Wednesday, September 29, 2010

ನಳ ಪಾಕ್ ....

ನಮ್ಮ ಕಂಪನೀಯಲ್ಲಿ ಒಬ್ಬ ಹೊಸ ಹುಡುಗ ಸೇರ್ಪಡೆ ಆಗಿದ್ದ. ವಿಚಿತ್ರ ಪ್ರಾಣಿ ಕ್ಷಮಿಸಿ ಮನುಷ್ಯ. ಮತ್ತೆ ಕೇಳಿಸಿಕೊಂಡರೆ ಕಷ್ಟ. ಒಂದು ದಿನ ನನ್ನ ಗೆಳೆಯ, ಅವನಿಗೆ ನಿನ್ನ ಶರ್ಟ್ ಚೆನ್ನಾಗಿದೆ ಎಂದು ಹೇಳಿದ. ಅಷ್ಟಕ್ಕೇ ನೀನು ನಿನ್ನ ವ್ಯವಹಾರ ನೋಡಿಕೊ ಎಂದು ಹೇಳಿದ್ದ. ಕೆಲ ದಿನಗಳ ನಂತರ ಅವನ ಮದುವೆ ಆಯಿತು. ಮೊನ್ನೆ ಒಂದು ದಿನ ನಾನು ಹಾಗೆ ಸಹಜವಾಗಿ ಮನೆಯವರನ್ನೂ ಕರೆದುಕೊಂಡು ಬಂದಿದ್ದೀರ? ಎಂಬ ಉದ್ಧಟ ಪ್ರಶ್ನೆ ಕೇಳಿಬಿಟ್ಟೆ. ಏನಕ್ಕೆ, ಏತಕ್ಕೆ ಕೇಳುತ್ತಾ ಇದ್ದೀರ ಎಂದು ನನಗೆ ಕೇಳಿದ. ನನಗೆ ಘಾಬರಿ. ಏನು? ನಾನು ಕೇಳಬಾರದ ಪ್ರಶ್ನೆ ಕೇಳಿಬಿಟ್ಟೇನಾ?. ನಾನು ಮುಂದೆ ಮಾತಾಡಲೇ ಇಲ್ಲ. ದಾರಿಯಲ್ಲಿ ಹೋಗುವ ಮಾರಿ ಕರೆದುಕೊಂಡು ಬಂದು ಮನೆಯಲ್ಲಿ ಕೂರಿಸಿದ ಹಾಗೆ ಆಗಿತ್ತು. ನನಗೆ ನನ್ನ ಹೆಂಡತಿನೇ ಸಂಭಾಳಿಸಲೂ ಆಗುವದಿಲ್ಲ ಇನ್ನೂ....ಕಷ್ಟ ಕಷ್ಟ. ಇನ್ನೂ ಮುಂದೆ ಅವನನ್ನು ಮಾತನಾಡಿಸಬಾರದು ಎಂದು ತೀರ್ಮಾನಕ್ಕೆ ಬಂದು ಬಿಟ್ಟೆ.

ಕೆಲಸ ಮುಗಿಸಿ ಮನೆಗೆ ಬಂದು ಕೈ ಕಾಲು ತೊಳೆಯಲು ಟವಲ್ ತೆಗೆದುಕೊಂಡೆ. ಅಮ್ಮsss. ನೋಡು ಅಲ್ಲಿ, ಅಪ್ಪ ನಿನ್ನ ಟವಲ್ ತೆಗೆದುಕೊಂಡಿದ್ದಾರೆ ಎಂದ ನನ್ನ ಸುಪುತ್ರ. ಅಷ್ಟಕ್ಕೇ ನನ್ನ ಮಡದಿ ರೀ ನಿಮಗೆ ನನ್ನದೇ ಟವಲ್ ಬೇಕಾ?, ಬೇರೆ ಬೇಕಾದಷ್ಟು ಮನೆಯಲ್ಲಿ ಇವೆ ತೆಗೆದುಕೊಳ್ಳಬಾರದ? ಎಂದು ಉದ್ಗಾರವೆತ್ತಿದಳು. ಲೇ ನಾನು ಸಾಫ್ಟ್‌ವೇರ್ ಇಂಜಿನಿಯರ್ ಕಣೇ, ಒಳ್ಳೇ ಬಿ.ಬಿ.ಎಂ.ಪಿ ಚರಂಡಿ ಸ್ವಚ್ಛ ಮಾಡುವ ನೌಕರನ ಹಾಗೆ ವರ್ತಿಸುತ್ತೀಯಲ್ಲೇ ಎಂದೆ. ಗಂಡನನ್ನ ಎಷ್ಟು ಗೋಳು ಹೊಯ್ದುಕೊಳ್ಳುತ್ತೀಯ ಎಂದೆ. ಗಂಡ ಎಂದರೆ ಏನು ಎಂದು ತಿಳಿದಿದ್ದೀಯ. ಪತಿಯೇ ಪರರ ದೈವ ಗೊತ್ತಾ? ಎಂದೆ. ಅವಳಿಗೆ ಅರ್ಥ ಆಗಲಿಲ್ಲ :). ಬಡ ಜೀವ ಬದುಕಿತು ಮತ್ತೆ.

ನನ್ನ ಬಗ್ಗೆ ಬ್ಲಾಗ್ ನಲ್ಲಿ ಏನೇನೋ ಬರೆದಿದ್ದೀರ ಎಂದಳು. ಯಾರು ಹೇಳಿದರು ಎಂದು ಕೇಳಿದೆ. ಮಂಜಣ್ಣ ಮನೆಗೆ ಬಂದಿದ್ದರು ಎಂದಳು. ಲೇ ಮಂಜ ಎಂದು ಮನಸಿನಲ್ಲೇ ಬೈದು ಹಲ್ಲು ಕಡಿದೆ. ಬರೀ ತೆಗಳಿದ್ದು ಅಷ್ಟೇ ಅಲ್ಲ ಕಣೇ, ನಿನ್ನನ್ನು ಹೋಗಳಿದ್ದು ಇದೆ ಎಂದು ಪೆಕರನಂತೆ ಹೇಳಿ ಬಿಟ್ಟೆ. ಏನು ನನ್ನ ತೆಗಳಿ ಲೇಖನ ಬರೀತೀರಾ? ಎಂದಳು. ಪಾಪ ಅವಳಿಗೆ ಈ ವಿಷಯ ಗೊತ್ತೇ ಇರಲಿಲ್ಲ. ಇಲ್ಲ ಕಣೇ ನನ್ನ ರಾಣಿ ಹಾಗೆ ಎಲ್ಲ ಮಾಡುತ್ತೆನಾ ಎಂದೆ. ನಿಮ್ಮದು ಗೊತ್ತಿಲ್ಲವ "ಇಲಿ ಬಂತು ಎಂದರೆ ಹುಲಿ ಬಂತು" ಎನ್ನುವ ಹಾಗೆ ನನ್ನ ಬಗ್ಗೆ ಬರೆದಿರುತ್ತೀರ ಎಂದು, ತುಂಬಾ ಕೋಪ ಮಾಡಿಕೊಂಡುಬಿಟ್ಟಳು.

ಪಕ್ಕದ ಮನೆ ಪೂಜ ಏನಾದರೂ ತಿಂಡಿ ಮಾಡಿದ್ದಾಳ ನೋಡು ಎಂದು ಹಾಗೆ ತಮಾಷೆಗೆ ಹೇಳಿದೆ. ಏನು ಉತ್ತರ ಬರಲಿಲ್ಲ. ಏನು ತಿಂಡಿ ಎಂದೆ. ಏನೋ ಪಕ್ಕದ ಮನೆ ಪೂಜ ಮೇಲೆ ಪ್ರೀತಿ ಉಕ್ಕಿ ಹರೀತಾ ಇತ್ತು ಎಂದಳು. ನದಿ ನೀರು ಎಷ್ಟೇ ರಭಸವಾಗಿ ಹರಿದರು ಕೊನೆಗೆ ಸೇರುವದು ಸಾಗರ ತಾನೇ?. ನೀನು ಒಂದು ತರಹ ಸಾಗರ ಇದ್ದ ಹಾಗೆ ಗೊತ್ತಾ ಎಂದು ಮಸ್ಕ ಹೊಡೆದೆ. ಅಂದ್ರೆ ನಾನು ಉಪ್ಪು ನೀರು, ನೀವು ಸಿಹಿ ನೀರಾ.....? ಎಂದು ಮತ್ತಷ್ಟು ಕೋಪಿಸಿಕೊಂಡಳು.

