Monday, March 22, 2010

ಸುಬ್ಬನ ಹೊಸ ವರ್ಷದ resolution(revolution)

ಸುಬ್ಬ ಹೊಸ ವರ್ಷದಂದು ಮನೆಗೆ ಬಂದಿದ್ದ. ಹಾಗೆ ಮಾತನಾಡುತ್ತ ಮತ್ತೆ ಏನು ಈ ವರ್ಷದ resolution ಎಂದು ನಾನು ಸುಬ್ಬನಿಗೆ ಕೇಳಿದೆ. ಕಳೆದ ಸಾರಿ ಮಂಜ ಕಾಫಿ ಕುಡಿಯೋದಿಲ್ಲ ಅಂತ resolution ಮಾಡಿದವ. ನಾಲ್ಕೇ ದಿನಕ್ಕೆ ಅದನ್ನು ಮುರಿದು, ಮತ್ತೆ ಕಾಫಿ ಕುಡಿಯಲು ಪ್ರಾರಂಬಿಸಿದ್ದ. ರೀ ನೀವು ಆರಂಭ ಶೂರ ಎಂದು ಅವನ ಹೆಂಡತಿ ಕಾಡಿದ್ದಳು. resultion ಏನು ಇಲ್ಲ ಮನೆಯಲ್ಲಿ ನನ್ನ ಹೆಂಡತಿ ಒಂದು revolution ನೆ ಮಾಡಿದ್ದಾಳೆ. ನನ್ನ (revenue) ಜೇಬು ಖಾಲಿ ಮಾಡುವ ಒಂದು solution ಎಂದ. ಅಷ್ಟರಲ್ಲಿ ನಮ್ಮ ಮಂಜ ಮತ್ತೆ ಅವನ ಹೆಂಡತಿ ಕೂಡ ಹಾಜರ ಆದರು. ಸುಬ್ಬ ಬೆಳಿಗ್ಗೆಯಿಂದ ಬರಿ ವಿಕ್ರತಿಗಳೇ ನಡೆಯುತ್ತಿವೆ ಎಂದ ಈ ಸಂವತ್ಸರದ ಹೆಸರಿನ ಹಾಗೆ ಎಂದು ಮುಖ ಕಿಚಾಯಿಸಿ ಮಾತನಾಡಿದ. ಏನು ಆಯಿತೋ? ಸುಬ್ಬ ಎಂದು ಮಂಜ ಕೇಳಿದ. ಏನಿಲ್ಲ ನಾನು ಮುಂಜಾನೆ ಎದ್ದ ಕೂಡಲೇ ನನ್ನ ಹೆಂಡತಿ ನನ್ನ ಮೇಲೆ ಅರ್ಧ ಬಾಟಲಿ ಎಣ್ಣೆ ಸುರುವಿದಳು ಎಂದ. ನಾನು ಮಂಜ ನಗುತ್ತಿದ್ದೆವು. ಸ್ನಾನ ಮಾಡಲು ಹೋಗಬೇಕು ಎಂದು ಎಲ್ಲ ಬಟ್ಟೆ ತೆಗೆದುನಿಂತೆ ನನ್ನ ಮಗ ಹೋಗಿ ಬಚ್ಚಲು ಸೇರಿಕೊಂಡ. ಅಷ್ಟರಲ್ಲೇ ಮನೆ ಎದುರಿಗಿರೋ ಅಂಟಿ ಬಂದು ಬಿಡಬೇಕೆ?. ನಾನು ಓಡಿ ಹೋಗಿ ಮತ್ತೆ ಎಣ್ಣೆ ಮ್ಯೆಯಲ್ಲೇ ಬಟ್ಟೆ ಧರಿಸಿ ಬಂದೆ. ಅಂಟಿ ಹೋದ ಮೇಲೆ ನನ್ನ ಹೆಂಡತಿಯ ಅಷ್ಟೋತ್ತರ. ಏನ್ರಿ ಇದು ಎಣ್ಣೆ ಜಿಡ್ಡು ಎಲ್ಲಾsss ಬಟ್ಟೆಗೆ, ಇದನ್ನು ಒಗೆದರು ಹೋಗುವದಿಲ್ಲ ಎಂದಳು. ನನಗೆ ಬಟ್ಟೆ ಒಗೆಯುವದಕ್ಕೆ ಆಗುವದಿಲ್ಲ. ನನಗೆ ವಾಶಿಂಗ್ ಮಷೀನ್ ಬೇಕು ಎಂದು ಹಠ ಹಿಡಿದಳು. ಇವತ್ತು ದಿನ ಚೆನ್ನಾಗಿದೆ ಇವತ್ತೇ ಬೇಕು ರೀ ಎಂದಳು. ಇವತ್ತು ದಿನ ಏನೋ ಚೆನ್ನಾಗಿದೆ, ಆದರೆ ನನ್ನ ಬಳಿ ದುಡ್ಡು ಬೇಕಲ್ಲ? ಎಂದೇ. ರೀ ನಿಮ್ಮದು ಇದೇ ಗೋಳು ನೋಡಿ ಪಕ್ಕದ ಮನೆ ಪ್ರತಿಮಾ ಎರಡು ವಾಶಿಂಗ್ ಮಷೀನ್ ಇಟ್ಟಿದ್ದಾಳೆ ಎಂದಳು. ನಾನು ಅವಳು ಧೋಬಿ ಇರಬೇಕು ನೋಡು ಎಂದಿದಕ್ಕೆ ನನ್ನ ಮೇಲೆ ಕೋಪ ಮಾಡಿಕೊಂಡು ಮಾತು ಬಿಟ್ಟು ಬಿಟ್ಟಳು ಎಂದ. ಆಗ ಮಂಜ ಸುಮ್ಮನಿರದೆ "ಲೇ ನೀನು ಹೇಳಬೇಕಿತ್ತು ನಾನು ಇದ್ದೇನಲ್ಲ ಬಟ್ಟೆ ವಾಶ್ ಮಾಡೋಕೆ" ಎಂದು ಚುಡಾಯಿಸಿದ.

