Thursday, September 27, 2012

ತಾಳಿದವನು ಬಾಳಿಯಾನು ....

ಬಾಲ ಸುಟ್ಟ ಬೆಕ್ಕಿನ ಹಾಗೆ ಅತ್ತಿಂದ ಇತ್ತ - ಇತ್ತಿಂದ ಅತ್ತ ಓಡಾಡುತ್ತ ಇದ್ದೆ. ಯಾಕ್ರಿ ಏನಾಯಿತು ಎಂದಳು ಮಡದಿ. ಏನಿಲ್ಲ ಕಣೆ ಚೆಕ್ ಬುಕ್ ಇನ್ನು ಬಂದಿಲ್ಲ ಎಂದೆ. ಗಡ್ಡಕ್ಕೆ ಬೆಂಕಿ ಹತ್ತಿದಾಗ ಭಾವಿ ತೊಡುವುದು, ನಿಮ್ಮದು ಇದೆ ಕತೆ ಆಯಿತು ಎಂದಳು. ಹೌದು ನನಗೆ ಯಾವುದೇ ಕೆಲಸವಾಗಲಿ ಕಡೆವರೆಗೂ ಅದನ್ನು ಮಾಡುವುದಕ್ಕೆ ಮನಸ್ಸೇ ಬರುವುದಿಲ್ಲ. ಅಷ್ಟರಲ್ಲಿ ಮಡದಿ ರೀ.. ಸ್ವಲ್ಪ ಕಣ್ಣು ಮುಚ್ಚಿ ಬಾಯಿ ತೆಗೆಯಿರಿ ಎಂದಳು. ಚೆಕ್ ಬುಕ್ ಏನಾದರು ಬಂತಾ ಎಂದು ಯೋಚಿಸಿದೆ. ಆದರು ಬಾಯಿ ಬೇರೆ ತೆಗೆಯಿರಿ ಎಂದಿದ್ದಾಳೆ, ಸುಮ್ಮನೆ ಕಣ್ಣು ಮುಚ್ಚಿದ ಹಾಗೆ ಮಾಡಿ ಬಾಯಿ ತೆಗೆದೆ. ಬಾಯಿಯಲ್ಲಿ ತಂದು ಸಿಹಿ ತಿಂಡಿ ಹಾಕಿದಳು. ಏನೇ ಇದು ಬೆಲ್ಲದ ಪುಡಿ ಹಾಗೆ ಇದೆ ಎಂದೆ. ಕೋಪದಿಂದ ರೀ.. ಅದು ಮೈಸೂರ್ ಪಾಕ, ಆದರೆ ಪುಡಿಯಾಗಿತ್ತು ಅಷ್ಟೇ ಎಂದಳು. ಅದಕ್ಕೆ ಮೈಸೂರ್ ಪುಡಿ ಎಂದರೆ ಹೇಗೆ ಎಂದೆ. ಮತ್ತಷ್ಟು ತಾರಕಕ್ಕೆ ಏರಿತು ಅವಳ ಕೋಪ. ನಾನು "ತಾಳಿದವನು ಬಾಳಿಯಾನು" ನಾಳೆ ಮಾಡುವೆಯಂತೆ ಬಿಡು ಕೋಪ ಏಕೆ? ಎಂದೆ. ಅದು ನಿಮಗೆ ಅನ್ವಯಿಸುತ್ತೆ ಅಲ್ಲಿ ಸ್ತ್ರೀಲಿಂಗ ಇಲ್ಲ ಎಂದಳು. ಇದನ್ನು ಯಾರೋ ಹೆಂಗಸರು ಸೇರಿ ಮಾಡಿದ ಗಾದೆ ಇರಬೇಕು, ಅದು "ತಾಳಿ ಇದ್ದವಳು ಬಾಳಿಯಾಳು" ಎಂದು ಆಗಬೇಕಿತ್ತು ಅಷ್ಟೇ ಎಂದೆ. ಹಾಗೇನಿಲ್ಲ ಹಾಗಾದರೆ ಮುಂ"ಗೋಪಿ" ಎಂದು ನಿಮ್ಮ ಹೆಸರನ್ನು ಸೇರಿಸಿ ಏಕೆ? ಹೇಳುತ್ತಾರೆ. ಅದಕ್ಕೆ ಅದು ತಾಳಿದವನು ಬಾಳಿಯಾನು ಸರಿ ಎಂದು ಕಿಚಾಯಿಸಿದಳು. ಅಷ್ಟರಲ್ಲಿ ನಮ್ಮ ಐದು ವರ್ಷದ ಸುಪುತ್ರ Tom & Jerry ಅಂದ. ಅನ್ನು,, ಅನ್ನು,, ನೀನೋಬ್ಬನು ಕಡಿಮೆ ಆಗಿದ್ದೆ ಅನ್ನುವವನು ಎಂದು ಅಂದೆ. ಅಪ್ಪ.. Tom & Jerry ಟಿ ವಿ ಯಲ್ಲಿ ಹಚ್ಚು ಎಂದ ಕೋಪದಿಂದ. ಅವನು ನಮ್ಮಿಬ್ಬರನ್ನು ನೋಡಿ ಅನ್ನುತ್ತಿದ್ದಾನೆ ಎಂದು ತಪ್ಪಾಗಿ ಕಲ್ಪಿಸಿಕೊಂಡಿದ್ದೆ. ನಾನೇ ದೊಡ್ದವನಾದ್ದರಿಂದ Tom ನಾನೇ ಅನ್ನಿಸಿತು. Tom & Jerry ಯಲ್ಲಿ Tom ಗೆ Jerry ಏನೇ ಮಾಡಿದರು ಕೂಡ ಅದು ಚಿರಂಜೀವಿನೇ. ಅ೦ತಹ ಚಿರಂಜೀವಿಯನ್ನ ನನ್ನ ಜೀವಮಾನದಲ್ಲಿ ಎಲ್ಲಿಯೂ ಕಂಡಿಲ್ಲ. Jerry Tomನಿಗೆ ಎರಡು ಭಾಗ ಮಾಡಿದರು ಕೂಡ ಮತ್ತೆ ಕೂಡಿ ಕೊಂಡು Jerry ಯನ್ನು ಬೆನ್ನು ಹತ್ತುತ್ತೆ. ಆದರೆ ಇಲ್ಲಿ ಮಡದಿ ಕೋಪ ಮಾಡಿಕೊಂಡರು ಸಾಕು ನಾವು ಅವರ ಹಿಂದೆ ಕೋಪ ಕಡಿಮೆ ಮಾಡಲು ಹೋಗಬೇಕಷ್ಟೆ. ಕೋಪ ಕಡಿಮೆ ಆಗದಿದ್ದರೆ ಕತೆ ಮುಗಿಯಿತು ಅಷ್ಟೇ. ಕಡೆಗೆ ಮಗನಿಗೆ Tom & Jerry ಹಚ್ಚಿಕೊಟ್ಟೆ.


ಮಡದಿ ಕೋಪದಿಂದ, ಆಫೀಸ್ ನಿಂದ ಬರುತ್ತಾ ನಿಮ್ಮ ಅಪ್ಪನಿಗೆ ಇವತ್ತಾದರೂ ನಿನ್ನೆ ಹೇಳಿರುವ ಸಾಮಾನುಗಳನ್ನು ತೆಗೆದುಕೊಂಡು ಬರಲು ಹೇಳು ಎಂದಳು. ಕಡೆಗೆ ತಿಂಡಿ ತಿಂದು ಆಫೀಸ್ ಗೆ ಹೊರಟೆ. ನಾನು ದಿನಾಲೂ ಹೋಗುವ ದಾರಿಯಲ್ಲಿ ವಜ್ರಾಯುಧ ಹಿಡಿದು ಕೊಂಡು ರಸ್ತೆ ಕಡಿಯುವ ಯೋಧರು ನಿಂತಿದ್ದರು. ಮೊದಲು ನಾವು ಈ ಪಾತಾಳ ಲೋಕದಲ್ಲಿ ಸಂಜೀವಿನಿ ಮಣಿ ಇರುತ್ತೆ ಎಂದು ಕೇಳಿದ್ದೇವೆ. ನಾವು ಬಬ್ರುವಾಹನ ಚಲನ ಚಿತ್ರದಲ್ಲಿ, ಬಬ್ರುವಾಹನನಿಂದ ಹತನಾದ ತಂದೆಯಾದ ಅರ್ಜುನನನ್ನು ಬದುಕಿಸಲು ಪಾತಾಳ ಲೋಕಕ್ಕೆ ಹೋಗಿ ಸಂಜೀವಿನಿ ಮಣಿಯನ್ನು ತರುತ್ತಾನೆ. ಆದರೆ ಈಗ ಈ ಪಾತಾಳ ಲೋಕ್ಕಕ್ಕೆ ಹೋದರೆ, ಸಂಜೀವಿನಿ ಮಣಿ ಸಿಗದೇ ಹೋದರು ಸಂಜೆವಾಣಿ ಪತ್ರಿಕೆಯಲ್ಲಿ ನಮ್ಮ ಫೋಟೋ ಖಂಡಿತ ಬಂದಿರುತ್ತೆ. ಸೇರುವುದು ಖಂಡಿತವಾಗಿ ಸ್ವರ್ಗ ಲೋಕಕ್ಕೆ ಮಾತ್ರ. ಸರ್ ..ಹಾಗೆ ಹೋಗಿ ಎಂದು ಯೋಧರು ತಾಕಿತ್ ಮಾಡಿದರು. ಕಡೆಗೆ ಬೇರೆ ದಾರಿಯಿಂದ ಹೊರಟೆ, ಆಫೀಸ್ ಐದು ನಿಮಿಷ ಲೇಟಾಗಿ ತಲುಪಿದೆ, ಹೀಗಾಗಿ ಆಫೀಸ್ ಗೆ ಅರ್ಧ ದಿವಸ ರಜೆ ಹಾಕಿ, ಅವಳು ಹೇಳಿರುವ ಸಾಮಾನು ತೆಗೆದುಕೊಂಡು ಬಂದೆ.