ಕಡೆಗೆ ನಾನೇ ಏನಾದರೂ ತಿಂಡಿ ಮಾಡುತ್ತೇನೆ ಎಂದು ಅಡಿಗೆ ಮನೆ ಎಂಬ ಗುಹೆಯೊಳಗೆ ಎಡಗಾಲಿಟ್ಟೆ. ಲೇ ಅವಲಕ್ಕಿ ಎಲ್ಲೇ? ಎಂದು ಕೂಗಿ ಕೇಳಿದೆ, ಏನು ಉತ್ತರ ಬರಲಿಲ್ಲ. ಕಡೆಗೆ ನಾನೇ ಹುಡುಕಲು ಶುರು ಮಾಡಿದೆ. ಅದೇನೋ ನಮ್ಮ ಗಂಗಾವತಿ ಬೀಚಿ ಎಂದೆ ಪ್ರಸಿದ್ದಿಯಾದ ಶ್ರೀ ಪ್ರಾಣೇಶ್ ಹೇಳುತ್ತಾರಲ್ಲ "ಡಬ್ಬಿ ಮ್ಯಾಲೆ ಡಬ್ಬಿ... ಡಬ್ಬಿ ಮ್ಯಾಲೆ ಡಬ್ಬಿ" ಎಂದು, ಹಾಗೆ "ಡಬ್ಬಿ ಒಳಗೆ ಡಬ್ಬಿ...ಡಬ್ಬಿ ಒಳಗೆ ಡಬ್ಬಿ" ಹಾಗೆ ಇತ್ತು. ಇದನ್ನು ನೋಡಿದರೆ ನಮ್ಮ ಪ್ರಾಣೇಶ್ ಅವರು ಕೂಡ ಬ್ಯಾಲೆನ್ಸ್ ತಪ್ಪಿ ಬೀಳಬೇಕು ಅಷ್ಟು ಡಬ್ಬಿ ತೆಗೆದ ಮೇಲೆ ಚಿಕ್ಕ ಅವಲಕ್ಕಿ ಪ್ಯಾಕೆಟ್ ಸಿಕ್ಕಿತು. ಅದನ್ನು ನೋಡಿದರೆ ಅಭಿಮನ್ಯು ಚಕ್ರವ್ಯೂಹ ಇದ್ದ ಹಾಗೆ ಇತ್ತು.

ಚಿಕ್ಕವಾನಿದ್ದಾಗ ಕೂಡ ಹೀಗೆ ನಳ ಪಾಕ್ ಮಾಡುತ್ತಿದ್ದೆ. ಆಗ ಅಮ್ಮ ಎಷ್ಟು ಎಣ್ಣೆ ಹಾಕುತ್ತಿ ಎಂದು ಬೈಯುತ್ತಿದ್ದಳು.

ನಾನು "ಹೆಂಡತಿಯೊಬ್ಬಳು ಮನೆಯೊಳಗಿದ್ದರೆ ನನಗದೆ ಕೋಟಿ ರುಪಾಯಿ!" ಎಂದು ಹಾಡುತ್ತಾ, ಎಲ್ಲ ಸಾಮಾನುಗಳನ್ನು ಹುಡುಕುತ್ತಾ ಇದ್ದೆ. ನಿಜ ಅಲ್ವಾ ಹೊರಗಡೆ ಹೋದರೆ ಮಾಲ್, ಶಾಪಿಂಗ್ ಎಂದು ಎಲ್ಲ ದುಡ್ಡುನ್ನು ಖರ್ಚು ಮಾಡಿಬಿಡುತ್ತಾರೆ. ನಾನು ಹುಡುಕಿದಷ್ಟು ಯಾರಾದರೂ ಹುಡುಕಿದ್ದರೆ, ಕೊಲಂಬಸ್ ಹುಡುಕಿದ ಹಾಗೆ ಬೇರೆ ಒಂದು ದೇಶವನ್ನು ಹುಡುಕಬಹುದಿತ್ತು. ನಿಜ ಕಣ್ರೀ ಅದೇನೋ ಹೇಳುತ್ತಾರಲ್ಲ ಗಂಡಸರ ಜುಟ್ಟು ಜನಿವಾರ ಎಲ್ಲ ಹೆಂಗಸರ ಕೈಯಲ್ಲಿ ಎಂದು, ಅದು ನಿಜ ಅನ್ನಿಸಿತು. ಕಡೆಗೂ ಏನು ಸಿಗದೆ ಅವಲಕ್ಕಿಗೆ ಮೊಸರು ಹಾಕಿಕೊಂಡು ತಿಂದೆ. ಏನು ಸಾಹೇಬ್ರ ಪಾಕ ಹೇಗಿದೆ ನೋಡುವಾ? ಎಂದು ಬಂದು ನನ್ನನ್ನು ಹೀಯಾಳಿಸಿದಳು. ನೀನು ಮಾಡಿದ ಅವಲಕ್ಕಿ ತುಂಬಾ ಚೆನ್ನಾಗಿದೆ. ಸಕತ್.. ಮಸ್ತ..ಎಂದು ಇದೆ ಚಾನ್ಸ್ ಎಂದು ಅವಳನ್ನು ಮತ್ತಷ್ಟು ಮಸ್ಕ ಹೊಡೆದೆ. ಅದಕ್ಕೆ ಅವಳು ಅವಲಕ್ಕಿ ಅಂಗಡಿ ಇಂದ ತಂದಿದ್ದು ಅದಕ್ಕೆ ವಗ್ಗರಣೆ ಮತ್ತು ಏನು ಹಾಕಿರಲಿಲ್ಲ. ಅದು ನಾನು ಮಾಡಿದ ತಿಂಡಿನಾ? ಎಂದು ನಗುತ್ತಾ ಹುಬ್ಬು ಹಾರಿಸಿದಳು. ನಾನು ಒಂದು ಮುಗುಳ್ನಗೆ ಬೀರಿದೆ. ಸೂರ್ಯನ ಕಾಂತಿಗೆ ಸೂರ್ಯನೇ ಸಾಟಿ ಹೋಲಿಸಲಾರಿಲ್ಲ..,ನಿನ್ನೀ ಅಂದಕೆ ನೀನೇ ಸಾಟಿ ಬೇರೇ ಯಾರಿಲ್ಲ..ನಿನ್ನ ಹೋಲುವರಾರಿಲ್ಲ.. ಎಂದು ಹಾಡುತ್ತಾ ಅಡುಗೆ ಮನೆಯಿಂದ ಹೊರಗಡೆ ಬಂದೆ.