ಸುಬ್ಬ ಮತ್ತೆ ಶುರು ಹಚ್ಚಿಕೊಂಡ. ಅಷ್ಟರಲ್ಲೇ ನನ್ನ ಮಗ ಸ್ನಾನ ಮುಗಿಸಿ ಬಂದಿದ್ದರಿಂದ. ನಾನು ಬಚ್ಚಲಿಗೆ ಹೋಗಿ ಸ್ನಾನ ಮುಗಿಸಿ ಬಂದೆ. ಮೊದಲೇ ಸಿಟ್ಟಿಗೆ ಎದ್ದ ನನ್ನ ಹೆಂಡತಿ ನನ್ನ ಮಗನಿಗೆ ಉದ್ದೇಶಿಸಿ "ಲೇ ರಾಜ ಇವತ್ತು ನಾವು jcb ಅವರಿಗೆ ಬರಲು ಹೇಳಬೇಕು ನಿನ್ನ ಅಪ್ಪ ಅರ್ಧ ಘಂಟೆ ಸ್ನಾನ ಮಾಡಿ ಬಂದಿದ್ದಾರೆ". ನನಗೆ ಈ ಕೊಳಕು ಸ್ವಚ್ಚ ಮಾಡಲು ಆಗುವದಿಲ್ಲ ಎಂದಳು. ನನಗೆ ತುಂಬಾ ಕೋಪ ಬಂದಿತ್ತು. ಮತ್ತೆ ಪೂಜೆ ಎಲ್ಲ ಮುಗಿದ ಮೇಲೆ, ಪಂಚಾಗ ಶ್ರವಣವಾದ ಮೇಲೆ ನನ್ನ ಭವಿಷ್ಯ ತುಂಬಾ ಕೆಟ್ಟದಾಗಿ ಇತ್ತು ಎಂದು ಹೇಳಿದ. ಅವನ ಮುಖ ನೋಡಿದರೆ ಅಳುವದೊಂದೇ ಬಾಕಿ ಇತ್ತು. ಆಗ ಮಂಜ " ಲೇ ಇದನ್ನು ನೀನು ಮೊದಲೇ ಹೇಳಿದ್ದರೆ ನಾನು ಸರಿ ಮಾಡುತ್ತಿದ್ದೆ" ಎಂದ. ಅದು ಹೇಗೆ ಎಂದು ಕೇಳಿದಾಗ ಈ ಪಂಚಾಂಗ ಯಾರು ಬರೆದಿದ್ದಾರೆ ಗೊತ್ತ?, ಅವ ನಮ್ಮ ಪಂಚಾಮೃತ ಮನ್ಯ( ಮನೋಜ). ಅವನಿಗೆ ಒಂದು ಸ್ವಲ್ಪ ತೀರ್ಥ ಕೊಡಿಸಿದ್ದರೆ ಎಲ್ಲ ಸರಿ ಮಾಡುತ್ತಿದ್ದ ಎಂದ ಮಂಜ. ನೋಡು ನಂದು ಹೇಗೆ ಇದೆ ಭವಿಷ್ಯ. ನಾನು ಮೊದಲೇ ಎಲ್ಲಾ ವ್ಯವಸ್ಥೆ ಮಾಡಿದ್ದೆ ಎಂದ. ಆಗ ಸುಬ್ಬ ನಾವು ಆ ಮನೋಜನ ಪಂಚಾಗ ತೆಗೆದುಕೊಳ್ಳುವದಿಲ್ಲ ಎಂದು ಕೋಪಗೊಂಡು ಹೇಳಿದಾಗ ನನಗೆ ತುಂಬಾ ನಗು ಬಂತು.

ಆಗ ಮಂಜ, ನೋಡು ಸುಬ್ಬ ಈ ಪಂಚಾಂಗ ಎಲ್ಲಾ ಖರೆ ಇರುವದಿಲ್ಲ. ಅದಕ್ಕೆ ಹಿರಿಯರು ಹೇಳಿದ್ದಾರೆ "ಪಂಚ ಭವತಿ ಪಂಚ ನ ಭವತಿ" ಇತಿ ಪಂಚಾಂಗ. ಅಂದರೆ ೫ ಕೆಲಸ ಆಗುತ್ತವೆ ೫ ಆಗುವದಿಲ್ಲ. ಹಾಗೆಂದು ಎಲ್ಲಾ ಸುಳ್ಳೇನೋ ಅಲ್ಲ. ಅಲ್ಲಿ ನಮಗೆ ಒಳ್ಳೆ ವಿಚಾರ ಕೂಡ ಇವೆ. ಆದರೆ ಈ ಭವಿಷ್ಯ ಒಂದು ಬಿಟ್ಟು ಎಂದ ಮಂಜ. ನೋಡು ಸುಬ್ಬ ವಿಕೃತಿ ನಾಮ ಸಂವತ್ಸರ ಬಂತು ಎಂದರೆ, ಎಲ್ಲಾ ವಿಕೃತಿ ಆಗುತ್ತ?. ಮತ್ತೆ ನೋಡು ಸುಬ್ಬ ವಿಕೃತಿ ಇರಲಿ ಏನೇ ಇರಲಿ ಅದು ಕೂಡ ಒಂದು ಸೌಂದರ್ಯದ ಭಾಗ ಕೂಡ. ಕೆಲವರಿಗೆ ಗುಂಡು ಮೂಗಿನ ಹುಡುಗಿಯರು ಇಷ್ಟವಾದರೆ ಮತ್ತೆ ಕೆಲವರಿಗೆ ಉದ್ದನೆ ಮೂಗಿನ ಹುಡುಗಿಯರು. ಅದು ಅವರವರ ಭಾವಕ್ಕೆ ತಕ್ಕ ವಿಚಾರ. ಒಂದು ಇಷ್ಟ ಆಗಲಿಲ್ಲ ಎಂದರೆ ಇನ್ನೊಂದು ವಿಕೃತಿ ಕೂಡ ಆಗುವದಿಲ್ಲ. ಆ ವಿಕೃತಿ ನಮ್ಮ ಮನಸಿನ ಭಾವಕ್ಕೆ ಬಂದ ವಿಚಾರ ಅಷ್ಟೇ ಎಂದು ತಿಳಿಹೇಳಿದ. ನಾವು ಬೇವು ಬೆಲ್ಲ ಎರಡನ್ನು ಸಮನಾಗಿ ಸ್ವೀಕರಿಸಬೇಕು. ಬೇವು ಕಹಿ ಇದ್ದರೂ ಕೂಡ ಅದಕ್ಕೆ ಔಷಧಿಯ ಗುಣ ಇದೆ. ನನ್ನ ಮಾವ ಬೇವಿನ ಎಣ್ಣೆ ದಿನಾಲೂ ಒಂದು ಚಮಚ ಕುಡಿಯುತ್ತಾರೆ. ನಾನು ಒಂದು ಲೋಟದಷ್ಟು ತೊಗೋತೀನಿ, ಆದರೆ ನನ್ನ ಎಣ್ಣೆ ಬೇರೆ ಎಂದಾಗ ನಾವೆಲ್ಲರೂ ನಕ್ಕೆವು.

ಮಂಜ ತನ್ನ ಗೆಳೆಯನಿಗೆ ಫೋನ್ ಮಾಡಿ ವಾಶಿಂಗ್ ಮಷೀನ್ ಬೇಕೆಂದು ಆರ್ಡರ್ ಮಾಡಿದ. ನೀನು ಹೋಗಿ ನಿನ್ನ ಹೆಂಡತಿಗೆ ಒಂದು surprise ಕೊಡು ಎಂದ. ದುಡ್ಡಿನ ಬಗ್ಗೆ ಯೋಚನೆ ಮಾಡಬೇಡ ಕಂತಿನಲ್ಲಿ ಕಟ್ಟು. ಅವನು ನನ್ನ ಗೆಳೆಯ ಇದ್ದಾನೆ ಎಂದು ಹೇಳಿದ. ಈ ಸಾರಿ ನೀನು "ಬಟ್ಟೆ ಒಗೆಯುವದಿಲ್ಲ ಅಂತ resolution" ಮಾಡು ಎಂದಾಗ ನಾವೆಲ್ಲರೂ ಮಂದಹಾಸ ಬೀರಿದ್ದೆವು

ಮರು ದಿನ ಸುಬ್ಬ ನಮ್ಮಿಬ್ಬರಿಗೂ ಮನೆಗೆ ಬನ್ನಿ ಎಂದು ಅಹ್ವಾನ ನೀಡಿದ. ನಾವಿಬ್ಬರು ಮನೆಗೆ ಹಾಜರ ಆದೆವು. ಸುಬ್ಬನ ಮಗ ಹೀಗೆ ಇಂಗ್ಲಿಷ್ ರೈಮ್ಸ ಧಾಟಿಯಲ್ಲಿ ಹಾಡುತ್ತ ಇದ್ದ.

ಅಮ್ಮ ಅಮ್ಮ ಸ್ಕೂಲ್ ಹೋಗ್ತಾನೆ ...
ಅಪ್ಪ ಅಪ್ಪ ಮನೇಲಿ ಇರ್ತಾಳೆ ...
ನಾನು ನಾನು ಆಫೀಸ್ ಹೋಗ್ತಾಳೆ ...