ಮಡದಿಯ ಹತ್ತು missed calls ಇದ್ದವು. ನಾನು ಫೋನ್ ಮಾಡಿದೆ. ಅವಳು ಕೋಪದಿಂದ ಫೋನ್ ತೆಗೆದುಕೊಳ್ಳಲಿಲ್ಲ. ನಾನು ಮತ್ತೆ.. ಮತ್ತೆ.. ಫೋನ್ ಮಾಡಿ ಬೇಜಾರಿನಿಂದ ಕುಳಿತ್ತಿದ್ದೆ. ಅಷ್ಟರಲ್ಲಿ ನಮ್ಮ ಮಂಜ ಬಂದ. ಏನಪ್ಪಾ.. ಸಪ್ಪಗೆ ಇದ್ದೀಯಾ ಎಂದ. ಅದಕ್ಕೆ ನಾನು ಮಡದಿಗೆ ಫೋನ್ ಮಾಡಿದ್ದೆ ಎತ್ತಲಿಲ್ಲ ಎಂದೆ. ಹೌದಾ... ಕಾಲ್ ಎತ್ತಲಿಲ್ಲವೆ ಎಂದ. ನಾನು ಹೌದು ಕಾಲು ಎತ್ತಲಿಲ್ಲ. ಹೌದು ಬಿಡು ನಿನ್ನ ಮೇಲೆ ಕಾಲು ಎತ್ತಬೇಕಾಗಿತ್ತು, ನಾನು ಹೇಳುತ್ತೇನೆ ತಂಗ್ಯಮ್ಮನಿಗೆ ಎಂದು ಜೋರಾಗಿ ನಗ ಹತ್ತಿದ. ನನ್ನ ಅಕ್ಕ-ಪಕ್ಕ ಕುಳಿತವರು ಕೂಡ ಜೋರಾಗಿ ನಗ ಹತ್ತಿದರು. ನನಗೆ ಇನ್ನಷ್ಟು ಕೋಪ ಬಂದಿತ್ತು. ಏನೋ ಬೇಜಾರಿನಿಂದ ಇದ್ದರೆ, ನಿನ್ನೋಬ್ಬನು ಉರಿಯೋ ಬೆಂಕಿಗೆ ತುಪ್ಪ ಸುರಿಯುವವನು. ದೇಶ ಕಟ್ಟುವವರು ಕಡಿಮೆ ಇಲ್ಲಿ ಉಪದೇಶ ಮಾಡುವವರು ಜ್ಯಾಸ್ತಿ ಎಂದೆ. ಅಷ್ಟರಲ್ಲಿ ಒಂದು ಫೋನ್ ಕಾಲ್ ಬಂತು. ಅದಕ್ಕೆ ಮಂಜ ನೋಡಿ ತಂಗ್ಯಮ್ಮನ ಕಾಲು ಇರಬೇಕು, ಬೇಗನೆ ತೆಗೆದುಕೋ ಇಲ್ಲದೆ ಹೋದರೆ ಚಪ್ಪಲಿ ಕೂಡ ಬಂದು ಬಿಟ್ಟರೆ ಕಷ್ಟ ಎಂದು ನಗುತ್ತಾ ಹೊರಟು ಹೋದ.

ಕಡೆಗೆ ನಾನೇ ಮನೆಗೆ ಹೋಗುವ ಸಮಯದಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಮನೆ ಕಡೆಗೆ ಹೊರಟೆ. ಆದರೆ ಅವಳು ಹೇಳಿರುವ ಸಾಮಾನುಗಳನ್ನೂ ಮಾತ್ರ ಆಫೀಸ್ ನಲ್ಲಿಯೇ ಬಿಟ್ಟು ಬಂದಿದ್ದೆ. ಮತ್ತೆ ಅರ್ಧ ದಾರಿಯಲ್ಲಿ ಇರುವಾಗ ಮಗನ ಫೋನ್ ಬಂತು. ಎಲ್ಲಿದ್ದೀರಾ? ಅಪ್ಪ ಎಂದ. ನಾನು ಬಸವನಗುಡಿ ಹತ್ತಿರ ಎಂದೆ. ಸಾಮಾನುಗಳನ್ನು ತೆಗೆದುಕೊಂಡು ಬಂದಿರುವೆಯೋ ಇಲ್ಲವೋ ಎಂದು ಕೇಳಿದ. ತಂದಿದ್ದೇನೆ ಎಂದು ಫೋನ್ ಕಟ್ ಮಾಡಿ,ತಕ್ಷಣ ನೆನಪಾಗಿ ಮತ್ತೆ ಆಫೀಸ್ ಕಡೆ ಗಾಡಿ ತಿರುಗಿಸಿದೆ. one way ಎಂದು ತಿಳಿಯದೆ ಪೋಲಿಸ್ ಮಾಮನಿಗೆ ದಕ್ಷಿಣೆ ಕೊಟ್ಟು ಆಫೀಸ್ ತಲುಪಿದೆ. ಮತ್ತೆ ಸಾಮಾನುಗಳನ್ನು ತೆಗೆದುಕೊಂಡು ಮನೆಗೆ ಹಾಜರ ಆದೆ.

ಏಕೆ? ಇಷ್ಟು ಲೇಟ್ ಅಪ್ಪ ಎಂದ ಮಗ. ಮತ್ತಿನೇನು ಕೋಲೆ ಬಸವನ ಹಾಗೆ, ಬಸವನಗುಡಿ ಸುತ್ತತ್ತ ಇದ್ದರು ಅನ್ನಿಸುತ್ತೆ ಎಂದು ಹುಸಿಕೊಪದಿಂದ ನುಡಿದಳು ಮಡದಿ. ಮಡದಿ ಎಲ್ಲ ಸಾಮಾನುಗಳನ್ನು ನೋಡುತ್ತಾ, ಹಣಿ ಹಣಿ ಗಟ್ಟಿಸಿಕೊಂಡಳು. ಏಕೆ? ಏನಾಯಿತು ಎಂದೆ. ನಿಮಗೆ ಏನೇನು ಹೇಳಿದ್ದೆ ಹೇಳಿ ಎಂದಳು. ನಾನು ಬರೆದುಕೊಂಡಿರುವ ಸಾಮಾನಿನ ಲಿಸ್ಟ್ ತೆಗೆದು, ಒಂದೊಂದಾಗಿ ಹೇಳಲು ಶುರು ಮಾಡಿದೆ. ೪ ಲೈನ್ ಇರುವ ಪುಸ್ತಕ, ಮತ್ತೆ ಬೆಳೆ, ಮತ್ತೆ ಒಂದು ರೂಪಾಯಿಯ ಚಾಕ್ಲೇಟ...ನಿಲ್ಲಿ.. ನಿಲ್ಲಿ.. ಎಂದು ನಿಲ್ಲಿಸಿದಳು ಮಡದಿ. ರೀ. ನಿಮ್ಮ ತಲೆಗಿಷ್ಟು, ಮನೆಯಲ್ಲಿ ಇಷ್ಟೊಂದು ಚಾಕ್ಲೇಟ ಇವೆ ಮತ್ತೆ ಏಕೆ? ತಂದಿರಿ ಎಂದು ಝಾಡಿಸಿದಳು. ಮತ್ತೆ ನೀನೇಕೆ? ಹೇಳಿದೆ ಎಂದು ಕೇಳಿದೆ. ರೀ... ನಾನು ಹೇಳಿದ್ದು ಚಾಕ್ ಪೀಸ್ ಎಂದಳು. ನಾನು ಮತ್ತೆ ಹೋಗಿ ಚಾಕ್ ಪೀಸ್ ತೆಗೆದುಕೊಂಡು ಬಂದು ಕೊಟ್ಟೆ.

ಮಡದಿ ಚೆಕ್ ಬುಕ್ ಬಂದಿದೆ ಎಂದು ಹೇಳಿದಳು. ನಾನು ತುಂಬಾ ಖುಷಿಯಾದೆ. ಮಡದಿ ಪ್ಲೇಟಿನಲ್ಲಿ ಮೈಸೂರ್ ಪಾಕ್ ತೆಗೆದುಕೊಂಡು ಬಂದು ಕೊಟ್ಟಳು. ಲೇ... ಇದೆಂತಹ ಮೈಸೂರ್ ಪಾಕ್ ಕೊಟ್ಟಿದ್ದಾನೆ ಅಂಗಡಿಯನು, ಮೈಸೂರ್ ರಾಕ್ ಆಗಿದೆ ಎಂದು ಜೋರಾಗಿ ಬೈಯುತ್ತ ಇದ್ದೆ. ಆದರೆ ಮಡದಿ ನಾನು ತಂದಿರುವ ಮೈಸೂರ್ ಪಾಕ್ ಪ್ಯಾಕೆಟ್ ತೆಗೆಯದೆ. ತಾನೆ ಮಾಡಿರುವ ಮೈಸೂರ್ ಪಾಕ್ ತಂದು ಕೊಟ್ಟಿದ್ದಳು. ಮತ್ತಷ್ಟು ಕೋಪದಿಂದ ನನಗೆ ಮಾಡಲು ಬರುವುದಿಲ್ಲ ಎಂದು, ಹೀಯಾಳಿಸಲು ಇದನ್ನು ತಂದಿರುವಿರಿ ಏನು? ಎಂದು, ಅನ್ನುತ್ತ ನಾನು ತಂದಿರುವ ಮೈಸೂರ್ ಪಾಕ್ ನ್ನು ನನ್ನ ಮುಂದೆ ಇಟ್ಟು ಹೊರಟು ಹೋದಳು. ನಾನು ಮತ್ತೆ ಅವಳನ್ನು ಸಮಾಧಾನಿಸಲು, ಹಿಂದೆ ಬಾಲದಂತೆ ಹಿಂಬಾಲಿಸಿ, ಮನಸ್ಸಿನಲ್ಲಿ ನಿಜವಾಗಿಯೂ, ತಾಳಿದವನು ಬಾಳಿಯಾನು ಎಂದು ಅಂದುಕೊಂಡೆ.

Wednesday, September 26, 2012

ದುಡ್ಡೇ ದೊಡ್ಡಪ್ಪ....