ಸಧ್ಯ ನನ್ನ ಪ್ರತಾಪ ಇಷ್ಟಕ್ಕೆ ಮುಗೀತು. ಇಲ್ಲ ಅಂದ್ರೆ ಒಂದು ದಿನ ನಳ - ಭೀಮ ಪಾಕ್ ದ ಹಾಗೆ ಗೋಪಾಲ್ ಪಾಕ್ ಕೂಡ ಇರುತಿತ್ತು (ಧಾರವಾಡದಲ್ಲಿ ಸಿಗುವ ಮೈಸೂರ್ ರಾಕ್ ಕ್ಷಮಿಸಿ ಮೈಸೂರ್ ಪಾಕ್ ಹಾಗೆ). ಅಡುಗೆ ಮನೆ ವ್ಯವಹಾರ ಎಲ್ಲ ಹೆಂಡತಿಗೆ ಸೈ ಎಂದು ಅನ್ನಿಸಿತು. ಭೀಮ ಮತ್ತು ನಳರನ್ನು ಬಿಟ್ಟು. ಭೀಮನಿಗೆ ಆವಾಗ, ಈವಾಗ ನನ್ನ ಹಾಗೆ ಬಾಯೀ ಆಡಿಸಲು ಏನಾದರೂ ಬೇಕು ಎಂದು ಅಡುಗೆ ಮನೆ ವ್ಯವಹಾರದಲ್ಲಿ ಕೈ ಹಾಕಿರಬಹುದು. ನಾನು ಕೂಡ ಆವಾಗ, ಈವಾಗ ಬಾಯೀ ಆಡಿಸುತ್ತಾನೆ ಇರುತ್ತೇನೆ. ಆದರೆ, ಎಲ್ಲವೂ ನನ್ನ ಮಡದಿಯ ಮಹಿಮೆ ಇಂದ ಮಾತ್ರ....:).

Friday, September 24, 2010

ಹಲ್ಲುಕಿರಿ (ಹಲಕಾ ರೀ...)....ಎಂಬ ಕಿರಿ ಕಿರಿ

ಬೆಳಿಗ್ಗೆ ಬೇಗನೆ ಎದ್ದು, ಬಚ್ಚಲ ಮನೆಗೆ ಹಲ್ಲು ಉಜ್ಜಲು ಹೋದೆ. ನನಗಿಂತಲೂ ಬೇಗನೆ ಎದ್ದು ಚಿಕ್ಕ ಚಿಕ್ಕ ನೊರ್ಜಗಳು(ನೊಣಗಳು) ನನ್ನ ಟೂತ್ ಬ್ರಶ್ ನಿಂದ ಹಲ್ಲು ಉಜ್ಜುತ್ತಿದ್ದವು. ಈ ನೊರ್ಜಗಳಿಗೆ ನನ್ನ ಬ್ರಶ್ ಅಂದರೆ ಎಷ್ಟು ಪ್ರೀತಿ. ನನ್ನ ಬ್ರಶ್ ಬಳೀನೆ ಇಟ್ಟಿರುವ ನನ್ನ ಮಗನ ಮತ್ತು ಮಡದಿಯ ಬ್ರಶ್ ಬಿಟ್ಟು ನನ್ನ ಬ್ರಶ್ ಮೇಲೆ ಯಾಕೆ? ಕಣ್ಣು ಎಂದು ಮನಸಿನಲ್ಲೇ ಬೈದು ಬ್ರಶ್ ತೊಳೆದು ಹಲ್ಲು ಉಜ್ಜಿ ಬಂದೆ. ನನ್ನ ಮಡದಿ ಆಗಲೇ ಎದ್ದು ಸ್ನಾನ ಮುಗಿಸಿ ಶ್ರೀರಾಮ ರಕ್ಷಾ ಹೇಳುತ್ತಿದ್ದಳು. ನಾನೇ ಹೋಗಿ ಕಾಫೀ ಮಾಡಲು ಇಟ್ಟು ಪಡಸಾಲೆಗೆ ಬಂದು ಕುಳಿತೆ. ಅಷ್ಟರಲ್ಲಿ ನನ್ನ ಮಡದಿ ತನ್ನ ಎಲ್ಲ ಮಂತ್ರಗಳನ್ನು ಮುಗಿಸಿ ಬಂದು ನನಗೆ ಮಂಗಳಾರತಿ ಮಾಡಲು ಶುರು ಮಾಡಿದಳು. ರೀ ನೀವು ಹಲ್ಲು ಉಜ್ಜಿದ ಮೇಲೆ ಬ್ರಶ್ ಚೆನ್ನಾಗಿ ತೊಳೆಯುವದು ತಾನೇ ಹಾಗೆ ಸ್ವಲ್ಪ ಪೇಸ್ಟ್ ಇರುತ್ತೆ. ನೋಡಿ ಅದರಿಂದ ಎಷ್ಟು ನೊರ್ಜ ಬಂದು ಕೂಡುತ್ತವೆ, ನಿಮ್ಮ ಬ್ರಶ್ ಮೇಲೆ ಎಂದು ನನಗೆ ಬೈದಳು. ಅವಳಿಗೆ ಕೀಟಲೆ ಮಾಡಲೆಂದು, ಲೇ ನಾನು ಒಬ್ಬನೇ ಬ್ರಶ್ ಮಾಡಿದರೆ ಹೇಗೆ, ಪಾಪsss ಅವುಗಳು ನನ್ನ ಬ್ರಶ್ ನಿಂದ ಹಲ್ಲು ಉಜ್ಜಲಿ ಬಿಡು. ಎಲ್ಲರೂ ಶುಚಿಯಾಗಿ ಇದ್ದರೆ ತಾನೇ ಒಳ್ಳೆಯ ವಾತಾವರಣ ಸೃಷ್ಟಿ ಆಗುವದು. ಅವುಗಳು ಪೇಸ್ಟ್ ಎಲ್ಲಿಂದ ತರಬೇಕು ನನ್ನ ಅತ್ತೆ ಮನೆಯಿಂದನಾ? ಎಂದೆ. ಇಲ್ಲ ನನ್ನ ಮಾವನ ಮನೆಯಿಂದ ಎಂದು ಹುಸಿ ಕೋಪದಿಂದ ಅಂದಳು. ನೀವು ಹೀಗೆ ಮಾಡುತ್ತಾ ಇದ್ದರೆ ಒಳ್ಳೆಯ ವಾತಾವರಣ ಸೃಷ್ಟಿ ಆಗುವದಿಲ್ಲ ನಾಥಾವರಣ ಸೃಷ್ಟಿ ಆಗುತ್ತೆ ಎಂದಳು. ಏನೋ? ನಿನ್ನೆ ಆಫೀಸ್ ಹೋಗುವ ಆವಸರದಲ್ಲಿ ಹೀಗೆ ಆಯಿತು ನಾನೇನು ಬೇಕು ಅಂತ ಮಾಡುತ್ತೇನಾ? ಎಂದು ಅವಳಿಗೆ ಸಮಾಧಾನ ಮಾಡಿ ಕಾಫೀ ತೆಗೆದುಕೊಂಡು ಹೀರುತ್ತ ಕುಳಿತೆ.
ಹೇಗಿದ್ದರು ಪಕ್ಕದ ಮನೆ ಪೂಜ ಏಳುವದು ಲೇಟ್ ಎಂದು ನನಗೆ ಗೊತ್ತು. ಕಾಫೀ ಆದ ಮೇಲೆ ಪಕ್ಕದ ಮನೆ ಪೂಜ ತರಿಸುವ ಪೇಪರ್ ಬೇಗನೆ ಎದ್ದ ನಾನು ಹಾಗೆ ನೋಡಿ ಮತ್ತೆ ಅದೇ ಜಾಗದಲ್ಲಿ ಇಟ್ಟು ಬಂದು ಬಿಡುತ್ತಿದ್ದೆ. ಆದರೆ ಇವತ್ತು ಏನೋ ಗ್ರಹಚಾರ ಕೆಟ್ಟಿತ್ತು. ಪೇಪರ್ ತೆಗುದು ಕೊಂಡೆ, ಅಷ್ಟರಲ್ಲೇ ಪೂಜ ಬಾಗಿಲು ತೆಗೆದು ಬಿಟ್ಟಳು. ನಾನು ಪೇಪರ್ ಅವಳಿಗೆ ಕೊಟ್ಟು ಹಾಗೆ ಹಲ್ಲು ಕಿರಿದೆ. ಹಲ್ಲು ಕಿರಿದಿದ್ದು ನಾನೇ ಆದರೂ ಹಾವಿನಂತೆ ಬುಸುಗುಟ್ಟಿದ್ದು ಅವಳು.
ನನಗೆ ಕೋಪ ಬಂದಿತ್ತು. ಅವಳು ಬುಸುಗುಟ್ಟಿದ್ದಕ್ಕೆ ಅಲ್ಲವೇ ಅಲ್ಲ. ಅವಳು ಬುಸುಗುಟ್ಟಿದನ್ನು ನನ್ನ ಮಡದಿ ನೋಡಿದ್ದಕ್ಕೆ. ಈಗ ನಗುವ ಸರದಿ ನನ್ನ ಮಡದಿಯದು, ನಾನು ಎಷ್ಟು ಬಾರಿ ಹೇಳಿಲ್ಲ ಅವಳ ಪೇಪರ್ ನೋಡ ಬೇಡಿ ಎಂದು. ಮನೆಗೆ ಪೇಪರ್ ಹಾಕಿಸ ಬರದೇ ಎಂದು ಅಂದಳು. ಅದಕ್ಕೆ ವೇದಾಂತಿಯ ಹಾಗೆ ಅದಕ್ಕೆ ಹೇಳೋದು "ಪ್ರಥಮ ಚುಂಬನಮ್ ದಂತ ಭಗ್ನಮ್" ಎಂದು ಅಂದಳು. ಎಷ್ಟು ಚೆನ್ನಾಗಿ ನನ್ನ ಅರ್ಥ ಮಾಡಿಕೊಂಡಿದ್ದೀಯೆ ನನ್ನ ರಾಣಿ ಎಂದು ಗಹ ಗಹಿಸಿ ನಗಹತ್ತಿದೆ. ಅವಳಿಗೆ ಅರ್ಥ ಆಗಲಿಲ್ಲ. ಏನು ನಗುತ್ತೀರಾ?. ನಿಮ್ಮ ಹಳದಿ ಹಲ್ಲು ಕಾಣಿಸುತ್ತಾ ಇವೆ ನೋಡಿ ಎಂದಳು. ನಗಬೇಕಮ್ಮ ನಗಬೇಕು ಎಲ್ಲರ ನಗಿಸುತ ನಗಬೇಕು ....ಇದೆ ತಾನೇ ಜೀವನ. ನಗೋಕೆ ಬೇಕಾಗಿಲ್ಲ ನಗ-ನಾಣ್ಯ. ನಗದ ಮನುಷ್ಯನಿಗೆ ಏನೋ ದೊಡ್ಡ ಕಾಯಿಲೆ ಇದ್ದ ಹಾಗೆ ಗೊತ್ತಾ ಎಂದು ಹೇಳಿದೆ. ಡಾ ರಾಜ‍ಕುಮಾರ್ ಅವರ ಹಾಡು ಕೇಳಿಲ್ಲವಾ "ನಗು ನಗುತಾ ನಲಿ ನಲಿ" ಎಂದು.ಮತ್ತೆ ಡಿ.ವಿ.ಜಿ ಅವರು ಹೇಳಿಲ್ಲವೇ