ಮಂಜ ಏನು ನಿನ್ನ ಹೆಂಡತಿ ಕೋಪ ಇಳಿದಿದೆಯೋ ಇಲ್ಲವೋ ಎಂದು ಕೇಳಿದ. ಆಗ ಸುಬ್ಬ ನಿನ್ನೇನೆ ಸಾರಿ ಕೇಳಿದ್ದಾಳೆ ಎಂದ. ಆಗ ಅವನ ಹೆಂಡತಿ ನಮಗೆ ಕಾಫಿ ತಂದು ಕೊಟ್ಟಳು. ನಾವು ಕಾಫಿ ಕುಡಿಯುತ್ತ ಇದ್ದೆವು. ಮತ್ತೆ ಅವನ ಹೆಂಡತಿ "ರೀ ಸಾರೀ" ಎಂದಳು. ನೀನು ನಿನ್ನೇನೆ ಕೇಳಿದೆಯಲ್ಲಾ ಎಂದ ಸುಬ್ಬ. ರೀ ನಾನು ಹೇಳಿದ್ದು ಆ ಸಾರಿ ಅಲ್ಲ, ಕೆಂಪು ಹೊಸ ಸಾರಿ ಬೇಕು ರೀ ನನಗೆ ಹಬ್ಬಕ್ಕೆ ಎಂದಳು. ನನಗೆ ಬಾಯಿಯಲ್ಲಿದ್ದ ಕಾಫಿ ಅನಾಯಾಸವಾಗಿ ಹೊರಗಡೆ ಬಂತು. ನೋಡಿ ನಕ್ಕರೆ ಮತ್ತೆ ಸುಬ್ಬನ ಹೆಂಡತಿ ಸಿಟ್ಟ ಆಗ್ತಾಳೆ ಎಂದು ಸುಮ್ಮನೆ ಇದ್ದೆವು. ಆಗ ಮಂಜ ಸುಮ್ಮನಿರದೆ ನಿಮ್ಮ ವಾಶಿಂಗ್ ಮಷೀನ್ ಗೆ ಮೊದಲು ಹಾಕೋಕೆ ಕೆಂಪು ಸಿರೇನೇ ಆಗಬೇಕಿಲ್ಲಾ, ನೀವು ಬೇಕಾದರೆ ನಮ್ಮ ಸುಬ್ಬನ ಬನಿಯನ್ ಕೂಡ ಹಾಕಬಹುದು ಎಂದಾಗ. ಸುಬ್ಬನ ಹೆಂಡತಿ ಕೋಪ ಇನ್ನು ಜ್ಯಾಸ್ತಿ ಆಗಿ, ಅಡುಗೆಮನೆಗೆ ಹೋದಳು. ಅವಳನ್ನು ಹಿಂಬಾಲಿಸಿ ಒಳಗಡೆ ಸುಬ್ಬ ಹೋದ. ಒಳಗಡೆ ಕರ್ಫ್ಯೂ ಜಾರಿ ಆಗಿತ್ತು. ಸ್ವಲ್ಪ ಸಮಯದ ನಂತರ ಕರ್ಫ್ಯೂನಿಂದ ೧೪೪ ಗೆ ಇಳಿಯಿತು ಎಂದು ಅನಿಸಿತು. ಆಗ ಸುಬ್ಬ ಹೊರಗಡೆ ಬಂದ. ಸುಬ್ಬನ ಹೆಂಡತಿ ಸ್ವಲ್ಪ ಸಮಯದ ನಂತರ ಉಪ್ಪಿಟ್ಟು ತೆಗೆದು ಕೊಂಡು ಬಂದಳು. ಉಪ್ಪಿಲ್ಲದ ಮತ್ತು ಖಾರವಾದ ಉಪ್ಪಿಟ್ಟು ಮತ್ತು ಎರಡು ತಂಬಿಗೆ ನೀರು ಕುಡಿದು ಮನೆಗೆ ಹೋಗುತ್ತೇವೆ ಎಂದು ಹೇಳಿ ಬಂದೆವು. ಇಲ್ಲದಿದ್ದರೆ ಮತ್ತೆ ಸುಬ್ಬ ಯಾವುದಾದರು ಕಂತಿನಲ್ಲಿ ಸೀರೆ ಕೊಡಿಸು ಎಂದು ಗಂಟು ಬಿದ್ದರೆ ಕಷ್ಟ ಎಂದು......D):)

-----------
ಹೊಸ ವರ್ಷ
ಹೊಸ ಹರ್ಷ
ಹೊಸ ರಾಗ
ಹೊಸ ಯುಗ
ಹೊಸತು ಹೊಸತು ಜೀವನ

ಹೊಸ ಜಾವ
ಹೊಸ ಭಾವ
ಹೊಸ ಆಟ (ಊಟ)
ಹೊಸ ಓಟ
ಹೊಸತು ಹೊಸತು ಜೀವನ

(ಏನ್ರಿ ಇದು ಎಲ್ಲಾ, ಹೊಸ ಹೊಸ ಅಂತ ಬರೆದಿದ್ದಿರಾ?. ಇದೇನು ಹೊಸ ಕಾರ್, ಹೊಸ ಮನೆ ಜಾಹಿರಾತಿನ ಹಾಗೆ ಹೊಸ ಹೆಂಡತಿ ಇಲ್ವಾ ಎಂದು ಮಾತ್ರ ಕೇಳಬೇಡಿ. ಹ್ಹಾ ಹ್ಹ ಹ್ಹ ಹಾ :)D))

ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು

ಕುಂಟ ಕಾಲಿನ ಕಾಮಣ್ಣ

ಹೋಳಿ ಹುಣ್ಣಿಮೆ ಬಂತು ಎಂದರೆ ನಮ್ಮೆಲ್ಲರಿಗೂ ಖುಷಿಯೋ ಖುಷಿ. ಹಲಿಗೆ ಬಾರಿಸುವದು, ರಂಗು ರಂಗಿನ ಬಣ್ಣಗಳನ್ನೂ ಒಂದು ತಿಂಗಳ ಮುಂಚೆಯಿಂದಲೇ ಕೂಡಿ ಹಾಕುವದು. ಮತ್ತೆ ಕಾಮಣ್ಣನ ಸುಡಲು ಬೇಕಾಗುವ ಕಟ್ಟಿಗೆಗಳನ್ನೂ ಕೂಡಿ ಹಾಕುವದು ಇಲ್ಲವೇ ಕದಿಯುವದು. ಹೀಗೆ "ಕಾಮಣ್ಣನ ಮಕ್ಕಳು ಕಳ್ಳ ..... ಮಕ್ಕಳು" ಎಂದು ಒದರುತ್ತ ಬೀದಿ ಬೀದಿ ಬಾಯಿ ಬಡೆದು ಕೊಳ್ಳುತ್ತಾ ತಿರುಗುವದು. ಒಂದೊಂದು ಸಲ ನಮ್ಮ ಗೆಳೆಯರ ಮನೆಯಲ್ಲಿನ ಕಟ್ಟಿಗೆಗಳನ್ನು ಕದ್ದು ತರುತ್ತಿದ್ದೆವು.

ಹೋಳಿ ದಿವಸ ಕುಡಿದು ಜನಪದ ಹಾಡು ಹಾಡುತ್ತ ತಿರುಗವ ಜನರನ್ನು ನೋಡುವದೆ ನಮಗೆ ತುಂಬಾ ತಮಾಷೆ. ಅವರು ನೇತಾಡುತ್ತಾ ಬಂದು ಗಟಾರಿನಲ್ಲಿ ಬಂದು ಹೋಳಿ ಆಡುತ್ತಿದ್ದರು. ಕೆಲ ಹಾಡುಗಳು ತುಂಬಾ ಅರ್ಥಪೂರ್ಣ ಆಗಿರುತ್ತಿದ್ದವು. ಕೆಲವು ತುಂಬಾ ಕೆಟ್ಟ ಭಾಷೆಯಿಂದ ಕೂಡಿರುತ್ತಿದ್ದವು.