ಅರುಣ ಯುರೇಕಾ ಎಂದು ಚೀರುತ್ತಲೇ ಹೊರಗಡೆ ಬಂದ. ಆದರೆ ಪಕ್ಕದ ಮನೆ ಸುರೇಖಾ ಇದನ್ನು ಕೇಳಿ, ತನ್ನನ್ನೇ ಕರೆಯುತ್ತಿದ್ದಾನೆ ಎಂದು ಅವರ ಅಪ್ಪನಿಗೆ ಕಂಪ್ಲೈಂಟ್ ಮಾಡಿದಳು. ಅದಕ್ಕೆ ಸರಿಯಾದ ಕಾಂಪ್ಲಿಮೆಂಟ್ ಅರುಣನಿಗೆ ಸಿಕ್ಕಿತ್ತು. ಹರಕೆ ಹೊತ್ತರು ಆರ್ಕಿಮೆಡಿಸ್ ಪ್ರಿನ್ಸಿಪಲ್ ಅನ್ನು ಹೇಳಲು ಬರುತ್ತಿರಲಿಲ್ಲ ಅರುಣನಿಗೆ. ಪ್ರಿನ್ಸಿಪಾಲರು ಅರುಣನಿಗೆ ಹಿರಿಯರನ್ನು ಕರೆದುಕೊಂಡು ಬನ್ನಿ ಎಂದು ತಾಕಿತ್ ಮಾಡಿದ್ದರು. ಅದಕ್ಕೆ ಅರುಣ ಪೂರ್ತಿ ಮಂಕಾಗಿದ್ದ. ಕಡೆಗೆ ಅರುಣ ಯೋಚಿಸಿ ತಲೆ ಕೆರೆದುಕೊಂಡು, ಮಂಜನ ಅಣ್ಣನನ್ನು ಕರೆದುಕೊಂಡು ಹೋಗಬೇಕೆಂದು ಯೋಚಿಸಿ ಹೀಗೆ ಮಾಡಿದ್ದ. ಬಾತ್ ರೂಮಿನಲ್ಲಿಯ ನಲ್ಲಿ ಹಾಗೆ ಬಿಟ್ಟು ಬಂದು, ಮನೆಯಲ್ಲಿರುವ ಪೂರ್ತಿ ನೀರು ಖಾಲಿ ಆಗಿ ಎಲ್ಲರಿಗೂ ಫಜೀತಿ ಬೇರೆ ಮಾಡಿದ್ದ. ಅವರ ಅಪ್ಪನಿಂದ ಏಟುಗಳ ಸುರಿಮಳೆ ಆಗಿತ್ತು. ಮಂಜನ ಅಣ್ಣ ಸುರೇಶನಿಗೆ ಹತ್ತು ರುಪಾಯಿ ಕೊಟ್ಟು ಒಪ್ಪಿಸಿ ಕಡೆಗೆ ಶಾಲೆಗೆ ಕರೆದುಕೊಂಡು ಹೋಗಿದ್ದ.

ಹತ್ತು ರುಪಾಯಿಯ ಆಸೆಯಿಂದ ಸುರೇಶ್ ಲಗುಬಗೆಯಿಂದ ಪ್ರಿನ್ಸಿಪಾಲ್ ರೂಮಿಗೆ ಅರುಣನನ್ನು ಕರೆದುಕೊಂಡು ಹೊಕ್ಕ. ಈಗ ಅರುಣನ ಜೊತೆ ಸುರೇಶನಿಗೆ ಕೂಡ ನಡುಕ ಶುರು ಆಯಿತು. ಏಕೆಂದರೆ ಸುರೇಶನಿಗೆ ಕಲಿಸಿರುವ ಮಾಸ್ತರ್ ಬೇರೆ ಶಾಲೆಯಿಂದ ಇಲ್ಲಿ ಪ್ರಿನ್ಸಿಪಾಲ್ ಆಗಿ ವರ್ಗಾವಣೆಯಾಗಿ ಬಂದಿರುತ್ತಾರೆ ಎಂದು ಕಲ್ಪನೆಯಲ್ಲೂ ಯೋಚಿಸಿರಲಿಲ್ಲ. ಕಡೆಗೆ ಎಲ್ಲಾ ವಿಷಯಗಳು ಪೋಲಾಗಿ ಇಬ್ಬರು ಕ್ಷಮೆ ಕೇಳಿ, ಅರುಣನ ತಂದೆಗೆ ವಿಷಯ ಮುಟ್ಟಿಸಿ, ಕರೆದುಕೊಂಡು ಹೋಗಿ ಪ್ರಿನ್ಸಿಪಾಲ್ ರನ್ನು ಭೇಟಿ ಮಾಡಿಸಿದ್ದರು. ಅವರ ತಂದೆ ವರ್ಗಾವಣೆಯಾಗಿ ಮೈಸೂರಿಗೆ ಹೋದಮೇಲೆ ನನಗೂ ಮತ್ತು ಅರುಣನಿಗೆ ಸಂಪರ್ಕ ಕಡಿದು ಹೋಗಿತ್ತು.

ಮಂಜ ಮನೆಗೆ ಬಂದಿದ್ದ. ಮಂಜನಿಗೆ ಸ್ವೀಟ್ ಕೊಡುವ ಸಲುವಾಗಿ, ನಾನು ಸ್ವೀಟಿನಲ್ಲಿ ಇರುವ ಇರುವೆಗಳನ್ನು ತೆಗೆಯುತ್ತ "ಇರುವೆ ಎಲ್ಲಿರುವೆ ...ಮಾನವನನ್ನು ಕಾಡುವ" ಎಂದು ಹಾಡುತ್ತ ಇದ್ದೆ ಹೆಂಡತಿ ಏನು? ರೀ.... ಎಂದಳು, ಅಷ್ಟರಲ್ಲಿ ಅಚಾನಕ್ಕಾಗಿ ನಮ್ಮ ಅರುಣನ ಆಗಮನವಾಯಿತು. ಅದು ಜೊತೆಯಲ್ಲಿ ಅದೇ ಸುರೇಖಾ ಮತ್ತು ಒಂದು ಮುದ್ದಾದ ಮಗು ಇತ್ತು. ಅವನು ನನ್ನ ಅಡ್ರೆಸ್ ಅಂತರ್ಜಾಲದಲ್ಲಿ ಹುಡುಕಿ ಮನೆಗೆ ಬಂದಿದ್ದ. ಮಂಜ ಏನಪ್ಪಾ? ಮಗನ ಹೆಸರು ಯುರೇಕಾ ಏನು? ಎಂದು ಕಾಡಿಸಿದ. ಅವನ ಕೈಯಲ್ಲಿ ಒಂದು Tablet ಇತ್ತು. ಅದನ್ನು ತೆಗೆದುಕೊಂಡು ಅವನ ಮಗ ಆಟ ಆಡುತ್ತ ಇದ್ದ. ಅವನು ತನ್ನ ವ್ಯವಹಾರ, ದುಡ್ಡು, ಕಾರುಗಳ ಮತ್ತು ಅಸ್ತಿಗಳ ಬಗ್ಗೆ ತುಂಬಾ ಬೀಗುತ್ತಿದ್ದ. ಇದನ್ನು ಕೇಳಿ ಕೇಳಿ ನನಗೆ ಮತ್ತು ಮಂಜನಿಗೆ ಸಾಕಾಗಿ ಹೋಗಿತ್ತು. ಪ್ರತಿ ಎರಡೆರಡು ನಿಮಿಷಕ್ಕೆ ಫೋನ್ ಬರುತ್ತಿತ್ತು. ನಡು ನಡುವೆ ಎದ್ದು ಹೋಗಿ ಮಾತನಾಡುತ್ತಿದ್ದ. ಕಡೆಗೆ, ಮಂಜ ಏನು? ಈ ಕಡೆಗೆ ಪ್ರಯಾಣ, ಕುಚೇಲನ ಮನೆಗೆ ಕೃಷ್ಣ ಆಗಮಿಸಿದ ಹಾಗೆ ಆಯಿತು ಎಂದು ಹಿಯಾಳಿಸಿ ಮಾತನಾಡಿದ. ಅದಕ್ಕೆ, ಇಲ್ಲೇ ಸ್ವಲ್ಪ ಉತಾರ ಬೇಕಾಗಿತ್ತು ಅದಕ್ಕೆ ಬಂದಿದ್ದೆ. ನಿಮ್ಮ ಮನೆ ಇಲ್ಲೇ ಎಂದು ತಿಳಿದು ಭೇಟಿಗೆಂದು ಬಂದಿದ್ದೆ ಎಂದ. ಮಂಜ ನಿನ್ನ ಉಡದಾರ ಗಟ್ಟಿ ಇದೆ ತಾನೇ ಎಂದು ಕೇಳಿದ. ಲೇ... ನೀನು ಎಂದು ಸುಧಾರಿಸಲ್ಲ ಕಣೋ ಎಂದು ಹೇಳಿದ. ಮಂಜ ತಮ್ಮ ಮನೆಗೆ ಅವನನ್ನು ಆಹ್ವಾನಿಸಿದ. ಆದರೆ, ಅರುಣ ಮತ್ತೊಮ್ಮೆ ಬರುತ್ತೇನೆ ಎಂದು ಹೇಳಿ, ಕಾಫಿ ಕುಡಿದು ಹೊರಟು ಹೋದರು.