ನಗುವು ಸಹಜದ ಧರ್ಮ; ನಗಿಸುವುದು ಪರಧರ್ಮ ।
ನಗುವ ಕೇಳುತ ನಗುವುದತಿಶಯದ ಧರ್ಮ ।।
ನಗುವ ನಗಿಸುವ ನಗಿಸಿ ನಗುತ ಬಾಳುವ ವರವ ।
ಮಿಗೆ ನೀನು ಬೇಡಿಕೊಳೊ – ಮಂಕುತಿಮ್ಮ ।।

ನಾನು ಹಲ್ಲು ಕಿರಿದರು ಕೆಲ ಜನ ಅಪಾರ್ಥ ಮಾಡಿ ಕೊಳ್ಳುತ್ತಾರೆ. ನಾನು ಧಾರವಾಡದಲ್ಲಿ ಇರುವಾಗ ಹಾಗೆ ನಗುತ್ತಾ ದಾರಿಯಲ್ಲಿ ಬರುತ್ತಿದ್ದೆ. ಆಗ ಪಕ್ಕದ ಬೀದಿಯ ಸುನೀತ ನನ್ನನ್ನೇ ನೋಡಿ ನಗುತ್ತಿದ್ದಾನೆ ಎಂದು ಭಾವಿಸಿ, ಅವರ ಅಪ್ಪನನ್ನು ಕರೆದು "ನೋಡು ಅಪ್ಪ ಆ ಹುಡುಗ ನನ್ನ ನೋಡಿ ಹಲ್ಲು ಕಿರಿಯುತ್ತಿದ್ದಾನೆ" ಎಂದು ಹೇಳಿದ್ದಳು. "ಏನೋsss ಹಲಕಾ ನನ್ನ ಮಗಳ ನೋಡಿ ಹಲ್ಲು ಕಿರಿತಿ" ಎಂದು ಬೈದು ಬಿಟ್ಟಿದ್ದ. ಹಲ್ಲು ಕಿರಿದು ಹಲಕಾ ಎಂದು ಬೈಸಿ ಕೊಂಡುವನು ನಾನೇ ಮೊದಲನೆಯವನು. ಏನು ನಿಮ್ಮ ಮಗಳು ಏನು ಪ್ರಾಣಿ ಸಂಗ್ರಹಾಲಯದಲ್ಲಿ ಇರುವ ಮಂಗವೊ ಎಂದು ಕೇಳಬೇಕೆಂದು ಕೊಂಡರು ಕೇಳಲಿಲ್ಲ. ಮುಂದೆ ಕೆಲ ದಿನಗಳ ನಂತರ ಬ್ಯಾಡರ ಒಣಿ ಉಡಾಳ್ ರಾಜಾ ಜೊತೆ ಅಲ್ಲೇ, ಇಲ್ಲೇ ಹಲ್ಲು ಕಿರೀತಾ ತಿರುಗುತ್ತಾ ಇದ್ದಳು ಸುನೀತ.
ಪಾರ್ಕ್ ನಲ್ಲಿ ಕೆಲವರು ಮುಂಜಾನೆ ಎದ್ದ ಕೂಡಲೇ ಹ್ಹ ಹ್ಹ ಹ್ಹ ಎಂದು ನಗುವ ವ್ಯಾಯಾಮ ಮಾಡುತ್ತಾರೆ.ಆದರೆ ಉಳಿದ ಸಮಯದಲ್ಲಿ ಮಾತ್ರ ಮುಖ ಸಿಂಡರಿಸಿಕೊಂಡೆ "ಆನೆ ದಂತ ತೋರಿಸೋಕೆ ಬೇರೆ , ತಿನ್ನೋಕೆ ಬೇರೆ" ತರಹ ಇರುತ್ತಾರೆ. ಅದನ್ನು ನೋಡಿ ನಮ್ಮ ಬೀದಿ ನಾಯಿ ಓsss....ಎಂದು ತಾನು ನಗುತ್ತದೆ ಕ್ಷಮಿಸಿ ಅಳುತ್ತದೆ.

ನಿಮಗೆ ಕೆಲಸದಲ್ಲಿ ಸೀರೀಯಸ್ ನೆಸ್ ಸ್ವಲ್ಪಾನೂ ಇಲ್ಲ ಎಂದು ನಾನು ಹಳೆಯ ಕಂಪನೀಯ ಬಾಸ್ ಬಳಿ ಬೈಸಿಕೊಂಡಿದ್ದು ಎಷ್ಟು ಬಾರಿ ನನಗೆ ಲೆಕ್ಕವಿಲ್ಲ. ಸೀರೀಯಸ್ ಆಗಿ ಕೆಲಸ ಮಾಡಿದರೆ ಪರಿಣಾಮ ಚೆನ್ನಾಗಿ ಇರುತ್ತೆ ಎನ್ನುವ ನಂಬಿಕೆ ನನಗೆ ಇಲ್ಲ. ಅದು ನಮ್ಮ ಬಾಸ್ ಹೇಗೆ ತಿಳೀಬೇಕು. ಗೂಬೆ ಮುಂಡೇದು ಯಾವತ್ತೂ ಮುಖ ಸಿಂಡರಿಸಿಕೊಂಡೆ ಇರುತಿತ್ತು ಎಂದೆ. ನನ್ನ ಹಳೆಯ ಪೂರಾಣವನ್ನು ಕೇಳಿ ಒಂದು ಮುಗುಳ್ನಗೆ ಬೀರಿ ಅಡುಗೆ ಮನೆಗೆ ಹೊರಟು ಹೋದಳು ನನ್ನ ಮಡದಿ.