ಹೋಳಿ ಹುಣ್ಣಿಮೆ ಸಮಯದಲ್ಲಿ ಗೆಳೆಯರು ಏನಾದರು ಜಗಳ ಮಾಡಿಕೊಂಡಿದ್ದರೆ ಮತ್ತೆ ಗೆಳೆತನ ಬೆಳೆಸಲು ಒಳ್ಳೆಯ ಸದಾವಕಾಶ. ಸುಬ್ಬ ಮಂಜನೊಡನೆ ಜಗಳ ಮಾಡಿಕೊಂಡಿದ್ದ. ಹೀಗಾಗಿ ಅವನು ಮಂಜನ ಗೆಳೆತನಕ್ಕೆ ಹಾತೊರೆಯುತ್ತಿದ್ದ, ಏಕೆಂದರೆ ಮಂಜ ಯಾವತ್ತು ತಮಾಷೆಯಾಗಿ ನಮ್ಮನ್ನು ನಗಿಸುತ್ತಾ, ಮಾತು ಮಾತಿಗೆ ಜೋಕ ಹೇಳುತ್ತಾ ಇರುತ್ತಿದ್ದ. ಪ್ರತಿ ಸಲದಂತೆ ಈ ಬಾರಿ ಕೂಡ ಕಟ್ಟಿಗೆಗಳನ್ನೂ ಕದ್ದು ತರುವ ಯೋಜನೆ ಹಮ್ಮಿಕೊಂಡಿದ್ದೆವು. ಇದಕ್ಕೆ ಸುತ್ರಧಾರನೆ ನಮ್ಮ ಮಂಜ. ಮಂಜ ಸುಬ್ಬನ ಮನೆ ಕದಿಯುವ ಪ್ಲಾನ್ ಮಾಡಿದ. ಮತ್ತೆ ನಾವೆಲ್ಲರೂ ಅವರ ಮನೆ ಹಿಂದೆ ನೀರು ಕಾಯಿಸಲು ಇಟ್ಟಿರುವ ಕಟ್ಟಿಗೆಗಳನ್ನು ಕದಿಯಲು ಹೋದೆವು. ಆದರೆ ಮಂಜ ಕಟ್ಟಿಗೆ ಅಲ್ಲದೆ, ಅವರ ಮನೆ ಹಿತ್ತಲಲ್ಲಿ ಇರುವ ಪೇರಳ ಗಿಡದ ಹಣ್ಣುಗಳನ್ನು ಮತ್ತು ಅಷ್ಟು ಹೂವುಗಳನ್ನು ಖಾಲಿ ಮಾಡಿ ಬಿಟ್ಟಿದ್ದ.

ಮರುದಿನ ಬೆಳಿಗ್ಗೆ ಎದ್ದೊಡನೆ ಹಿತ್ತಲಲ್ಲಿ ಆದ ಅವಾಂತರ ನೋಡಿ ಸುಬ್ಬ ತುಂಬಾ ಕೋಪಗೊಂಡಿದ್ದ. ತಾನು ಒಂದಿಷ್ಟು ಹುಡುಗರನ್ನು ಕೂಡಿಸಿ ಮಂಜನ ಮನೆಗೆ ಕದಿಯಲು ಯೋಜನೆ ಹಾಕಿಕೊಂಡ. ಅವರ ಮನೆ ಹಿತ್ತಲಲ್ಲಿ ಇದ್ದ ಕಟ್ಟಿಗೆಗಳನ್ನೂ ಕದ್ದು ಸುಮ್ಮನೆ ಹೋಗುವದು ಬಿಟ್ಟು, ತೆಂಗಿನ ಮರ ಏರಿ ತೆಂಗಿನ ಕಾಯಿ ಕೀಳಹತ್ತಿದ. ಅಷ್ಟರಲ್ಲೇ ಒಂದು ತೆಂಗಿನ ಕಾಯಿ ಕೆಳಗೆ ಬಿದ್ದು ಬಿಟ್ಟಿತು. ಆಗ ಮಂಜನಿಗೆ ಎಚ್ಚರ ಆಗಿದೆ ಮಂಜ ಎದ್ದವನೇ, ಸೀದ ಅವರ ನಾಯಿಯನ್ನು ಬಿಟ್ಟ. ಮತ್ತೆ "ಕೋಲು ತೊಗೋರಿ ಕಳ್ಳ ಬಂದಿದ್ದಾನೆ" ಎಂದು ಕೂಗಲಾರಮ್ಬಿಸಿದ. ನಾಯಿ ಹೋಗಿ ತೆಂಗಿನ ಮರದ ಕೆಳಗೆ ನಿಂತು ಕೂಗಲಾರಮ್ಬಿಸಿತು. ಮತ್ತೆ ಉಳಿದ ಹುಡುಗರೆಲ್ಲರೂ ಓಡಿ ಹೋದರು.

ಸುಬ್ಬ ಒಬ್ಬನೇ ಮರದ ಮೇಲೆ ನೇತಾಡುತ್ತಾ ಇದ್ದ. ಅವನಿಗೆ ನಾಯಿ ಕಂಡರೆ ತುಂಬಾ ಭಯ. ಕಡೆಗೆ ಮಂಜನಿಗೆ ನಾನು ಕಣೋ ಸುಬ್ಬ ಎಂದು ಹೇಳಿದ. ನಾಯಿ ತುಂಬಾ ಜೋರಾಗಿ ಓದುರುತ್ತ ಇದ್ದಿದ್ದರಿಂದ ಮಂಜನಿಗೆ ಸರಿಯಾಗಿ ಕೇಳಲಿಲ್ಲ. ಪ್ಲೀಸ್ ಆ ನಾಯಿ ಸ್ವಲ್ಪ ಕಟ್ಟು ನನ್ನನ್ನು ಕ್ಷಮಿಸು ಎಂದು ಜೋರಾಗಿ ಹೇಳಿದ. ಕಡೆಗೆ ಮಂಜ ಒಪ್ಪಿ ನಾಯಿಯನ್ನು ಕಟ್ಟಿ ಹಾಕಿದ. ಆದರೆ ನಾಯಿ ಮಾತ್ರ ಸುಬ್ಬನನ್ನು ನೋಡಿ ಒದರುತ್ತಾನೆ ಇತ್ತು.

