ, ಕಡ್ಲಿ etc etc.
ಇನ್ನು ಕೆಲವು ಇರುತ್ತವೆ ಕರಡಿ,ತಿಪ್ಪೆಗುಂಡಿ ಅಂತ. ಲಕ್ಕುಂಡಿ, ಮುಕ್ಕುಂಡಿ ....

ಹೀಗೆ ನನ್ನ ಒಬ್ಬ ಗೆಳೆಯನ ಅಡ್ಡ ಹೆಸರು ಪ್ರದೀಪ್ ಯತ್ತಿನಗುಡ್ಡ ಅಂತ. ಅದು ಅಪಾರ್ಥವಾಗಬಾರದೆಂದು ಪ್ರದೀಪ್. ವಾಯ ಅಂತ ಬರೆದರೆ ಏನೋ ಹೇಳುವದೋ ನೀವೇ ಹೇಳಿ.


ನಾವು ಮಾತುನಾಡುವಾಗ ಎಲ್ಲರಿಗೂ "ಯಾ" ಹಚ್ಚಿಯೇ ಮಾತನಾಡುವದು ಪ್ರದೀಪನಿಗೆ ....ಪದ್ಯ, ರಮೇಶ್ ನಿಗೆ ..ರಮ್ಯ ಹೀಗೇನೆ... ರಮ್ಯ ಎಂದರೆ ಹುಡುಗಿ ಎಂದು ತಿಳಿದುಕೊಂಡರೆ ಕಷ್ಟ.


ನನ್ನ ಪ್ರಯಾಣ ಮುಗಿದಿತ್ತು ನನ್ನ ಧಾರವಾಡದ ನೆನಪುಗಳೊಂದಿಗೆ. ಏನೇ ಇರಲಿ ನಮ್ಮ ಭಾಷೆ ನಮಗೆ ನಿಜವಾಗಿಯೂ ಅಂದದ.. ಚಂದದ.. ಸುಂದರ.. ಆಡು ಭಾಷೆ.

ಬಾಲ್ಯದ ಆಟ ಆ ಹುಡುಗಾಟ .....

ಮೊನ್ನೆ ಝೀ ಟಿವಿಯಲ್ಲಿ ಸ ರಿ ಗ ಮ ಪ ಲಿಟಲ್ ಚಾಂಪ್ಸ್ ಕಾರ್ಯಕ್ರಮ ಪ್ರಸಾರವಾಗುತಿತ್ತು. ಮುಗ್ಧ ಮನಸ್ಸಿನ ಮಕ್ಕಳ ಸುಮಧುರವಾದ ಸಂಗೀತವನ್ನು ಕೇಳಿ ಮನಸ್ಸಿಗೆ ಮಹದಾನಂದ ಆಗಿತ್ತು. ಮಕ್ಕಳ ವಯಸ್ಸು ಸುಮಾರು ೮ ರಿಂದ ೧೨ ರವರೆಗೆ ಇತ್ತು. ನನಗೀಗ ವಯಸ್ಸು ೩೩. ಆದರು ಹೇಳಿಕೊಳ್ಳುವಂತಹ ಸಾಹಸವೇನು ಮಾಡಲಿಲ್ಲವೆಂಬ ಭಾವನೆ ಮನಸ್ಸಿನ ಮೂಲೆಯಲ್ಲಿ ಮನೆ ಮಾಡಿದೆ. ನಿಜವಾಗಿಯೂ ಹೇಳಬೇಕೆಂದರೆ ನನಗೆ ಓದಲು, ಬರೆಯಲು ಬಂದಿದ್ದೆ ೯ ನೇ ವಯಸಿನಲ್ಲಿ ಅದು ಕರಜಗಿ ಮಾಸ್ತರರು ಬಾಸುಂಡೆ ಬರುವ ಹಾಗೆ ಬಾರಿಸಿದಾಗ ಅಮ್ಮನಿಂದ ಓದಲು, ಬರೆಯಲು ಕಲಿತುಕೊಂಡಿದ್ದೆ. ಇಷ್ಟು ಚಿಕ್ಕ ವಯಸ್ಸಿನಲ್ಲಿ ಇಂತಹ ಪ್ರಬುದ್ಧತೆ ಇದೆ ಎಂಬ ಸೂಕ್ಷ್ಮತೆ ಅರಿತಾಗ ಮನಸ್ಸಿಗೆ ಕಸಿವಿಸಿಯಾಗಿತ್ತು. ಆಗಲೇ ಮನಸ್ಸು ನಾನು ಆಡಿರುವ ಬಾಲ್ಯದ ಆಟಗಳಿಗೆ ಒಂದು ಇಣುಕು ನೋಟ ಬೀರಿತ್ತು.