ಲೇ ಇವತ್ತು ಡ್ರಮ್ ಸ್ಟಿಕ್ ಹಾಕಿ ಸಾಂಬಾರ್ ಮಾಡೇ ಎಂದೆ. ಡ್ರಮ್ ಹಾಕಿ ಚಿಕ್ಕ ಪಾತ್ರೆಲಿ ಸಾಂಬಾರ್ ಮಾಡೋಕೆ ಬರಲ್ಲ. ಬೇಕಾದರೆ ನೀರು ಕಾಯಿಸಲು ಇಟ್ಟ ಸ್ಟಿಕ್ ಹಾಕಿ ಮಾಡುತ್ತೇನೆ ಎಂದು ತರಲೆ ಮಾತು ಆಡಿದಳು.ಅದು ಬೇರೆ ನಿಮಗೆ ಸಾಂಬಾರ್ ನಾಳೆ ಬಿಸಿ ಬೇಳೆ ಬಾತ್ ಮಾಡೋಕ್ಕೆ ಬೇಕಾಗುತ್ತೆ ಎಂದಳು.

ಲೇ ಸ್ವಲ್ಪ ಬಿಸಿಲು ಕಾಯಿಸೋಕೆ ಹೋಗುತ್ತೇನೆ ಎಂದೆ. ಬಿಸಿಲು ನೀವೇನೂ ಕಾಯಿಸೋದು ಮೊದಲು ನೀರು ಕಾಯಿಸಿ ಎಂದಳು. ಅವಳು ಹೇಳಿದ ಮಾತು ಕೇಳಿ ನನ್ನ ಗೆಳೆಯ ಹೇಳುವ " ಆಜ್ ಧೂಪ್ ಖಾನಾ ಹೈ" ಎಂಬ ಮಾತು ನೆನಪು ಆಯಿತು. ಅವನು ಬಿಸಿಲು ಹೇಗೆ ತಿನ್ನುತ್ತಾನೆ ಎಂದು.

Tuesday, September 21, 2010

ಸ್ಪೆಶಲ್ ತಿಂಡಿ....

ನಮ್ಮ ನಾಟಿ ವೈದ್ಯರ ಕೃಪಾ ಕಟಾಕ್ಷ(ಏಳು ಬಣ್ಣ ಸೇರಿ ಬಿಳಿ ಬಣ್ಣವಾಯಿತು....), ಕ್ಷಮಿಸಿ ಕಾಟದಿಂದ ನನ್ನ ಇದ್ದ ಎಲ್ಲ ಬಿಳಿ ಕೂದಲುಗಳು ಉದುರಿ ಬರಿ ಕರಿ ಕೂದಲುಗಳು ಉಳಿದಿದ್ದವು. ಇದ್ದ ಕರಿ ಕೂದಲುಗಳು ತುಂಬಾ ದೂರ ದೂರ ಗುಂಪು ಗುಂ‌ಪಾಗಿ ಇದ್ದವು. ಕೆಲವರು ನನ್ನನ್ನು ಅರ್ಚಕ ಎಂದು ತಿಳಿದು ಕೇಳಿದ್ದು ಉಂಟು. ಮತ್ತೆ ಕೆಲವರು ಏನಪ್ಪಾ ಈಗ ಮುಂಜಿವೆ ಆಯಿತಾ ಮದುವೆ ಆದ ಮೇಲೆ ಎಂದು ನನ್ನ ಕೆಲ ಮಿತ್ರರು ಅಪಹಾಸ್ಯ ಮಾಡಿದ್ದು ಉಂಟು. ಸಧ್ಯ ಯಾರು ಈಗ ಜವಳ ಆಯಿತಾ ಎಂದು ಕೇಳಲಿಲ್ಲ. ಇದರಿಂದ ಮುಕ್ತಿ ಪಡೆಯುವ ಸಲುವಾಗಿ ಇದ್ದ ಕರಿ ಕೂದಲುಗಳನ್ನು ಉದ್ದವಾಗಿ ಬೆಳಸಿ, ಅದರಿಂದ ನನ್ನ ತಲೆಯಲ್ಲಿ ಇದ್ದ ಖಾಲಿ ಜಾಗಗಳನ್ನೂ ತುಂಬಿದ್ದೆ. ನಿಮಗೆ ಗೊತ್ತೇ ಇದೆ, ಬೆಂಗಳೂರಿನಲ್ಲಿ ಖಾಲಿ ಜಾಗ ಇದ್ದರೆ ತೊಂದರೆ ಏನು ಎಂದು(ಯಾರಾದರೂ ಸೈಟ್ ಮಾಡಿ ಮಾರಿದರೆ ಕಷ್ಟ ಎಂದು:)). ನನಗೆ ಖುಷಿಯೋ ಖುಷಿ ನನ್ನ ತಲೆಯಲ್ಲ ಕರಿ ಕೂದಲು ಎಂದು. ಆದರೆ ಗಡ್ಡ ಮತ್ತು ಮೀಸೆ ಮಾತ್ರ ಬಿಳಿ ಬಿಳಿಯಾಗೆ ಇದ್ದವು. ಅವುಗಳಿಗೂ ಮುಕ್ತಿ ಕೊಡಬೇಕು ಎಂದು, ಆ ನಾಟಿ ವೈದ್ಯರ ಔಷಧಿ ಹಚ್ಚಿ ಮಲಗಿದೆ. ಅವು ಹೋದರೆ ತುಂಬಾ ಚೆನ್ನಾಗಿ ಕಾಣುತ್ತೇನೆ ಎಂದು ಯೋಚಿಸಿದೆ. ರಾತ್ರಿಯೆಲ್ಲ ತಿಂಡಿ(ಕೆರೆತ) ಶುರು ಆಗಿತ್ತು. ಮರುದಿನ ಬೆಳಿಗ್ಗೆ ಶೆವಿಂಗ್ ಮತ್ತು ಸ್ನಾನ ಮುಗಿಸಿ ಬಂದಾಗ ಮುಖವೆಲ್ಲ ಕೆಂಪು ಕೆಂಪು. ರಾತ್ರಿಯೆಲ್ಲ ತಿಂಡಿ ಬಿಟ್ಟಿತ್ತು. ನನ್ನ ಮಡದಿ ಅದನ್ನು ನೋಡಿ, ರೀ ಇದೇನು ಮುಖ ಎಂದಳು. ಏನು ಇಲ್ಲ, ದಾಡಿ ಮಾಡಿಕೊಂಡಿದ್ದೇನೆ ಎಂದು ಸುಳ್ಳು ಹೇಳಿದೆ. ಏನು? ಈಳಿಗೆ ತೆಗೆದು ಕೊಂಡು ದಾಡಿ ಮಾಡಿಕೊಂಡಿರಾ ಎಂದು ಅಪಹಾಸ್ಯ ಮಾಡಿದಳು. ಕಡೆಗೆ ಸುಮ್ಮನಿರಲಾರದೇ ಆ ನಾಟಿ ವೈದ್ಯರ ಔಷಧಿ ಹಚ್ಚಿ ಕೊಂಡೆ ಎಂದು ಸತ್ಯ ನುಡಿದೆ. ರೀ ನೀವು ನಿಮ್ಮ ಜನ್ಮದಲ್ಲೂ ಆ ಔಷಧಿ ಮುಟ್ಟುವದಿಲ್ಲ ಎಂದು ಹೇಳಿದ್ದರಿಂದ ನಾನು ಅದನ್ನು ಖಾಲಿ ಮಾಡಿ, ಅದರಲ್ಲಿ ಶಾಂತಮ್ಮ ಕೊಟ್ಟ ಬೆಳ್ಳಿ ಪಾತ್ರೆ ತೊಳೆಯೋ ಲಿಕ್ವಿಡ್ ಹಾಕಿ ಇಟ್ಟಿದ್ದೆ ಎಂದಳು. ಸರಿ ಹೋಯಿತು ಬಿಡು ಎಂದು ನನ್ನ ತಲೆ ನಾನೇ ಜಜ್ಜಿಕೊಂಡೆ.