ಅಷ್ಟರಲ್ಲೇ ಸುಬ್ಬ ನೇತಾಡುತ್ತಾ ಇದ್ದ ರೆಂಬೆ ಮುರಿದು ಸುಬ್ಬ ಕೆಳಗಡೆ ಬಿದ್ದು ಬಿಟ್ಟ. ಮಂಜನ ನಾಯಿ ಹೆದರಿ ಕೊಯ್ಗುಡುತ್ತ ಇತ್ತು. ಸುಬ್ಬ ಕಾಲಿಗೆ ಪೆಟ್ಟು ಆಗಿತ್ತು. ಮರುದಿನ ಸುಬ್ಬ ಕುಂಟುತ್ತ ಇದ್ದ. ಅದನ್ನು ನೋಡಿದ ಅವರಪ್ಪ ಅವನನ್ನು ಆಸ್ಪತ್ರೆಗೆ ಕರೆದು ಕೊಂಡು ಹೋದರು. ಅವನ ಕಾಲಿಗೆ fracture ಆಗಿತ್ತು. ಅವರಪ್ಪ ಅವನಿಗೆ ತುಂಬಾ ಬೈದಿದ್ದರು. ಮರುದಿನ ಸುಬ್ಬ ನಮ್ಮ ಮುಂದೆ ಬಂದು ಈ ದೊಡ್ಡವರೆಲ್ಲ ಹೀಗೆನಾ? ... ದೊಡ್ಡವರೆಲ್ಲ ಜಾಣರಲ್ಲ ಎಂಬ ಹಾಡು ಇವರಿಗೆ ತುಂಬಾ ಹೋಲಿಕೆ ಆಗುತ್ತೆ ಅನ್ನಿಸಿತು ಎಂದ. ನನಗೆ ಸಿಗುವ ಎಲ್ಲ ದೊಡ್ಡ ಮನುಷ್ಯರು ನಮಗೆ ಉಪದೇಶ ಮಾಡಲು ಬರುವರು. ಅದೇ ಹಳೆ ರಾಗ ಹಳೆ ತಾಳ ಎಂಬಂತೆ. ನಾನು ಚಿಕ್ಕ ಹುಡುಗ ಇದ್ದ ಸಮಯದಲ್ಲಿ 1 ರುಪಾಯಿಗೆ KG ಅಕ್ಕಿ ಸಿಗುತಿತ್ತು. ನಾನು ತುಂಬಾ ಕಷ್ಟ ಪಟ್ಟು ಓದಿದೆ ಎಂದೆಲ್ಲ. ಎಂದು ಕೋಪದಿಂದ ಓಟಗುಡುತ್ತಲೇ ಇದ್ದ. ನಾವೆಲ್ಲರೂ ಸುಮ್ಮನೆ ನಿಂತಿದ್ದೆವು. ಹಿಂದೆ ಸುಬ್ಬನನ್ನು ಹುಡುಕಿಕೊಂಡು ಬಂದಿದ್ದ ಅವರಪ್ಪ ಇದೆನ್ನಲ್ಲಾ ಕೇಳಿ ಕೋಪಗೊಂಡು ಮತ್ತೆ ನಾಲ್ಕು ಒದೆಗಳನ್ನು ಕೊಟ್ಟು ಸುಬ್ಬನನ್ನು ಲೇ ಕಾಮಣ್ಣ ಮನೆಗೆ ಬಾರೋ ಎಂದು ಕರೆದುಕೊಂಡು ಹೋಗಿ ಬಿಟ್ಟರು.

ಸುಬ್ಬ ಪ್ರತಿ ಬಾರಿ ದುಂಡಿ ಓಣಿ ಒಳಗೆ ಹೋಗಿ ಹೋಳಿ ಆಡುತ್ತಿದ್ದ. ಏಕೆಂದರೆ ಅಲ್ಲಿ ಇದ್ದದ್ದು ಶೋಭಾ ಮನೆ. ಬಣ್ಣ ಹಚ್ಚಿಕೊಂಡಾಗ ಯಾರೆಂದು ತಿಳಿಯುವದಿಲ್ಲ ಎಂಬ ಕಾರಣಕ್ಕಾಗಿ. ಆದರೆ ಈ ಬಾರಿ ಅದು ಸಹ ಕೈ ಕೊಟ್ಟಿತ್ತು ಏಕೆಂದರೆ, ಶೋಭಾ ಇವನ ಕಾಲಿನ ಬ್ಯಾನ್ದೆಜ ನೋಡಿದ್ದಳು. ನಾವೆಲ್ಲರೂ ಬಣ್ಣ ಆಡುತ್ತಿದ್ದರು ಸುಬ್ಬ ಮಾತ್ರ ಮನೆ ಮಳಿಗೆ ಮೇಲೆ ನಿಂತು ಸಪ್ಪೆ ಮುಖದಿಂದ ನೋಡುತ್ತಿದ್ದ.

ತುಂಬಾ ದಿನಗಳ ವರೆಗೆ ನಾವು ಸುಬ್ಬನನ್ನು ಕುಂಟ ಕಾಲಿನ ಕಾಮಣ್ಣ ಎಂದು ಸಂಭೋದಿಸುತ್ತಿದ್ದೆವು.

ಮಂಜ ಕಂಡು ಹಿಡಿದ ಕೆಲವು ವಿಷಯಗಳು

ಮಂಜ ಎಲ್ಲದರಲ್ಲಿಯೂ ತುಂಬಾ ತಮಾಷೆ. ಅವನು ಶಾಲೆಯಲ್ಲಿ ಕಂಡು ಹಿಡಿದ ಕೆಲವು ವಿಷಯಗಳು ...

Mathemetics(ಮೆಂತೆ ಮೆಣಸಿನಕಾಯಿ) - ಮೆಂತೆ ಮೆಣಸಿನಕಾಯಿ ನೆಂಚಿಕೊಂಡು ಮೊಸರು ಅನ್ನ ತಿಂದು ಮಲಗುವದು.
ಯಾವತ್ತಾದರೂ ಹೋಟೆಲಿಗೆ ಹೋಗುವ ವಿಷಯ ಬಂದರೆ ನಮ್ಮ ಮಂಜ ಲೇ ಇವತ್ತು mathemetics ಓದಬೇಕು ಕಣ್ರೋ ಎಂದು ಹೇಳುತ್ತಿದ್ದ.
Arithmetic(ಅರಿತ ಮೆಟ್ರಿಕ್ ) - ಅರಿತ ಮೇಲೆ ಮೆಟ್ರಿಕ್ ಪಾಸಾಗ ಬಹುದೇನೋ?.
Algebra(ಎಲ್ಲ ಗೊಬ್ರ ) - ಇದು ನಮ್ಮ ಹೊಲಕ್ಕೆ ಹಾಕಿದರೆ ಬೆಳೆ ಚೆನ್ನಾಗಿ ಬರುತ್ತೆ.
Geometry(ಗೋ ಮೂತ್ರ ) - ಗೋ ಮೂತ್ರ ತುಂಬಾ ಪವಿತ್ರವಾದುದು. ಅದಕ್ಕೆ ತುಂಬಾ ಔಷಧಿಯ ಗುಣಗಳು ಇರುತ್ತವೆ.
Trignometry (ತಿರಗೋಣು ಮತ್ತೆ ) - ಮತ್ತೆ ಮತ್ತೆ ತಿರುಗಿ ಕಲಿಯೂ ಸೂತ್ರ
Calculas (ಖಾಲಿ ಕೆಲಸ) - ಇದನ್ನು ಕಲಿತ್ತಿದ್ದರೆ ಕೆಲಸ ಖಾಲಿ ಇರಬಹುದು.
physics (ಫಿಸಿಕ್ ) - ಕಟ್ಟು ಮಸ್ತಾದ ದೇಹ(ಯಾರದು ಅಂತ ಕೇಳಬೇಡಿ?).
chemistry(ಕೆಮ್ಮು ಎಷ್ಟುರಿ ?) - ಕದ್ದು ಸೇದುವ ಸಮಯದಲ್ಲಿ ಬರುವ ವ್ಯಾಧಿ.
sociology (ಸೋಸಿ ಒಳಗೆ) - ಮಿತ್ರರನ್ನು ಮಾಡಿಕೊಳ್ಳುವಾಗ ಬಳಸುವ ಸೂತ್ರ.
biology(ಭಯಾಲಜಿ) - ಪರೀಕ್ಷೆ ಮುಂಚೆ ಬರುವ ವ್ಯಾಧಿ.

ಮತ್ತೆ ನಿವೇನಾದರು ಕಂಡು ಹಿಡಿದಿದ್ದಿರಾ? ಮತ್ತೆ ನಮೂದಿಸಿ....