ನನ್ನ ಮಗ ಅವರು ಹೋದ ಮೇಲೆ Tablet ನನಗೂ ಬೇಕು ಎಂದು ಹಠ ಹಿಡಿದ. ಮಂಜನಿಗೆ ತುಂಬಾ ಕೋಪ ಬಂದಿತ್ತು. ಮಂಜ ದುಡ್ಡಿದ್ದರೆ ಅವನ ಕಡೆ ಇರಲಿ, ನಮಗೇನು ಅವನು ಕೊಡುತ್ತಾನೆ. ದುಡ್ಡು ಅಂದರೆ ಕೈಯೊಳಗಿನ ಧೂಳು ಇದ್ದ ಹಾಗೆ, ಯಾವತ್ತು ಹೋಗುತ್ತೆ ಎಂದು ಹೇಳುವುದಕ್ಕೆ ಆಗಲ್ಲ. ಮತ್ತೆ ಇದು ನೆರಳು ಇದ್ದ ಹಾಗೆ ಬಿಸಿಲು ಇದ್ದಾಗ ಮಾತ್ರ ಅದನ್ನು ಕಾಣಬಹುದು. ಇವನೇನು ಸತ್ತಾಗ ಎಲ್ಲವನ್ನು ಹೊತ್ತು ಕೊಂಡು ಹೋಗುತ್ತಾನೆ. ಎಲ್ಲೋ ಇವನ ಮಾವನಿಂದ ವರದಕ್ಷಿಣೆ ತೆಗೆದುಕೊಂಡಿರಬೇಕು. ನಡುವೆ ಬಂದಿದ್ದು, ನಡುವೆ ಹೋಗುತ್ತೆ. ನದಿ ನೀರು ಮತ್ತು ಭಾವಿ ನೀರಿಗೂ ತುಂಬಾ ವ್ಯತ್ಯಾಸ. ನದಿ ನೀರು ಎಲ್ಲಿಂದಲೋ ಬಂದಿರುತ್ತೆ. ಭಾವಿ ನೀರು ಯಾವತ್ತಿದ್ದರೂ ಹೊಸದಾಗಿ ಬರುತ್ತಾ ಇರುತ್ತೆ. ನದಿ ನೀರು ಬತ್ತಬಹುದು. ಭಾವಿ ನೀರು ಬತ್ತಲು ಖಂಡಿತ ಸಾಧ್ಯ ಇಲ್ಲ ಎಂದ. ಇಂತವರು ಮೂರೂ ಬಿಟ್ಟವರು. ಮರ್ಯಾದೆ ಬಿಟ್ಟವರು ಎರಡು ತರಹ ಇರುತ್ತಾರೆ. ಒಬ್ಬರು ಮರ್ಯಾದೆ ಹೋದರೆ ಸಾಯುತ್ತಾರೆ. ಮತ್ತೆ ಕೆಲವರು ಮರ್ಯಾದೆ ಮಾರಿ ಮಲಗಿಕೊಳ್ಳುತ್ತಾರೆ ಎಂದ. ದುಡ್ಡೇ ದೊಡ್ಡಪ್ಪ ಅಲ್ಲ ಮನುಷ್ಯತ್ವ ಅವರಪ್ಪ ಎಂದ. ಲೇ.. ಅದು ಮನುಷ್ಯತ್ವ ಅಲ್ಲ ಕಣೋ ವಿದ್ಯೆ ಎಂದೆ. ಆಯಿತು ಬಿಡೋ ಎಂದು ಮನೆಗೆ ಹೊರಟು ಹೋದ. ನನಗು ಕೂಡ ಹಾಗೆ ಅನ್ನಿಸಿತು. ಅರುಣನ ಮಾತಿನ ಹಮ್ಮು ತುಂಬಾ ಇತ್ತು. ಮಗ ಮತ್ತೆ ಮತ್ತೆ Tablet ಬೇಕು ಎಂದು ಕೇಳುತ್ತಿದ್ದ. ನಾನು ನಾಳೆ ತೆಗೆದುಕೊಳ್ಳೋಣ ಎಂದು ಹೇಳಿ ಸುಮ್ಮನಾಗಿಸಿದ್ದೆ. ನನಗು ದುಡ್ಡಿನ ಮಹಿಮೆಯ ಬಗ್ಗೆ ಒಂದು ಕವಿತೆ ಬರೆಯಬೇಕು ಎಂದು ಅನ್ನಿಸಿತು ರಾತ್ರಿ ಕುಳಿತು ಬರೆದೆ.

ದುಡ್ಡಿನ ಮಹಿಮೆ
----------------
ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

ಇದು ನಂದೇ ಜಗತ್ತು ಎಂದ ಪುಂಡ
ಇವನ ಮುಂದೆ ಪ್ರಾಮಾಣಿಕತೆ ಒಂದು ದಂಡ
ಖಾಲಿ ಡಬ್ಬದ ನಾದವೇ ಸುರ ಸಂಗೀತವು
ಜಾಲಿ ಗಿಡದ ಪುಷ್ಪವೇ ಮಂದಾರ ಪುಷ್ಪವು ||೧||

ದಡ್ಡನಾದರೇನು ದುಡ್ಡು ಒಂದು ಸಾಕು
ಮಧ್ಯ ಒಂದೇ ಬೇಕು, ವಿದ್ಯೆ ಯಾಕೆ ಬೇಕು
ಮುಂದೆ ಹೊಗಳಿ ಏರಿಸುವ ಜನ ಸಮೂಹವು
ಹಿಂದೆ ತೆಗಳಿ ಬೀಳಿಸುವ ಶ್ವಾನ ಸಮಾನವೂ ||೨||

ಇದು ಥಳಕು ಬಳಕು ದುನಿಯಾ
ಇಲ್ಲಿ ಒಲವಿಗೆಲ್ಲಿ ನೆಲೆಯಾ

ಮರುದಿನ ಸಂಜೆ ಆಫೀಸ್ ನಿಂದ ಬರುವ ವೇಳೆಗೆ ನನ್ನ ಅಪ್ಪ, ಅಮ್ಮ ಊರಿನಿಂದ ಬಂದಿದ್ದರು. ಮಗ Tablet ತೆಗೆದುಕೊಂಡು ಬಂದ್ಯಾ ಎಂದು ಕೇಳಿದ. ನನ್ನ ಅಮ್ಮ ಗಾಬರಿಯಿಂದ ಏನಾಯಿತು? ನಿನಗೆ ಎಂದು ಕೇಳಿದರು. ನಾನು ಏನು ಇಲ್ಲ ಮಗನಿಗೆ Tablet ಬೇಕಂತೆ ಅಂದೆ. ಅವನಿಗೆ ಏನಾಗಿದೆ? ಎಂದು ಅಜ್ಜ-ಅಜ್ಜಿ ಇಬ್ಬರು ಮತ್ತಷ್ಟು ಗಾಬರಿಯಾದರು. ಕಡೆಗೆ ಅವರಿಗೆ ಅದು ಒಂದು ಮೊಬೈಲ್ ಇದ್ದ ಹಾಗೆ ಇರುವ ಒಂದು ಇಲೆಕ್ಟ್ರಾನಿಕ್ ಉಪಕರಣ ಎಂದು ಹೇಳಿದ ಮೇಲೆ ಸಮಾಧಾನವಾಗಿ, ಇದೆಂತಹ ಹೆಸರು ಇಡುತ್ತಾರೆ ಇವರು ಎಂದು ಬೈದರು.

ಮತ್ತೆ ಸಂಜೆಗೆ ಊಟಕ್ಕೆ ಕುಳಿತಾಗ ಮಡದಿ ನಾಳೆಗೆ ನಿಮಗೇನು ವೋಟ್ಸ್ ಎಂದು ಕೇಳಿದಳು. ಅದಕ್ಕೆ ನಾಳೆ ಏನು ಎಲೆಕ್ಷನ್ ಇದೇನಾ ಎಂದು ನನ್ನ ಅಮ್ಮ ಮುಗ್ದತೆಯಿಂದ ಕೇಳಿದಳು. ಅದು ವೋಟ್ಸ್ ಎಂದರೆ ಅದು ತಿನ್ನುವ ವಸ್ತು ಎಂದು ಅದರ ಪಾಕೆಟ್ ತಂದು ತೋರಿಸಿದ ಮೇಲೆ ಅಮ್ಮ, ಇದೇನೋ ವಿಚಿತ್ರವಾಗಿ ಹೆಸರು ಇಡುತ್ತರೋ ಈ ಆಂಗ್ಲರು ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದೆ ನಮ್ಮ ತಪ್ಪು ಎಂದು ಆಡುತ್ತಿದ್ದಳು. ಅದಕ್ಕೆ ಅಪ್ಪ ಅಮ್ಮನಿಗೆ ಅವರನ್ನು ನಮ್ಮ ಅಂಗಳಕ್ಕೆ ಬಿಟ್ಟಿದ್ದರಿಂದ ಮೊಬೈಲ್, ಟಿ ವಿ, ಕಂಪ್ಯೂಟರ್ ಎಂದು ಎಷ್ಟೊಂದು ಉನ್ನತಿಯನ್ನು ನಾವು ಕಾಣುತ್ತಿದ್ದೇವೆ. ಸುಮ್ಮನೆ ಏನೇನೋ ಮಾತನಾಡಬೇಡ ಎಂದು ಬೈದರು. ಮತ್ತೆ ಮೊನ್ನೆ ನಿಮ್ಮ ಅಮ್ಮ "ಅಳಗುಳಿಮನೆ" ಎಂಬ ಹೆಸರನ್ನು ಕೇಳಿ, ಇದೇನು ಇವರ ತಲೆ ಅಳುಬುರುಕ ಮನೆ ಎಂದು ಧಾರಾವಾಹಿಯ ಹೆಸರು ಇಟ್ಟಿದ್ದಾರೆ ಎಂದು ಬೈಯುತ್ತಿದ್ದಳು ಎಂದರು. ಕಡೆಗೆ ನಾನು ಅದು ಒಂದು ಆಟದ ಸಾಮಾನಿನ ಹೆಸರು ಎಂದು ಹೇಳಿದೆ ಎಂದು ನಗಹತ್ತಿದರು. ಅದಕ್ಕೆ ಅಮ್ಮ ನಿಮಗೆ ನಾನೆಂದರೆ ತಮಾಷೆ ಎಂದು ಕೋಪ ಮಾಡಿಕೊಂಡು ಬಿಟ್ಟಳು. ಇವರಿಬ್ಬರ ಜಗಳ ನೋಡಿ ನನ್ನ ಮಗ ನಗುತ್ತಲಿದ್ದ. ಊಟ ಮುಗಿಸಿ ಎಲ್ಲರೂ ನಿದ್ದೆಗೆ ಜಾರಿದೆವು.

Monday, September 17, 2012

ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ....