ಕಡೆಗೆ ಏನಾದರೂ ಸ್ಪೆಶಲ್ ತಿಂಡಿ ಮಾಡೇsss ಎಂದು ನನ್ನ ಮಡದಿಗೆ ಹೇಳಿದೆ. ನೀವು ಆಗಲೇ ಮಾಡಿ ಮುಗಿಸಿದ್ದೀರ ಎಂದು ಕೀಟಲೆ ಮಾತು ಆಡಿದಳು. ನೀವು ಈಗ ಹೇಳಿದರೆ ಹೇಗೆ?. ಮೊದಲೇ ಹೇಳಬೇಕು ಏನಾದರೂ ಮಾಡುತ್ತಿದ್ದೆ ಎಂದಳು. ಉಪ್ಪಿಟ್ಟು ರೆಡಿ ಮಾಡಿ ಆಗಿದೆ ತಿನ್ನಿ ಎಂದಳು. ಈ ಭಾನುವಾರ ಕೂಡ ಉಪ್ಪಿಟ್ಟು ಎಂದು ಮುಖ ಕಿಚಾಯಿಸಿದೆ. ಏನಾದರೂ ಹೊಟೆಲ್ ನಿಂದ ತರುತ್ತೇನೆ ಎಂದು ಹೇಳಿದೆ. ನನ್ನ ಮಡದಿಗೆ ಹೊಟೆಲ್ ಎಂಬ ಶಬ್ದ ಕೇಳಿ ತುಂಬಾ ಕೋಪ ಬಂದಿತ್ತು. ನೋಡಿ ಪಕ್ಕದ ಮನೆ ಪೂಜ ದಿನಾಲೂ ತಾನೇ ಮಾಡಿಕೊಂಡು ತಿನ್ನುತ್ತಾಳೆ ಹೊಟೇಲಿಗೆ ಹೋಗಿರೋದೇ ನೋಡಿಲ್ಲ ಎಂದಳು. ನನಗೆ ಕೂಡ ಹೊಟೆಲ್ ಹೋಗುವ ಇಷ್ಟ ಇಲ್ಲ, ಆದರೆ ಪೂಜ ತಾನು ಮಾಡಿದ ತಿಂಡಿ ನನಗೆ ಕೊಡಬೇಕಲ್ಲ ಎಂದೆ. ಇದು ಒಂದು ಬಾಕಿ ಇತ್ತು ಎಂದು, ನನ್ನ ಮಡದಿ ಕೋಪದಿಂದ ಅಡುಗೆ ಮನೆಗೆ ಹೊರಟು ಹೋದಳು.

ಅವಳನ್ನು ರಮಿಸಲು ಅಡುಗೆ ಮನೆಗೆ ಹೋದೆ. ಹೆಂಡತಿ ತನ್ನ ಓಘ ಬದಲಿಸಿ ಕೋಪದಿಂದ ಅಂದಳು .

ಮದುವೆ ಆಗಿ ಆಯಿತು ಐದು ವರ್ಷ
ಇನ್ನೂ ಕಾಣಲಿಲ್ಲ ಹೊಸ ಮನೆ ಹರ್ಷ

ನಾನು ಕೇಳುದ್ದು ಬರಿ ತಿಂಡಿ ಮಾತ್ರ ಎಂದು ಅವಳನ್ನು ಒಲಿಸುವ ಸಲುವಾಗಿ ಅಂದೆ...

ನನ್ನ ಹೃದಯ ಅರಮನೆ ಬೇಡವಾಗೀತೆ ಚಿನ್ನ
ಅದರಲ್ಲಿ ಇಟ್ಟು ಆರಾಧಿಸುವೆ ಅನುದಿನವೂ ನಿನ್ನ

ಚಿನ್ನ.. ರನ್ನ.. ಎಂದು ಮಸ್ಕಾ ಹೊಡೆದಿದ್ದು ಸಾಕು. ನಾನು ಹೋಗಿ ಏನಾದರೂ ತಿಂಡಿ ಮಾಡಿ ತರುತ್ತೇನೆ ಎಂದು ಅಡುಗೆ ಮನೆಗೆ ಹೊರಟು ಹೋದಳು. ನಾನು ಠೀವಿ ಇಂದ ಹೊರಬಂದು ಟಿ.ವಿ. ರಿಮೋಟ್ ತಿವಿದೆ. ಕೆಲ ಸಮಯದ ನಂತರ ನನಗೆ ಎಂದು ನನ್ನ ಮಡದಿ ಬಿಸಿ ಬೇಳೆ ಬಾತ್ ಮಾಡಿ ತಂದಳು. ತುಂಬಾ ಚೆನ್ನಾಗಿ ಇತ್ತು. ನನ್ನ ಹೆಂಡತಿಗೆ ಕೇಳಿದೆ ಇಷ್ಟು ಬೇಗ ತುಂಬಾ ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಹೋಗಳಿದೆ. ನನ್ನ ಮಡದಿ ಹಿರಿ ಹಿರಿ ಹಿಗ್ಗಿದ್ದಳು. ಅವಳನ್ನು ಇಂಪ್ರೆಸ್ ಮಾಡುವ ಸಲುವಾಗಿ ನಾನೇ ನೆಲವನ್ನು ಕ್ಲೀನ್ ಮಾಡಿದೆ. ಅಷ್ಟರಲ್ಲಿ ನನ್ನ ಮಡದಿ ನೀವು ಹೀಗೆ ಕ್ಲೀನ್ ಮಾಡಿದರೆ ನಾನು ಆ ತುದಿಗೆ ಹೋಗಬೇಕೆಂದರೆ ಒಂದು ದೋಣಿ ಬೇಕಾಗುತ್ತೆ ಎಂದು ತಮಾಷೆ ಮಾಡಿದಳು. ಏಕೆಂದರೆ ನಾನು ಅಷ್ಟು ನೀರು ಹಾಕಿ ಒರೆಸಿದ್ದೆ.

ಆಗ ನನ್ನ ಮಡದಿ ರೀssss... ಎಂದು ರಾಗ ಎಳೆಯ ತೊಡಗಿದಳು. ಏನು? ಎಂದಾಗ. ಶೆಟ್ಟರ ಅಂಗಡೀಲಿ ಒಂದು ಹೊಸ ಸೀರೆ ಬಂದಿದೆ. ನನಗೆ ಕೊಡಿಸಿ ಎಂದು ಹಟ ಹಿಡಿದಳು. ಆಯಿತು ನೀನು ಇಷ್ಟು ಚೆನ್ನಾಗಿರೋ ತಿಂಡಿ ಮಾಡಿದ್ದೀಯ ಎಂದು ಸಂಜೆಗೆ ಅವಳಿಗೆ ಸೀರೆ ಕೊಡಿಸಿಕೊಂಡು ಬರುವ ದಾರಿಯಲ್ಲಿ ಗೋಪಾಲನ್ ಮಾಲ್ ನೋಡಿದಳು. ರೀ ಗೋಪಾಲನ್ ಮಾಲ್ ಗೆ ಹೋಗೋಣ ಎಂದಳು. ಅದನ್ನು ಕೇಳಿ ನನ್ನ ಮಗ ಜೋರಾಗಿ ನಗಹತ್ತಿದ. ಅವನ ನಗು ನೋಡಿ ನಾವು ಕೂಡ ನಕ್ಕೆವು. ಕಡೆಗೆ ಗೋಪಾಲನ್ ಮಾಲ್ ಗೆ ಕರೆದು ಕೊಂಡು ಹೋಗಿ ಈ ಗೋಪಾಲನ ಕಿಸಿಯಲ್ಲಿರುವ ೧೦೦೦ ಮಾಲ್(ರೂ.) ಖಾಲಿ ಮಾಡಿ ಮನೆಗೆ ಬಂದೆವು.