Saturday, March 6, 2010

ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ....

"ರೀ ಏಳ್ರಿ" ಯಾವಾಗಲು ನಿದ್ದೆ ನಿದ್ದೆ. ಯಾಕಾದ್ರು ಈ ಕುಂಭಕರ್ಣನನ್ನು ಕಟ್ಟಿ ಕೊಂಡೆನೋ . ಇರುವ ಒಂದು ಭಾನುವಾರ ಕೂಡ ಬೇಗ ಎದ್ದು ಎಲ್ಲಿಯಾದರೂ ಕರೆದುಕೊಂಡು ಹೋಗಬೇಕು ಅನ್ನೋ ಜ್ಞಾನ ಕೂಡ ಇಲ್ಲ ಇವರಿಗೆ. ನಾನು ಹಾಗೆ ಹಾಸಿಗೆ ಮೇಲೆ ಹೊರಳಾಡುತ್ತ ಎದ್ದು ಯಾರನ್ನೋ ನೆನಸುತ್ತ ಇದ್ದ ಹಾಗೆ ಇತ್ತು ಎಂದೇ. ಮಹಾಭಾರತದ ಪಾತ್ರಗಳನ್ನಾ? ಎಂದೇ. ಅದಕ್ಕೆ ನಸು ನಕ್ಕು ಕುಂಭಕರ್ಣ ಮಹಾಭಾರತದಲ್ಲಿ ಯಾವಾಗ ಬಂದ ಎಂದಳು ನನ್ನಾಕೆ. ನಾನು ಕುಂಭ ರಾಶಿಯ ಕರ್ಣನ ಬಗ್ಗೆ ಅಂತ ತಿಳಿದುಕೊಂಡು ಕೇಳಿದೆ ಅಷ್ಟೇ ಎಂದು ಸುಮ್ಮನೆ ಮಾತು ಹಾರಿಸಿದೆ. ನಿಮಗೆ ಇದೊಂದು ಗೊತ್ತು, ಬರಿ ಮಾತು ಎಂದಳು. ನಿನ್ನ ಕಟ್ಟಿಕೊಂಡ ಮೇಲೆ ತತ್ವಜ್ಞಾನಿ ಆಗಲೇ ಬೇಕಲ್ಲ ಎಂದು ಅನ್ನಬೇಕು ಅಂದು ಕೊಂಡರು ಅನ್ನಲಿಲ್ಲ. ಇರುವ ಒಂದು ಭಾನುವಾರವಾದರೂ ಒಂದೊಳ್ಳೆ ರುಚಿ ತಿಂಡಿ ಕಳೆದುಕೊಳ್ಳುವ ಮನಸ್ಸಿಲ್ಲದೆ . ದಿನಾಲೂ ಹೋಟೆಲಿನಲ್ಲಿ ತಿಂದು ತಿಂದು ಬಾಯಿ ಕೆಟ್ಟುಹೋಗಿತ್ತು. ರೀ ಇವತ್ತೇನು ಬೇಗ ಬೇಗ ಸ್ನಾನ ಮುಗಿಸಿ, ಎಲ್ಲಾದರೂ ತಿಂಡಿ ತಿನ್ನಲು ಹೋಟೆಲ್ಗೆ ಹೋಗೋಣ ಎಂದಾಗ, ಇಂಗು ತಿಂದ ಮಂಗನಂತೆ ಅವಳನ್ನು ನೋಡಿದ್ದೇ.


ಟೀ ಪಾತ್ರೆ ಕುಕ್ಕುತ್ತ ಇದ್ದ ನನ್ನ ಮಡದಿನ ನೋಡಿ, ಇವಳ ಕೋಪ ಯಾಕೋ ಕಡಿಮೇ ಆಗುವ ಲಕ್ಷಣ ಕಂಡು ಬರಲಿಲ್ಲ. ಹೊರಗೆ ಹೋಗುವದನ್ನು ತಪ್ಪಿಸುವ ಕಾರ್ಯದಲ್ಲಿ ತೊಡಗಿದೆ. ಇವತ್ತು ಹೋಳಿ ಕಣೆ ಯಾರಾದರು ಬಣ್ಣ ಗಿಣ್ಣ ಎರಚಿದರೆ ಕಷ್ಟ ಎಂದೇ. ಅದೇನು ಇಲ್ಲ, ಇದೇನು ಧಾರವಾಡನಾ?. ಅಷ್ಟರಲ್ಲಿ ಯಾಕೋ ಹೊಟ್ಟೆ ನೋವು ಕಣೆ ಎಂದು ಹಾಗೆ ಒಂದು ರೈಲು ಬಿಟ್ಟೆ. ಮತ್ತೆ "ಯಾಕೆ ರೀ ಏನಾಯಿತು ನಡೀರಿ ಹಾಸ್ಪಿಟಲ್ಗೆ " ಎಂದು ಗಂಟುಬೀದ್ದಳು. ಅದೆಲ್ಲ ಏನು ಇಲ್ಲ ಕಣೆ. ಸುಮ್ಮನೆ ಸ್ವಲ್ಪ ನೋಯುತ್ತಾ ಇದೆ ಟೀ ಕೊಡೆ ಎಂದೇ. ಎಲ್ಲಾ ಟೀ ಇಂದಾನೆ ಅಗಿದ್ದು, ಇದರ ಮನೆ ಹಾಳಾಗ ಎಂದು ಟೀ ನೆಲ್ಲಾ ವಾಶ್ ಬೇಸಿನಗೆ ಸುರಿದಳು. ತಡಿರಿ ಸ್ವಲ್ಪ ಕಷಾಯ ಮಾಡುತ್ತೇನೆ ಎಂದು ಕಷಾಯ ಮಾಡಿದಳು. ಅದೇಕೆ ಗೊತ್ತಿಲ್ಲ ಕಷಾಯ ಒಲ್ಲದ ಮನಸ್ಸಿನಿಂದ ಕುಡಿದು ಮುಗಿಸುವಷ್ಟರಲ್ಲಿ ಹೊಟ್ಟೆ ನೋವು ನಿಜವಾಗಿಯೂ ಶುರು ಹಚ್ಚಿ ಕೊಂಡಿತು. ಲೇ ತುಂಬಾ ನೋವು ಕಣೆ ನಡಿ ಯಾವುದಾದರು ಹಾಸ್ಪಿಟಲ್ಗೆ ಹೋಗೋಣ ಎಂದು ಹೇಳಿದೆ.