ನನ್ನ ಕ್ಲಾಸಿನಲ್ಲಿ ಹೆಗ್ಗಡೆ ಎಂಬ ನನ್ನ ಸಹಪಾಠಿ ಇದ್ದ. ಅವನಿಗೆ ನಾನು ಮತ್ತು ನನ್ನ ಗೆಳೆಯ ಮಂಜು "ಹೆಗ್ಗಣ" ಎಂದು ಸಂಭೋದಿಸುತ್ತಿದ್ದೆವು. ಅವನಿಗೆ ಒಂದು ದಿವಸ ಕೋಪ ಬಂದು ಅವರ ತಂದೆಗೆ ಹೇಳಿ ನಮಗೆ ತಕ್ಕ ಶಾಸ್ತಿ ಮಾಡಿದ್ದ.
ಇನ್ನು ಒಂದು ದಿವಸ ಪಾರ್ವತಮ್ಮ ತನ್ನ ಮಾವನವರ ಶ್ರಾದ್ಧದ ಪಿಂಡ ಇಡುತ್ತಿದ್ದರು. ನಾನು ಅಲ್ಲೇ ಅಂಗಡಿಯಲ್ಲಿ ಪಾಪಡಿ ಕೊಂಡು ತಿನ್ನುತ್ತಾ ನಿಂತಿದ್ದೆ. ಕಾಗೆ ಪಿಂಡವನ್ನು ತಿನ್ನಲ್ಲು ಬಂದಾಗ ಅದು ನನ್ನ ಪಾಪಡಿಗೆ ಕಣ್ಣು ಹಾಕುತ್ತಿದೆ ಎಂದು ಯೋಚಿಸಿ ಅದನ್ನು ಕಲ್ಲಿನಿಂದ ಹೊಡೆದು ಓಡಿಸಿದ್ದೆ. ಪಾರ್ವತಮ್ಮನ ಪಿಂಡಕ್ಕೆ ಮಣ್ಣು ಬಿದ್ದಿತ್ತು. ಪಾರ್ವತಮ್ಮ ದೊಡ್ಡದಾದ ರಗಳೇನೆ ಮಾಡಿದ್ದಳು.ಅಷ್ಟರಲ್ಲಿ ನಾಯಿ ಬಂದು ಪಿಂಡವನ್ನು ಅಸ್ವಾದಿಸಿತ್ತು. ಕಾಗೆ ಪಿಂಡದ ಬದಲು ನಾಯಿ ಪಿಂಡವಾಗಿತ್ತು. ಪಾಪಡಿ ಕಾಗೆ ಪಿಂಡ ಆಗಿತ್ತು.

ಇನ್ನು ಒಂದು ದಿವಸ ಸ್ಕೂಲಿಗೆ ಬೆಲ್ಲ ಕಿಸೆಯಲ್ಲಿ ಇಟ್ಟು ಕೊಂಡು ಹೋಗಿದ್ದೆ. ನನ್ನ ಪಕ್ಕದ ಹುಡುಗ ಮಿಸ್ ಹೇಳುವ ಪಾಠವನ್ನು ಬಿಟ್ಟು ನನ್ನ ಕಿಸೆ ನೋಡುತ್ತಾ ಕುಳಿತಿದ್ದ. ಕಿಸೆಯಲ್ಲಿರುವ ಬೆಲ್ಲ ನೋಡಿ ಮಿಸ್ ಕೋಪದಿಂದ ಕ್ಲಾಸ್ ಹೊರಗಡೆ ನಿಲ್ಲಿಸಿದ್ದರು.
ಅಪ್ಪ ಮನೆಯಲ್ಲಿ ಒಂದು ದಿವಸ ಮಾವಿನ ಹಣ್ಣನ್ನು ತಂದು ಇಟ್ಟಿದ್ದಾಗ. ಅಪ್ಪ, ಅಮ್ಮ ಇಲ್ಲದ ಸಮಯದಲ್ಲಿ 1/2 ಡಜನ್ ಮಾವಿನ ಹಣ್ಣನ್ನು ಮುಗಿಸಿದ್ದೆ. ಮತ್ತೊಂದು ದಿವಸ 1/4 Kg ತುಪ್ಪ.