ಅನಂತರ ಮನೆಗೆ ಬಂದ ಮೇಲೆ ನಿಮಗೆ ಒಂದು ವಿಷಯ ಗೊತ್ತಾ?. ನಾನು ಬೆಳಿಗ್ಗೆ, ನಿನ್ನೆ ಉಳಿದಿರೋ ಸಾರು,ಪಲ್ಯ ಮತ್ತು ಅನ್ನ ಹಾಕಿ ಬಿಸಿ ಬೇಳೆ ಬಾತ್ ಮಾಡಿದ್ದು ಎಂದಳು. ಹೇಗಿದೆ ನನ್ನ ಸ್ಪೆಶಲ್ ತಿಂಡಿ ಎಂದು ಹುಬ್ಬು ಹಾರಿಸಿದಳು.

ನಾನು ಫ್ರಿಡ್ಜ್ ಕಂಡು ಹಿಡಿದ ಮಹಾಶಯನಿಗೆ ಹಿಡಿ ಶಾಪ ಹಾಕಿದೆ. ಆದರೂ ಮಡದಿ ಮಾಡಿದ ಹೊಸ ರುಚಿ ಬಿಸಿ ಬೇಳೆ ಬಾತ್ ಚೆನ್ನಾಗೆ ಇತ್ತು. ಆದರೆ ಎರಡೆರಡು ಸ್ಪೆಶಲ್ ತಿಂಡಿ ತಿಂದ ನನಗೆ ಅವಳು ಮಾಡಿದ ಬಿಸಿ ಬೇಳೆ ಬಾತ್ ತಿನ್ನುವಾಗ ಮಾತ್ರ ಕಪಾಳ ಮತ್ತು ಗದ್ದ ಉರಿಯುತಿತ್ತು.

Thursday, September 2, 2010

ನನಗೆ ಮದಿರೆ ಬೇಡ ಸ್ವಾಮಿ....

ಶ್ಯಾಮ್ ಮೊದಲು ತುಂಬಾ ಹುಂಬನಂತೆ ವರ್ತಿಸುತ್ತಿದ್ದ. ಮದುವೆ ಆದ ಮೇಲೆ ತುಂಬಾ ಸುಧಾರಿಸಿದ್ದಾನೆ. ಒಂದು ದಿನ ಶ್ಯಾಮ್ ಹೆಂಡತಿ ಊರಲ್ಲಿ ಇರಲಿಲ್ಲ. ಹೀಗಾಗಿ ನನಗೆ ಮತ್ತು ಮಂಜನಿಗೆ ವಿಶೇಷ ಆಹ್ವಾನ ಇತ್ತು. ಇಬ್ಬರು ಸೇರಿ ಬಾಡಿಗೆ ೯೦ ಎಣ್ಣೆ ಹಾಕಿಸಿ ಹೊರಟೆವು. ನಮ್ಮ ಬಾಡಿಗೆ ಅಲ್ಲ... ಅದು ಬೈಕ್ ಬಾಡಿಗೆ....:). ನಮ್ಮ ಬಾಡಿಗೆ ಶ್ಯಾಮ್ ಮನೇಲಿ ವಿಶೇಷ ವ್ಯವಸ್ಥೆ ಇತ್ತು. ಮೊದಲನೆ ಬಾರಿ ಶ್ಯಾಮ್ ತನ್ನ ಹೆಂಡತಿನ ಬೇರೆ ಊರಿಗೆ ಮದುವೆಗೆ ಕಳುಹಿಸಿದ್ದ. ಅವಳಷ್ಟೇ ಅವನು ಅವಳನ್ನು ತುಂಬಾ ಪ್ರೀತಿಸುತ್ತಿದ್ದ. ಅವಳ ಜೊತೆ ಇದ್ದಾಗ ಎಂದು ಕುಡಿದಿಲ್ಲ. ಅದಕ್ಕೆ ಕಾರಣ ಅವಳ ಮೇಲಿನ ಪ್ರೀತಿಯಿಂದ.

ಶ್ಯಾಮ್ ಮನೆಗೆ ಬಂದೆವು. ಶ್ಯಾಮ ತುಂಬಾ ಚೆನ್ನಾಗಿ ವ್ಯವಸ್ಥೆ ಮಾಡಿದ್ದ. ಕೆಲ ಹನಿ ಹೊಟ್ಟೆಗೆ ಇಳಿದ ಮೇಲೆ, ನಮ್ಮ ಮಂಜಿನ ಹನಿಗಳು (ಮಂಜನ ಮಾತುಗಳು) ಶುರು ಆದವು. ಮಂಜ ಎಡಬಿಡದೆ ಮಾತನಾಡುತ್ತಿದ್ದ.ಮಂಜನ ಸರದಿ ಮುಗಿದ ಮೇಲೆ,ಶ್ಯಾಮ್ ತನ್ನ ಹೆಣ್ಣು ನೋಡುವ ಶಾಸ್ತ್ರದ ಬಗ್ಗೆ ಹೇಳಹತ್ತಿದ.

ಮೊದಲು ನಾನು ನೋಡ ಹೋಗಿದ್ದು ರಾಜೇಶ್ವರಿ ಎನ್ನುವ ದಾವಣಗೆರೆ ಹುಡಿಗಿನ. ಅವಳು ತುಂಬಾ ಸುಂದರವಾಗಿದ್ದಳು ಎಂದ. ನಿಜವಾಗಿಯೂ ಕನಸಿನ ರಾಣಿ ಎಂದ. ಯಾರ ಕನಸಿನ ನಿನ್ನದಾ ಅಥವಾ? ಬೇರೆಯವರ ಕನಸಿನ ರಾಣಿನ? ಎಂದ ಮಂಜ. ಮತ್ತೆ ಏಕೆ? ಮದುವೆ ಆಗಲಿಲ್ಲ ಎಂದು ಕೇಳಿದ. ನನ್ನ ಅಪ್ಪ ಅವಳಿಗೆ ಹಾಡು ಹೇಳಲು ಹೇಳಿದರು ಅವಳು ತುಂಬಾ ಚೆನ್ನಾಗಿ ಹಾಡಿದಳು. ಅವಳ ಸರದಿ ಆದ ಮೇಲೆ ನಾನು ಒಂದು ಹಾಡು ಹೇಳುತ್ತೇನೆ ಎಂದು ಹಾಡು ಹೇಳಿದೆ ಅಷ್ಟೇ. ಅವಳು ನನ್ನನ್ನು ವರಿಸಲಿಲ್ಲ ಎಂದ.
ಮಂದೆ ಶಾಂಭವಿ ಎನ್ನುವ ಬೆಳಗಾವಿ ಹುಡುಗಿ ನೋಡಿದೆ. ಅವಳು ತುಂಬಾ ಚೆನ್ನಾಗಿ ಇದ್ದಳು ಎಂದ. ಅವಳು ಎಲ್ಲರಿಗೂ ನಮಸ್ಕಾರ ಮಾಡುತ್ತಾ, ನನಗು ಬಂದು ನಮಸ್ಕಾರ ಮಾಡುತ್ತಿದ್ದಾಗ, ನಾನು ನನಗೆ ಏಕೆ? ಎಂದು ಜಿಗಿದು ಸೋಫಾ ಮೇಲೆ ಕುಳಿತೆ ಅಷ್ಟೇ. ಅವಳು ನನ್ನನ್ನು ಒಪ್ಪಲಿಲ್ಲ ಎಂದ.