ಖ್ಯಾತ ಹಾಸ್ಯ ಸಾಹಿತಿಗಳ ಫೋಟೋ ಇರುವ ಪುಸ್ತಕಗಳನ್ನು ಮುಚ್ಚಿಕೊಂಡು ಬರುತ್ತೇನೆ. ಖಂಡಿತವಾಗಿಯೂ, ಅವರ ಭಾವ-ಚಿತ್ರ ನೋಡಿಯೇ ನಗು ಬರುತ್ತೆ, ಆದರೆ, ಇದರಿಂದ ನನ್ನ ಮಡದಿಯ ಭಾವ ಬದಲಾಗುತ್ತೆ. ಅದನ್ನು ನೋಡಿ, ಏನ್ರೀ, ಮತ್ತೊಂದು ಪುಸ್ತಕನಾ?, ಇರುವ ಪುಸ್ತಕ ಮೊದಲು ಓದಿ ಮುಗಿಸಿ ಎಂದು ಬೈಯುತ್ತಾಳೆ. ಆಗ ಹಾಸ್ಯ ಸಾಹಿತಿಗಳ ಭಾವ ಚಿತ್ರ, ನನ್ನ ನೋಡಿ ನಕ್ಕ ಹಾಗೆ ಅನ್ನಿಸುತ್ತೆ. ಆದರೂ ಹೊಸ ಹೊಸ ಪುಸ್ತಕಗಳನ್ನು ಕೊಳ್ಳುವುದನ್ನು ಬಿಟ್ಟಿಲ್ಲ. ಮೊನ್ನೆ ಮುಂಜಾನೆ ಪೇಪರ್ ನಲ್ಲಿ ಕಾರ್ಯಕ್ರಮ ಪಟ್ಟಿ ಓದುತ್ತಾ ಕುಳಿತ್ತಿದ್ದೆ. ಅಲ್ಲಿ ಶ್ರೀ ಜೋಗಿ ಅವರ "ಗುರುವಾಯನಕೆರೆ" ಮತ್ತು "ಹಲಗೆ ಬಳಪ" (ಹೊಸ ಬರಹಗಾರರಿಗೆ ಉಪಯೋಗವಾಗುವ) ಪುಸ್ತಕಗಳ ಬಿಡುಗಡೆ ಇತ್ತು. ಪುಸ್ತಕ ಬಿಡುಗಡೆಗೆ ಹೋದರೆ ತುಂಬಾ ಫಾಯಿದೆ ಇರುತ್ತವೆ. ರುಚಿಯಾದ ತಿಂಡಿ, ಕಾಫಿ ಅಲ್ಲದೆ ಪುಸ್ತಕಗಳು ರಿಯಾಯತಿ ದರದಲ್ಲಿ ಸಿಗುತ್ತವೆ. ಮತ್ತು ತುಂಬಾ ಗೆಳೆಯರ ಪರಿಚಯ ಮತ್ತು ಒಳ್ಳೊಳ್ಳೆ ಪ್ರಖ್ಯಾತರ ಭಾಷಣ ಕೇಳಲು ಸಿಗುತ್ತೆ. ಅದನ್ನು ನೋಡಿ ತುಂಬಾ ಖುಷಿಯಿಂದ "ಅರೆ ಜೋಗಿ..." ಎಂದು ಹಾಡಲು ಶುರು ಮಾಡಿದೆ. ಅದನ್ನು ನೋಡಿ ಏನು ರಾಯರು ತುಂಬಾ ಖುಷಿಯಿಂದ ಇದ್ದೀರಿ ಎಂದಳು. ನಾನು ಬೇಗನೆ ಪೇಪರ್ ಮಡಚಿ ಇಟ್ಟೆ. ಏಕೆಂದರೆ, ಅವಳಿಗೂ ಪೇಪರ್ ನಲ್ಲಿ ಇರುವ ಎಲ್ಲ ಮಾಹಿತಿಗಳು ಚಿರ ಪರಿಚಿತವಾಗಿತ್ತು. ಮಗ ಬೇಗ ಎದ್ದು ಅಮ್ಮ ಅಮ್ಮ .. ಎಂದು ರಾಗ ಎಳೆಯುತ್ತಿದ್ದ. ನಾನು ಹೋಗಿ ಬಾ ಕಂದ ಎಂದು ಕರೆದುಕೊಳ್ಳಲು ಹೋದೆ. ಮತ್ತಷ್ಟು ಜೋರಾಗಿ ಅಮ್ಮ ಅಮ್ಮ ಎಂದು ಅಳುತ್ತ ಕುಳಿತ. ಒಂದೆರಡು ದಿವಸದಿಂದ ಅಪ್ಪ ಅಪ್ಪ ಎಂದು ಏಳುತ್ತಿದ್ದವನು, ಇವತ್ತು ಎದ್ದು ಅಮ್ಮ ಎಂದಿದ್ದು ನೋಡಿ, ಮಡದಿಗೆ ಲೇ ಇವತ್ತು ಮಗ ಪಕ್ಷ ಬದಲಿಸಿದ್ದಾನೆ ಎಂದೆ. ಮೊದಲೇ ಸಿಲಿ೦ಡರ್ ರೇಟ್ ಜಾಸ್ತಿ ಮಾಡಿದ್ದಕ್ಕೆ ಕೋಪದಿಂದ ಇದ್ದ ಮಡದಿ ಏನ್ರೀ, ನನ್ನನ್ನು ಯಾವ ಪಕ್ಷಕ್ಕೂ ಸೇರಿಸಬೇಡ ಎಂದು ಸಿಡಿದೆದ್ದಳು. ಲೇ ನೀನೆ ತಾನೇ ಆಡಳಿತ ಪಕ್ಷದ ಹೈ ಕಮಾಂಡ್ ಎಂದೆ. ನನ್ನದೇನಿದ್ದರು ನಿನ್ನ ಮಾತು ಕೇಳುವುದು ಅಷ್ಟೇ ಎಂದೆ. ಕಡೆಗೆ ಮಡದಿಗೆ ನನ್ನ ಗೆಳೆಯ ಸಂತೋಷ ಫೋನ್ ಮಾಡಿದ್ದಾನೆ ಅವನ ಮನೆಗೆ ಹೋಗಬೇಕು ಎಂದು ಸುಳ್ಳು ಹೇಳಿ, ಬೇಗನೆ ರೆಡಿ ಆಗಿ ಮನೆಯಿಂದ ಹೊರಬಿದ್ದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ತುಂಬಾ ಪ್ರಸಿದ್ದ ವ್ಯಕ್ತಿಗಳು ಬಂದಿದ್ದರು. ಕಾರ್ಯಕ್ರಮ ಮುಗಿಸಿಕೊಂಡು ಪುಸ್ತಕ ಖರೀದಿಸಿ ಮನೆಗೆ ಹೋಗುವ ಬದಲು, ನನ್ನ ಮನೆಯ ಪಕ್ಕದಲ್ಲೇ ಇರುವ ಮನೋಜನ ಮನೆಗೆ ಹೋಗಿ, ಆ ಪುಸ್ತಕ ಕೊಟ್ಟು, ಮರುದಿನ ಮಡದಿಗೆ ತಿಳಿಯದ ಹಾಗೆ ತಂದು ಇಟ್ಟರೆ ಆಗುತ್ತೆ ಎಂದು ಮನೋಜನ ಮನೆಗೆ ಹೋದೆ.


ಅಷ್ಟರಲ್ಲಿ ನಮ್ಮ ಮಂಜ ಕೂಡ ಹಾಜರ ಆದ. ಮನೋಜ ಮಗನಿಗೆ "ಲೋ.. ಲೋಹಿತಾ ಬೇಗ ಎದ್ದು, ಮುಖ ತೊಳೆದುಕೊಂಡು, ದೇವರಿಗೆ ನಮಸ್ಕಾರ ಮಾಡೋ" ಎಂದು ಕೂಗುತ್ತಿದ್ದ. ಲೋಹಿತ ಮುಖ ತೊಳೆದುಕೊಂಡು ಬಂದು, ನನ್ನ ಪಕ್ಕ ಕುಳಿತುಕೊಂಡ. ಮನೋಜ ಮತ್ತೆ ಜೋರಾಗಿ ಲೇ.. ದೇವರಿಗೆ ನಮಸ್ಕಾರ ಮಾಡೋ ಎಂದು ಕಿರುಚಿದ. ಆಗ ಮಂಜ ಲೇ ನಿನ್ನ ಕಿರುಚಾಟಕ್ಕೆ ದೇವರು ಹೆದರಿ ದೇವರ ಮನೆಯಿಂದ ಓಡಿ ಹೋಗಿದ್ದಾರೆ, ನಮಸ್ಕಾರ ಯಾರಿಗೆ ಮಾಡಬೇಕು ಎಂದು ಮಂಜ ಛೇಡಿಸಿದ. ಲೇ.. ನೀನೊಂದು ಸುಮ್ಮನೆ ಕುಳಿತುಕೋ ಎಂದು ಹೇಳಿದ. ಕಡೆಗೆ ಮನೋಜನ ಮಗ ನಮಸ್ಕಾರ ಮಾಡಿ ಅಳುತ್ತ ಬಂದ. ಮಂಜ ಟಿ ವಿ ಚಾನೆಲ್ ಚೇಂಜ್ ಮಾಡಿದ. ಅದರಲ್ಲಿ "ದೊಡ್ಡವರೆಲ್ಲ ಜಾಣರಲ್ಲ..." ಎಂಬ ಗುರು-ಶಿಷ್ಯ ಚಲನಚಿತ್ರದ ಹಾಡು ಹತ್ತಿತು. ಮಂಜ ಲೋಹಿತನಿಗೆ ನೋಡು ಸರಿಯಾಗಿದೆ ಹಾಡು ದೊಡ್ಡವರೆಲ್ಲ ದಡ್ಡರು, ಸಣ್ಣವರು ಶ್ಯಾಣ್ಯ ಎಂದು ಮತ್ತು ನಿಮ್ಮ ಅಪ್ಪನಿಗೆ ಬಾಲ್ಯ ಎಂದರೆ ಗೊತ್ತೇ ಇಲ್ಲ ಕಣೋ, ಅವಿನಿಗೆ ಎರಡು ಬಾಲ(ಬಾಲ ಮತ್ತು ಅದರ ಕೆಳಗೆ ಮತ್ತೊಂದು ಮಂಗ್ಯಾನ್ ಬಾಲ) ಇದೆ ಎನ್ನುವುದು ಮಾತ್ರ ಗೊತ್ತು ಎಂದ.