ಇಬ್ಬರು ಸ್ಕೂಟರ್ ಏರಿ ಹಾಸ್ಪಿಟಲ್ ದಾರಿ ಹಿಡಿದೆವು. ಸ್ವಲ್ಪ ದೂರ ಹೋಗುವಷ್ಟರಲ್ಲಿ ತುಂಬಾ ಟ್ರಾಫಿಕ್ ಜಾಮ್ ಆಗಿತ್ತು. ಸಿಗ್ನಲ್ ಇಲ್ಲದ ಜಾಗದಲ್ಲಿ ಇಷ್ಟೊಂದು ಟ್ರಾಫಿಕ್ ಎಂದು ನೋಡಿದಾಗ ತಿಳಿಯಿತು ಅಲ್ಲಿ ಒಬ್ಬ ಪಾಲಿಟಿಸಿಯನ್ ಬರುತ್ತಿದ್ದಾರೆ ಎಂದು. ನನ್ನ ಹೆಂಡತಿ ಮಾತ್ರ ಅವನಿಗೆ ಹಿಡಿ ಶಾಪ ಹಾಕುತ್ತಲೇ ಇದ್ದಳು. ನನ್ನ ಹೆಂಡತಿಯನ್ನು ನೋಡಿ ಒಬ್ಬ ಮನುಷ್ಯ ನಕ್ಕು, ಅವರು ಹಾಗೆ ಮೇಡಂ, ಅವರು ಬಂದರೆ ನಮ್ಮ ಆಫೀಸಿಗೆ ಲೇಟ್. ಇನ್ನು ಯಾರದಾದರೂ ಪರೀಕ್ಷೆ ಇದ್ದರೆ ಅಧೋಗತಿ. ಇವರು ಪಾಲಿಟಿಸಿಯನ್ ಅಲ್ಲ ಪೋಲಿ-ಟಿಸಿಯನ್ ಎಂದಾಗ ನನ್ನ ಮಡದಿಯ ಮುಖದಲ್ಲಿ ಮಂದಹಾಸ ಮೂಡಿತ್ತು. ನನ್ನ ಮಡದಿಯ ಮುಖದಲ್ಲಿಯ ಕಳೆ ಕಂಡ ಮೇಲೆ, ಹೊಟ್ಟೆ ನೋವು ಸ್ವಲ್ಪ ಕಡಿಮೆ ಅನ್ನಿಸತೊಡಗಿತು. ಮನೆಗೆ ಹೋಗೋಣ ಕಣೆ ಈಗ ಸ್ವಲ್ಪ ಪರವಾಗಿಲ್ಲ ಎಂದರು ನನ್ನ ಹೆಂಡತಿ ಕೇಳಲಿಲ್ಲ. ಸ್ವಲ್ಪ ಸಮಯದ ನಂತರ ಒಂದು ಮಾರುತಿ ಕಾರು ನನ್ನ ಸ್ಕೂಟರ್ ಪಕ್ಕ ಬಂದು ನಿಂತಿತು. ಹಾಗೆ ಕಣ್ಣು ಹಾಯಿಸಿದಾಗ ಹೆಲ್ಮೆಟ್ ಹಾಕಿಕೊಂಡು ಒಬ್ಬ ಮನುಷ್ಯ ಕಾರಿನೊಳಗೆ ಕುಳಿತ ಹಾಗೆ ಕಾಣಿಸಿತು, ನೋಡೇ ಅಲ್ಲಿ ಯಾರೋ ಹೆಲ್ಮೆಟ್ ಹಾಕಿಕೊಂಡು ಕಾರಿನಲ್ಲಿ ಕುಳಿತಿದ್ದಾರೆ ಎಂದು ಹೇಳಿದೆ. ಆಗ ನನ್ನ ಹೆಂಡತಿ ಗಹ ಗಹಿಸಿ ನಗಲು ಶುರು ಮಾಡಿದಳು. ರೀ ನೋಡ್ರಿ ಅದು ಇಲಿಯ ಮೇಲಿನ ಗಣಪ ಎಂದಾಗ, ನಾನು ಕೂಡ ಮಂದಹಾಸ ಬಿರಿದೆ. ಆಗ ನನ್ನನ್ನು ಒಮ್ಮೆ ನಾನೆ ಅನಾಮತ್ತಾಗಿ ಪೂರ್ತಿ ನೋಡಿದಾಗ ತಿಳಿಯಿತು ನಾನು ಇಷ್ಟು ಅನಾಹುತವಾಗಿ ನನ್ನಷ್ಟಕ್ಕೆ ನಾನೆ ಘಾಬರಿ ಪಡುವಷ್ಟು ದಪ್ಪಗಾಗಿದ್ದೇನೆ ಎಂದು.