ಮುಂದೆ ಭಾರತಿ ನಮ್ಮ ಊರಿನ ಹುಡುಗಿನ ನೋಡಿದೆ. ಅವಳು ಸ್ವಲ್ಪ ಕಪ್ಪು ಆದರೆ ಮುಖದಲ್ಲಿ ಕಳೆ ಇತ್ತು. ಅವಳ ಜೊತೆ ಮಾತನಾಡುವಾಗ ನಾನು ಡೈರೆಕ್ಟ್ ಆಗಿ ಐ ಲೈಕ್ ಯೂ. ನಿನ್ನ ಇಚ್ಛೆ ಏನು ಎಂದು ಕೇಳಿದ್ದಕ್ಕಾಗಿ ಒಪ್ಪಲಿಲ್ಲ ಎಂದ. ಹೀಗೆ ತುಂಬಾ ಹೆಣ್ಣುಗಳನ್ನು ನೋಡಿದ್ದೆ. ಅನಂತರ ಮದುವೆ ಯೋಚನೇಲಿ ಕೂದಲೆಲ್ಲ ಉದಿರಿದವು. ಈಗೀಗ ಬರೋ ಹುಡಿಗಿರು ನನ್ನನ್ನು ಯಾರು ಒಪ್ಪಿರಲಿಲ್ಲ. ಆಮೇಲೆ ಮದುವೆ ಬೇಡ ಎಂಬ ತೀರ್ಮಾನಕ್ಕೆ ಬಂದಿದ್ದೆ. ಆದರೆ ನೀವು ನನಗೆ ತುಂಬಾ ಒಳ್ಳೆಯ ಹೆಂಡತಿ ಕರುಣಿಸಿದ್ದೀರ ಎಂದು ಮಂಜನ ಕಾಲಿಗೆ ಬಿದ್ದ. ಮಂಜ ಏಳಿ.. ಏಳಿ.. ಶ್ಯಾಮ್ ಎಂದ. ಆದರೆ ಶ್ಯಾಮ್ ಅಲ್ಲಿಯೇ ಮಲಗಿ ಬಿಟ್ಟಿದ್ದ. ಶ್ಯಾಮ್ ನ ಎತ್ತಿ ಸೋಫಾ ಮೇಲೆ ಮಲಗಿಸಿದೆವು. ಅಷ್ಟರಲ್ಲಿ ಟ್ರಿನ್.. ಟ್ರಿನ್.. ಎಂದು ಬಾಗಿಲ ಬೆಲ್ ಶಬ್ದ. ಹೋಗಿ ಮಂಜ ಬಾಗಿಲು ತೆಗೆದ. ಅಣ್ಣssss ನೀನು ಎಂದು ಬಂದಳು ಶ್ಯಾಮ್ ಹೆಂಡತಿ. ನಾನು ಮತ್ತು ಮಂಜ ಏನು ತೋಚದಾಗಿದ್ದೆವು. ಎದಿರು ಎಲ್ಲ ಬಾಟಲಿಗಳು ಇದ್ದವು. ನಾನು ಮನೇಲಿ ಇಲ್ಲ ಎಂದು ಇದೆಲ್ಲಾ ನಡೆಸಿದ್ದೀರ ಎಂದಳು. ನಾನು ವೈನಿಗೆ ಹೇಳುತ್ತೇನೆ ಎಂದಳು. ಆಗ ಮಂಜ ನನಗೆ ವೈನ್ ಇಷ್ಟ ಇಲ್ಲ. ಅದು ಬೇರೆ ನನಗೆ ಕಾಕ್-ಟೇಲ್ ಆಗಿ ಬರಲ್ಲ ಎಂದ. ನಾನು ಹೇಳಿದ್ದು ಸಾವಿತ್ರಿ ವೈನಿ ಬಗ್ಗೆ ಎಂದಳು. ಓsss... ಆ ಹೆಸರಲ್ಲೂ ವೈನ್ ಇದೆಯಾ? ಎಂದ ಮಂಜ. ಲೇ ಅವರು ಹೇಳುತ್ತಿರುವದು ನಿನ್ನ ಹೆಂಡತಿ ಬಗ್ಗೆ ಹೆಂಡದ ಬಗ್ಗೆ ಅಲ್ಲ ಎಂದೆ. ಶ್ಯಾಮ್ ಮಡದಿ ಇದನ್ನು ಹೇಳಿದ್ದೆ ತಡ. ಮಂಜ ಹಾಗೆ ಮಾತ್ರ ಮಾಡಬೇಡಮ್ಮ ಎಂದು ಪರಿ ಪರಿಯಾಗಿ ಅವಳಿಗೆ ಬೇಡಿಕೊಂಡ. ಇವತ್ತು ಒಂದು ರಾತ್ರಿ ಇಲ್ಲಿ ಇರಲು ಬಿಡು ಎಂದ.ಅಷ್ಟರಲ್ಲಿ ಮಂಜನ ಫೋನ್ ರಿಂಗ್ ಆಯಿತು. ಮೀಟಿಂಗ್ ನಲ್ಲಿ ಇದ್ದೇನೆ ನಾಳೆ ಮುಂಜಾನೆ ಫೋನ್ ಮಾಡುತ್ತೇನೆ ಎಂದ. ಮಂಜ ತನ್ನ ಹೆಂಡತಿಗೆ ನೈಟ್ ಶಿಫ್ಟ್ ಎಂದು ಸುಳ್ಳು ಹೇಳಿ ಬಂದಿದ್ದ.

ಶ್ಯಾಮ್ ಮಡದಿ ಶ್ಯಾಮ್ ನನ್ನು ಮಗುವಿನ ಹಾಗೆ ಎತ್ತಿಕೊಂಡು ಹೋಗಿ ಬೆಡ್ ರೂಮ್ ನಲ್ಲಿ ಮಲಗಿಸಿದಳು. ನಾನು ಮತ್ತು ಮಂಜ ಎಲ್ಲೇ ಹಾಲ್ ನಲ್ಲಿ ಮಲಗಿದೆವು. ಮರು ದಿವಸ ಶ್ಯಾಮ್ ಮಡದಿ ಚಹಾ ಮಾಡಿದ್ದಳು. ಚಹಾ ಕೂಡ ವಿಸ್ಕೀ ವಾಸನೆ ಬರುತಿತ್ತು. ನಮ್ಮ ನಶೆ ಇಳಿದಿಲ್ಲ ಎಂದು ತಿಳಿದು ಸುಮ್ಮನೇ ಕುಡಿಯುತ್ತಿದ್ದೆವು. ಆದರೆ ಶ್ಯಾಮ್ ಮಡದಿ ಒಯಿಕ.. ಒಯಿಕ ...ಎಂದು ವಾಂತಿ ಮಾಡಿದ್ದಳು. ಏಕೆಂದರೆ ಬಾಟಲ್ ತೆಗೆಯುವಾಗ ಸ್ವಲ್ಪು ಒಡೆದಿತ್ತು. ಅದನ್ನು ಚಹಾ ಸೋಸುವದರಿಂದ ಸೋಸಿ ಶ್ಯಾಮ್ ಅದನ್ನು ತೊಳೆಯದೇ ಹಾಗೆ ಇಟ್ಟಿದ್ದ.

ಇದಾದ ಮೇಲೆ ಮೊದಲ ಬಾರಿ ಶ್ಯಾಮ್ ಮನೇಲಿ ದೊಡ್ಡ ಜಗಳವೇ ಆಗಿತ್ತು. ಮೊದಲು ಶ್ಯಾಮ್ "ನನಗೆ ಮದುವೆ ಬೇಡ ಸ್ವಾಮಿ" ಎಂದು ಹಾಡುತ್ತಿದ್ದ. ಆದರೆ ಈಗ "ನನಗೆ ಮದಿರೆ ಬೇಡ ಸ್ವಾಮಿ" ಎಂದು ಹೇಳುತ್ತಾನೆ.