ಅಪ್ಪ ಒಂದು ದಿವಸ ಹೊಸ ಟೇಪ್ ರೆಕಾರ್ಡರ್ ತಂದಿದ್ದರು. "ದಾಸರ ಪದಗಳು","ಸುಪ್ರಭಾತ" ಎಲ್ಲವು ಚೆನ್ನಾಗಿ ಬರುತಿತ್ತು. ನಾನು ಕಿಶೋರ್ ಕುಮಾರ ಹಾಡುಗಳ ಕ್ಯಾಸೆಟ್ ಮನೆಗೆ ಕೊಂಡು ಬಂದಿದ್ದೆ. ಒಂದು ದಿವಸ ಕಿಶೋರ್ ಕುಮಾರ ಅಳಲಾರಂಬಿಸಿದ್ದ(ಕ್ಯಾಸೆಟ್ ಸಿಕ್ಕಿಕೊಂಡಿತ್ತು). ನನಗೆ ಕ್ಯಾಸೆಟ್ ತಿರುಗಿಸುವ ಗಾಲಿಗಳ ವೇಗ ಸ್ವಲ್ಪ ಕಡಿಮೆಯಾಗಿದೆ ಎಂದು ಅನಿಸಿತ್ತು. ನಾನು ಅದರ ವೇಗ ಜ್ಯಾಸ್ತಿ ಮಾಡಲು ಸ್ಕ್ರೂ ಡ್ರೈವರ್(Screw Driver)ನಿಂದ ತಿರುಗಿಸಿದ್ದೆ ಆದರು ಉಪಯೋಗವಾಗಲಿಲ್ಲ. ಆಗಲೇ ನನಗೆ ನೆನಪು ಬಂದಿದ್ದು ನನ್ನ ಗೆಳೆಯ ಹೇಳಿದ ಒಂದು ಮಾತು "ನಮ್ಮಪ್ಪ ಎಣ್ಣೆ ಹಾಕಿದಾಗ ತುಂಬ ವೇಗವಾಗಿ ಮಿಲಿಟರಿ ಸೈನಿಕನ ಹಾಗೆ ಪರೇಡ ಮಾಡಿ ಬರುತ್ತಾರೆ" ಎಂದು. ನಾನು ಒಂದು ದಿವಸ ಅವರ ನಡಿಗೆಯನ್ನು ನೋಡಿದ್ದೇ. ಆಗ ನನಗೆ ಎಣ್ಣೆ ಎಂದರೆ ಗೊತ್ತಿದದ್ದು ಕೊಬ್ಬರಿ ಎಣ್ಣೆ, ಚುಮಣಿ ಎಣ್ಣೆ ಇನ್ನೊಂದು ಅಡುಗೆ ಎಣ್ಣೆ. ಅಡುಗೆ ಎಣ್ಣೆ ಏನಾದರು ಹಿಡಿದರೆ ಅಮ್ಮನಿಗೆ ಗೊತ್ತಾದರೆ ನನಗೆ ಕಾಡಿಗೆ ಅಟ್ಟುತ್ತಾಳೆ ಎಂದು ಅದರ ಸಹವಾಸಕ್ಕೆ ಹೋಗಲಿಲ್ಲ. ಇನ್ನು ಚುಮಣಿ ಎಣ್ಣೆಯ ಅನುಭವವಿತ್ತು. ಒಂದು ದಿವಸ ನನ್ನ ತಂಗಿ ಚುಮಣಿ ಎಣ್ಣೆಯನ್ನು ಕುಡಿದು ಹಾಸ್ಪಿಟಲ್ ನಲ್ಲಿ ಅಡ್ಮಿಟ್ ಆಗಿದ್ದಳು. ಅದಕ್ಕೆ ಚುಮಣಿ ಎಣ್ಣೆ ಏನಾದರು ಹಾಕಿದರೆ ಇದಕ್ಕೂ ಹಾಸ್ಪಿಟಲ್ ಗ್ಯಾರಂಟೀ. ಇನ್ನು ಉಳಿದಿದ್ದು ಕೊಬ್ಬರಿ ಎಣ್ಣೆ ಮಾತ್ರ. ಮನೆಯಲ್ಲಿರುವ ಕೊಬ್ಬರಿ ಎಣ್ಣೆ ಯನ್ನು ಟೇಪ್ ರೆಕಾರ್ಡರ್ ವ್ಹೀಲ್ ಗೆ ಸುರಿದಾಗ ಬೆಸುರವಾಗಿದ್ದ ಕಿಶೋರ್ ಕುಮಾರ್ ಸುರದಿಂದ ಹಾಡಿದ್ದ. ಹೀಗೆ ನಡಿಯಿತು ನನ್ನ ಎಣ್ಣೆ ಪ್ರಯೋಗ. ನನಗೆ ಏನೋ ಒಂದು ಹೊಸದಾದ ವಿಷಯವನ್ನು ಕಂಡು ಹಿಡಿದಷ್ಟು ಸಂತೋಷ. ಅಪ್ಪನಿಗೆ ಆಶ್ಚರ್ಯ ೧ ವಾರದಲ್ಲಿ 200 ML ಕೊಬ್ಬರಿ ಎಣ್ಣೆ ಖಾಲಿ. ಮತ್ತೆ ಒಂದು ದಿವಸ ಎಣ್ಣೆ ಸುರಿದಾಗ ಟೇಪ್ ರೆಕಾರ್ಡರ್ "ಪಟ್ಟ" ಎಂದು ವೈರ್ ಹರಿದು ಬಿದಿತ್ತು. ಮನೆಯಲ್ಲಿನ ಕರೆಂಟ್ ಢಮಾರ್ .... ಅನಂತರ ಗೊತ್ತಾಗಿದ್ದು ಮೇನ್ ಟ್ರನ್ಸ್ಫೊರ್ಮೆರ (Transformer)ನೆ ಢಮಾರ್ ಆಗಿದೆ ಎಂದು. ನಮ್ಮ ಅಪ್ಪ ಟೇಪ್ ರೆಕಾರ್ಡರ್ ಸರ್ವಿಸ್ಗೆ ಅಂತ ತೆಗೆದುಕೊಂಡು ಹೋದಾಗ. ಅಂಗಡಿಯವ ನಿಮ್ಮದು ಎಣ್ಣೆ ಗಿರಿಣಿ ಇದೆಯಾ ಎಂದು ಕೇಳಿದ್ದ ಅಪ್ಪನಿಗೆ. ಅಪ್ಪನಿಗೆ ಕೆಟ್ಟ ಕೋಪ ಬಂದು 200 ML ಎಣ್ಣೆ ಹಚ್ಚುವ ಹಾಗೆ ಬಾಸುಂಡೆ ಕೊಟ್ಟಿದ್ದರು.