ಕ್ಲಿನಿಕ್ ಒಳಗೆ ಬಂದು ಕುಳಿತೆವು ಡಾಕ್ಟರ ಇನ್ನು ಬಂದಿರಲಿಲ್ಲ. ಯಾರು ಪೇಷೆಂಟ್ ಕೂಡ ಇರಲಿಲ್ಲ. ನಾವೇ ಮೊದಲು ಹೋಗಿದ್ದು. ರಿಸೆಪ್ಶನಿಷ್ಟ ಬಳಿ ಹೋಗಿ ಹೆಸರು ಹೇಳಿ ಬಂದೆವು. ಈ ಡಾಕ್ಟರಗೆ ಇಷ್ಟು ಸುಂದರವಾದ ರಿಸೆಪ್ಶನಿಷ್ಟ ಏಕೆ ಬೇಕು? ಎಂದು ಯೋಚಿಸುತ್ತಿರುವಾಗಲೇ, ಡಾಕ್ಟರ ಹಾಜರಾಗ ಬೇಕೇ. ಯೋಚಿಸುವದು ಬಿಟ್ಟು ಅವಳನ್ನು ಚೆನ್ನಾಗಿ ನೋಡಬಹುದಿತ್ತು. ಸ್ವಲ್ಪ ಸಮಯದ ನಂತರ ರಿಸೆಪ್ಶನಿಷ್ಟ ನನ್ನ ಹೆಸರು ಕೂಗಿದಳು. ಡಾಕ್ಟರ ತಿಂಡಿ ಮಾಡುತ್ತಿದ್ದರು. ವಾಸನೆ ತುಂಬಾ ಚೆನ್ನಾಗಿ ಬರುತಿತ್ತು. ತಿಂಡಿಯ ಚಮಚ ಹಿಡಿದು ನನ್ನ ಬಳಿ ಬಂದು ಎಲ್ಲಿ ಬಾಯಿ ತೆಗೆಯಿರಿ ಎಂದರು. ಬೇಡ ಡಾಕ್ಟರ ಹೊಟ್ಟೆ ನೋವು.... ಎಂದು ಮಕ್ಕಳು ಆಸೆ ಪಟ್ಟರು ದೊಡ್ಡವರ ಅನುಮತಿ ಪಡೆಯುವ ಹಾಗೆ ನನ್ನ ಮಡದಿಯ ಮುಖ ನೋಡಿದೆ. ಚಮಚದಲ್ಲಿಯ ತಿಂಡಿ ಬೇಗನೆ ತಿಂದು. (ಮನಸಿನಲ್ಲಿ ಬಕಾಸುರ ಎಂದುಕೊಂಡಿರಬಹುದು) ರೀ ಬಾಯಿ ತೆಗಿರಿ ನೋಡಬೇಕು ಎಂದರು. ನಾನು ಹಲ್ಲು ಚೆನ್ನಾಗೆ ಉಜ್ಜಿದ್ದೇನೆ ಡಾಕ್ಟರ ಎಂದೇ. ರೀ ನಿಮಗೆ ತಿಂಡಿ ತಿನಿಸೋಕು,ಹಲ್ಲು ಉಜ್ಜೋಕೆ , ಅಥವಾ ಹಲ್ಲು ಉಜ್ಜಿದ್ದು ನೋಡುವದಕ್ಕೆ ಅಲ್ಲ. ನಾನು ಹೇಳಿದಷ್ಟು ಮಾಡಿ ಎಂದರು. ಇದೆ ಮೊದಲ ಸರಿ ನಾ ಹೊಟ್ಟೆ ನೋವು? ಎಂದರು. ಈಗೀಗ ಸ್ವಲ್ಪ ಜ್ಯಾಸ್ತಿ ಡಾಕ್ಟರ ಎಂದೇ. ಈಗೀಗ ಎಂದರೆ ಒಂದೆರಡು ವರ್ಷದಿಂದ ಎಂದೇ. ಹೋಗಿ ತಮ್ಮ ಸಿಟ್ ಮೇಲೆ ಒರಗಿ, ಏನಾದರು ಹಾಳು-ಮುಳು ತಿನ್ದಿರೆನು? ಎಂದು ಕೇಳಿದರು. ನನಗೆ ಹಾಲು ಮೂಳೆ ಅಂದ ಹಾಗೆ ಅನ್ನಿಸಿ, ನನಗೆ ಹಾಲು ಇಷ್ಟ ಇಲ್ಲ ಡಾಕ್ಟರ, ಇನ್ನು ಮೂಳೆ ನಾನು ಮುಟ್ಟೋದೇ ಇಲ್ಲ ನಾನು ಸಸ್ಯಾಹಾರಿ ನೋಡಿ ಬೇಕಾದರೆ ಎಂದು ಜನಿವಾರ ತೋರಿಸಿದೆ. ಆಗ ಡಾಕ್ಟರ ನನ್ನ ಬಿಟ್ಟು ಹೆಂಡತಿಯ ಬಳಿ ಮಾತು ಆರಂಬಿಸಿದರು. ಏನು ತಿಂದರು ನಿಮ್ಮ ಯಜಮಾನರು. ಆಗ ನನ್ನ ಹೆಂಡತಿ ಅಪ್ಪ ಮಗನಿಗೆ ಅದೇ ಧ್ಯಾನ ಡಾಕ್ಟರ ಪಿಜ್ಜಾ.. ಪಿಜ್ಜಾ.. ಮತ್ತೆ ಆ ಚಿಪ್ಸ್ ಎಂದಳು. ನೋಡ್ರಿ ಯಾವತ್ತು ತಳಪಾಯ ಘಟ್ಟಿ ಇರಬೇಕು ಎಂದರು. ನಾನು ಘಾಬರಿ ಇವರೇನು ಡಾಕ್ಟರ ಅಥವಾ ಆಕ್ಟರ್?. ಏನಿದು ಡಬಲ್ ಮೀನಿಂಗ್ ಎಂದು ಮನಸಿನಲ್ಲೇ (ಅಂದುಕೊಂಡೆ ಅವರಂದ ಮಾತಿಗೆ ಹಿಂದೆ ನೋಡದೆ). ಮತ್ತೆ ನಿಮ್ಮ ದಿನಚರಿ ಏನು? ಎಂದು ನನ್ನನ್ನು ಕೇಳಿದರು. ಆಗ ನಾನು ಬೆಳಿಗ್ಗೆ ೭ ಘಂಟೆ ಏಳುವದು ಮತ್ತೆ ಟೀ, ಸ್ನಾನ , ತಿಂಡಿ, ಆಫೀಸ್, ಊಟ, ಮನೆ ಮತ್ತೆ ತಿಂಡಿ ಮತ್ತು ಟೀ ಅನಂತರ ರಾತ್ರಿ ಊಟ ಎಂದೇ. ಡಾಕ್ಟರ ೫ ವರ್ಷದ ಹಿಂದಿನ ದಿನಚರಿ ನೆನಪು ಮಾಡಿ ಹೇಳಿ ಎಂದರು. ಆಗ ಸ್ವಲ್ಪ ಬೇಗನೆ ಎದ್ದು ವ್ಯಾಯಾಮ, ಪ್ರಾಣಾಯಾಮ, ಸಂದ್ಯಾವಂದನೆ, ಸ್ನಾನ ನಂತರ ತಿಂಡಿ ಟೀ..... ಅಷ್ಟಕ್ಕೇ ತಡೆದು ನೋಡಿ ನೀವು ಆಗ ಹೇಗೆ ಇದ್ದೀರಿ. ಈಗ ಏನಾಗಿದೆ? ಎಂದು ನೀವೇ ಊಹಿಸಿಕೊಳ್ಳಿ. ನಾವು ನಮ್ಮ ಸಂಸ್ಕೃತಿಯ ಕೆಲವು ವಿಷಯಗಳನ್ನು ಎಂದು ಮರೆಯಬಾರದು. ನಾನು ಬೆಳಿಗ್ಗೆ ಬೇಗನೆ ಎದ್ದು ವ್ಯಾಯಾಮ, ಸಂದ್ಯಾವಂದನೆ, ಪ್ರಾಣಾಯಾಮ ಇವುಗಳನ್ನು ತಪ್ಪದೆ ಮಾಡುತ್ತೇನೆ. ಅಲ್ಲದೆ ದಿನಾಲೂ ಒಂದು ತುಳಸಿದಳ ತಿನ್ನುತ್ತೇನೆ. ಹೀಗೆ ಹತ್ತು ಹಲವಾರು ವಿಷಯಗಳನ್ನೂ ತಿಳಿ ಹೇಳಿದರು. ನಿಮ್ಮ ಆಲಸ್ಯತನವನ್ನು ಬಿಟ್ಟು ಮೊದಲಿನ ಹಾಗೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ ಮತ್ತೆ ಹಾಳು-ಮುಳು ತಿನ್ನುವದು ಬಿಟ್ಟು ಬಿಡಿ ಎಂದು ಹೇಳಿದರು. ಮಡದಿ ಇವರು ಯಾವಾಗಲು ಹೀಗೆ ತಲೆ ಇಲ್ಲ.... ಹೊಟ್ಟೆ ಇಲ್ಲ... ಕಣ್ಣು ಯಾವುದಾದರು ಒಂದು ನೋಯುತ್ತಿರುತ್ತದೆ. ಇವರಿಗೆ ಏನಾದರು ಒಳ್ಳೆಯ ಔಷಧ ಕೊಡಿ ಎಂದಳು. ಆಗ ಡಾಕ್ಟರ ನಮಗೂ ಬದುಕಲು ಬಿಡಿ ಮೇಡಂ ಎಂದು ಗಹ ಗಹಿಸಿ ನಕ್ಕು, ನೋಡಿ "ಯಾವುದು ಮಣಿಯೋದಿಲ್ಲವೋ ಅದು ಮುರಿಯುತ್ತೆ". ಎಂದರು. ನೋಡಿ ಯಾರಿಗೆ ಏನೂ ಆಗುವದಿಲ್ಲವೋ ಅವ್ರಿಗೆ ಒಮ್ಮೆ ಲೇ ಏನಾದರು ಆಗುತ್ತೆ ಎಂದರು. ಈ ವಾಕ್ಯ ನನಗೆ ತುಂಬಾ ಹಿಡಿಸಿತು. ನಾವು ಮಣಿದಾಗ ಮಾತ್ರ ಮತ್ತೆ ಸರಿ ಮಾಡಬಹುದು, ಆದರೆ ಮುರಿದೆ ಹೋದರೆ ...?. ಒಂದೆರಡು ಮಾತ್ರೆ ಕೊಟ್ಟರು.ಡಾಕ್ಟರ ಫೀಸ್ ಎಂದಾಗ, 10 ರುಪಾಯಿ ಮಾತ್ರ ತೆಗೆದು ಕೊಂಡರು.



ಪುಣ್ಯಾತ್ಮ ಎಂದು ಮನಸಿನಲ್ಲೇ ಅಂದುಕೊಂಡು ಹೊರಗೆ ಬಂದೆವು. ಅವರ ಮಾತುಗಳು ನನಗೆ ತಲೆಯಲಿ ಗುನುಗುಡುತಿತ್ತು. ಅದೇ ಗುಂಗಿನಲ್ಲಿ ಮತ್ತೆ ರಿಸೆಪ್ಶನಿಷ್ಟ ನೆನಪೇ ಹಾರಿ ಹೋಗಿದ್ದಳು ಛೆ.. ಛೆ... ನೋಡೋಣ ನಾಳೆ ಮತ್ತೆ ಚಾನ್ಸ್ ಸಿಗುತ್ತಾ ಅಂತ. ಆದರೆ ದಿನಚರಿ ಬದಲಿಸಬೇಕು ಎಂಬ ನಿರ್ಧಾರ ?......