ಅಷ್ಟರಲ್ಲಿ, ಒಬ್ಬರು ಮನೋಜನ ಹತ್ತಿರ ಭವಿಷ್ಯ ಕೇಳುವುದಕ್ಕೆ ಬಂದರು. ಅವರು ತಮ್ಮ ಮನೆಯಲ್ಲಿ ದಿನವು ಜಗಳ ಎಂದು ಹೇಳಿದರು. ಮನೋಜ ಅವರ ಕುಂಡಲಿ ಪರೀಕ್ಷಿಸಿ ಲೆಕ್ಕ ಹಾಕಿ, ಅವರಿಗೆ ಒಂದಿಷ್ಟು ಪೂಜೆಗಳನ್ನೂ ಮಾಡಿಸಲು ಹೇಳಿದ. ಮತ್ತೆ, ನಿಮ್ಮ ಮನೆಯಲ್ಲಿ ಶಿವ-ಪಾರ್ವತೀ, ಗಣೇಶ, ಸುಬ್ರಮಣ್ಯ ಇರುವ ಫೋಟೋ ಇದ್ದರೆ, ತೆಗೆದು ಬಿಡಿ ಎಂದ. ಬಂದವರು, ಏನಾಗುತ್ತೆ ಇದ್ದರೆ ಎಂದು ಕೇಳಿದರು. ಶಿವನ ವಾಹನ ನಂದಿ, ಪಾರ್ವತೀ ವಾಹನ ಸಿಂಹ, ಗಣೇಶನ ವಾಹನ ಇಲಿ, ಸುಬ್ರಮಣ್ಯ ವಾಹನ ನವಿಲು. ಶಿವನ ಕೊರಳಲ್ಲಿ ಇರುವುದು ಹಾವು. ಅದಕ್ಕೆ ಒಬ್ಬರನ್ನು ಕಂಡರೆ ಒಬ್ಬರಿಗೆ ಆಗುವುದಿಲ್ಲ. ಅದಕ್ಕೆ ನಿಮ್ಮ ಮನೆಯಲ್ಲಿ ಪ್ರತಿ ದಿವಸ ಜಗಳ ಆಗುತ್ತಿದೆ ಎಂದ. ಮಂಜನಿಗೆ ಸಕ್ಕತ ಕೋಪ ಬಂತು. ಲೇ... ಅದು ಪ್ರೀತಿ - ಸೌಹಾರ್ಧತೆಯ ಸಂಕೇತ. ತಿಳುವಳಿಕೆ ಇರುವ ಮನುಷ್ಯರಾದ ನಮಗೆ ಆ ಬುದ್ದಿ ಇಲ್ಲ. ಏನೇನೋ ಹೇಳಿ ತಲೆ ಕೆಡಿಸ ಬೇಡ. ಇದು ಯಾವ ಪುಸ್ತಕದಲ್ಲಿ ಬರೆದಿದೆ ಹೇಳು ನೋಡೋಣ ಎಂದು ಸವಾಲೆಸೆದ. ಮತ್ತೆ ಮೊನ್ನೆ ಬಂದಾಗ, ಒಬ್ಬರಿಗೆ ನಿಂತಿರುವ ಶ್ರೀ ಸೀತ-ರಾಮರ ಫೋಟೋ ಮನೆಯಲ್ಲಿ ಇಟ್ಟುಕೊಳ್ಳಬೇಡಿ ಎಂದು ಹೇಳುತ್ತಿದ್ದ. ಅದು ವನವಾಸಕ್ಕೆ ಹೋಗುವ ಲಕ್ಷಣವಂತೆ, ನಿನ್ನ ತಲೆ ಕೆಟ್ಟಿರಬೇಕು ಎಂದು ಝಾಡಿಸಿದ. ಒಬ್ಬರು ನಿನ್ನ ಹಾಗೆ ಮನೆಯಲ್ಲಿರುವ ಶ್ರೀ ವೆಂಕಟೇಶ ದೇವರ ಫೋಟೋ ಎಲ್ಲವನ್ನು ತೆಗೆದು ಹಾಕಿದ್ದರು. ಏಕೆ? ಎಂದು ಕೇಳಿದರೆ ನಿನ್ನ ಹಾಗೆ ಯಾರೋ ಒಬ್ಬರು ಅವರಿಗೆ ಹೇಳಿದ್ದರಂತೆ ಅದನ್ನು ಹಾಕಿಕೊಂಡರೆ ಮನೆ ತುಂಬಾ ಸಾಲ ಆಗುತ್ತಂತೆ ಎಂದು. ಕಡೆಗೆ ನಾನು ಬುದ್ಧಿ ಹೇಳಿದೆ, ಒಂದೇ ತಿಂಗಳಲ್ಲಿ ಅವರಿಗೆ ಸಾಲಾ ಬಂದ(ಹೆಂಡತಿ ಅಪ್ಪನಿಗೆ ಮಗ ಹುಟ್ಟಿದ, ಅದು ಅವರ ಮಾವ ತಿರುಪತಿ ವೆ೦ಕಪ್ಪನಿಗೆ ಹರಕೆ ಹೊತ್ತಮೇಲೆ ಹತ್ತನೇ ಮಗು ಗಂಡು ಆಗಿತ್ತು). ಮತ್ತೆ ನಾವು ದಕ್ಷಿಣಕ್ಕೆ ಮುಖ ಇರುವ ಮನೆಯನ್ನು ತೆಗೆದುಕೊಳ್ಳುವುದಿಲ್ಲ. ವರದಕ್ಷಿಣೆ ಬಂದರೆ ಬಿಡುವುದಿಲ್ಲ. ದೇವರ ಸನ್ನಿಧಾನಕ್ಕೆ ಹೋದಾಗ ಪ್ರದಕ್ಷಿಣೆ ಹಾಕುತ್ತೇವೆ. ಯಾರಾದರು ದಕ್ಷಿಣೆ ಕೊಟ್ಟರೆ ಬಿಡದೆ ತೆಗೆದುಕೊಳ್ಳುತ್ತವೆ ಎಂದು ಬೈದ. ಮೊನ್ನೆ ಇವನ ಕಡೆ ನನ್ನ ಅಳಿಯನ ಒಂದು ಕುಂಡಲಿ ತೆಗಿಸಿಕೊಂಡು ಹೋಗಿದ್ದೆ. ಅವನು ಹುಟ್ಟಿದ ವಾರ ಬುಧವಾರ ಎಂದು ಬರೆದಿದ್ದ. ಕಂಪ್ಯೂಟರ್ ನಲ್ಲಿ ನೋಡಿದರೆ ಮಂಗಳವಾರ ಎಂದು ಬರುತಿತ್ತು. ಬಂದು ಕೇಳಿದರೆ, ನನ್ನ ಪಂಚಾಗದಲ್ಲಿ ಎಂದು ತಪ್ಪು ಆಗುವುದಿಲ್ಲ ಎಂದು ನನಗೆ ಹೇಳಿದ್ದ. ಅದಕ್ಕೆ ನಾನು ಹಾಗಾದರೆ ಎಷ್ಟೋ ಬ್ಯಾಂಕ್ ಗಳು ಕಂಪ್ಯೂಟರ್ ಉಪಯೋಗಿಸುತ್ತಾರೆ. ವಾರ ತಪ್ಪು ಆಗಿದ್ದರೆ ಎಷ್ಟೋ ಲೆಕ್ಕ ತಪ್ಪುತ್ತಿತ್ತು ಎಂದೆ. ಅದಕ್ಕೆ ನಾನು ದುಡ್ಡನ್ನು ಬ್ಯಾಂಕ್ನಲ್ಲಿ ಇಟ್ಟೆ ಇಲ್ಲ, ನನ್ನದೇನಿದ್ದರು ಬರಿ ರೋಕ್ ಮಾತ್ರ ಎಂದ. ಈಗ ನೋಡಿದರೆ ದೇವರ ಸುತ್ತ ಏನೇನೋ ಹೇಳುತ್ತಾನೆ ಎಂದು ಬೈದ. ಅಷ್ಟರಲ್ಲಿ ಭವಿಷ್ಯ ಕೇಳಲು ಬಂದ ಆಸಾಮಿ ಮನೋಜನಿಗೆ ದಕ್ಷಿಣೆ ಕೊಡದೆ, ನಾನು ಹೊರಡುತ್ತೇನೆ ಎಂದು ಹೊರಟು ಹೋದರು.

ಇಲ್ಲೇ ಕುಳಿತರೆ ಮಂಜ ಮತ್ತೆ ನನ್ನ ಬಗ್ಗೆ ಏನಾದರು ಶುರು ಮಾಡಿದರೆ ಕಷ್ಟ ಎಂದು, ಪುಸ್ತಕವನ್ನು ಮನೋಜನಿಗೆ ಕೊಟ್ಟು ನಾಳೆ ಬಂದು ತೆಗೆದು ಕೊಳ್ಳುತ್ತೇನೆ ಎಂದು ಹೇಳಿ ಮನಗೆ ಹೋದೆ. ಮನೆಯಲ್ಲಿ ಸಂತೋಷ ತನ್ನ ಮಡದಿ ಮಗಳ ಸಮೇತ ಹಾಜರ ಆಗಿದ್ದ. ನನ್ನ ಮುಖದಲ್ಲಿ ಇದ್ದ ಸಂತೋಷ ಮಾತ್ರ ಮಾಯವಾಗಿತ್ತು. ಅಷ್ಟರಲ್ಲಿ ಮನೋಜನ ಮಗ ಲೋಹಿತ್ "ಅಂಕಲ್ ನಿಮ್ಮ ಪುಸ್ತಕ ಅಲ್ಲೇ ಮರೆತು ಬಂದಿದ್ದೀರಾ" ತೆಗೆದುಕೊಳ್ಳಿ ಎಂದು ಕೊಟ್ಟು ಹೋದ. ಮಡದಿ ಸಂತೋಷನ ಪರಿವಾರ ಹೋದ ಮೇಲೆ ಕೋಪದಿಂದ ಮಾತು ಬಿಟ್ಟಿದ್ದಳು. "ಪುಸ್ತಕದಿ ದೊರೆತರಿವು ಮಸ್ತಕದಿ ತಳೆದ ಮಣಿ" ಎಂದು ಡಿ ವಿ ಜಿ ಅವರು ಹೇಳಿದ್ದಾರೆ ಎಂದೆ. ನೀವು ಮಸ್ತಕ ಬೆಳೆಯುತ್ತೆ ಎಂದು ಕಷ್ಟಕ್ಕೆ ಆಗುವ ದುಡ್ಡು ಪೋಲು ಮಾಡುತ್ತ ಇದ್ದೀರಾ? ಎಂದಳು. ಇನ್ನು ಮೇಲಿಂದ ಇರುವ ಎಲ್ಲ ಪುಸ್ತಕ ಓದುವವರೆಗೂ, ಯಾವುದೇ ಪುಸ್ತಕ ಖರಿದಿಸುವುದಿಲ್ಲ ಎಂದು ಹೇಳಿದ ಮೇಲೆ ಸ್ವಲ್ಪ ಕೋಪ ಕಡಿಮೆ ಮಾಡಿಕೊಂಡಿದ್ದಳು. ಹಾಗೇನಾದರು ತಂದರೆ ರಸ್ತೆಗೆ ಒಗೆಯುತ್ತೇನೆ ಎಂದಳು. ಲೇ ಅದು ಸರಸ್ವತಿ ಕಣೇ... ಎಂದೆ. ನಗುತ್ತ ಅದನ್ನಲ್ಲಾ ನಿಮ್ಮನ್ನು ಎಂದಳು...