ಅನಂತರ ಯಾವದೇ ಇಲೆಕ್ಟ್ರಾನಿಕ್ ಸಾಮಾನುಗಳಿಂದ ಸ್ವಲ್ಪ ದೂರವಿದ್ದೆ. ನನ್ನ ಗೆಳೆಯನು ತನ್ನನ್ನು ತಾನೆ ಆಲ್ಬರ್ಟ್ ಐನ್ಸ್ಟೈನ್, ತೋಮಸ್ ಅಲ್ವ ಎಡಿಸನ್ ಅಂದು ಕೊಂಡಿದ್ದನೋ ಗೊತ್ತಿಲ್ಲ. ಹೀಗೆ ಒಂದು ದಿವಸ ಗುಜರಿ ಅಂಗಡಿಯಿಂದ ತಂದ Circuit ನ್ನು ಹಚ್ಚಿ ಮನೆಯಲ್ಲಿಯ ಕರೆಂಟ್ ಢಮಾರ್.

ಒಂದು ದಿವಸ "ಸ್ಪೈಡರ್ ಮ್ಯಾನ್" ಧಾರವಾಹಿ ನೋಡಿ ಸ್ಪೈಡರ್ ಮ್ಯಾನ್ ತರಹನೆ ಮನೆಯ ಮುಂದೆ ಕಟ್ಟಿರುವ ತೋರಣದ ಧಾರಕ್ಕೆ ಜೋತು ಬಿದ್ದು ಕೆಳಕ್ಕೆ ಬಿದ್ದು ತಲೆಗೆ ಪೆಟ್ಟು ಮಾಡಿಕ್ಕೊಂಡಿದ್ದೆ.

ಚಿಣ್ಣಿ -ದಾಂಡು ಎಂದರೆ ನನಗೆ ತುಂಬ ಇಷ್ಟ. ಒಂದು ದಿವಸ ಅಪ್ಪ ಆಫೀಸ್ ನಿಂದ ಮನೆಗೆ ಬಂದಿರಲಿಲ್ಲ ಅವರನ್ನು ಕರೆದುಕೊಂಡು ಬರಬೇಕೆಂದು ನಾನೆ ಖುದ್ದಾಗಿ ಅವರ ಆಫೀಸ್ ದಾರಿ ಹಿಡಿದಿದ್ದೆ. ಅದು ಸ್ಮಶಾನದ ದಾರಿಯಿಂದನೆ ಹೋಗಬೇಕು. ಆಗ ನನಗೆ ಒಂದು ಚೆನ್ನಾಗಿರೋ ಚಿಣ್ಣಿ ಸಿಕ್ಕಿತು ಅದನ್ನು ಹಿಡಿದುಕೊಂಡು ಹೊರಟಿದ್ದೆ. ಅಷ್ಟರಲ್ಲೇ ಅಪ್ಪ ಸೈಕಲ್ ಏರಿ ಬರುವದನ್ನು ಕಂಡು "ಅಪ್ಪ" ಎಂದು ಕೂಗಿದಾಗ. ಅಪ್ಪ ಏನೋ ಎಲ್ಲಿ ಹೊರಟಿದ್ದಿಯ ಎಂದು ಕೇಳಿದಾಗ ನಿನ್ನನ್ನೇ ಕರೆದುಕೊಂಡು ಬರಬೇಕೆಂದು ಹೊರಟಿದ್ದೆ ಎಂದೆ. ಏನೋ ಇದು ಕೈನಲ್ಲಿ ಎಂದಾಗ ಚಿಣ್ಣಿ ಎಂದೆ. ನಿನ್ನ ಚಿಣ್ಣಿ ಮನೆ ಹಾಳಾಗ ಎಂದು ಎಲಬು(ಎಲವು) ಕಣೋ ಎಂದು ಅದನ್ನು ಕಿತ್ತು ಎಸೆದಿದ್ದರು.

ಮತ್ತೆ ಒಂದು ದಿವಸ ನನಗೆ ವಿಪರಿತ ಹೊಟ್ಟೆ ನೋವು ಕಾಣಿಸಿದ ಹಾಗೆ ಆಯಿತು. ಅಪ್ಪನನ್ನು ಎಬ್ಬಿಸಿ ರಾತ್ರಿ ೩.೦೦ ಘಂಟೆಗೆ ಹಾಸ್ಪಿಟಲ್ ಗೆ ಹೊರಟಿದ್ದೆವು. ಅದೇನೋ ಗೊತ್ತಿಲ್ಲ ಲಕ್ಷ್ಮಿ ನಾರಾಯಣ ಗುಡಿಯ ಸಮೀಪಿಸುತ್ತಿದ್ದಂತೆ ಹೊಟ್ಟೆ ನೋವು ಮಾಯಾವಾಗಿತ್ತು. ಮತ್ತೆ ಮನೆಗೆ ವಾಪಾಸ್ ಆದೆವು.

ನಮ್ಮ ಮನೆಯಲಿ ಇದ್ದದ್ದು ನಮ್ಮ ಅಜ್ಜಿ ಕೊಡಿಸಿದ ರೇಡಿಯೋ. ಅದರಲ್ಲಿ ಬುಧವಾರ ರಾತ್ರಿ ವಾರದ ನಾಟಕ ಪ್ರಸಾರವಾಗುತಿತ್ತು. ಅದನ್ನು ಕೇಳುವದೆಂದರೆ ನಮ್ಮ ಮನೆಯವರಿಗೆಲ್ಲ ಖುಷಿ. ಹಾಗೆ ಒಂದು ದಿವಸ ಒಂದು ನಾಟಕದಲ್ಲಿ ಒಂದು ಡೈಲಾಗ್ ಇತ್ತು ಅದೇನೆಂದರೆ "ಒಂಟಿ ಕಾಲಿನ ವೈದ್ಯ ಸಕ್ಕರಿ ತುಪ್ಪ ನೈವೇದ್ಯ" ಎಂದು. ಅದನ್ನು ಕೇಳಿ ಮರು ದಿನ ಅದೇ ನನ್ನ ಡೈಲಾಗ್ ಆಗಿತ್ತು. ಹೀಗೆ ಒಂಟಿ ಕಾಲಿನಲ್ಲಿ ನಡೆಯುವದು ನಾನು ಮತ್ತು ನನ್ನ ಗೆಳೆಯ ಮಂಜು ಮಾಡುತ್ತಿದ್ದಾಗ ಒಂದು ಮುದುಕಿ ಎದುರಿಗೆ ಬಂದಳು ಬ್ಯಾಲೆನ್ಸ್ ತಪ್ಪಿ ಅವಳ ಮೇಲೆ ಬಿದ್ದಾಗ. ಅವಳು ವೈದ್ಯರ ಬಳಿ ಹೋಗುವ ಹಾಗಾಯಿತು. ಸಕ್ಕರಿ ತುಪ್ಪ ನೈವೇದ್ಯ ಅಪ್ಪ ಮಾಡಿದ್ದರು. ಮತ್ತೆ ಒಂದು ದಿವಸ Cylon ಸ್ಟೇಷನ್ ಹಚ್ಚುವ ಭರದಲ್ಲಿ ರೇಡಿಯೋ ಟ್ಯೂನ್ ಮಾಡಿ ಮಾಡಿ ಅದನ್ನು ಮೂಲೆಗುoಪಾಗಿಸಿದ್ದೆ.

ನಾನೇನಿದ್ದರು ಯಾವತ್ತು "ಘಜನಿ" ನೆ. ಎಂದರೆ ಓದಿದ್ದನ್ನು ಆಗಲೇ ಮರೆಯುವ ಅಭ್ಯಾಸ. ಇನ್ನು ನನ್ನ ಗೆಳೆಯರು ಇದೆ ಜಾತಿಯವರು. ಅವರೆಲ್ಲರೂ ಘಜನಿಯ ಹಾಗೆ ಮೈತುಂಬ ಬರೆದು ಕೊಂಡು ಪರೀಕ್ಷೆಗೆ ಬರುತ್ತಿದ್ದರು. ಒಂದು ದಿವಸ ಪಕ್ಯ ನು ಹೀಗೆ ಬರೆದು ಕೊಂಡು ಬಂದಿದ್ದ. ಅವನು ಬಾರಿ ಬಾರಿ ತನ್ನ ಅಂಗಿ ಎತ್ತುವದನ್ನು ನೋಡಿ ನಮ್ಮ ಮೇಸ್ಟ್ರು ಅವನನ್ನು ಬುದ್ಧನ ಹಾಗೆ ಮಾಡಿ ನೀರಿನ ಅಭಿಷೇಕ ಮಾಡಿದ್ದರು.

ಗಾಳಕ್ಕೆ ಸಿಕ್ಕಿದ ನೆನಪುಗಳು ಮಾತ್ರ ಬರಿ ಇಷ್ಟು.ಬಾಲ್ಯದಲ್ಲಿ ಆಡಿರುವ ಆಟಗಳು ಮಾತ್ರ ನೂರಾರು....

(ಈ ಬರಹದಿಂದ ಯಾರಿಗಾದರೂ ತಮ್ಮ ಬಾಲ್ಯದ ನೆನಪು ತರಿಸಿದಲ್ಲಿ ಈ ಬರಹ ಸಾರ್ಥಕ.)