Monday, September 3, 2012

ಸುಖ ಸಂಸಾರಕ್ಕೆ ಐದೇ ಸೂತ್ರಗಳು....

ಮಡದಿ ಅಧಿಕ ಮಾಸದ ಬಾಗೀನ ಕೊಡುವ ಸಲುವಾಗಿ, ತವರು ಮನೆಗೆ ಹೋಗುವ ಅರ್ಜಿ ಗುಜರಾಯಿಸಿದ್ದಳು. ಲೇ ನೀನೇ ಒಂದು ತಿಂಗಳ ಮೊದಲಿನಿಂದ ಹೇಳುತ್ತಾ ಬ೦ದಿದ್ದೀಯಾ ಅಲ್ಲವೇನೆ, ಅಧಿಕ ಮಾಸದಲ್ಲಿ ಒಳ್ಳೆಯ ಕೆಲಸ ಮಾಡಬಾರದು ಎಂದು ಅಂದೆ. ಕೋಪ ಮಾಡಿಕೊಂಡು ಬಿಟ್ಟಳು.  ಮತ್ತೆ, ನಾನು ಬಂಗಾರದಂತಹ ಗಂಡನ ಮನೆ ಬಿಟ್ಟು, 'ತವರ' ಮನೆಗೆ ಏಕೆ? ಹೋಗುತ್ತಿ ಎಂದು ಅವಳಿಗೆ ಕಾಡಿದ್ದೆ.  ಇದಕ್ಕಾಗಿ ನನ್ನ ಮತ್ತು ಮಡದಿಯ ನಡುವೆ ವಾರದಿಂದ ಸಮರ ನಡೆದಿತ್ತು. ನನ್ನ ಆರು ವರ್ಷದ ಮಗ ಕೂಡ, ನಾನು ಅವನಿಗಿಂತ ಮೊದಲೇ ಸ್ನಾನ ಮಾಡಿದ್ದೇನೆ ಎಂದು, ನನ್ನ ಜೊತೆ ಜಗಳ ಶುರು ಮಾಡಿದ. ಅಷ್ಟರಲ್ಲಿ ಮಂಜ ಮನೆಗೆ ಬಂದ. ಮಂಜ ನನ್ನ ಮಗನಿಗೆ ಸಮಾಧಾನಿಸಲು, ನಿಮ್ಮ ಅಪ್ಪ ನಾಳೆಯ ಬುಷ(ಸ್ನಾನ) ಇನ್ನೂ ಮಾಡಿಲ್ಲ, ಹೀಗಾಗಿ ನೀನೇ ಫಸ್ಟ್ ಸ್ನಾನ ಮಾಡಿದ್ದೂ ಎಂದರು ಕೇಳಲಿಲ್ಲ. ಅದಕ್ಕೆ ಮಂಜ ನಿಮ್ಮ ಅಪ್ಪ ಸೊನ್ನೆ, ನೀನೆ ಮೊದಲು ಎಂದು ಸಮಾಧಾನಿಸಿ, ಅವನನ್ನು ಸ್ನಾನಕ್ಕೆ ಕಳುಹಿಸಿದ.

ಮಡದಿಯ ಕೋಪ ಇಳಿದಿರಲಿಲ್ಲ, ಕೋಪದಿಂದಲೇ ನಮ್ಮಿಬ್ಬರಿಗೆ ತಿಂಡಿ ತಂದು ಟೇಬಲ್ ಮೇಲೆ ಕುಕ್ಕಿ ಹೋದಳು. ತಿಂಡಿ ಮುಗಿಸಿದ ಮೇಲೆ ಕಾಫಿ ತಂದು ಕೊಟ್ಟಳು. ನಾನು ಮತ್ತೊಮ್ಮೆ ನೀರು ಕೇಳಿದೆ. ನಿಮ್ಮ ಗೆಳೆಯ ತಮ್ಮ ರಾಶಿಯ(ಮೀನ) ಹಾಗೆ ನೀರಿನಲ್ಲೇ ಇರಬೇಕಿತ್ತು ಎಂದು ಹಾಗೆ ಕಾಫಿ ಕುಡಿಯಿರಿ ಎಂದಳು. ನಿಜ, ಅನ್ನಿಸಿತು ನಾನು ನೀರು ಸ್ವಲ್ಪ ಜ್ಯಾಸ್ತಿನೇ ಕುಡಿಯುತ್ತೇನೆ. ನನಗೆ ಸಮಾಧಾನ ಆಗಲಿಲ್ಲ, ನೀರು ಕೊಡಲಿಲ್ಲ ಎಂದರೆ, ಮುಂದಿನ ಜನ್ಮದಲ್ಲಿ ಹಲ್ಲಿ ಆಗಿ ಹುಟ್ಟುತ್ತಾರೆ ಎಂದು ಮತ್ತೊಮ್ಮೆ ನೀರು ಕೇಳಿದೆ. ಅವಳು ಲೋಚ್ಚ.. ಲೋಚ್.. ಎಂದು ಲೋಚಗುಡಿದಳು. ಅದಕ್ಕೆ , ಮಂಜ ಮುಂದಿನ ಜನ್ಮದವರೆಗೂ ಕಾಯಬಾರದೇ ತಂಗ್ಯಮ್ಮ ಎಂದ. ಎಲ್ಲರು ನಕ್ಕೆವು, ಮಡದಿ ನೀರು ತಂದು ಟೇಬಲ್ ಮೇಲೆ ಕುಕ್ಕಿದಳು. ಸ್ನಾನ ಮಾಡಿದ್ದರೂ ಇನ್ನೊಮ್ಮೆ ಸ್ನಾನ ಮಾಡಿದ ಹಾಗೆ ಆಗಿತ್ತು. ನಾನು ಕೋಪದಿಂದ, ಏನಿದು ಹೀಗೆ ಎಂದು ಒದರಿದೆ. ನಿಮ್ಮ ಗೆಳೆಯನಿಗೆ ಮೂಗಿನ ಮೇಲೆ ಕೋಪ ಎಂದು ಹೇಳಿದಳು. ಅದು ಇವನ ತಪ್ಪಲ್ಲ ಬಿಡಿ ತಂಗ್ಯಮ್ಮ...ಇದು ಇವನ ಅಪ್ಪ ಅಮ್ಮ ಉಪ್ಪು... ಉಪ್ಪು .. ಮಾಡಿ ಬೆಳಸಿದ್ದಾರೆ, ಅದಕ್ಕೆ, ಇವನಿಗೆ ಬಿ.ಪಿ ಜ್ಯಾಸ್ತಿ. ಅವರ ಮಮಕಾರ ಜ್ಯಾಸ್ತಿ ಆಗಿ, ಮಗ ಬದಲು ಮಂಗ ಆಗಿದ್ದಾನೆ ಅಷ್ಟೇ... ಎಂದ. ಮಡದಿ ಮತ್ತು ಮಂಜ ಜೋರಾಗಿ ನಗಹತ್ತಿದರು. ನೀನೇನು ಕಡಿಮೇನಾ?, ನೀನು ಮನೇಲಿ ಪೂಜಾರಿ, ಬೀದಿಲಿ ಪುಡಾರಿ ಎಂದು ನಾನೊಬ್ಬನೇ ನಕ್ಕೆ.

ಮಗ ಸ್ನಾನ ಮುಗಿಸಿ ಬಂದ. ಮಂಜ ಅವನಿಗೆ "ಗೌಡ್ರು ಬಾಯಿ" ಎಂದ. ಮಗನಿಗೆ ತಿಳಿಯಲಿಲ್ಲ. ಹಾಗೆ ಅಂದರೆ ಅಂಕಲ್ ಎಂದ. good boy ಅಂತ ಅಂದ. ನನ್ನ ಮಗ ತಿಂಡಿ ತಿನ್ನುವಾಗ ಹಠ ಮಾಡುತ್ತ ಇದ್ದ. ನಾನು, ತಿಂಡಿ ಹೀಗೆ ಒಣ.. ಒಣ.. ಮಾಡಿದರೆ ಹೇಗೆ ತಿನ್ನಬೇಕು ಎಂದು ಮಡದಿಗೆ ಬೈದೆ. ಏನು? ಮುದುಕರ ಹಾಗೆ ಆಡುತ್ತೀರಿ, ನಿಮಗೆ ಏನು ಹಲ್ಲು ಇಲ್ಲವಾ ಎಂದು ಹಲ್ಲು ಕಡಿದು ಮಾತನಾಡಿದಳು. ಏನು ಮಾಡಿದರು ಒಂದು ಹೆಸರು ಇಡುವುದೇ ಆಯಿತು ನಿಮ್ಮದು ಎಂದಳು. "ನಿಂದಕರಿರಬೇಕು ಇರಬೇಕು...ಹಂದಿ ಇದ್ದರೆ ಕೇರಿ...ಹ್ಯಾಂಗೆ ಶುದ್ಧಿಯೊ ಹಾಂಗೆ" ಎಂದು ಪುರುಂದರ ದಾಸರ ಪದ ಕೇಳಿಲ್ಲವೇ ಎಂದೆ. ಮಗ ಅಪ್ಪ ಏನು? ಎಂದರು ಎಂದು ಅವರ ಅಮ್ಮನಿಗೆ ಕೇಳಿದ. ನಿಮ್ಮ ಅಪ್ಪನಿಗೆ ಹಂದಿ ಅನ್ನಬೇಕಂತೆ ಎಂದಳು. ನಿನಗೆ ಗೊತ್ತ? ಎಲ್ಲರೂ ಒಳ್ಳೆಯ ಊಟಕ್ಕೆ ರಸಗವಳ ಎನ್ನುತ್ತಾರೆ. ಯಾರು ಒಣಗವಳ ಅನ್ನುವುದಿಲ್ಲ, ಹಾಗೆ ಮಾಡಿದರೆ ಬಾಯಿಯೊಳಗೆ ಲಾವಾರಸ ಬರುತ್ತೆ ಎಂದು ಬಾಯಿ ತಪ್ಪಿ, ಲಾಲಾರಸದ ಬದಲು ಅಂದೆ. ಹೌದು ನಿಮ್ಮ ಬಾಯಲ್ಲಿ ಯಾವತ್ತು ಅದೇ ಇರುತ್ತೆ, ಯಾವತ್ತು ಕೆಂಡ ಕಾರುತ್ತಾ ಇರುತ್ತೀರಿ ಎಂದಳು. ನಿಮ್ಮ ಪ್ರತಾಪವೆಲ್ಲ ನನ್ನ ಮುಂದೆ ತೋರಿಸಬೇಡಿ, ಎಲ್ಲಾ ಅಳ್ಕ ತಿಂದು.. ತಿಂದು.. ಅಳು ಪುಂಜಿ ಆಗಿದ್ದೀರಾ ಎಂದಳು.

ಮಗ ತಿಂಡಿ ಮುಗಿಸಿ ನೀರಿನಿಂದ ಬರೆಯುತ್ತ ಇದ್ದ. ಮಡದಿ ಅವನಿಗೆ ಕೋಪದಿಂದ "ನೀರಿನಿಂದ ಎಷ್ಟು ಸಾರಿ ಹೇಳುವುದು ಬರಿಬೇಡ" ಎಂದು ಚೀರಿದಳು. ನಾನು ಏನು ಆಗುತ್ತೆ, ಏನೋ ಅಪ್ಪನ ದುಡ್ಡು ಉಳಿಸುತ್ತಾ ಇದ್ದಾನೆ. ಬುಕ್, ಪೆನ್ಸಿಲ್ ನಲ್ಲಿ ಬರೆದು ಖಾಲಿ ಮಾಡುವ ಬದಲು ಒಳ್ಳೆಯದೇ ಅಲ್ಲವೇ ಎಂದೆ. ನಿಮ್ಮ ಇಷ್ಟ ನೀರಿನಿಂದ ಬರೆದರೆ ಸಾಲ ಆಗುತ್ತೆ ಎಂದು ಹೇಳಿದಳು. ಕಡೆಗೆ ನಾನೇ ಹೋಗಿ ಅವನನ್ನು ಬಿಡಿಸಿ, ಪೆನ್ನು ಬುಕ್ ಕೊಡಬೇಕಾಗಿ ಬಂತು. ಅದಕ್ಕೆ ಮಂಜ "ಲೇ ನೀನು ತುಂಬಾ ದಿನದಿಂದ ಹೋಂ ಲೋನ್ ಸಿಕ್ಕಿಲ್ಲ" ಎಂದು ಒದ್ದಾಡುತ್ತಾ ಇದ್ದೆ. ಈಗ ನಿನ್ನ ಮಡದಿನೇ ಐಡಿಯಾ ಕೊಟ್ಟಿದ್ದಾಳೆ, ನೀನು ಬರಿ ನೀರಿನಿಂದ ಎಂದು ನಗುತ್ತ ನನಗೆ ಹೇಳಿದ.

ಮಡದಿ ಕಸ ಗೂಡಿಸಲು ಶುರು ಮಾಡಿದಳು, ನನ್ನ ಕಾಲನ್ನು ಮೇಲೆ ಎತ್ತು ಎಂದಳು. ನಾನು ಎತ್ತುವುದಿಲ್ಲ ಎಂದು, ಸುಮ್ಮನೆ ಹಾಗೆ ಕುಳಿತೆ. ಕಸಬರಿಗೆ ನಿಮಗೆ ತಗುಲಿದರೆ ನೀವೇ ಸೊರಗುತ್ತೀರಾ ಎಂದಳು. ಕಡೆಗೆ ವಿಧಿ ಇಲ್ಲದೆ ಕಾಲು ಮೇಲೆ ಎತ್ತಿದೆ. ಕಸ ಗೂಡಿಸಿ ಬಂದಳು.

ಇನ್ನು ಕಾಯಲು ಆಗುವುದಿಲ್ಲ ಎಂದು ಮಂಜ ನಗುತ್ತಾ... ಕಡೆಗೆ, ತನ್ನ ಜೇಬಿನಿಂದ ಕವರ್ ತೆಗೆದು ಕೊಟ್ಟ. ಏನೋ ಇದು ಎಂದೆ. ನೀನೆ ಹೇಳಿದ್ದೆ ಅಲ್ಲವಾ ಟಿಕೆಟ್ ಎಂದ. ನಿನ್ನೆ ಅವನಿಗೆ ಫೋನ್ ಮಾಡಿ, ಮಡದಿಯ ಊರಿಗೆ ಹೋಗಲು ಟಿಕೆಟ್ ಬುಕ್ ಮಾಡಲು ಹೇಳಿದ್ದೆ. ಬೇಗ ಕೊಡಲು ನಿನಗೇನೋ ಧಾಡಿ ಎಂದು ಬೈದೆ. ಬೇಗನೆ ಕೊಟ್ಟಿದ್ದರೆ ನನಗೆ ಸಿಕ್ಕ ಪುಕ್ಕಟೆ ಮನರಂಜನೆ ಮಿಸ್ ಆಗುತ್ತಿತ್ತು ಎಂದು ನಕ್ಕ. ಇದನ್ನು ಅಡುಗೆ ಮನೆಯಿಂದ ಕೇಳಿಸಿಕೊಂಡ ಮಡದಿ, ಎರಡೇ ಸೆಕೆಂಡಿನಲ್ಲಿ ಪಕ್ಕಕ್ಕೆ ಬಂದು ನಿಂತಿದ್ದಳು. ನನಗೆ ಗೊತ್ತಿತ್ತು ನೀವು ತುಂಬಾ ಒಳ್ಳೆಯವರು ಎಂದು ಉಲಿದಳು. ಇದೆ ಸರಿಯಾದ ಸಮಯ ಎಂದು, ಲೇ ಸ್ವಲ್ಪ ಅಡಿಕೆ ಕೊಡೆ ಎಂದೆ. ಹೋಗಿ ಅಡಿಕೆ ಡಬ್ಬದ ಸಹಿತ ಎರಡೇ ಸೆಕೆಂಡಿನಲ್ಲಿ ಹಾಜರ್ ಆಗಿದ್ದಳು. ಮಂಜನಿಗೆ ಕೊಟ್ಟಳು. ನಾನು ಎಡ ಕೈ ಮುಂದೆ ಚಾಚಿದೆ. ರೀ ನಿಮಗೆ ಬುದ್ಧಿ ಇಲ್ಲವಾ ಎಷ್ಟು ಬಾರಿ ಹೇಳುವುದು ಎಡ ಕೈಯಲ್ಲಿ ಅಡಿಕೆ ತೆಗೆದುಕೊಂಡರೆ ಜಗಳ ಆಗುವದೆಂದು ಎಂದು, ಜಗಳ ಶುರು ಮಾಡಿದಳು. ಮತ್ತೆ ಬಲ ಕೈಯಲ್ಲಿ ಅಡಿಕೆ ತೆಗೆದುಕೊಂಡೆ. ಅಡುಗೆ ಮನೆಗೆ ಹೊರಟು ಹೋದಳು. ನಮ್ಮಿಬ್ಬರನ್ನು ನೋಡಿ ಮಂಜ ಮತ್ತೆ ನಗಲು ಶುರು ಮಾಡಿದ. ಅಷ್ಟರಲ್ಲಿ ಉದಯ ಟಿ.ವಿಯಲ್ಲಿ "ಸುಖ ಸಂಸಾರಕ್ಕೆ ಏಳು ಸೂತ್ರಗಳು" ಎಂಬ ಚಲನಚಿತ್ರ ಶುರು ಆಯಿತು. ಅದಕ್ಕೆ ಮಂಜ ನಿನ್ನ ಸುಖ ಸಂಸಾರಕ್ಕೆ ಏಳು ಸೂತ್ರಗಳು ಏನು? ಗೊತ್ತೇ...ತವರು ಮನೆಗೆ ಆಗಾಗ ಕರೆದುಕೊಂಡು ಹೋಗಬೇಕು... ತುಂಬಾ ಸಾರಿ, ನೀರು ಕೇಳಬಾರದು... ಕಸ ಹೊಡೆಯುವಾಗ, ಕಾಲು ಮೇಲೆತ್ತ ಬೇಕು...ನೀರಿನಿಂದ ಬರೆಯಬಾರದು,ಲೇಖನ ಬರೆದು ಬಿಟ್ಟೀಯಾ ನೀರಿನಿಂದ ಹುಷಾರ್ ಎಂದ...ಎಡ ಕೈಯಿಂದ ಅಡಿಕೆ ತೆಗೆದುಕೊಳ್ಳಬಾರದು... ಅಯ್ಯೋ ಐದೇ ಅಯಿತಲ್ಲೋ? ಎಂದು ಜೋರಾಗಿ ನಗಹತ್ತಿದ.